Friday, March 8, 2013

ಯಶಸ್ವಿನೀ....ಎದೆಯೆತ್ತರ ಬೆಳೆದು ನಿಂತ ಮಗಳೇ!





ಎದೆಯೆತ್ತರ ಬೆಳೆದು ನಿಂತ ಮಗಳೇ! 
 
ಮೌನಗರ್ಭದ  ಅನಾಹತ ನಾದಕ್ಕೆ ಕಿವಿಯಾಗಲು 
ನಿನಗಿದೋ ಎಂಗ್ಟನ ಪುಂಗಿ!!

ಮೊನ್ನೆ ಮೊನ್ನೆಯವರೆಗೂ ಚೋಟುದ್ದವಿದ್ದ ಯಚ್ಚಿ ಧುತ್ತೆಂದು ಎದೆಯೆತ್ತರ ಬೆಳೆದು ನಿಂತಿದ್ದಾಳೆ! ಅರಳು ಹುರಿದಂತೆ ಮಾತುಗಳನ್ನು ಉದುರಿಸುತ್ತಾ, ‘ಅಮ್ಮಾ ತಾಯೇ! ಭೂಚಣೆ’ ಎಂದು ತೊದಲ್ನುಡಿಯಲ್ಲಿ ಉಲಿಯುತ್ತಲೇ ‘ಅದೆ ನೋಡು! ಕಬsಡೂ..’ ಎಂದು ಹೇಳುತ್ತಾ ಹಲಸಿನ ಕಡುಬನ್ನು ನೋಡಿ ಅಚ್ಚರಿಪಟ್ಟವಳು ಈಗ, ತಾನೇ ಒಂದು ಅಚ್ಚರಿಯೆಂಬಂತೆ ಬೆಳೆದು ನಿಂತಿದ್ದಾಳೆ. ಅಜ್ಜಿ-ಅಜ್ಜರ ಮಡಿಲಲ್ಲಿ!

ಮಲೆನಾಡಿನಿಂದ…… ಅದರ ಸೆರಗಿನಲ್ಲಿರುವ ಅರೆಮಲೆನಾಡಿಗೆ…..  ಅಲ್ಲಿಂದ ಬಿಸಿಲನಾಡಿಗೆ…. ಬದುಕೆಂಬ ಮಾಯಾಜಿಂಕೆಯ ಬೆನ್ನೆಟ್ಟುತ್ತ, ನಾವು ಗುಡಾರ ಬದಲಿಸುತ್ತಿದ್ದರೆ…. ನಮ್ಮ ಯಚ್ಚಮ್ಮ ಕಳೆಗುಂದತೊಡಗಿದ್ದಳಷ್ಟೇ ಅಲ್ಲ ಮಂಕಮ್ಮನೂ ಆಗತೊಡಗಿದ್ದಳು. ಬೇರು ಕಿತ್ತುಕಿತ್ತು ಜಾಗ ಬದಲಿಸಿ ನೆಟ್ಟ ಪುಟ್ಟ ಗಿಡದಂತೆ…. ಅತ್ತ ಬೆಳೆಯಲೂ ಆಗದೆ, ಇತ್ತ ಚಿಗುರಲೂ ಆಗದೇ ತಳಮಳಿಸಿದ್ದಳು. ಮಲೆನಾಡಿನ ವಾತಾವರಣದಲ್ಲಿ ಮಾತ್ರ ಈ ಚಿಗುರು ಕುಡಿ ಸಹಜವಾಗಿ ಅರಳುವುದು ಸಾಧ್ಯವೆಂಬ ಯೋಚನೆ ನನಗೆ ತೀವ್ರವಾಗಿ ಕಾಡತೊಡಗಿದ್ದು ಆಗ. ಅವಳಮ್ಮನಿಗೆ ಒಲವಿಲ್ಲ. ಕರುಳ ಕುಡಿಯ ಬಿಟ್ಟಿರುವ ಮನವಿಲ್ಲ. ನನಗೋ ಅರಳುವ ಚೆಲುವ ಈ ಬೆಂಗಾಡಿನಲ್ಲಿ ಬಾಡಿಸುವ ಮನವಿಲ್ಲ. ವಾದ-ಬೋಧ-ವ್ಯಾಕುಲಗಳ ನಡುವೆಯೇ ಒಮ್ಮೆ ಅಜ್ಜಿಯ ಹತ್ತಿರ ಕಳಿಸಲೇ ನಿನ್ನ? ಎಂದು ಕೇಳಿದ್ದೇ ತಡ ಕುಡಿ ಚಿಗುರತೊಡಗಿತ್ತು. ಅಮ್ಮನೂ ತಲೆಯಾಡಿಸುವಂತಾಯಿತು. ಅಲ್ಲಿ ಕಾಡುವ ಒಂಟಿತನದಲ್ಲಿ ನಿರುತ್ಸಾಹದಿಂದಿದ್ದ ಅಮ್ಮಮ್ಮನೂ ಚಿಗುರಿದಳು! ಅರವತ್ತರ  ಅಪ್ಪಪ್ಪನೂ ಹೊಸ ಉತ್ಸಾಹದಿಂದ ಸಂಭ್ರಮಿಸತೊಡಗಿದ. ಮನೆಯ ಕುಡಿ ಅಂಗಳದಲ್ಲಿ, ಕಣ್ಣಂಚಿನ ವಾತಾವರಣದಲ್ಲಿ ತಂಗಾಳಿ ಬೀಸಿದ್ದಳು. ಚಂದನದ ತೋಟದಲ್ಲಿ ಚೆಂದಾಗಿ ಬೆಳೆಯುತ್ತಿರುವ ಮೊಗ್ಗು ಈಗ ಮತ್ತೆ ಅರಳು ಹುರಿದಂತೆ ಮಾತನಾಡತೊಡಗಿದೆ. ತೊದಲು ನುಡಿಯಲ್ಲಲ್ಲ…! ಗಟ್ಟಿಯಾದ ಬದಲು ದನಿಯಲ್ಲಿ!

ಒಮ್ಮೆಲೇ ‘ಕಾಲ ಓಡತೊಡಗಿದೆಯೇ’ ಎಂದೆನಿಸುವುದೂ ಉಂಟು! ಮೊನ್ನೆಮೊನ್ನೆಯವರೆಗೆ ಏನು ಕೇಳಿದರೂ ‘ಗೊತ್ತಿಲ್ಲ’  ಎಂದಷ್ಟೇ ಹೇಳುತ್ತ ಇವತ್ತು ಒಮ್ಮೆಲೆ “ಯಂಗೆಂತ ಅಷ್ಟೂ ತಿಳೀತಿಲ್ಯನ?”  ಎನ್ನುವಷ್ಟು ಬೆಳೆದು ನಿಂತಿರುವ ಕೂಸಿಗೆ ಈ ಹೊತ್ತಿನ ಹಸಿವೆಗೆ ಏನ ಕೊಡಿಸಲಿ…. ಎಂದು ತಲೆಕೆರೆದುಕೊಂಡಾಗಲೇ ನೆರವಿಗೆ ಬಂದಿದ್ದು ನನ್ನ ಪ್ರೀತಿಯ ತೇಜಸ್ವಿ. ನಮ್ಮೊಳಗೇ ಇರುವ ಮಾಯಾಲೋಕವನ್ನು ತೆರೆದು ತೋರಿ ಮರುಳು ಮಾಡಿದ ಕಿಂದರಜೋಗಿ! ಒಳಗಿನ ಮೌನಕ್ಕೆ ಒಂದಿಡೀ ಯುವಜನಾಂಗ ಕಿವಿ-ಕಣ್ಣು ತೆರೆಯುವಂತೆ ಮಾಡಿದ ಗಾರುಡಿಗ.
ಒಮ್ಮೆ ಮೌನಗರ್ಭದೊಳಗಿನ  ಅನಾಹತದ ರುಚಿ ಹತ್ತಿಬಿಟ್ಟರೆ… ಮಾನೀಟರ್, ಮಾಸ್ತಿ ಮತ್ತು ಬೈರ, ಸುಸ್ಮಿತ ಮತ್ತು ಹಕ್ಕಿಮರಿ, ಎಂಗ್ಟನ ಪುಂಗಿ, ಕುಕ್ಕುಟ ಪಿಶಾಚಿ, ಕಾಳಪ್ಪನ ಕೋಬ್ರಾ, ಗಾಡ್ಲಿಯಾದಿಯಾಗಿ ಎಲ್ಲ ತರಹದ ಪರಿಸರ ಒಳಗಿನಿಂದ ಕಾಣತೊಡಗಿ ತಿಳಿವಿನ ಹರವಿಗೆ ದಿಕ್ಕು ತೋರಿಸತೊಡಗುತ್ತದೆ ಎಂಬ ನಂಬಿಕೆಯಿಂದ ಹಾಗೂ ಉಮ್ಮೇದಿಯಿಂದ ತೇಜಸ್ವಿಯ ‘ಪರಿಸರದ ಕತೆ’ ಹಾಗೂ ‘ಬೆಳ್ಳಂದೂರಿನ ನರಭಕ್ಷಕ’ ಎಂಬೆರಡು ಬೆಳಕಿನ ನಕ್ಷತ್ರಗಳನ್ನು ಆರಿಸಿಕೊಂಡು ಬಂದಿದ್ದೇನೆ. ‘ದಿನಕ್ಕೊಂದು ಕಥೆ’ ಹೇಳು ಎಂದು ಪೀಡಿಸುತ್ತಿದ್ದವಳೀಗ ‘ನಾನು ಹೇಳುವ ಕಥೆ ಕೇಳು’ ಎಂದು ಬರುವಂತಾದರೆ….. ಎಂಬ  ಆಸೆಯಿಂದ…..
ಎದೆಗೆ ಬಿದ್ದ ಅಕ್ಷರ… ಬೀಜಾಕ್ಷರವಾಗಿ… ಮರವಾಗಿ, ರೆಂಬೆಕೊಂಬೆಗಳನ್ನು ಚಾಚಿ ಬೆಳೆದು…. ಅದರ ನೆರಳಲ್ಲಿ ಮುಸ್ಸಂಜೆಯ ತಂಗಾಳಿಯನ್ನು….. ಅದರೊಳಗಿನ ನಾದವನ್ನು…. ಆ ನಾದದ ಗುಂಗನ್ನು…. ಸವಿಯುತ್ತ…. ಸವಿಯುತ್ತ…. ತುರೀಯಾವಸ್ಥೆಯನ್ನು  ಅನುಭವಿಸುವ ಕಲ್ಪನೆಯ ಕನಸೇ ಈ ಇಳಿಹೊತ್ತಿನಲ್ಲಿಯೂ ನನಗೆ ಅಮಲೇರಿಸತೊಡಗಿದೆ!


ವಸಂತ
8-ಮಾರ್ಚ್-2013
ಸಾಯಂಕಾಲ 5.30 ಗಂಟೆ

1 comment:

  1. ಗ್ರೇಟ್ ...ನಾನೂ ನನಗಿಂತ ಎತ್ತರ ಬೆಳೆದು ನಿಂತಿರುವ ( ಅವಳದೇ ಭಾಷೆಯಲ್ಲಿ young adult ) ಮಗಳಿಗೆ ತೇಜಸ್ವಿಯ ಪುಸ್ತಕಗಳನ್ನು ಓದಿಸಲು ಪ್ರಯತ್ನಿಸುತ್ತಿದ್ದೇನೆ. ಆದರಿನ್ನೂ ಅವಳನ್ನು ಹ್ಯಾರಿ ಪಾಟರ್ , ಫೇಮಸ್ ಫೈವ್ ಗಳಿಂದ ಹೊರತರಲಾಗಿಲ್ಲ . ಇದು ನಗರದ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಹಿಮೆ :( ಈ ರಜೆಯಲ್ಲಿ ಖಂಡಿತಾ ಓದುತ್ತಾಳೆಂಬ ಭರವಸೆಯಲ್ಲಿದ್ದೇನೆ.)

    ReplyDelete