Wednesday, February 13, 2013

ಗ್ರೇಶಿಯನ್ ಮಡಕೆಯ ಮರ್ಮ(ರ)





ನೀನು ಈಗಲೂ ಸಹ ಶಾಂತಿಯ ಕನ್ಯಾವಧು,
ಮೌನ ಹಾಗೂ ನಿಧಾನಗತಿಯ ದತ್ತುಪುತ್ರಿ ನೀನು
ನಮ್ಮ ಪ್ರಾಸಗಳಿಗಿಂತಲೂ ಹೆಚ್ಚು
ಮಧುರವಾಗಿ ಬಣ್ಣಬಣ್ಣದ ಕಥೆಗಳನ್ನು
ಕಥಿಸಬಲ್ಲ ಕಾಡುಜಾಣೆ, ಇತಿಹಾಸಜ್ಞೆ:
ಒಂದರೊಳಗೊಂದು ಹೆಣೆಯಲಾದ ಎಲೆಯ ಭವ್ಯತೆ
ನಿನ್ನ ರೂಪವನ್ನು ಪರಿಯಾಗಿ ಕಾಡುವಂತೆಳಸಿದೆ
ಅಂತೆಯೆ ದೇಗುಲದ ಅಥವಾ ಆರ್ಕೇಡಿಯಾ ಕಣಿವೆಗಳ?
ದೇವತೆಗಳೋ, ನರಮನುಷ್ಯರೋ ಅಥವಾ ಇವರಿಬ್ಬರ ಕೆತ್ತನೆಗಳು,
ಎಂಥ ಪುರುಷ ಯಾ ದೇವತೆಗಳಿವರು? ದ್ವೇಷ ಕಾರುವ ಹೆಂಗಳೆಯರು?
ಇದಾವ ಹುಚ್ಚು ಅನ್ವೇಷಣೆ? ತಪ್ಪಿಸಿಕೊಳ್ಲಲದೆಂತಹ ಹೋರಾಟ?
ಇವೆಂಥ ಪಿಳ್ಳಂಗೊವಿಗಳು, ಕಂಜರಿಗಳು? ಇದ್ಯಾವ ಪರಿಯ ಸ್ವಚ್ಛಂದ ಭಾವೋನ್ಮಾದ?

ಆಹತವು ಎಂದಿಗೂ ಮಧುರ, ಆದರೆ ಅನಾಹತವು
ಮತ್ತೆಯೂ; ಆದ್ದರಿಂದ ಓ ಪಿಳ್ಳಂಗೋವಿಗಳೇ ನುಡಿಸುವುದ ಮುಂದುವರೆಸಿ;
ಬರೀ ಕೇಳುವ ಕಿವಿಗಳಿಗಾಗಿ ಅಷ್ಟೇ ಅಲ್ಲ, ಅಪ್ಯಾಯಮಾನ ಹೃದಯಕ್ಕಾಗಿ,
ದನಿಯಿಲ್ಲದ ಜೀವದೇವತೆಗಳಿಗಾಗಿ ನುಡಿಸಿ.
ಮರಗಳಡಿಯಲ್ಲಿರುವ ನಿಷ್ಕಳಂಕ ತರುಣನೇ, ನೀನು ಬಿಡುವ ಹಾಗಿಲ್ಲ
ನಿನ್ನ ಹಾಡು, ಅಂತೆಯೆ, ಆ ಮರಗಳೂ ಕೂಡ ಬೆತ್ತಲಾಗುವಂತಿಲ್ಲ ಎಂದೂ;
ಎಲೆ ಉನ್ಮಾದೀ ಪ್ರಣಯಿಯೇ, ಎಂದಿಗೂ, ಎಂದೆಂದಿಗೂ ನೀ ಮುತ್ತಿಡುವಹಾಗಿಲ್ಲ,
ಗುರಿಯ ಗೆಲ್ಲುವ ದಾರಿ ಸನಿಹವಿದ್ದರೂ… ಆದರೂ ದುಃಖಿಸಬೇಕಿಲ್ಲ;
ಅವಳು ಬಾಡುವುದಿಲ್ಲ, ನಿನ್ನ ಚರಮಸುಖದ ಕಾರಣ ನೀನಲ್ಲದಿದ್ದಾಗ್ಯೂ
ಎಂದಿಗೂ ನೀನು ಪ್ರೀತಿಸುತ್ತಲೇ ಇರುತ್ತೀ, ಮತ್ತು ಅವಳು ಚಿರಸುಂದರಿಯೇ!

ಆಹ್, ಆನಂದ, ಆನಂದ ಸೂಸುವ ಟೊಂಗೆಗಳೆ! ನಿಮ್ಮ ಎಲೆಗಳನ್ನಿದು
ಉದುರಿಸುವ ಹಾಗಿಲ್ಲ, ವಸಂತಕಾಲವೆಂದು ಅಳಿಯುವುದೇ ಇಲ್ಲ;
ಮತ್ತೆ ಎಂದೆಂದಿಗೂ ಹೊಸತಾದ ಹಾಡುಗಳನ್ನು ನುಡಿಸುವ
ಚಿಂತೆಯಿಲ್ಲದ ಸಂತೃಪ್ತ ಸಂಗೀತಗಾರರೇ,
ಪ್ರೀತಿ ಹೆಚ್ಚು ಆನಂದದಾಯಕ! ಅತ್ಯಾನಂದಕರ, ಸಂತೋಷದಾಯಕ ಪ್ರೀತಿ!
ಎಂದಿಗೂ ಬೆಚ್ಚಗೆ, ಇನ್ನೂ ಬೇಕೆನಿಸುವಷ್ಟು,
ಯಾವತ್ತಿಗೂ ರಂಗುರಂಗು, ಸದಾ ಯೌವ್ವನ ಭರಿತ;
ಉಸಿರಾಡುವ ಮಾನವೀಯ ಅಭೀಪ್ಸೆಗಳೆಲ್ಲವೂ ತುಂಬ ಎತ್ತರದಲ್ಲಿವೆ,
ಸಿಡಿಯುವ ಹಣೆ ಹಾಗೂ ಒಣಗುವ ನಾಲಗೆಯಿಂದ
ಹೃದಯವನ್ನದು ಭಾರವಾಗಿಸಿ ನಿರಾಸೆಗೊಳಿಸಿಬಿಡುತ್ತದೆ.

ಇದಾರಿವರು ತ್ಯಾಗಕ್ಕೆ ಸಿದ್ಧರಾಗಿ ಬರುತ್ತಿರುವವರು?
ಆ ಹಸಿರು ತುಂಬಿದ ವಧಾಸ್ಥಾನಕ್ಕೆ, ಓ ನಿಗೂಢ ದೀಕ್ಷಿತನೆ
ಗಗನಮುಖಿಯಾಗಿ ರೋಧಿಸುವ ಹಸುವನ್ನೆಳತರುವ ಮುಂದಾಳು ನೀನು
ಅದರೆಲ್ಲ ರೇಷಿಮೆ ನುಣುಪಿನ ಪಕ್ಕೆಗಳತುಂಬೆಲ್ಲ ಹೂಮಾಲೆಗಳನು ಸಿಂಗರಿಸಿ?
ನದೀತಟದ್ದೋ, ಸಾಗರ ತೀರದ್ದೋ ಯಾವುದೋ ಚಿಕ್ಕ ಊರು,
ಅತವಾ ಶಾಂತಿ ತುಂಬಿದ ಪರ್ವತನಿರ್ಮಿತ ಕೊನೆಯ ನೆಲೆಯ
ಈ ಕಪಟ ಮುಂಜಾನೆ ತೊರೆದು ಬಂದರೆ ಅವರೆಲ್ಲ?
ಮತ್ತೆ ಚಿಕ್ಕ ನಗರ, ಅದರ ಬೀದಿಗಳು ಇನ್ನೂ ಹೆಚ್ಚು
ಮೌನತಾಳುವವೆ; ಒಂದೇ ಒಂದು ಆತ್ಮವೂ ಹೇಳಲುಳಿಯದೇ
ಯಾಕೆ ನೀನು ಏಕಾಂಗಿಯಾಗಿರುವೆ, ಎಂದಾದರೂ ತಿರುಗಿ ಬರಬಹುದೆ ಎಂದು.

ಅಮೃತಶಿಲೆಯ ಪುರುಷ ನಾರಿಯರ ಕುಲದಿಂದ
ಕಾಡುಗಿಡಗಂಟಿಗಳಿಂದ, ಸವೆದ ದಾರಿಗಳಿಂದ;
ತುಂಬಿದ ಓ ಆಟಿಕ್ ರೂಪಸಿಯೆ! ರಮ್ಯ ಗುಣಶಾಲಿನಿಯೆ!
ನಿನ್ನ ಮೌನದ ಪರಿಯು ಛೇಡಿಸುತ್ತಿದೆ ನಮ್ಮೆಲ್ಲ ವಿಚಾರದಾಚೆ
ಅಲೌಕಿಕದಂತೆ; ಶೀತಲ ಹಸಿರು ಹುಲ್ಲುಗಾವಲಿನಂತೆ!
ಈ ಜನಾಂಗವು ವ್ಯರ್ಥವಾಗಿ ಕಳೆವ ಮುದಿಗಾಲದಲ್ಲೂ
ನೀನು ಉಳಿದಿರುತ್ತೀಯೆ, ಬೇರೆಲ್ಲ ಚಿಂತೆಗಳ ನಡುವೆಯೂ,
ನಮ್ಮೆಲ್ಲರ ಹೊರತಾಗಿ, ಮನುಕುಲಕ್ಕೊದಗುವ ಓರ್ವ ಗೆಳೆಯನಾಗಿ, ನೀನು ಯಾರಿಗೆ ಹೇಳುತ್ತೀಯೆ,
“ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ”… ಅಲ್ಲಿಗೆ ಮುಗಿಯಿತು
ಭೂಮಿಯ ಮೇಲೆ ನೀನು ಅರಿಯಬೇಕಾದದ್ದು ಹಾಗೂ
ನೀನು ತಿಳಿದುಕೊಳ್ಳಬೇಕಾದ ಸಕಲವೂ.

ಇಂಗ್ಲೀಷ್ ಮೂಲ: ಜಾನ್ ಕೀಟ್ಸ್ ಕವಿಯ ‘ಓಡ್ ಆನ್ ಅ ಗ್ರೇಶಿಯನ್ ಅರ್ನ್’
ಕನ್ನಡ ಅನುವಾದ : ವಸಂತ
ಫೆಬ್ರುವರಿ 13, 2013