ಕಾಳಿಂಗನೆಂಬ ಗೊಲ್ಲನೂ….ಡುಮಿಂಗನೆಂಬ
ಹೂಟೆಯವನೂ ಹಾಗೂ ವಸಂತನೆಂಬ ಸಂಜೆಗೆಂಪು ಬಣ್ಣದ ಎತ್ತು…
ಬಿಸಿಬಿಸಿ
ತೆಳ್ಳವ್ವು! ಘಮಗಮಿಸುವ ತುಪ್ಪ-ಬೆಲ್ಲ… ಅದರೊಂದಿಗೆ ಬೆರೆತ ಆಯಿಯ ಪ್ರೀತಿ… ಹೊರಗೆ ಧೋ ಎಂದು ಹೊಯ್ಯುವ
ಮಳೆ….ಒಂದಾದಮೇಲೊಂದು ಎಷ್ಟು ಇಳಿದವೋ! ಕೂಗಳತೆಯ ದೂರದಲ್ಲಿ ಡ…ಡ್ಡ…ಡ್ಡ…ಡಡಡಡಡ…ಸದ್ದು ತೇಲಿ ಬಂದಾಗಲೇ
ಗದ್ದೆ ಹೂಟೆಯ ಪವರ್ ಟಿಲ್ಲರ್ ನನ್ನ ಮಗನ ಕುತೂಹಲವನ್ನು ಕೆರಳಿಸಿತ್ತು… ನನ್ನ ಮನಸ್ಸಾಗಲೇ ದೊಡ್ಡಬೈಲು
ಗದ್ದೆಯಲ್ಲಿ ಕೊರಡುಹೊಡೆದ ಹುಡುಗಾಟದ ಕ್ಷಣಗಳನ್ನು ಮೆಲುಕುಹಾಕತೊಡಗಿತ್ತು…. ಬಾಯಲ್ಲಿನ ಕವಳಕ್ಕೆ
ರಂಗೇರಿತ್ತು!
ಕಿರಿಸ್ತಾನರ ಡುಂಗ್ಯಾ… ಅವನ ಪ್ರೀತಿಯ ಬಂಡ್ಯಾ ಮತ್ತು ನನ್ನದೇ
ಹೆಸರಿನ ವಸಂತ ಎಂಬೆರಡು ಪೊಗದಸ್ತಾದ ಎತ್ತುಗಳು ನಮ್ಮ ಮನೆಯ ಆಗಿನ ಕಾಲದ ಪವರ್ ಟಿಲ್ಲರುಗಳು! ಸುಮಾರು
ಹದಿನೆಂಟು ಹೂಟೆಗಳನ್ನು ಮಾಡಿದ ಇವೆರಡೂ ಎತ್ತುಗಳು ನನ್ನ ಅಜ್ಜನಾದಿಯಿಂದ ಹಿಡಿದು ರವಿಕಾಕಾ, ರಾಮನಾಥಕಾಕಾ,
ಸುಬ್ಬುಕಾಕಾ, ಸೂರ್ಣಾಣ್ ಭಾವ, ಪ್ರಶಾಂತ ಭಾವ, ಹಿಲ್ಲೂರ ವೆಂಕಣ್ಣ, ಕೊನೆಗೆ ನನ್ನಪ್ಪ….ಆಮೇಲೆ ನಾನು….
ಹೀಗೆ ಎಲ್ಲರಿಗೂ ತುಂಬ ಪ್ರಿಯವಾಗಿದ್ದವು. ನಾವು ಚಿಕ್ಕವರಿರುವಾಗ ಶಾಲೆಗೆ ಹೋಗುವ ಮೊದಲು ಕೊಟ್ಟಿಗೆ
ಚಾಕರಿ ಮಾಡಿ ಎಲ್ಲ ದನಗಳನ್ನೂ ಬ್ಯಾಣಕ್ಕೆ ಹೊಡೆದುಕೊಂಡು ಹೋಗಿ ಬಿಟ್ಟುಬರಬೇಕಾಗಿತ್ತು. ಸಾಯಂಕಾಲ
ಶಾಲೆಬಿಟ್ಟು ಬಂದ ಮೇಲೆ ಪುನಃ ಅವುಗಳನ್ನು ಕೊಟ್ಟಿಗೆಗೆ ಕರೆತರಬೇಕಾಗಿತ್ತು.
ದನಕಾಯುವ ಕೆಲಸದ ಮಜವೇ ಬೇರೆ! ಸುಮಾರು ಎರಡೂವರೆ ಕಿಲೋಮೀಟರುಗಳ
ದೂರದ ಬ್ಯಾಣ….. ಕೊಟ್ಟಿಗೆಯ ದಾಬಿನ ಕಣ್ಣಿ ಬಿಚ್ಚಿದ ಕೂಡಲೇ ಆಚೀಚೆಯೆಲ್ಲೂ ನಿಲ್ಲದೇ ನೇರವಾಗಿ ಬ್ಯಾಣದ
ದಾರಿ ಹಿಡಿಯುವ ಸುಮಾರು ಮೂವತ್ತೈದು-ನಲವತ್ತು ದನಗಳು…. ಅವುಗಳ ಹಿಂದೆ ಗೋವಿನ ಹಾಡಿನ ಕಾಳಿಂಗನೆಂಬ
ಗೊಲ್ಲನ ಸಾಕ್ಷಾತ್ ಅಪರರೂಪ! ಗೌಳ್ಯಾನ ಗುಡ್ಡೆ, ಓಣಜಿಹಳ್ಳ,
ಶಾಲೆಮನೆ, ಅದರ ಗುಂಟ ಸ್ಮಶಾನದ ದಾರಿಹಾಯ್ದು ಬ್ಯಾಣದ ದಣಪೆಯನ್ನು ತಲುಪುವದರಲ್ಲಾಗಲೇ ಎಲ್ಲ ದನಗಳೂ
ಅಲ್ಲಿ ಸೇರಿಯಾಗಿರುತ್ತಿತ್ತು. ಸರಗೋಲನ್ನು ಸರಿಸಿ
ಅವನ್ನೆಲ್ಲ ಒಳಗೆ ಸೇರಿಸಿ ಮತ್ತೆ ಹಾಕಿ ಮನೆಗೆ ಬರುವಷ್ಟರಲ್ಲಿ ತಿಂದ ಆಸರಿಯೆಲ್ಲ ಕರಗಿ ನೀರಾಗಿರುತ್ತಿತ್ತು!
ಮಳೆಗಾಲದಲ್ಲಿ ಮದ್ಯಾಹ್ನ ಶಾಲೆ ಬಿಟ್ಟಮೇಲೆ ಹೂಟೆಯಾಳು ಡುಂಗ್ಯಾನಿಗೆ
ಊಟ ತೆಗೆದುಕೊಂಡು ಹೋಗುವುದೂ ತಿಂಗಳಾನುಗಟ್ಟಲಿನ ದಿನಚರಿಯಾಗಿರುತ್ತಿತ್ತು. ಧೋ…ಧೋ… ಎಂದು ರಪಗುಡುವ
ಮಳೆ… ಕಾನುಬೇಣದ ಕಾಲುದಾರಿ….. ನೀರಾಟವಾಡುತ್ತಲೇ ಒಂದು ಕೈಯೊಳಗಿನ ಕ್ಯಾನಿನ ಊಟ, ಇನ್ನೊಂದರಲ್ಲಿ
ತುಂಬಿದ ಬೆಲ್ಲದ ಕಷಾಯ ಚೆಲ್ಲದಂತೆ ಸಂಭಾಳಿಸಿ, ಜಾರುದಾರಿಯಲ್ಲಿ ಗದ್ದೆಮುಟ್ಟುವದೆಂದರೇ ತಂತಿಯ ಮೇಲೆ
ನಡೆವ ಹುಡುಗಿ ಸರ್ಕಸ್ ಮಾಡಿದ ಅನುಭವ.
ಅಂತೂ-ಇಂತೂ ಗದ್ದೆ ತಲುಪಿದರೆ, ತಡೆಯಲಾಗದ ಮಣ್ಣಿನ ಆಕರ್ಷಣೆ.
ಕೆಸರುಗದ್ದೆಗಳಲ್ಲೆಲ್ಲ ಕುಣಿದಾಡಿ, ಮೈಗೆಲ್ಲ ಮಡ್ ಬಾತಿನ ಮಾಘಸ್ನಾನ! ಕೊನೆಗೆ ಗಳಿಯ ಹೊಡೆಯುವ ಹುರುಪು.
ಏಯ್… ಹಾ…ಹಾ…ಹ್ಯೀ…ಹೋ’ ಎಂದೆನ್ನುತ್ತ…ಡುಂಗ್ಯಾ ಆ ಎತ್ತುಗಳೊಂದಿಗೆ ಸಲೀಸಾಗಿ ಮಾತನಾಡುವಂತೆ ನಾನು
ಪ್ರಯತ್ನಿಸಿದರೂ… ನನ್ನ ಭಾಷೆ ಅವುಗಳಿಗೆ ಅರ್ಥವಾಗುತ್ತಿರಲಿಲ್ಲ. ಎಲ್ಲೆಲ್ಲಿಯೋ ಎಳೆದೊಯ್ಯುತ್ತಿದ್ದವು.
ಅದಾಗಲೇ ಎರಡು ಕೊಟ್ಟೆಯೇರಿಸಿದ ಡುಂಗ್ಯಾ ಹಲ್ಕಿರಿದು ನಗತೊಡಗುತ್ತಿದ್ದ!... ಕೊರಡು ಹೊಡೆಯುವಾಗಲಂತೂ
ಇನ್ನಿಲ್ಲದ ಸಂಭ್ರಮ! ಗದ್ದೆಯತುಂಬ ತುಂಬಿದ ರಾಡಿ ನೀರಿನಲ್ಲಿ ಕೊರಡಿನ ಮೇಲೆ ನಿಂತು ಎರಡೂಕೈಯಲ್ಲಿ
ಗಳಿಯದ ದಾಬುಹಿಡಿದು ಕೊರಡಿನ ಮೇಲೆ ಕಾಲಗಲಿಸಿ ನಿಂತು ಗದ್ದೆಯಲ್ಲಿ ಹೋಗುವುದು ಸಮುದ್ರದಲ್ಲಿ ದೋಣಿಯಮೇಲೆ
ಹೋದಂತಾಗುತ್ತಿತ್ತು.
ಮಗನಿಗೆ ಟಿಲ್ಲರ್ ತೋರಿಸಲು
ಮಾವನ ಮನೆ ಗದ್ದೆಗೆ ಹೋದಾಗ ಇವೆಲ್ಲ ನೆನಪಾಗಿತ್ತು. ಈಗ ಟಿಲ್ಲರ್ ಕೂಡ ನನ್ನ ಮಾತು ಕೇಳುತ್ತಿರಲಿಲ್ಲ!
ಹೇಗ್ಹೇಗೋ ಮಾಡಿ ಮೂರ್ನಾಲ್ಕು ರೌಂಡು ತಿರುಗಿಸುವಷ್ಟರಲ್ಲಿ ಸುಸ್ತಾಗಿದ್ದೆ. ಮಗ ಗದ್ದೆಯ ಕೆಸರಲ್ಲಿ
ಬಿದ್ದು ಹೊರಳಾಡುತ್ತಿದ್ದ. ಕೆಸರು ಗದ್ದೆಯಲ್ಲಿ ಮುಟ್ಟಾಟ ಆಡೋಣವೆಂದು ನನ್ನ ಕೈಹಿಡಿದು ಎಳೆಯುತ್ತಿದ್ದ.
ಆಡದೇ ಬೇರೆ ಗತಿಯಿಲ್ಲ. ಸುಸ್ತಾಗಿ ಹಾಳಿಯ ಮೇಲೆ ಕುಳಿತರೆ ಅವನಿಗೆ ಇನ್ನೂ ಹುರುಪು. ಕೆಸರು ನೀರನ್ನು
ಚೆಲ್ಲಾಡುತ್ತ ಖುಷಿಯಿಂದ ಕೇಕೇ ಹಾಕಿ ಕುಣಿದಾಡುತ್ತಿದ್ದ. ನಡೆಯೋ ಮಗನೇ ಮನೆಗೆ ಹೋಗೋಣವೆಂದರೆ…..
ಬೇಡ… ವಾಪಸ್ ಹೋಗೋಕೆ ಮನಸೇ ಆಗುತ್ತಿಲ್ಲ…. ಇನ್ನೂ ಆಡೋಣ ಬಾ ಎಂದು ಕೈಹಿಡಿದು ಎಳೆಯತೊಡಗಿದ್ದ. ಮಳೆ
ಹೊಯ್ಯುತ್ತಲೇ ಇತ್ತು….
good one ಹಳ್ಳಿ ಮನೆ ಕನ್ನಡ ಶಾಲೆ ಎಲ್ಲವು ನೆನಪಾದವು ಚಂದಾಗಿ ಬರೆದಿದ್ದಿಯಾ. ಹೀಗೆ ಬರೆಯುತ್ತಿರು.
ReplyDeleteಸು-ನೀಲ್