Showing posts with label ಬಾ ಕವಿತಾ. Show all posts
Showing posts with label ಬಾ ಕವಿತಾ. Show all posts

Tuesday, September 30, 2014

ಆಯುಧ ಪೂಜೆಯ ಹೊತ್ತಲ್ಲಿ.........

ಬೆಳಿಗ್ಗೆ 8:30 ಕ್ಲಾಸಿನಲ್ಲಿ ಅಮೇರಿಕದ ರಾಷ್ಟ್ರಕವಿ ವಾಲ್ಟ್ ವಿಟ್ಮನ್  ಕುರಿತು ಪಾಠಮಾಡಿ ಅದಾಗ ತಾನೇ ಡಿಪಾರ್ಟ್ ಮೆಂಟಿನ ಸ್ಟಾಫ್ ರೂಂ ಗೆ ಬಂದು ಕುಳಿತಿದ್ದೆ. ಕೆಲ ಹುಡುಗರು ಸಂಭ್ರಮದಿಂದ ಓಡಾಡಿ ಎಲ್ಲ ಕಡೆ ಸಿಂಗರಿಸುತ್ತಿದ್ದರು. ಪ್ರಿನ್ಸಿಪಾಲರು 250/- ಕೊಟ್ಟು ಆಯುಧ ಪೂಜೆ ಮಾಡಿ ಸಂಭ್ರಮಿಸಿ ಎಂದಿದ್ದರಂತೆ! ಅಂತೆಯೇ ಹುಡುಗರು ಖುಷಿಯಿಂದ ಓಡಾಡಿಕೊಂಡಿದ್ದರು. ‘ಅವರವರ ಭಕುತಿಗೆ’ ಎಂಬಂತೆ ಹೂವು ಗಂಧಾದಿಗಳಿಂದ ಸ್ಟಾಫ್ ರೂಮಿನ ಫ್ಯಾನು... ಕಂಪ್ಯೂಟರ್ರು....ಟೇಬಲ್ಲು....ಖುರ್ಚಿ...ಕಪಾಟು........ಚಾಕ್ ಬಾಕ್ಸ್....ಅಟೆಟಂಡೆನ್ಸ್ ರಜಿಸ್ಟ್ರು....ಅಸೈನ್ಮೆಂಟುಗಳು... ಎಲ್ಲವುಗಳನ್ನೂ ಸಿಂಗರಿಸುತ್ತಿದ್ದರು! ನನಗೆ ಛಕ್ಕನೆ ಗಮನ ಸೆಳೆದದ್ದು ವಿದ್ಯಾರ್ಥಿಯೋರ್ವ ಅಲ್ಲಿದ್ದ ಶೇಕ್ಸ್ ಪಿಯರನ ಫೋಟೋಕ್ಕೆ ಹಣೆಯ ಮೇಲೆ ಭಸ್ಮ ಲೇಪಿಸಿ, ಕುಂಕುಮದ ಬೊಟ್ಟನ್ನಿಟ್ಟಿದ್ದು!...........


ಶೇಕ್ಸ್ ಪಿಯರ್ ಹಣೆಗೆ
ವಿಭೂತಿ ಹಚ್ಚಿ ಕುಂಕುಮವಿಟ್ಟು
ಹೊಸ ಗೆಟಪ್ಪಿನಲ್ಲಿ ಕಂಡಾಗ
ಬಸವಣ್ಣ ಹೊಟ್ಟೆಹುಣ್ಣಾಗುವಷ್ಟು
ನಗುತ್ತಿದ್ದ ಇಂಗ್ಲಿಷ್ ಕೋಟು-ಷರಾಯಿ
ತೊಟ್ಟು! ಸ್ವಾಮೀ......
ಫಿಯರ್ರು ಶೇಕಾಗುವ ಸಮಯದಲ್ಲಿ
ಅಲ್ಲ....ಮನ ಶಬ್ದಲಜ್ಜೆ ಕಳಚಿ
ಬೆತ್ತಲು ಬಯಲಾಗುವ ಪರಿಗೆ
ಕಥಾರ್ಸಿಸ್ ನರ್ತನ!
ಶೇಕಣ್ಣ, ಬಸ್ವೋಸ್ಪಿಯರ್
ಕ್ಲೋನಿಂಗು ಅಪೂರ್ವ
ಪಶ್ಚಿಮದ ಅಪರಿಮಿತ ಅನುಭಾವ...
ನುಡಿಯ ಬೆರಗು!

-ವಸಂತ

1-10-2014, ಬೆಳಿಗ್ಗೆ 10 ಗಂಟೆ.....

Sunday, June 29, 2014

ಬಯಲು ಬಲು ದೂರ

ಇವತ್ತು ಯುಜಿಸಿ ನೆಟ್ ಎಕ್ಸಾಂ ಬರ್ಯೋಕೆ ಅಂತಾ ಬೆಂಗಳೂರಿಗೆ ಹೋಗಿದ್ದೆ! ಮಧ್ಯಾಹ್ನದ ಪೇಪರ್ರು ಒಂದೇ ಗಂಟೆಯೊಳಗೆ ಬರೆದು ಮುಗಿದು ಹೋಗಿತ್ತು! ಕನಿಷ್ಠ 3 ಗಂಟೆಯವರೆಗಾದರೂ ಎಕ್ಸಾಂ ಹಾಲನ್ನು ಬಿಟ್ಟು ಬರುವ ಹಾಗಿರಲಿಲ್ಲ. ಹಾರ್ಡಾದ ಡೆಸ್ಕು ಬೆಂಚಿನ ಮೇಲೆ ಬೆಳಗಿನಿಂದಲೂ ಕುಳಿತಿದ್ದರಿಂದ ಸೊಂಟ, ಬೆನ್ನು, ಕುತ್ತಿಗೆ ಎಲ್ಲವೂ ಹಿಂಡತೊಡಗಿದ್ದವು! ಹಾಳಾದ ಬಿಸಿಗಾಳಿ..... ಸೆಖೆಯನ್ನು ಸಹಿಸಿಕೊಳ್ಳದೇ ವಿಧಿಯಿಲ್ಲ.  ಸೂಪರ್ ಆಗಿದ್ದ ಸೂಪರ್ ವೈಸರ್ ಸ್ಮೈಲ್ ಮಾಡುತ್ತಲೇ ಹೊರಗೆ ಹೋಗೋ ಹಾಗಿಲ್ಲ ಅಂದು ಬಿಟ್ಟರು! ಹಾಗಾಗಿ ಪ್ರಶ್ನೆ ಪತ್ರಿಕೆಯ ಬೆನ್ನಿನಲ್ಲಿ ‘ಬಯಲು ಬಲು ದೂರ’ ಬರೆಸಿಕೊಂಡಿತ್ತು!
ಬಯಲು ಬಲು ದೂರ
ಬೆನ್ನಹುರಿಯಾಳದಲಿ ಚುರುಚು
ರು ಚುಳುಕು ಹೆಗಲ ಬುಡದುದ್ದಕ್ಕೂ
ಹರಡಿ ತಲೆಯೆಲ್ಲ ಕರಡ!
ಎದೆಯ ಮೂಲೆಯಲ್ಲೆಲ್ಲೋ ಸರಿವ
ಸರ್ಪಗಂಧಿಯ ಸುಳಿ
ನೆತ್ತಿಯನ್ನೇರಿ ಸರ್ರನೆ
ಸಂದಿಗೊಂದಿಗಳಿಗಿಳಿದು
ಹುಬ್ಬಿನಂಚಲಿ ಮಿಂಚುವ
ಬೆವರಸಾಲೆ.

ಆಸೆಯಾಗುತ್ತಿದೆ, ಪಸೆಯಾರಿದ
ನಾಲಗೆಗೆ; ಗುಟುಕು ನೀರೂ ಸಿಗದ
ಬೆಂಗಾಡು, ನೀರೆ
ನಗುತ್ತಾಳೆ; ಕಾಲನೋಡಿ!
ಕಾಯಬೇಕಿದೆ ಇನ್ನೂ..... ತಾಸು-
ಗಳಿಗೆ, ಗುಂಯ್ ಗುಡುವ
ಗಿರಗಿಟ್ಟಿ, ಗಿರಿಗುಡುವ ತಲೆ
ಯೊಳಗೆ ಆಸೆ-ಬಯಕೆಗಳ
ನೆಲ್ಲ ರುಬ್ಬಿ ಬೀಸಿ ಒಗೆಯಲು
ಬಯಲು ಬಲುದೂರ......

-ವಸಂತ,
ಮಧ್ಯಾಹ್ನ 2-30 ರಿಂದ 3 ರವರೆಗೆ!
ಎಂಇಎಸ್, ಕಾಲೇಜು, ಕೊಠಡಿ ಸಂಖ್ಯೆ 42 (ಎ)
ಬೆಂಗಳೂರು.


Tuesday, April 8, 2014

ಸೃಷ್ಟಿಕ್ರಿಯೆ



ಕವಿತಾ ಕುಡಿನೋಟ ಬೀರುತ್ತಾಳೆ
ಬಿಳಿಯ ಕಾಗದದ ಮೇಲೆ
ಅಪರಿಚಿತ ಗಂಡಸು; ತನ್ನವನಲ್ಲ
ವೆಂಬಂತೆ ಮುಖತಿರುಗಿಸುತ್ತಾಳೆ.

ಆದರೆ, ಸುಕುಮಾರಿ ಉಪವಾಸವಿದ್ದಾಗ
ಕನಸಿನಂತಹ ರಾತ್ರಿಯಲಿ
ಪುರುಷಸ್ಪರ್ಷದ ನವಿರುಗನಸಿನಲ್ಲಿ
ತಕ್ಷಣವೆ ಮಿಡಿದು ಕಂಪಿಸುವ  ಅವಳ ದೇಹ.

ಕೆಲವೊಮ್ಮೆ, ಧಗೆಯಾರಿದ ಮೇಲೆ
ಉರಿದು ಎಚ್ಚರಗೊಳ್ಳುವ ಅವಳು
ನೇವರಿಸುತ್ತಾಳೆ ರವಿಕೆಯ
ಬಿಚ್ಚಿ ಬಿಸಾಕಿ ಬೊಗಸೆ
ತುಂಬಿದ ಬೆಳದಿಂಗಳ ಮೈ
ಮೇಲೆಲ್ಲ ಸೋಕಿಸಿ ನವಿರಾಗಿ
ಉಜ್ಜುತ್ತ ತಂಪೆರೆವ ಕೈ
ಗಳು ನೋವ ಕಳೆಯುವಂತೆ.

ದೇಹದ ಕತ್ತಲೆ ಚಾಚುತ್ತದೆ ಚಾಪೆಯಂತೆ
ಬೇಕಾಬಿಟ್ಟಿ ಚೆಲ್ಲಿದ ಮೈ-ಮನಸು
ಸಂದು ಸಂದಿನ ಕತ್ತಲೆಯಲ್ಲೂ ಆವರಿಸುವ
ಬೆಂಕಿಕಾವು, ಬಲಶಾಲಿ ಬಾಹುಗಳಲಿ
ಬಂಧಿಯಾಗಿ ಹುಡಿಗೊಳ್ಳುವ ತನಕ
ನೆಲೆಗೊಳ್ಳಲಿ ಕತ್ತಲೆಯ ಕಾಮ
ವೆಂದು ಕನವರಿಸುತ್ತಾಳೆ.

ದಿಗ್ಗನೆ ಕಾಣಿಸಿಕೊಳ್ಳುವ ಖಾಲಿ ಹಾಳೆ
ನಡುಗುವ ಕೈಗಳ ಸೋಂಕಿದಾಗ
ಸುಡುವ ದೇಹದ ಭಾಗ,
ಕರಗುವ ಯಾತನೆ, ಮೂಗಿಗಡರುವ
ವಿಚಿತ್ರ ವಾಸನೆ
ದೇಹದ ಉಬ್ಬುತಗ್ಗು ಸಾಲುಗಳ
ಓದುವ ಕೈ
ಅಪರಿಚಿತವಾಗಿ ಕಾಣಿಸುವ ತನ್ನದೇ
ದೇಹ, ಕೊರೆವ ತಣ್ಣನೆಯ ಬೆವರಸಾಲೆ
ಸಾವು ಬದುಕಿನ ವಾಸನೆಯಲ್ಲಿ ಅದ್ದಿ
ತೆಗೆದ ಉಸಿರು
 ಈ ಎಲ್ಲ ನವಿರು ಕಪ್ಪು ಗೆರೆಗಳು
ದನಿಯಿಲ್ಲದ ಚೀತ್ಕಾರದ ತುಣುಕುಗಳು
ಮೌನ, ಗೊಂದಲದಲ್ಲಿ ಸೋರಿ
ಹೋದ ಭಾವ
ಎದ್ದು ನಿಲ್ಲುವ ಅವಳ ನೋಟದಲ್ಲಿ;
ಅನ್ಯಾಯದ ಛಾಯೆ.
ತನ್ನದೇ ಪುಟ್ಟ ಭಾಗ ಸತ್ತುಹೋದಂತೆ,
ಸುಕುಮಾರಿ ಬಸಿರಾಗಿ ಮತ್ತೆ
ಗರ್ಭಪಾತವಾದಂತೆ.

                             ಮೂಲ- ಅಮೃತಾ ಪ್ರೀತಂ
                             ಕನ್ನಡಕ್ಕೆ – ವಸಂತ

                             8 ಎಪ್ರಿಲ್ 2014

Tuesday, March 18, 2014

ಇಟ್ಟಿಗೆ-ಪುಟ್ಟ ಮತ್ತು ಅವನಮ್ಮ


ಕಟ್ಟಬೇಕೊಂದು ಚೆಂದನ್ನೆ
ಗೂಡು ಪುಟ್ಟಾ, ಒಂದೊಂದೇ ಕಲ್ಲನ್ನೆತ್ತಿ
ಯ ಮೇಲೆ ಹೊತ್ತು, ಹೊತ್ತು;
ಕಂಕುಳಲ್ಲಿರುವ ನೀಯೆನಗೆ
ಭಾರವೆನಿಸುವುದಿಲ್ಲ ತಲೆಯ
ಮೇಲಿನ ಸಿಮೆಂಟಿನಿಟ್ಟಿಗೆಯ ಹಾಗೆ!

ಗುರಿಯೇನೋ ದೂರವೇ
ಕಾಂಬ ಕಣ್ಣಿಗೆ ಧೂಳು
ಅಂಟಿ ಮೂಗಲ್ಲಿ ನೀರು
ಬಂದರೂ ಸೀನು ನಿನ್ನ
ಎಳೆಗಣ್ಣ ಹೊಳಪಲ್ಲಿ
ನನ್ನ ಕನಸುಗಳಿಗೆ ಬರವಿಲ್ಲ.

ಯಾರ್ಯಾರದೋ ಮಹಡಿ ಮಹಲುಗಳ
ಕಟ್ಟಿ ಕಟ್ಟಿ ರಟ್ಟೆ ಸೋತರೂ
ಸೊಂಟಗಟ್ಟಿಗೊಳ್ಳುತಿದೆ ನಿನ್ನ
ಮಿದುಭಾರದಿಂದ, ಮೃದುಭಾವದಿಂದ.

ಗಟ್ಟಿಯಾಗಿ ಅವುಚಿಕೋ ನನ್ನೆದೆಯ
ಆಳದಲಿ ಮಡುಗಟ್ಟಿದ ನೋವೆಲ್ಲ
ಬೆವರಾಗಿ ಹರಿದು ಹೋಗಲಿ, ನಾಳೆ;
ಒಂದುದಿನ ನಿನ್ನದೇ ಮಹಲಿನಲಿ
ಮಗುವಾಗಿ ಕೈತುತ್ತು ತಿನ್ನುವಾಸೆ!

ಒಂದೊಂದೆ ಕಟ್ಟಗಳ ಏರುತ್ತ, ಏರುತ್ತ
ಕಟ್ಟುಗಳ ದಾಟುತ್ತ ಜಾರಿಬೀಳದೆಯೆ
ಕಟ್ಟುವ ನಾವೊಂದು ಪುಟ್ಟಗೂಡು
ಇಂದಲ್ಲ ನಾಳೆ; ಪುಟ್ಟ
ಮತ್ತವನಮ್ಮ ಪಟ್ಟ ಪಾಡುಗಳೆಲ್ಲ
ಹಾಡಾಗಿ ಮೂಡಿ ಕಣ್ಣಂಚಿನ
ಧೂಳಪೊರೆ ಕರಗಿ ನವಿರಾಗಿ
ನವಿಲು ನರ್ತಿಸಲಿ
ತನ್ನ ಗರಿಯ ಬಿಚ್ಚಿ

-ವಸಂತ
18 ಮಾರ್ಚ್ 2014.



Friday, February 28, 2014

'Onde baari nanna nodi!' D.R.Bendre... suggested by Gelati Geeta!


I am lost in the lyric.......


ಒಂದೇ ಬಾರಿ ನನ್ನ ನೋಡಿ

ಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ

ಗಾಳಿಹೆಜ್ಜೆ ಹಿಡಿದ ಸುಗಂಧ
ಅತ್ತ ಅತ್ತ ಹೋಗುವಂದ
ಹೋತ ಮನಸು ಅವನ ಹಿಂದ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ
ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನ ನನಗ?
ಒಂದು ಅಳತಿ ನಡೆದದ ಚಿತ್ತ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ

ಸೂಜಿ ಹಿಂದ ದಾರದ್ಹಾಂಗ
ಕೊಳದೊಳಗ ಜಾರಿದ್ಹಾಂಗ
ಹೋತ ಹಿಂದ ಬಾರದ್ಹಾಂಗ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ
           -ದತ್ತಾತ್ರೇಯ ರಾಮಚಂದ್ರ ಬೇಂದ್ರೆ
Looking at me only once

Looking at me only once
Like a mild smile on his lips;
Charging his foots step by step;
He went away, away and away
Without looking back,
Oh! My friend!

Like fragrance;
Following the footprints
Of the breeze
Sailed towards him
Without looking back,
Oh! My friend!

I am lost! Became insentient!
Why should I bother others?
Psyche is moving at a speed
Without looking back,
Oh! My friend!

Like yarn
 Behind the needle,
Slipped into a loch
It went away without
Coming back!
Without looking back,
Oh! My friend!

(Translation: Vasant, 28-Feb-2014, 8:11pm)

Wednesday, February 12, 2014

ಬಯಲು ಕಡೆ ಹೊಂಟಿದ್ದೆ! ಮೀನಾ ಹಿಡಿಯಲ್ಲೆ!


ನಮ್ಮದು ಹೇಳೋದು ನಮ್ಗೆ 
ಸರಿ ಅರ್ಥ ಅಪ್ಪಕಾರಕ್ಕೆ
ರಾಶಿ ಟೈಂ ಬೇಕಾಗ್ತು! 
ಬ್ಯಾರೆದು ಹಾಂಗಲ್ಲ! 
ಸ್ವಲ್ಪ ಅಂದ್ರೆ
ಖರ್ಚಿಗೆ ಸಾಕಪ್ಪಷ್ಟು ಅರ್ಥ 
ಆದ್ರೆ ಸಾಕಾಗ್ತು! 


ಅರ್ಥ ಅಪ್ಪದು ಅಷ್ಟು 
ಸುಲಭ ಅಲ್ದೋ ತಮಾ! 
ಒಳಗೆ ಇಳಿಯವ್ವು.... 
ಇಳ್ಕೋತಾ ಇಳ್ಕೋತಾ ಹೋದಾಂಗೆ 
ಅಂತ ಪಾರ್ ಹರೀತಿಲ್ಲೆ!
ಅದು ಅಪ್ಪಕಾರಕ್ಕೆ ಕೂದ್ಲೆಲ್ಲ
ಹಣ್ಣಾಗಿರ್ತು!ತಲೆ 
ಎಲ್ಲಾ ಕರಡ!
ಕಾಂಬ ಕಣ್ಣು ಕುರುಡ!


ಆವಾಗ ಒಳಗೆ ಬೆಳಕು
ಹರೀತು!ದಾರಿ 
ಕಾಂಬಲ್ಲೆ ಹಂಕ್ತು! 
ನಡ್ಯಲ್ಲೆ ತಾಕತ್ತು 
ಸಾಲ್ತಿಲ್ಲೆ! ಮೂರು ಕಾಲು ಬೇಕಾಗ್ತು!


ಅದ್ಕೆ ಹೇಳದು ಪ್ರಾಯ
ಇಪ್ಪ ಕಾರಕ್ಕೆ ವಿಸ್ತಾರ 
ಬಯಲಾಗವು! ಪ್ರಾಯ 
ಸೋತ್ ಮ್ಯಾಲೆ 
ಆಳಕ್ಕಿಪ್ಪ ಕೊಡ್ಲಾಗವು!
ಅದೆಲ್ಲ ಅಪ್ಪಕಾರಕ್ಕೆ ನಾವು 
ಮೊದ್ಲು ಸಡ್ಲಾಗವು!


ಲೀನ ಅಪ್ಪಕಾರಕ್ಕೆ 
ನಾ ಮೊದ್ಲು ನೀ ಆಗವ್ವು!
ನೀ..... ನೋ ಆಗವ್ವು!
ನೋ.....ನೌ ಆಗಿ ನಃ 
ಆದಾಗ ಲೀ ನಲ್ಲಿನ ನೀಲಿ 
ಬಿಳಿಯಾಗಿ ಬಯಲಾಗಿರ್ತು!


ನೀ ಅಪ್ಪಕಿರೆ ಮೂರ್ಕಾಲು 
ಎರ್ಡ್ ಕೈ ತಲ್ಲೀನಾಗವು ಆವಾಗ ಕೈಯೂ ಇಲ್ಲೆ....
ಕಾಲೂ ಇಲ್ಲೆ.....ಕೋಲೂ ಇಲ್ಲೆ....
ಕಾಲಾನೂ ಇಲ್ಲೆ! 
ಎಲ್ಲಾ ಬಟಾ ಬಯಲು! 


ಈಗ ಬರ್ತೆ! ಬಯಲು ಕಡೆ
ಹೊಂಟಿದ್ದೆ!ಮೀನಾ ಹಿಡಿಯಲ್ಲೆ!

-ವಸಂತ
6 ಫೆಬ್ರುವರಿ 2014

Monday, February 3, 2014

ಶೂನ್ಯಸೃಷ್ಟಿ

ಶೂನ್ಯಸೃಷ್ಟಿ

ಕಣ್ಣಂಚಿನ ಕುಡಿನೋಟ
ಕಿಚ್ಚಿಬ್ಬಿಸಿ, ಕಿಬ್ಬೊಟ್ಟೆಯಾಳದಲಿ
ನಾಭಿಮೂಲದಿಂದ ಹೊರಟ
ಗಾಂಧಾರಿ ಕಣ್ಣಿಗಂಟಿದ
ಬಿಳುಪು ಪಟ್ಟಿ
ಹಗಲುಗುರುಡು!

ಹರಿ...ಹರಿಯಬೇಕು ಒಳಗಣ್ಣಪೊರೆ
ಜಿಹ್ವಾಮೂಲದ ಸರ
ಸೋತಿ ಬಡಪೆಟ್ಟಿಗೆ ಸೋಲು
ವವಳಲ್ಲ
ಹಾಯಿಸಬೇಕು ಕುಂಡಲಿನಿಯ
ಮೂಲಕ್ಕೆ ಓಂಕಾರ
ಪ್ರಾಣನಾದ, ಪ್ರಣವನಾದ.

ಒಳಗಣೊಳಗೆ ಹೊಸಬೆಳಕು
ಜೀವದೊರತೆಯ ಜತೆಗೆ
ಸಂತಭಾವದ ಜಿನುಗು
ಭವದಹಂಕಾರದ ಪೊರೆ
ಕಳಚುವಕಾಲ-ಲಯದ ಲೆಕ್ಕ

ಲಯದಲ್ಲಿ ಲಯವಾಗಿ, ಸ್ವರನಾದಿ
ನಾದರೂಪಕವಾಗಿ, ಬಯಲ ಸಂಗೀತಕ್ಕೆ
ಕಿವಿಯಾಗಿ ಹೃದಯ ಶೃತಿ
ಗೊಳಿಸಿ, ಮೀಟಿದರೆ ತಂಬೂರಿ ತಂತಿ
ಶಬ್ದ ವಜ್ಜೆ, ಅರ್ಥ ಲಜ್ಜೆ
ಶೂನ್ಯ.....ಶೂನ್ಯಸೃಷ್ಟಿ!

-ವಸಂತ
2 ಫೆಬ್ರುವರಿ 2014,
ಉತ್ಸವ್ ರಾಕ್ ಗಾರ್ಡನ್ಸ್, ಶಿಗ್ಗಾಂವಿ
******

Monday, December 30, 2013

ಬಿಳಿ ಕನಸು

An effort to translate three poems of Robert Friend into Kannada.

Robert Friend (November 25, 1913 - January 12, 1998) was an American-born poet and translator. After moving to Israel, he became a professor of English literature at the Hebrew University of Jerusalem. (http://en.wikipedia.org/wiki/Robert_Friend)


ಬಿಳಿ ಕನಸು

ಕ್ರೂರ ಸುದ್ದಿ ಕೇಳಿ
ಭಯಾನಕ ಆಕ್ರಮಣವನ್ನನುಭವಿಸಿದ ಮೇಲೆ,
ವಿಲಕ್ಷಣವೆಂಬಂತೆ ಭಯರಹಿತನಾದೆ,
ಪ್ರತಿ ಹಗಲು ಮೃದು ದಿಂಬಿನೊಳಗೆ ಮುಖವಿರಿಸಿ ಮುಳುಗುತ್ತ
ಮಗುವೊಂದು ಸುಖವಾದ ನಸುನಿದ್ದೆಯಲಿ ತೇಲಿಹೋದಂತೆ ಸಂತಸಪಟ್ಟೆ
ಪ್ರಾಯಶಃ ಅದೊಂದು ನಿಜವಾದ ವಿರಕ್ತಿ.
ಅರಿವಿತ್ತು ನನಗೆ ಬೇಷರತ್ತಾದ ಶಾಂತಿ ಅದೆಂದು
ಗೊತ್ತಿತ್ತು ಕೊನೆಗೆ ಬರಬಹುದು ನೋವು.
ಬರಲಿ ಅದು.
ನನ್ನ ದಿಂಬಿನ ಮೇಲೆ ಮುಖಹೊರಳಿಸಿ
ಮತ್ತೆ ಮಗದೊಂದು
ಬಿಳಿ(ಹಗಲು) ಕನಸಿನಲಿ ಮುಳುಗಿದ್ದೆ. 


ವಸಂತ
ನವಂಬರ್ 27,2013

Wednesday, February 13, 2013

ಗ್ರೇಶಿಯನ್ ಮಡಕೆಯ ಮರ್ಮ(ರ)





ನೀನು ಈಗಲೂ ಸಹ ಶಾಂತಿಯ ಕನ್ಯಾವಧು,
ಮೌನ ಹಾಗೂ ನಿಧಾನಗತಿಯ ದತ್ತುಪುತ್ರಿ ನೀನು
ನಮ್ಮ ಪ್ರಾಸಗಳಿಗಿಂತಲೂ ಹೆಚ್ಚು
ಮಧುರವಾಗಿ ಬಣ್ಣಬಣ್ಣದ ಕಥೆಗಳನ್ನು
ಕಥಿಸಬಲ್ಲ ಕಾಡುಜಾಣೆ, ಇತಿಹಾಸಜ್ಞೆ:
ಒಂದರೊಳಗೊಂದು ಹೆಣೆಯಲಾದ ಎಲೆಯ ಭವ್ಯತೆ
ನಿನ್ನ ರೂಪವನ್ನು ಪರಿಯಾಗಿ ಕಾಡುವಂತೆಳಸಿದೆ
ಅಂತೆಯೆ ದೇಗುಲದ ಅಥವಾ ಆರ್ಕೇಡಿಯಾ ಕಣಿವೆಗಳ?
ದೇವತೆಗಳೋ, ನರಮನುಷ್ಯರೋ ಅಥವಾ ಇವರಿಬ್ಬರ ಕೆತ್ತನೆಗಳು,
ಎಂಥ ಪುರುಷ ಯಾ ದೇವತೆಗಳಿವರು? ದ್ವೇಷ ಕಾರುವ ಹೆಂಗಳೆಯರು?
ಇದಾವ ಹುಚ್ಚು ಅನ್ವೇಷಣೆ? ತಪ್ಪಿಸಿಕೊಳ್ಲಲದೆಂತಹ ಹೋರಾಟ?
ಇವೆಂಥ ಪಿಳ್ಳಂಗೊವಿಗಳು, ಕಂಜರಿಗಳು? ಇದ್ಯಾವ ಪರಿಯ ಸ್ವಚ್ಛಂದ ಭಾವೋನ್ಮಾದ?

ಆಹತವು ಎಂದಿಗೂ ಮಧುರ, ಆದರೆ ಅನಾಹತವು
ಮತ್ತೆಯೂ; ಆದ್ದರಿಂದ ಓ ಪಿಳ್ಳಂಗೋವಿಗಳೇ ನುಡಿಸುವುದ ಮುಂದುವರೆಸಿ;
ಬರೀ ಕೇಳುವ ಕಿವಿಗಳಿಗಾಗಿ ಅಷ್ಟೇ ಅಲ್ಲ, ಅಪ್ಯಾಯಮಾನ ಹೃದಯಕ್ಕಾಗಿ,
ದನಿಯಿಲ್ಲದ ಜೀವದೇವತೆಗಳಿಗಾಗಿ ನುಡಿಸಿ.
ಮರಗಳಡಿಯಲ್ಲಿರುವ ನಿಷ್ಕಳಂಕ ತರುಣನೇ, ನೀನು ಬಿಡುವ ಹಾಗಿಲ್ಲ
ನಿನ್ನ ಹಾಡು, ಅಂತೆಯೆ, ಆ ಮರಗಳೂ ಕೂಡ ಬೆತ್ತಲಾಗುವಂತಿಲ್ಲ ಎಂದೂ;
ಎಲೆ ಉನ್ಮಾದೀ ಪ್ರಣಯಿಯೇ, ಎಂದಿಗೂ, ಎಂದೆಂದಿಗೂ ನೀ ಮುತ್ತಿಡುವಹಾಗಿಲ್ಲ,
ಗುರಿಯ ಗೆಲ್ಲುವ ದಾರಿ ಸನಿಹವಿದ್ದರೂ… ಆದರೂ ದುಃಖಿಸಬೇಕಿಲ್ಲ;
ಅವಳು ಬಾಡುವುದಿಲ್ಲ, ನಿನ್ನ ಚರಮಸುಖದ ಕಾರಣ ನೀನಲ್ಲದಿದ್ದಾಗ್ಯೂ
ಎಂದಿಗೂ ನೀನು ಪ್ರೀತಿಸುತ್ತಲೇ ಇರುತ್ತೀ, ಮತ್ತು ಅವಳು ಚಿರಸುಂದರಿಯೇ!

ಆಹ್, ಆನಂದ, ಆನಂದ ಸೂಸುವ ಟೊಂಗೆಗಳೆ! ನಿಮ್ಮ ಎಲೆಗಳನ್ನಿದು
ಉದುರಿಸುವ ಹಾಗಿಲ್ಲ, ವಸಂತಕಾಲವೆಂದು ಅಳಿಯುವುದೇ ಇಲ್ಲ;
ಮತ್ತೆ ಎಂದೆಂದಿಗೂ ಹೊಸತಾದ ಹಾಡುಗಳನ್ನು ನುಡಿಸುವ
ಚಿಂತೆಯಿಲ್ಲದ ಸಂತೃಪ್ತ ಸಂಗೀತಗಾರರೇ,
ಪ್ರೀತಿ ಹೆಚ್ಚು ಆನಂದದಾಯಕ! ಅತ್ಯಾನಂದಕರ, ಸಂತೋಷದಾಯಕ ಪ್ರೀತಿ!
ಎಂದಿಗೂ ಬೆಚ್ಚಗೆ, ಇನ್ನೂ ಬೇಕೆನಿಸುವಷ್ಟು,
ಯಾವತ್ತಿಗೂ ರಂಗುರಂಗು, ಸದಾ ಯೌವ್ವನ ಭರಿತ;
ಉಸಿರಾಡುವ ಮಾನವೀಯ ಅಭೀಪ್ಸೆಗಳೆಲ್ಲವೂ ತುಂಬ ಎತ್ತರದಲ್ಲಿವೆ,
ಸಿಡಿಯುವ ಹಣೆ ಹಾಗೂ ಒಣಗುವ ನಾಲಗೆಯಿಂದ
ಹೃದಯವನ್ನದು ಭಾರವಾಗಿಸಿ ನಿರಾಸೆಗೊಳಿಸಿಬಿಡುತ್ತದೆ.

ಇದಾರಿವರು ತ್ಯಾಗಕ್ಕೆ ಸಿದ್ಧರಾಗಿ ಬರುತ್ತಿರುವವರು?
ಆ ಹಸಿರು ತುಂಬಿದ ವಧಾಸ್ಥಾನಕ್ಕೆ, ಓ ನಿಗೂಢ ದೀಕ್ಷಿತನೆ
ಗಗನಮುಖಿಯಾಗಿ ರೋಧಿಸುವ ಹಸುವನ್ನೆಳತರುವ ಮುಂದಾಳು ನೀನು
ಅದರೆಲ್ಲ ರೇಷಿಮೆ ನುಣುಪಿನ ಪಕ್ಕೆಗಳತುಂಬೆಲ್ಲ ಹೂಮಾಲೆಗಳನು ಸಿಂಗರಿಸಿ?
ನದೀತಟದ್ದೋ, ಸಾಗರ ತೀರದ್ದೋ ಯಾವುದೋ ಚಿಕ್ಕ ಊರು,
ಅತವಾ ಶಾಂತಿ ತುಂಬಿದ ಪರ್ವತನಿರ್ಮಿತ ಕೊನೆಯ ನೆಲೆಯ
ಈ ಕಪಟ ಮುಂಜಾನೆ ತೊರೆದು ಬಂದರೆ ಅವರೆಲ್ಲ?
ಮತ್ತೆ ಚಿಕ್ಕ ನಗರ, ಅದರ ಬೀದಿಗಳು ಇನ್ನೂ ಹೆಚ್ಚು
ಮೌನತಾಳುವವೆ; ಒಂದೇ ಒಂದು ಆತ್ಮವೂ ಹೇಳಲುಳಿಯದೇ
ಯಾಕೆ ನೀನು ಏಕಾಂಗಿಯಾಗಿರುವೆ, ಎಂದಾದರೂ ತಿರುಗಿ ಬರಬಹುದೆ ಎಂದು.

ಅಮೃತಶಿಲೆಯ ಪುರುಷ ನಾರಿಯರ ಕುಲದಿಂದ
ಕಾಡುಗಿಡಗಂಟಿಗಳಿಂದ, ಸವೆದ ದಾರಿಗಳಿಂದ;
ತುಂಬಿದ ಓ ಆಟಿಕ್ ರೂಪಸಿಯೆ! ರಮ್ಯ ಗುಣಶಾಲಿನಿಯೆ!
ನಿನ್ನ ಮೌನದ ಪರಿಯು ಛೇಡಿಸುತ್ತಿದೆ ನಮ್ಮೆಲ್ಲ ವಿಚಾರದಾಚೆ
ಅಲೌಕಿಕದಂತೆ; ಶೀತಲ ಹಸಿರು ಹುಲ್ಲುಗಾವಲಿನಂತೆ!
ಈ ಜನಾಂಗವು ವ್ಯರ್ಥವಾಗಿ ಕಳೆವ ಮುದಿಗಾಲದಲ್ಲೂ
ನೀನು ಉಳಿದಿರುತ್ತೀಯೆ, ಬೇರೆಲ್ಲ ಚಿಂತೆಗಳ ನಡುವೆಯೂ,
ನಮ್ಮೆಲ್ಲರ ಹೊರತಾಗಿ, ಮನುಕುಲಕ್ಕೊದಗುವ ಓರ್ವ ಗೆಳೆಯನಾಗಿ, ನೀನು ಯಾರಿಗೆ ಹೇಳುತ್ತೀಯೆ,
“ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ”… ಅಲ್ಲಿಗೆ ಮುಗಿಯಿತು
ಭೂಮಿಯ ಮೇಲೆ ನೀನು ಅರಿಯಬೇಕಾದದ್ದು ಹಾಗೂ
ನೀನು ತಿಳಿದುಕೊಳ್ಳಬೇಕಾದ ಸಕಲವೂ.

ಇಂಗ್ಲೀಷ್ ಮೂಲ: ಜಾನ್ ಕೀಟ್ಸ್ ಕವಿಯ ‘ಓಡ್ ಆನ್ ಅ ಗ್ರೇಶಿಯನ್ ಅರ್ನ್’
ಕನ್ನಡ ಅನುವಾದ : ವಸಂತ
ಫೆಬ್ರುವರಿ 13, 2013