Sunday, September 9, 2012

Delight in Disorderಬ್ರಹ್ಮಾಂಡ ವಿಸ್ತಾರದ ಕ್ಷೇತ್ರ
ಪಿಂಡಾಂಡದಲ್ಲಿಹುದು ಅದರ
ಅಂಡಾಣು, ಪ್ರೊಟಾನು ನ್ಯೂಟ್ರಾನು
ಎಲೆಕ್ಟ್ರಾನು ಸುತ್ತಿಸುಳಿವ
ಸಂಬಂಧ ಶಕ್ತಿಮೈತ್ರಿ
ನಾನೋ ಅದರೊಳಗಿನ  ಅಣುರೇಣು
ಹತ್ತಿಯ ಹಗುರಿನವನು
ಹಾರಾಡುತ್ತೇನೆ ಬೇಕಾಬಿಟ್ಟಿ
ನಿಯಮಗಳ ತೂರಿ
ಗಾಳಿಗೋಪುರ ಕಟ್ಟಿ
ಮರಳಲ್ಲಿ ಮನೆಕಟ್ಟಿ
ಮರುಳಾಗಿ ಸುಖಿಸುತಿಹೆ
ಅಲೆಮಾರಿಯಂತೆ
ಸತ್ಯ-ಅಸತ್ಯ ಎಲ್ಲವೂ ಒಂದೇ
ಶಿವ-ಸುಂದರ ನನಗೆಂದೂ
ವಂದೇ
ವಿಲಕ್ಷಣದಲ್ಲಿ ಲಕ್ಷಣವ ಹುಡುಕುತ್ತ
ತಿರುಮುರುವಾಗುತ್ತ ಆನಂದ
ಪಡೆವುದೇ ಸಚ್ಚಿದಾನಂದ
ಎಂದರೂ ಬ್ರಹ್ಞಾಂಡ ವಿಸ್ತಾರದ ಕ್ಷೇತ್ರ! 
                                        
                                         -      ವಸಂತ, 10-ಸಪ್ಟೆಂಬರ್ 2012

Tuesday, September 4, 2012

Gandharva Sangeet

ಸುನ್ತಾ ಹೈ ಗುರುಗ್ಯಾನಿ…..

ಗುಂಯ್ ಗುಡುವ ಗಾಯನದ ಗುಂಗು;
ಸುಂಯ್ ಗುಡುವ ಗಾಳಿಯಲ್ಲಿ ತೇಲಿಬರುವ
ಅಸ್ಪಷ್ಟ ಗಂಧರ್ವ ಭಾವಬಂಗಿ

ಕುಮಾರ ಗಂಧರ್ವ……… ಹೆಸರೇ ಮೈರೋಮಾಂಚನಗೊಳಿಸುತ್ತದೆ! ಸಾಕ್ಷಾತ್ ಗಂಧರ್ವ ಕುಮಾರರೇ! ಅವರು ಹಚ್ಚುವ ಒಂದೊಂದೂ ಸ್ವರವೂ ಎದೆಯಾಳದಿಂದ ಮೀಟಿಬರುವ ಭಾವರಸಧಾರೆ! ಅವರಿಗೆ ಅವರೇ ಸಾಟಿ! ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಹೊಸಭಾಷ್ಯ ಬರೆದ ಪಂಡಿತ್ ಕುಮಾರ ಗಂಧರ್ವ, ನಾದಕ್ಕೆ ಗಡಿಯಿಲ್ಲ, ಸ್ವರಗಳಿಗೆ ಎಲ್ಲೆಯಿಲ್ಲ ಎಂಬುದನ್ನು ಜೀವಂತವಾಗಿ ಅಭಿವ್ಯಕ್ತಿಸಿ ತೋರಿಸಿ, ಆ ಮೂಲಕ ನಾದವಿಸ್ತಾರದ ನವದರ್ಶನ ಸಾಧ್ಯಪಡಿಸಿದ ಆಧುನಿಕ ದಾರ್ಶನಿಕ.

ಕಳೆದ ಮೂರುದಿನಗಳಿಂದಲೂ ನನ್ನನ್ನು ಕಾಡುತ್ತಿರುವ ಕುಮಾರಗಂಧರ್ವರ ನೆನಪು ಬಿಚ್ಚಿಕೊಳ್ಳತೊಡಗಿದೆ. 2000ನೇ ಇಸ್ವಿಯಲ್ಲಿ ನನಗೆ ಅವರ ದೇವಾಸದ ಮನೆ ‘ಭಾನುಕುಂಜ’ವನ್ನು ನೋಡುವ ಸುಯೋಗ ಒದಗಿಬಂದಿತ್ತು. ಒಂದಿಡೀ ದಿನ ವಸುಂಧರಾ ತಾಯಿ, ಕಲಾಪಿನಿ(ಕುಮಾರರ ಮಗಳು) ಹಾಗೂ ಭುವನ್( ಮೊಮ್ಮಗ) ಅವರೊಂದಿಗೆ ಕಳೆದದ್ದು, ಕುಮಾರ ಗಂಧರ್ವರು ಓಡಾಡಿದ ಜಾಗ, ಅವರ  ಅಧ್ಯಯನ ಕೋಣೆ, ಅಲ್ಲಿರುವ ಹಳೇಕಾಲದ ಟೆಪ್ ರಿಕಾರ್ಡರ್, ಅದ್ಭುತವಾದ ಗ್ರಂಥಗಳ ಸಂಗ್ರಹ, ಅವರ ಪತ್ರಸಂಗ್ರಹ,  ಅವರೆಲ್ಲರ ಅಷ್ಟೇ ಸವಿಯಾದ ನಡೆ, ಆತ್ಮೀಯತೆಯಿಂದ ಅವರು ಹಾಕಿದ ಊಟವನ್ನೆಂದೂ ಮರೆಯಲು ಸಾಧ್ಯವಿಲ್ಲ. ಇನ್ನೂ ಕುತೂಹಲದ ಸಂಗತಿಯೆಂದರೆ, ಕುಮಾರಜೀ ಅವರ ಮಾವನ ಮನೆ ನಮ್ಮ ಉತ್ತರ ಕನ್ನಡ ಜಿಲ್ಲೆ, ಅವರ ಪತ್ನಿ ವಸುಂಧರಾ ತಾಯಿ ನಮ್ಮ ಗೋಕರ್ಣದವರು ಎಂಬುದು!
  
ಮೊನ್ನೆ ತಡರಾತ್ರಿಯಲ್ಲಿ ಇದ್ದಕ್ಕಿದ್ದಂತೆ ನನ್ನ ಕನಸಿನಲ್ಲಿ ಕುಮಾರಗಂಧರ್ವ ಬಂದರು. ಎರಡೂ ಕೈಗಳನ್ನು ಅಗಲಿಸಿ ಆಕಾಶದೆಡೆಗೆ ದಿಟ್ಟಿಸಿ ನೋಡಿ ಏನನ್ನೋ ಹೇಳುತ್ತಿರುವಂತೆ ಇತ್ತು. ಕೂಡಲೇ ಎಚ್ಚರವಾಗಿಬಿಟ್ಟಿತು. ನಂತರ ತುಂಬ ಹೊತ್ತಿನವರೆಗೆ ನಿದ್ದೆಯೇ ಹತ್ತುತ್ತಿಲ್ಲ. ನನ್ನ ಹತ್ತಿರವಿರುವ ಅವರ ಗಾಯನ ಸಂಗ್ರಹದ ಶ್ರೀ, ಮಾಲಕಂಸ್, ನಿರ್ಗುಣ ಭಜನ್ ಗಳನ್ನು ಕೇಳುತ್ತ ಕೇಳುತ್ತ ಎಷ್ಟೊತ್ತಿಗೆ ಮಲಗಿದೆನೋ ಗೊತ್ತಿಲ್ಲ. ಮರುದಿನ ಭಾನುವಾರ ವಿಜಯವಾಣಿ ಪತ್ರಿಕೆಯ ವಿಜಯವಿಹಾರದಲ್ಲಿ ಜಿ.ಕೆ.ರವೀಂದ್ರಕುಮಾರ ಅವರು, ‘ಕುಮಾರ ಗಂಧರ್ವರ ಅನಂತ ನೋಟ’ ಎಂಬ ಮನಮೋಹಕವಾದ ಲೇಖನವೊಂದನ್ನು ಬರೆದಿದ್ದರು. ಈ ಮೂರುದಿನಗಳಿಂದಲೂ ಅವರ ಗಾಯನದ ಗುಂಗಿನಲ್ಲಿಯೇ ಇರುವ ನನಗೆ ಕುಮಾರಗಂಧರ್ವರು ನನ್ನ ಕನಸಿನಲ್ಲಿ ಹೇಳದೇ ಹೋಗಿದ್ದೇನು ಎನ್ನುವುದರ ಬಗ್ಗೆ ಕುತೂಹಲವುಂಟಾಗತೊಡಗಿದೆ!

“ಇಷ್ಟೆಲ್ಲ ಪ್ರಸಿದ್ಧಿಗಳನ್ನು ನೀವು ಪಡೆದುಕೊಂಡರೂ ದೇವಾಸದಂತಹ ಈ ಹಳ್ಳಿಮೂಲೆಯಲ್ಲಿಯೇ ಇನ್ನೂ ಉಳಿದುಕೊಂಡಿದ್ದೀರಿ ಏಕೆ?”ಎಂದು ಒಬ್ಬರು ಒಮ್ಮೆ ಅವರನ್ನು ಕೇಳಿದ್ದರಂತೆ. ಆಗ ಅವರು, “ ಬಹಳ ಜನ ನನಗೆ ಈ ಪ್ರಶ್ನೆ ಕೇಳುತ್ತಾರೆ. ದೇವಾಸ ನನಗೆ ಮರುಹುಟ್ಟು ನೀಡಿದ ಊರು. ಚಿಕ್ಕ ಹಳ್ಳಿಯೇ ಆದರೂ ಇಲ್ಲೇ ಒಂದು ಅದ್ಭುತವಾದ ಜಗತ್ತಿದೆ.ಆ ಜಗತ್ತಿನಿಂದಲೇ ನಾನು ಉಸಿರಾಡುವುದನ್ನು ಕಲಿತಿದ್ದೇನೆ. ಮಹಾನಗರಗಳ ಆಕರ್ಷಣೆ ನನಗೆ ಮೊದಲಿನಿಂದಲೂ ಇಲ್ಲ. ದೇವಾಸ ನನಗೆ ಹಿಡಿಸಿದೆ. ಇದು ನನ್ನ ಗಂಧರ್ವಲೋಕ” ಎಂದು ಹೇಳಿದ್ದರಂತೆ!

ಜೀವನ-ಕಲೆ-ಸಾಹಿತ್ಯಗಳಲ್ಲಿ ಕಲಾವಿದನಿಗೆ ಕುತೂಹಲವಿರಬೇಕು. ಅದರಿಂದ ಆನಂದ ಪಡೆಯಬೇಕು. ಆಗ ಮಾತ್ರ ಕಲಾವಿದ ಇನ್ನೊಬ್ಬರಿಗೆ ಆನಂದವನ್ನು ನೀಡುವುದು ಸಾಧ್ಯ. ಜೀವನವನ್ನು ಬಿಟ್ಟು ಯಾವ ಕಲೆಯೂ ಹೊರತಾಗಿಲ್ಲ ಎಂಬುದನ್ನು ಹೇಳುತ್ತಲೇ, ಅದರಂತೆಯೇ ಬದುಕಿದವರು ಪಂಡಿತ್ ಕುಮಾರ ಗಂಧರ್ವರು.

“ನಾನೇನೂ ಶಾಲೆಗೆ ಹೋದವನಲ್ಲ, ಅಕ್ಷರ ಕಲಿತವನಲ್ಲ.ಆದರೆ ನಿಸರ್ಗ ನನಗೆ ಅನೇಕ ಸಂಗತಿಗಳನ್ನು ಕಲಿಸಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣತರಾದ ನನ್ನ ಮಿತ್ರರು ನನಗೆ ಜೀವನ ಪಾಠ ಮಾಡಿದ್ದಾರೆ. ನನ್ನನ್ನು ಸಮೃದ್ಧಗೊಳಿಸುವಲ್ಲಿ ಈ ಎಲ್ಲ ಕಾರಣಗಳಿವೆ”, ಎಂದು ಹೇಳುತ್ತ ತಮ್ಮ ವಿನಯವಂತಿಕೆಯನ್ನು ಅವರು ವ್ಯಕ್ತಪಡಿಸಿದ್ದರು.

ಸ್ವರಗಳಿಂದ ರಸ ಹಾಗೂ ಭಾವಗಳನ್ನು ನಿರ್ಮಾಣ ಮಾಡುವ ಆಕಾಂಕ್ಷೆಯಿಂದಲೇ ಕುಮಾರ್ ಜೀ ಭಜನ್ ಗಳಿಗೆ ಹೊಸ ಸ್ಪರ್ಷನೀಡಿದರು. ನಿರ್ಗುಣೀ ಭಜನ್ ಎಂದರೆ ಕುಮಾರ ಗಂಧರ್ವ ಎನ್ನುವಂತೆ ಭಾಷೆಯ ನಾದಪ್ರತಿಮೆಯಾಗಿ ಅವರು ಅದನ್ನು ಪಳಗಿಸಿದರು. “ಹಾಡುಗಾರನಿಗೆ ಮೊದಲು ಸ್ವರ ಚೆನ್ನಾಗಿ ಹತ್ತಬೇಕು. ವ್ಯವಸ್ಥಿತವಾಗಿ, ದೃಢವಾಗಿ ಹೆಜ್ಜೆಯೂರುವಹಾಗೆ, ಸ್ವಾಭಾವಿಕವಾದ ನಡೆ ಅಲ್ಲಿರಬೇಕು. ನಿರ್ಗುಣೀ ಭಜನೆಯೆಂದರೆ ಆತ್ಮದ ಸ್ಥಿತಿಯ ವರ್ಣನೆ. ಆತ್ಮಾನಂದ ವಿವಿಧ ಹಂತಗಳಲ್ಲಿ ಹೇಗೆ ಹೇಗೆ ಆಗಬಹುದು… ಅದನ್ನು ಶಬ್ದಗಳ ಮೂಲಕ…. ಲಯಗಳ ಮೂಲಕ…. ಸೂರ್ ಗಳ ಮೂಲಕ ಹೇಗೆ ಹಿಡಿಯಬೇಕು ಎಂಬುದರ ಬಗ್ಗೆ ನಾನು ಹೆಚ್ಚುಹೆಚ್ಚು ಚಿಂತಿಸಿದ್ದೇನೆ. ಮೀರಾಭಜನೆ, ಕಬೀರ ಭಜನೆ, ಸೂರದಾಸ ಭಜನೆ… ಈ ಎಲ್ಲವುಗಳ ಗಳ ನಡೆಯೇ ಬೇರೆ ಬೇರೆ. ಅಂತೆಯೇ ಅದಕ್ಕೊಪ್ಪುವ ಸ್ವರಗಳನ್ನು, ಲಯಗಳನ್ನು ರಾಗಸಂಯೋಜನೆಯನ್ನು ಮಾಡುವಾಗ ಅವುಗಳಾಳಕ್ಕೆ ಇಳಿದು, ಒಳಗೊಳ್ಳುವ ಪ್ರಯತ್ನ ಮಾಡಿದ್ದೇನೆ. ನನಗೆ ದಕ್ಕಿದ್ದನ್ನು ಹಿಡಿದು ತೋರುವ ಧೈರ್ಯ ಮಾಡಿದ್ದೇನೆ”ಎಂದು ಅವರೇ ಹೇಳಿದ್ದಿದೆ.

ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ದೇಸೀ ಲಯದ ಸೊಗಡನ್ನು ಕಸಿಮಾಡಿ ಹೊಸರೂಪ ನೀಡಿದ ಈ ಸಂಗೀತ ಸಂತನ ತಾಯಿಬೇರು ಕನ್ನಡ ನಾಡಿನ ಬೆಳಗಾವಿಯ ಸೂಳೆಭಾವಿಯಲ್ಲಿದೆ ಎಂಬುದು ನಾವೆಲ್ಲರೂ ಹೆಮ್ಮೆಪಡಬೇಕಾದ ಸಂಗತಿ. 1924ರ ಎಪ್ರಿಲ್ 8 ರಂದು ಜನಿಸಿದ ಈ ಜೀನಿಯಸ್ನ ಜೀನಿನಲ್ಲಿಯೇ ಜೇನಿನಂತಹ ಸ್ವರಪಾಕವಿದೆ. ತಂದೆ ಸಿದ್ಧರಾಮಯ್ಯ ಕೊಂಕಾಳಿಮಠ ಅವರು ಕಂಪನಿ ನಾಟಕಗಳಲ್ಲಿ ಕೆಲಸ ಮಾಡುತ್ತಿದ್ದ ಆಕಾಲದ ಪ್ರತಿಭಾನ್ವಿತ ಗಾಯಕ ನಟರಾಗಿದ್ದವರು. ಹಾಗಾಗಿ ಹುಟ್ಟುತ್ತಲೇ ಸ್ವರಗಳು ಶಿವಪುತ್ರನ (ಕುಮಾರ ಗಂಧರ್ವರ ಮೂಲ ಹೆಸರು) ಆಟಿಕೆಗಳು! ನಾಲ್ಕು ವರ್ಷಗಳಾಗುವಹೊತ್ತಿಗೆ ಶಿವಪುತ್ರ ಸ್ವರಗಳನ್ನೇ ಹೇಗೆ ಬೇಕಾದರೂ ಆಟವಾಡಿಸಬಲ್ಲವನಾಗಿದ್ದ! ನಾಲ್ಕನೆಯ ವಯಸ್ಸಿಗೆ ತಂದೆಯಿಂದಲೇ ಸ್ವರದೀಕ್ಷೆಯನ್ನು ಪಡೆದ ಶಿವಪುತ್ರ ಐದನೇ ವಯಸ್ಸಿಗೇ ತನ್ನ  ಅದ್ಭುತ ಗಾಯನದಿಂದ ಸಂಗೀತ ರಸಿಕರ ಮನಸೂರೆಗೊಂಡು ‘ಕುಮಾರ ಗಂಧರ್ವ’ನಾಗಿ ಗುರುತಿಸಲ್ಪಟ್ಟ.

ಮುಂದೆ ಎಡತಾಕಿದ್ದು ಇನ್ನೋರ್ವ ಸಂಗೀತ ಋಷಿ ವಿಷ್ಣುದಿಗಂಬರ ಪಲುಸ್ಕರರ ಶಿಷ್ಯರಾದ ಮುಂಬಯಿಯ ಪಂ.ಬಿ.ಆರ್.ದೇವಧರ ಅವರ ಗರಡಿಗೆ. ಅಲ್ಲಿ ಸಂಗೀತ ಲೋಕದ ದರ್ಶನ ಈ ಬಾಲಕನಿಗಾಯಿತು.ಕುಮಾರ ಗಂಧರ್ವನ ಶ್ರವಣಕ್ಕೆ ಸಿಕ್ಕ ಉಸ್ತಾದ ಬಡೆ ಗುಲಾಂ ಅಲಿ, ಉಸ್ತಾದ್ ಅಬ್ದುಲ್ ಕರೀಂ ಖಾನ್, ರೊಶನಾರಾ ಬೇಗಂ, ಹೀರಾಬಾಯಿ ಬಡೋದೇಕರ್, ಕೇಸರಬಾಯಿ ಕೇಳ್ಕರ್ ಮುಂತಾದ ದಿಗ್ಗಜರ ಗಾಯನ ಗಂಧರ್ವಗಾನಕ್ಕೆ ಪೀಠಿಕೆಯನ್ನು ಬರೆದರೆ, ಗುರು ದೇವಧರರ ಮಾರ್ಗದರ್ಶನ ರಾಗಪ್ರವೇಶಕ್ಕೆ, ಅದರ ಅನಂತ ವಿಸ್ತಾರಕ್ಕೆ ನಾಂದಿ ಹಾಡಿತು. 1933 ರಿಂದ 1942ರವರೆಗೆ ದೇವಧರರು ತಮ್ಮೆಲ್ಲ ವಿದ್ಯೆಯನ್ನೂ ಕುಮಾರ ಗಂಧರ್ವರಿಗೆ ಮನಃಪೂರ್ವಕ ಧಾರೆಯೆರೆದಿದ್ದರು.

ಮುಂದೆ ಅವರೇ ತಮ್ಮ ಶಿಷ್ಯನನ್ನು ಅಂಜನಿಬಾಯಿ ಮಾಲ್ವೇಕರ್ ಎಂಬ ವಯೋವೃದ್ಧ ಸರಸ್ವತಿಯ ತೆಕ್ಕೆಗೆ ನೀಡಿ ಮುಂದಿನ ಸಂಸ್ಕಾರ ನೀಡುವಂತೆ ಬೇಡಿಕೊಂಡರು. ಅಲ್ಲಿನ ತಾಲೀಮುಗಳ ಸಂದರ್ಭದಲ್ಲಿಯೇ ಕುಮಾರ ಗಂಧರ್ವರ ಸಂಗೀತ ಸ್ವರಗಳಿಗೆ ಹೊಸ ದೃಷ್ಟಿ ಗೋಚರಿಸತೊಡಗಿದ್ದು. ಸ್ವರತತ್ವದ ಹೊಸ ಬೆಳಕು ಮೂಡಿದ್ದು ಎಂದು ಸ್ವತಃ ಕುಮಾರ ಗಂಧರ್ವರೇ ಹೇಳುತ್ತಿದ್ದರಂತೆ.


1947 ತಂದ ಗಾಡಾಂಧಕಾರ

ಹೀಗೆಯೇ ಗಂಧರ್ವಗಾಯನಕ್ಕೆ ಕಳೆಕಟ್ಟುತ್ತಿರುವ ಹಂತದಲ್ಲಿಯೇ ಬಂದಿದ್ದು 1947ನೇ ಇಸ್ವಿ. ಸ್ವತಂತ್ರರಾದೆವೆಂದು ಸಂತಸ-ಸಂಭ್ರಮಾಚರಣೆಯಲ್ಲಿ ನಮ್ಮವರೆಲ್ಲ ಮುಳುಗಿದ್ದ ಸಮಯದಲ್ಲಿ ಕುಮಾರಗಂಧರ್ವರ ಗಾಯನ ಯಾತ್ರೆಯ ದಾರಿಯಲ್ಲಿ ಹಠಾತ್ತಾಗಿ ಅಂಧಕಾರವುಂಟಾಗಿ ಅವರು ಪಾರತಂತ್ರ್ಯವನ್ನು ಅನುಭವಿಸುವಂತಾಯಿತು. ಕ್ಷಯರೋಗಕ್ಕೆ ತುತ್ತಾದ ಅವರ ರಾಗಜೀವನ ಕೊನೆಗೊಂಡಂತೆಯೇ ಎಂಬಂತಾಗಿತ್ತು. ಒಂದು ಶ್ವಾಸಕೋಶವನ್ನೇ ಕಳೆದುಕೊಂಡ ಕುಮಾರಗಂಧರ್ವ ತಂಬೂರಿ ಮೀಟುವುದಿರಲಿ, ಮಾತನ್ನು ಕೂಡ ಆಡದಂತೆ ವೈದ್ಯರ ಕಟ್ಟಪ್ಪಣೆಯನ್ನು ಪಾಲಿಸಬೇಕಾಯಿತು. ಹಾಡುಹಕ್ಕಿಗೆ ನೀ ಹಾಡಲೇ ಕೂಡದೆಂದರೆ ಹೇಗಾಗಿರಬೇಡ! ಮಾನಸಿಕವಾಗಿಯೂ ಅವರ ಜೀವನದ ತುಮುಲದ ದಿನಗಳವು….

ಕತ್ತಲೆಯ ನಂತರದ ಬೆಳಕು

ಅಂತಹ ದಿನಗಳಲ್ಲಿಯೇ ಒದಗಿಬಂದ ಸಂಗೀತ ಪ್ರೇಮಿಯೋರ್ವರು ಮಧ್ಯಪ್ರದೇಶದ ದೇವಾಸ ಸಂಸ್ಥಾನದ ಮಹಾರಾಜನಲ್ಲಿ ಕುಮಾರಗಂಧರ್ವರನ್ನು ಕರೆದೊಯ್ದು ಅವರ ಸಹಾಯದಿಂದ  ಔಷಧೋಪಚಾರದ ವ್ಯವಸ್ಥೆಯನ್ನು ಮಾಡಿಸಿದರು. ದೇವಾಸದ ಪಹಾಡಿ ವಾತಾವರಣ ಕುಮಾರರಿಗೆ ಮಾನಸಿಕವಾಗಿ ಹಾಗೂ ದೈಹಿಕ ಆರೋಗ್ಯದ ದೆಸೆಯಿಂದಲೂ ಹೇಳಿಮಾಡಿಸಿದ ಜಾಗವಾಗಿತ್ತು. ಕುಮಾರಜೀ ದೇವಾಸದಲ್ಲಿ ಮರುಹುಟ್ಟು ಪಡೆದರು.

ದೇವಾಸದಲ್ಲಿ ಸಾಕ್ಷಾತ್ಕಾರಗೊಂಡ ದೇವಸಂಗೀತ

ಹಾಡು ಹಕ್ಕಿಯ ಕೊರಳು ಕಟ್ಟಿದ್ದು ಅರಗಿಸಿಕೊಳ್ಳಲಾರದ ಸಂಗತಿಯಾದರೂ, ಛಾತಿವಂತ ಕುಮಾರಗಂಧರ್ವರು ಧೃತಿಗೆಡಲಿಲ್ಲ. ಮೌನಗರ್ಭದ ಒಡಲೊಳಗೆ ಕಡಲಾಗತೊಡಗಿದರು. ದೇವಾಸದ ಗಾಳಿಯಲ್ಲಿ ತೇಲಿಬಂದ ಲೋಕಸಂಗೀತ ಥಟ್ಟನೆ ಮಿಂಚೊಂದನ್ನು ಅವರೆದೆಯಲ್ಲಿ ನೆಟ್ಟುಬಿಟ್ಟಿತ್ತು! ಒಳಗಣ್ಣ ದೃಷ್ಟಿಗೆ ಹೋಸತೇ ಒಂದು ಸೃಷ್ಟಿ ಗೋಚರಿಸಿತ್ತು! ಏಕತಾರಿ ಹಿಡಿದು ಮನೆಮನೆಗೆ ಬರುತ್ತಿದ್ದ ಜೋಗಯ್ಯಗಳ ಬೆನ್ನು ಬಿದ್ದರು…. ಜಾನಪದ ಹಾಡುಗಳ ಮಟ್ಟನ್ನು ಹಿಡಿಯಲು ದೇವಾಸದ ಮುತ್ತೈದೆಯರ ಕಾಲುಬಿದ್ದರು… ಲೋಕಸಂಗೀತದ ಭಾವವನ್ನು ಹಿಡಿದುಕೊಂಡು ಅದನ್ನೇ ದೇವಸಂಗೀತವನ್ನಾಗಿಸಿದರು. ನಿರ್ಗುಣೀ ಭಜನೆಗಳನ್ನು, ಅವಧೂತ ಗೀತೆಗಳನ್ನು ಸ್ವರಚೌಕಟ್ಟಿನಲ್ಲಿ ಹೊಂದಿಸಿ ಹೊಸ ಭಾಷ್ಯವನ್ನೇ ಬರೆದು ಬೆಳಕನ್ನು ಮರಳಿಪಡೆದರು.

ಸುದೀರ್ಘ ಮೌನಾನಂತರ ಭೋರ್ಗರೆದ ಗಂಧರ್ವಗಾಯನ

ಏಳುವರ್ಷಗಳ ಸುದೀರ್ಘ ಮೌನದ ನಂತರ…. 1954ರ ಜನವರಿ 12 ರಂದು ಅಲಹಾಬಾದಿನ ಪ್ಯಾಲೇಸ್ ಥಿಯೇಟರಿನಲ್ಲಿ ಹೊಸ ಅಲೆಯ ಸೃಷ್ಟಿಸಿದ ಗಂಧರ್ವಗಾಯನ ಕುಮಾರಗಂಧರ್ವರಿಗೆ ಗಾಯನ ಕ್ಷೇತ್ರದಲ್ಲಿ ಮರುಹುಟ್ಟನ್ನು ನೀಡಿತಲ್ಲದೇ ಭಾರತೀಯ ಸಂಗೀತದ ಮೇರುಗಾಯಕನನ್ನಾಗಿ ಮರುಸ್ಥಾಪಿಸಿತ್ತು. ಶಾಪವನ್ನೇ ವರವನ್ನಾಗಿ ಪರಿವರ್ತಿಸಿಕೊಂಡ ಕುಮಾರಗಂಧರ್ವ ಮುಂದೆ ಗೀತವರ್ಷ, ಗೀತಹೇಮಂತ, ಗೀತವಸಂತ ಮುಂತಾದ ಋತುರಾಜ ಮೆಹಫಲ್, ಠುಮರಿ-ಠಪ್ಪಾ-ತರಾನಾ, ಕಬೀರ,ಸೂರದಾಸ್, ಮೀರಾ ಅವರ ತ್ರಿವೇಣಿ ಪದಗಳು, ಮಾಲಾ ಉಮಝಲೇಲೆ ಬಾಲಗಂಧರ್ವ, ಮಾಲವಾಕೀ ಲೋಕಧುನೆ, ತಾಂಬೇ ಗೀತರಜನಿ, ತುಲಸಿದಾಸ ದರ್ಶನ್, ಗೌಡಮಲ್ಹಾರದರ್ಶನ್, ಹೋರಿದರ್ಶನ್, ತುಕಾರಾಮದರ್ಶನ್ ಗಳ ಮೂಲಕ ‘ಅನುರೂಪರಾಗವಿಲಾಸ’ಕಾರರಾಗಿ (ಇದು ಅವರು ಹತ್ತು ವರ್ಷಗಳಷ್ಟು ದೀರ್ಘಕಾಲ ಸಂಶೋಧಿಸಿ ಪ್ರಕಟಿಸಿದ ಗ್ರಂಥ) ಜನವರಿ 12, 1992ರ ವರೆಗೂ ಪಂಡಿತ-ಪಾಮರರಾದಿಯಾಗಿ ಎಲ್ಲರಿಗೂ ಸಲ್ಲುವ ಗಾಯಕರಾಗಿ, ನೆಲದ ಮರೆಯ ನಿಧಾನದಂತೆ ತೆರೆಗೆ ಸರಿದರು. ಆದರೆ ಆ ಗಂಧರ್ವಗಾಯನ ಇಂದೂ ಗುಂಯ್ ಗುಡುತ್ತ ಗುಂಗನ್ನು ಹತ್ತಿಸುತ್ತದೆ. ಸುಂಯ್ ಗುಡುವ ಸುಳಿಗಾಳಿಯಲ್ಲೆಲ್ಲೋ ಅವರ ಭಾವಬಂಗಿ ಅಸ್ಪಷ್ಟವಾಗಿ ಕಾಣಿಸಿ ಮರೆಯಾಗುತ್ತಿದೆಯೆನಿಸುತ್ತದೆ.Wednesday, August 29, 2012

Appa! Happy birth day! ಆಪ್ಪಾ! ನಿನ್ನಪ್ಪನಿಗಾಗಿ ನೀನು ಹಾತೊರೆಯುವಂತೆ, ನಿನಗಾಗಿ ನಿನ್ನಪ್ಪ ಕಾತರಿಸುವಂತೆ, ನಾನೂ ಕೂಡ!


ಅಪ್ಪ! ನನಗಿನ್ನೂ ನೆನಪಿದೆ ಸಣ್ಣವನಿದ್ದಾಗ ನೀನು ನಮಗಾಗಿ ತರುತ್ತಿದ್ದ ಆಪಲ್ ಬಾಕ್ಸುಗಳು! ಚಾಕಲೇಟ್ ಡಬ್ಬಿಗಳು! ಆಪಲ್ ಗಳ ರುಚಿ ಇನ್ನೂ ಇದೀಗ ತಿಂದಂತಿದೆ! ಚಾಕಲೇಟ್ ಡಬ್ಬವಿನ್ನೂ ನನ್ನ ಚಿಲ್ಲರೆ ಬಾಕ್ಸಾಗಿ ಭದ್ರವಾಗಿದೆ! ನನ್ನ ಮಗ ದಿನವೂ ಅದರಲ್ಲಿ ಚಿಲ್ಲರೆ ಹಾಕುತ್ತ ತನ್ನ ಮುಗ್ಧ ಕೈಗಳಿಂದ ಸ್ಪರ್ಷಿಸುತ್ತಿರುತ್ತಾನೆ!

ನೀನೊಮ್ಮೆ ಹೇಳಿದ ಮಾತು, ಸುಮಾರು ಹದಿನೈದು ವರ್ಷಗಳ ಹಿಂದೆ ಹೇಳಿದ್ದು, ಈಗ ಅರ್ಥವಾಗುತ್ತಿದೆ! “ನಿನಗೆ ಮಕ್ಕಳಾದಾಗ ನಿನ್ನ ಅಪ್ಪ ನಿನಗೆ ಚೆನ್ನಾಗಿ ಅರ್ಥವಾಗುತ್ತಾನೆ”ಎಂದಿದ್ದು! ಹಾಗೆಯೇ ತೊಂಭತ್ತು ದಾಟಿದ ನಿನ್ನ ಅಪ್ಪನ ಸಾಂಗತ್ಯಕ್ಕಾಗಿ ನೀನು ಹಾತೊರೆಯುವುದು ಕೂಡಾ! ವಾರವಾರವೂ ಅರವತ್ತೊಂದರ ಈ ವಯಸ್ಸಿನಲ್ಲಿಯೂ ಅಜ್ಜನಮನೆಗೆ ಓಡುವ ನಿನ್ನ ಕಾಳಜಿಯನ್ನು ನಾನು ಈಗ ಚೆನ್ನಾಗಿ ಅರ್ಥಮಾಡಿಕೊಳ್ಳಲ್ಲೆ!

ಅಪ್ಪಾ, ಅನೇಕ ಸಂದರ್ಭಗಳಲ್ಲಿ ನೀನು ಒಗಟು! ಇನ್ನು ಹಲವಾರು ಸಂದರ್ಭಗಳಲ್ಲಿ ಒಗರು, ಬಹುತೇಕ ಸಮಯಗಳಲ್ಲಿ ಚಿಗುರು. ಈ ಎಲ್ಲವುಗಳೊಟ್ಟಿಗೇ ಮೌನವಾಗಿ ಬದುಕನ್ನು ಪಾಠಮಾಡುವ ನಿನ್ನ ಅಗಾಧ ಅಂತರಂಗದ  ಆಳಕ್ಕೆ  ಇಳಿಯುವುದು ಕಷ್ಟವಾದರೂ ಆ ಪ್ರಯತ್ನದಲ್ಲೊಂದು ಸಾಹಸದ ಬೆರಗಿದೆ, ತಣ್ಣನೆಯ ತಂಪಿದೆ, ಬೆವರಿನಿಂದ ಬಸವಳಿಯುವ ಆತಂಕದ ಛಾಯೆಯಿದೆ. ಒಮ್ಮೊಮ್ಮೆ ಕುಸಿದು ಬೀಳುವ ಕಂಪನವೂ ಇಲ್ಲದಿಲ್ಲ! ನೀನೊಬ್ಬ ಅವಧೂತನೇ ಸೈ!

ನಿನ್ನಿಂದ ಪಾಠವಾಗಬೇಕಾದದ್ದು, ನನ್ನ ಅರಿವಿನ ಬಿಂದಿಗೆಯಲ್ಲಿ ಹಿಡಿದುಕೊಳ್ಳುವುದು ಇನ್ನೂ ತುಂಬಾ ಇದೆ! ನಾನೂ ಕಾಲಕ್ಕೆ ಕಾಯುತ್ತಲಿದ್ದೇನೆ. ನಿನ್ನಪ್ಪನಿಗಾಗಿ ನೀನು ಹಾತೊರೆಯುವಂತೆ, ನಿನಗಾಗಿ ನಿನ್ನಪ್ಪ ಕಾತರಿಸುವಂತೆ, ನಾನೂ ಕೂಡ!  ಸರಿಸುಮಾರು ನನಗಿಂತ ಎರಡು ಪಟ್ಟು ಕಾಲ ಸಂದಿರುವ ನಿನ್ನರಿವಿನ ತಪನೆಗೆ ನಾನಿನ್ನೂ ನಾಲ್ಕು ತಪಗಳ ಕಾಲ ಕಾಯುತ್ತೇನೆ! ಅಲ್ಲಿಯವರೆಗೂ ನೀನು ವಿರಾಗಿಯಾಗುವಂತಿಲ್ಲ, ನಿನ್ನೆದೆಯ ರಾಗರಸಧಾರೆಯ ಜೀವಾಮೃತ ಅಕ್ಷಯವಾಗಿ ನಿನ್ನ ಇನಿದನಿಗೆ ಮುಪ್ಪೇ ಬಾರದಿರಲಿ.  ಒಡಲನುಡಿಗೆ, ಅದರೊಳಗಣ ಗುಡಿಗೆ ನಿರ್ಮಾಲ್ಯವೆಂದೂ ಕಾಲ ಕಸವಾಗದಿರಲಿ. ರಾಗರಸ, ಸರಸ, ಸಮರಸದ ಪಾಕ ಹುರಿಗೊಳ್ಳಲಿ ಅರಿವಿನಾಗಸದ ಬಯಲ ವಿಸ್ತಾರದಲ್ಲಿ. ನಾನೂ-ನೀನೂ, ನಾವೆಲ್ಲರೂ ಬಯಲ ತುಂಬ ಬಯಲಾಗುವ, ಪದವಾಗುವ, ಅರ್ಥವಾಗುವ, ನಾದವಾಗುವ, ಅನುಸ್ಸಂಧಾನವಾಗುವ, ಯೋಗವಾಗುವ ಗಣೇಶವಿದ್ಯೆಯ ವಶವಾಗುವ…. ಕಾಲಕ್ಕೆ ಕಾಯುತ್ತೇನೆ! ಅಲ್ಲಿಯವರೆಗೂ ಪ್ರತಿವರ್ಷವೂ ನಿನ್ನ ಜೀವಂತ ಜನ್ಮದಿನ ಬರುತ್ತಲೇ ಇರಲಿ! 

 ನಿನ್ನ ಪ್ರೀತಿಯ
 ವಸಂತ  

                                               
61 ರ  ಅಪ್ಪ 92ರ  ಅವನಪ್ಪ!