Monday, August 13, 2012

Rain..... Rain......Rain......





 


ಮಳೆಗಾಲದ ಒಂದು ದಿನ…..ಮತ್ತು ನನ್ನ ಪ್ರೀತಿಯ ಕನ್ನಡಶಾಲೆ!

ಬಹುಶಃ ನಾನಾಗ ಮೂರೋ.. ನಾಲ್ಕೋ…ಸರಿಯಾಗಿ ನೆನಪಿಲ್ಲ. ಆದರೆ ಧೋ…ಎಂದು ಸುರಿಯುತ್ತಿದ್ದ ಮಳೆಯ ಚಿತ್ರವಿನ್ನೂ ಕಣ್ಣಿಗೆ ಕಟ್ಟಿದಹಾಗಿದೆ. ಭಾಗೀರಥಿ ಬಾಯೋರು ನಮಗಾಗ ಕಲಿಸುತ್ತಿದ್ದರು. ಕ್ಲಾಸ್ ರೂಂ ಎಂದರೆ ಕಗ್ಗತ್ತಲ ಕೋಣೆ! ಮಳೆಯ ರಭಸಕ್ಕೆ ಹೇಳಿದ್ದೊಂದೂ ಕೇಳುತ್ತಿರಲಿಲ್ಲ. ಬೆಳಿಗ್ಗೆ ಪ್ರಾರಂಭವಾದ ಮಳೆ ಇಡೀದಿನ ಬೇಸರಿಸದೇ ಒಂದೇ ಸವನೆ ಹೊಯ್ಯುತ್ತಿತ್ತು! ಮಲೆನಾಡ ಮಳೆಯೇ ಹಾಗಿರುತ್ತಿದ್ದ ಕಾಲವದು. ತುಂಬ ಹಳೆಯ ಕಾಲವೇನಲ್ಲ. ಸುಮಾರು 1984-85ರ ದಿನಗಳವು.

ಭಾಗೀರಥಿ ಬಾಯೋರು ನಮಗೆಲ್ಲ ತುಂಬ  ಅಕ್ಕರೆಯ ಅಕ್ಕೋರು. ಆಗ ಶಾಲೆಯೆಂದರೆ ನಮ್ಮ ಪ್ರೀತಿಯ ಆಟದ ಮನೆ! ಮೊದಲನೇ ತರಗತಿಗೆ ಹೋಗುವಾಗ ಮೊದಮೊದಲು ಅಳುತ್ತ ತಪ್ಪಿಸಿಕೊಳ್ಳುತ್ತಿದ್ದೆ! ದಿನವೂ ಇದೇ ಕಥೆಯಾಗತೊಡಗಿದಾಗ ಅಮ್ಮ ಮೊದಲು ಹೊಡೆದು ಶಾಲೆಗೆ ಅಟ್ಟುತ್ತಿದ್ದಳು. ದಿನವೂ ಸಾಯುವವರಿಗೆ ಅಳುವವರಾರು? ದಿನವೂ ಥಡಿರಾಶಿಯ ಸಂದಿನಲ್ಲೋ, ದೇವಸ್ಥಾನದ ಮೆತ್ತಿನ ಮೇಲಿನ ತೊಲೆಗಳ ಮೇಲೆಯೋ, ತೋಟದಲ್ಲಿನ ಬಚ್ಚಲು ಮನೆಯ ಅಟ್ಟದ ಮೇಲೆಯೋ ಅಡಗಿಕುಳಿತುಕೊಳ್ಳುತ್ತಿದ್ದ ನನ್ನನ್ನು ಹುಡುಕಿ ಹುಡುಕಿ ಅಮ್ಮ ಬೇಸೆತ್ತಿರುತ್ತಿದ್ದಳು. ಆಮೇಲಾಮೇಲೆ ಪಕ್ಕದ ಮನೆಯ ಚಂಪಾ ಭಟ್ಟರು, ಸುಬ್ಬಾ ಭಟ್ಟರು, ವಿಜಯತ್ತೆ, ಸಾವಿಂತ್ರಿ ಬೊಬ್ಬೆ, ಮಾದೇ ಅಕ್ಕ, ಸುಬ್ಬಾಣಿ, ತಮ್ಮಾಣಿ, ಶಿವರಾಂ ಭಟ್ಟರು…. ಅವರು… ಇವರು… ಎಲ್ಲರೂ ನನ್ನ ಮೇಲೆ ತಮ್ಮ ಹೊಡೆಯುವ ಚಟವನ್ನು ತೀರಿಸಿಕೊಂಡಿದ್ದರು!

ಕೊನೆಗೆ ಭಾಗೀರಥಿ ಬಾಯೋರು ದಿನವೂ ಚಾಕಲೇಟು ಕೊಡಲು ಆರಂಭಿಸಿದಾಗ, ಹೊಡೆತ ತಪ್ಪಿಸಿಕೊಳ್ಳುವ ಸಲುವಾಗಿಯಾದರೂ ಚಾಕಲೇಟಿನಾಸೆಗೆ ಶಾಲೆಗೆ ಹೋಗುವುದು ರೂಢಿಯಾಯಿತು! ಅವರ ಕಾರಣಕ್ಕಾಗಿಯೇ ಶಾಲೆ ಪ್ರಿಯವಾಗತೊಡಗಿತು. ಇವತ್ತು ಸ್ವಲ್ಪನಾದರೂ ಓದು-ಬರಹ ಕಲಿತಿದ್ದಿದ್ದರೆ ಅದರ ಶ್ರೇಯಸ್ಸು ನನ್ನನ್ನು ತಿದ್ದಿ ತೀಡಿದ, ತೀಡಿಸಿದ ಭಾಗೀರಥಿ ಬಾಯೋರಿಗೆ ಸಲ್ಲ ಬೇಕು. ಅವರು ನೂರ್ಕಾಲ ನೆಮ್ಮದಿಯಿಂದ ಬಾಳಲಿ.  
ಆದಿನ ಮಳೆಗಾಲದ ಒಂದು ದಿನ ನಿಬಂಧ ಬರೆಯಲು ಹೇಳಿದ್ದರು. ತಿಣುಕಾಡಿದರೂ ಒಂದು ಪುಟ ಬರೆಯುವಷ್ಟರಲ್ಲಿ ಶಬ್ದ ಭಂಡಾರವೆಲ್ಲ ಮುಗಿದಿತ್ತು! ‘ಮಳೆ ಎಂದರೆ ನಮಗೆ ಖುಷಿಯೋ ಖುಷಿ. ಜೋರು  ಮಳೆಬಂದರೆ ಶಾಲೆಗೆ ರಜೆಕೊಡುತ್ತಾರೆ. ಮನೆಗೆ ಹೋಗುವ ದಾರಿಯಲ್ಲಿ ನೀರಾಟ ಆಡಬಹುದು. ಹಲಸಿನ ಹಣ್ಣಿನ ಕಡುಬಿಗೆ ತುಪ್ಪ ಸೇರಿಸಿ ತಿಂದರೆ ಮಜವೋ ಮಜ! ಕಾಗದದ ದೋಣಿ ಮಾಡಿ ನೀರಲ್ಲಿ ತೇಲಿಬಿಡುವುದು ತುಂಬ ಖುಷಿಕೊಡುತ್ತದೆ. ಮಳೆ ಬಂದರೆ ಗದ್ದೆ ನೆಟ್ಟಿ ಶುರುವಾಗುತ್ತದೆ. ಗದ್ದೆಯಲ್ಲಿ ಭತ್ತ ಬಂದರೆ ನಮಗೆ ಊಟಕ್ಕೆ ಸಾಕಾಗುತ್ತದೆ. ಮಳೆಗಾಲದಲ್ಲಿ ಅಡಿಕೆಗೆ ಮದ್ದು ಹೊಡೆಯುತ್ತಾರೆ….”ಹೀಗೆ ಬಾಲ್ಯದ ಬಾಲಿಶ ಭಾಷೆ ಈಗ ನಗುಬರಿಸುತ್ತದೆ!
ಮೊನ್ನೆ ಊರಿಗೆ ಹೋಗಿದ್ದೆ. ಅದ್ಭುತವಾಗಿ ಮಳೆ ಸುರಿಯುತ್ತಿದ್ದದ್ದು ಬಾಲ್ಯದ ನೆನಪನ್ನು ಮರುಕಳಿಸಿತ್ತು. ಕಾಟಿಮನೆ, ಶಿರಸಿಯ ಹತ್ತಿರದ ಎಕ್ಕಂಬಿಯ ಸಮೀಪದ ಊರು. ಊರೆಂದರೆ… ಕಾಡನಡುವಿನ ಒಂಟಿ ಮನೆ. ನನ್ನ ಗೆಳೆಯನೋರ್ವ ಇದನ್ನು ಸ್ವಿಡ್ಜರ್ಲ್ಯಾಂಡ್ ಎಂದೇ ಕರೆಯುತ್ತಾನೆ!  

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ಕಾಡುಮನೆಯನ್ನು ತಲುಪುವಾಗ ಅದಾಗಲೇ ಬರೋಬ್ಬರಿ ಬೆಳಗಿನ ಜಾವದ ಒಂದು ಗಂಟೆಯ ಸಮಯ. ಸಾಧಾರಣವಾಗಿ ದೆವ್ವಗಳು ಓಡಾಡುವ ಅಕಾಲವೆಂದು ಹಳ್ಳಿಗರು ಇಂದೂ ಹೇಳುತ್ತಿರುತ್ತಾರೆ. ನೀರವ ಮೌನದ ಕಾರ್ಗತ್ತಲಿನಲ್ಲಿ ದಾರಿ ಸಾಗುತ್ತಿರುವಾಗ ಸ್ಟೀರಿಯೋದಲ್ಲಿ ಓಶೋನ ನಿರರ್ಗಳವಾದ, ಸಹಜ ಸೌಂದರ್ಯ ಭಾಷೆಯಲ್ಲಿನ ಮೌನದ ಕುರಿತ ಮಾತುಗಳು ಮಳೆಯಂತೆ ಹನಿಸುತ್ತಿದ್ದವು. ನಡುನಡುವೆ ಕಾರು ನಿಲ್ಲಿಸಿ ಗುಟುಕು ಗುಟುಕಾಗಿ ಪ್ರೇಯಸಿಯ ಅಮೃತ ಮಿಶ್ರಿತ ಒಗರು ಅಧರವನ್ನೊಮ್ಮೆ ಹೀರುವಾಗ… ಕಾಡಿನ ಮೌನ… ಸುಂಯ್ ಗುಡುವ ತಂಗಾಳಿ…. ಹನಿಹನಿ ಶ್ರಾವಣದ ಮಳೆ…. ನನ್ನೊಳಗಣ ಪ್ರಜ್ಞೆಯನ್ನು ತಪ್ಪಿಸಿ, ನಾನು ಕಳೆದುಹೋದಂತಹ ಅನುಭವವದು! ಮನೆ… ನನ್ನದಲ್ಲದ ಕಾರಣಕ್ಕೋ…. ಮಾವನ ಮನೆಯಾಗಿದ್ದಕ್ಕೋ! ನಿದ್ರೆಯೇ ಹತ್ತುತ್ತಿಲ್ಲ. ಜೊಂಯ್ ಗುಡುವ ಮಳೆ!

ಬೆಳ್ಳಂಬೆಳಿಗೆ ನನ್ನ ಗೂಡಲ್ಲಿ ಬೆಚ್ಚಗೆ ಹೊಕ್ಕಿ ಮಲಗಿದ್ದ ಮಗನನ್ನೊಮ್ಮೆ ಮುದ್ದಿ ಎಬ್ಬಿಸಿದ್ದೆ. ‘ಬಾರೋ, ಅಪರೂಪದ ಮಳೆ ಹೊಯ್ಯುತ್ತಿದೆ. ಕಟ್ಟೆಯ ಮೇಲೆ ಕುಳಿತು ನೋಡೋಣ ಬಾ….’ಎಂದು ಸವಿನಿದ್ದೆಯಲ್ಲಿದ್ದ ಅವನನ್ನು ಆರುಗಂಟೆಗೇ ಎಬ್ಬಿಸಿ ಕರೆದೊಯ್ದೆ…. ಅಂಗಳಕ್ಕೆ! ಎದುರು ದೊಡ್ಡೂರ ಗುಡ್ಡ! ಬುಡದಲ್ಲಿ ಆಗತಾನೆ ಅಗೆ ಹಾಕಿ ಗೇಣುದ್ದ ಬೆಳೆದು ನಿಂತ ಭತ್ತದ ಗದ್ದೆ. ಪಕ್ಕದಲ್ಲಿ ಮಂಜು ಮುಸುಕಿದಂತೆ ಕಾಣುವ ಅಡಿಕೆ ತೋಟ. ಅಂಗಳದಲ್ಲಾಗಲೇ ಬೆಳೆದು ಹಸಿರಿನಿಂದ ತುಂಬಿದ, ಆಯಿಯ ಆರೈಕೆಯ ಸೌತೆ, ಬೆಂಡೆ, ಬದನೆ, ಸೋಡಿಗೆಯ ತರಹೇವಾರಿ ತರಕಾರಿ ಗಿಡಗಳು. ನಡುನಡುವೆ ಸ್ನಿಗ್ಧ ಸೌಂದರ್ಯರಾಶಿಯನ್ನೇ ಹನಿಸುವ ಡೇರೆ, ಜಾಜಿ, ಮಲ್ಲಿಗೆ, ದಾಸವಾಳ, ಗೆಂಟಿಗೆ, ಶಂಕಪುಷ್ಪ, ನಿತ್ಯಪುಷ್ಪ…. ಕಣ್ಣಿಗೆ ಹಬ್ಬ! ಮನಸಿಗೆ ವಿವರಿಸಲಾಗದ ಸಚ್ಚಿದಾನಂದ! ನಾನೂ, ಮಗನೂ ಸಕತ್ ಖುಷಿ ಪಟ್ವಿ. ‘ಆಸ್ರಿ ಕುಡ್ಯಲ್ಲಾತ್ರೋ, ಲಗೂನೆ ಬನ್ನಿ, ಕೊನೆಗೆ ದ್ವಾಸೆ ಬಂಡಿ ಗಾರೆದ್ಹೋಗ್ತು’, ಎಂದು ಆಯಿ ಕರೆದಾಗಲೇ ನಾವಿಬ್ಬರೂ ಹೇಡಿಗೆ ಕಟ್ಟೆಯಿಂದ ಕುಂಡೆಯೆಬ್ಬಿಸಿದ್ದೆವು!
                                                                                                (ಮುಂದುವರೆಯುತ್ತದೆ)

3 comments:

  1. ವಾಹ್ ! ಮಳೆಗಾಲದ ಸುಂದರ ಚಿತ್ರಣ ...ಹೊಟ್ಟೆಕಿಚ್ಚಾಗ್ತಿದೆ.

    ReplyDelete
  2. Dear Harsha and Suma, thanks for the comments

    ReplyDelete