Monday, February 3, 2014

ಶೂನ್ಯಸೃಷ್ಟಿ

ಶೂನ್ಯಸೃಷ್ಟಿ

ಕಣ್ಣಂಚಿನ ಕುಡಿನೋಟ
ಕಿಚ್ಚಿಬ್ಬಿಸಿ, ಕಿಬ್ಬೊಟ್ಟೆಯಾಳದಲಿ
ನಾಭಿಮೂಲದಿಂದ ಹೊರಟ
ಗಾಂಧಾರಿ ಕಣ್ಣಿಗಂಟಿದ
ಬಿಳುಪು ಪಟ್ಟಿ
ಹಗಲುಗುರುಡು!

ಹರಿ...ಹರಿಯಬೇಕು ಒಳಗಣ್ಣಪೊರೆ
ಜಿಹ್ವಾಮೂಲದ ಸರ
ಸೋತಿ ಬಡಪೆಟ್ಟಿಗೆ ಸೋಲು
ವವಳಲ್ಲ
ಹಾಯಿಸಬೇಕು ಕುಂಡಲಿನಿಯ
ಮೂಲಕ್ಕೆ ಓಂಕಾರ
ಪ್ರಾಣನಾದ, ಪ್ರಣವನಾದ.

ಒಳಗಣೊಳಗೆ ಹೊಸಬೆಳಕು
ಜೀವದೊರತೆಯ ಜತೆಗೆ
ಸಂತಭಾವದ ಜಿನುಗು
ಭವದಹಂಕಾರದ ಪೊರೆ
ಕಳಚುವಕಾಲ-ಲಯದ ಲೆಕ್ಕ

ಲಯದಲ್ಲಿ ಲಯವಾಗಿ, ಸ್ವರನಾದಿ
ನಾದರೂಪಕವಾಗಿ, ಬಯಲ ಸಂಗೀತಕ್ಕೆ
ಕಿವಿಯಾಗಿ ಹೃದಯ ಶೃತಿ
ಗೊಳಿಸಿ, ಮೀಟಿದರೆ ತಂಬೂರಿ ತಂತಿ
ಶಬ್ದ ವಜ್ಜೆ, ಅರ್ಥ ಲಜ್ಜೆ
ಶೂನ್ಯ.....ಶೂನ್ಯಸೃಷ್ಟಿ!

-ವಸಂತ
2 ಫೆಬ್ರುವರಿ 2014,
ಉತ್ಸವ್ ರಾಕ್ ಗಾರ್ಡನ್ಸ್, ಶಿಗ್ಗಾಂವಿ
******

No comments:

Post a Comment