ಅಪ್ಪ!
ನನಗಿನ್ನೂ ನೆನಪಿದೆ ಸಣ್ಣವನಿದ್ದಾಗ ನೀನು ನಮಗಾಗಿ ತರುತ್ತಿದ್ದ ಆಪಲ್ ಬಾಕ್ಸುಗಳು! ಚಾಕಲೇಟ್ ಡಬ್ಬಿಗಳು!
ಆಪಲ್ ಗಳ ರುಚಿ ಇನ್ನೂ ಇದೀಗ ತಿಂದಂತಿದೆ! ಚಾಕಲೇಟ್ ಡಬ್ಬವಿನ್ನೂ ನನ್ನ ಚಿಲ್ಲರೆ ಬಾಕ್ಸಾಗಿ ಭದ್ರವಾಗಿದೆ!
ನನ್ನ ಮಗ ದಿನವೂ ಅದರಲ್ಲಿ ಚಿಲ್ಲರೆ ಹಾಕುತ್ತ ತನ್ನ ಮುಗ್ಧ ಕೈಗಳಿಂದ ಸ್ಪರ್ಷಿಸುತ್ತಿರುತ್ತಾನೆ!
ನೀನೊಮ್ಮೆ
ಹೇಳಿದ ಮಾತು, ಸುಮಾರು ಹದಿನೈದು ವರ್ಷಗಳ ಹಿಂದೆ ಹೇಳಿದ್ದು, ಈಗ ಅರ್ಥವಾಗುತ್ತಿದೆ! “ನಿನಗೆ ಮಕ್ಕಳಾದಾಗ
ನಿನ್ನ ಅಪ್ಪ ನಿನಗೆ ಚೆನ್ನಾಗಿ ಅರ್ಥವಾಗುತ್ತಾನೆ”ಎಂದಿದ್ದು! ಹಾಗೆಯೇ ತೊಂಭತ್ತು ದಾಟಿದ ನಿನ್ನ ಅಪ್ಪನ
ಸಾಂಗತ್ಯಕ್ಕಾಗಿ ನೀನು ಹಾತೊರೆಯುವುದು ಕೂಡಾ! ವಾರವಾರವೂ ಅರವತ್ತೊಂದರ ಈ ವಯಸ್ಸಿನಲ್ಲಿಯೂ ಅಜ್ಜನಮನೆಗೆ
ಓಡುವ ನಿನ್ನ ಕಾಳಜಿಯನ್ನು ನಾನು ಈಗ ಚೆನ್ನಾಗಿ ಅರ್ಥಮಾಡಿಕೊಳ್ಳಲ್ಲೆ!
ಅಪ್ಪಾ,
ಅನೇಕ ಸಂದರ್ಭಗಳಲ್ಲಿ ನೀನು ಒಗಟು! ಇನ್ನು ಹಲವಾರು ಸಂದರ್ಭಗಳಲ್ಲಿ ಒಗರು, ಬಹುತೇಕ ಸಮಯಗಳಲ್ಲಿ ಚಿಗುರು.
ಈ ಎಲ್ಲವುಗಳೊಟ್ಟಿಗೇ ಮೌನವಾಗಿ ಬದುಕನ್ನು ಪಾಠಮಾಡುವ ನಿನ್ನ ಅಗಾಧ ಅಂತರಂಗದ ಆಳಕ್ಕೆ ಇಳಿಯುವುದು
ಕಷ್ಟವಾದರೂ ಆ ಪ್ರಯತ್ನದಲ್ಲೊಂದು ಸಾಹಸದ ಬೆರಗಿದೆ, ತಣ್ಣನೆಯ ತಂಪಿದೆ, ಬೆವರಿನಿಂದ ಬಸವಳಿಯುವ ಆತಂಕದ
ಛಾಯೆಯಿದೆ. ಒಮ್ಮೊಮ್ಮೆ ಕುಸಿದು ಬೀಳುವ ಕಂಪನವೂ ಇಲ್ಲದಿಲ್ಲ! ನೀನೊಬ್ಬ ಅವಧೂತನೇ ಸೈ!
ನಿನ್ನಿಂದ
ಪಾಠವಾಗಬೇಕಾದದ್ದು, ನನ್ನ ಅರಿವಿನ ಬಿಂದಿಗೆಯಲ್ಲಿ ಹಿಡಿದುಕೊಳ್ಳುವುದು ಇನ್ನೂ ತುಂಬಾ ಇದೆ! ನಾನೂ
ಕಾಲಕ್ಕೆ ಕಾಯುತ್ತಲಿದ್ದೇನೆ. ನಿನ್ನಪ್ಪನಿಗಾಗಿ ನೀನು ಹಾತೊರೆಯುವಂತೆ, ನಿನಗಾಗಿ ನಿನ್ನಪ್ಪ ಕಾತರಿಸುವಂತೆ,
ನಾನೂ ಕೂಡ! ಸರಿಸುಮಾರು ನನಗಿಂತ ಎರಡು ಪಟ್ಟು ಕಾಲ
ಸಂದಿರುವ ನಿನ್ನರಿವಿನ ತಪನೆಗೆ ನಾನಿನ್ನೂ ನಾಲ್ಕು ತಪಗಳ ಕಾಲ ಕಾಯುತ್ತೇನೆ! ಅಲ್ಲಿಯವರೆಗೂ ನೀನು
ವಿರಾಗಿಯಾಗುವಂತಿಲ್ಲ, ನಿನ್ನೆದೆಯ ರಾಗರಸಧಾರೆಯ ಜೀವಾಮೃತ ಅಕ್ಷಯವಾಗಿ ನಿನ್ನ ಇನಿದನಿಗೆ ಮುಪ್ಪೇ
ಬಾರದಿರಲಿ. ಒಡಲನುಡಿಗೆ, ಅದರೊಳಗಣ ಗುಡಿಗೆ ನಿರ್ಮಾಲ್ಯವೆಂದೂ
ಕಾಲ ಕಸವಾಗದಿರಲಿ. ರಾಗರಸ, ಸರಸ, ಸಮರಸದ ಪಾಕ ಹುರಿಗೊಳ್ಳಲಿ ಅರಿವಿನಾಗಸದ ಬಯಲ ವಿಸ್ತಾರದಲ್ಲಿ. ನಾನೂ-ನೀನೂ,
ನಾವೆಲ್ಲರೂ ಬಯಲ ತುಂಬ ಬಯಲಾಗುವ, ಪದವಾಗುವ, ಅರ್ಥವಾಗುವ, ನಾದವಾಗುವ, ಅನುಸ್ಸಂಧಾನವಾಗುವ, ಯೋಗವಾಗುವ
ಗಣೇಶವಿದ್ಯೆಯ ವಶವಾಗುವ…. ಕಾಲಕ್ಕೆ ಕಾಯುತ್ತೇನೆ! ಅಲ್ಲಿಯವರೆಗೂ ಪ್ರತಿವರ್ಷವೂ ನಿನ್ನ ಜೀವಂತ ಜನ್ಮದಿನ
ಬರುತ್ತಲೇ ಇರಲಿ!
ನಿನ್ನ ಪ್ರೀತಿಯ
ವಸಂತ ನಿನ್ನ ಪ್ರೀತಿಯ
61 ರ ಅಪ್ಪ 92ರ ಅವನಪ್ಪ! |
chennaagi barediddiri sir...kaaLaji tumbide nimma lekhanadalli....
ReplyDelete