Wednesday, August 29, 2012

Appa! Happy birth day! ಆಪ್ಪಾ! ನಿನ್ನಪ್ಪನಿಗಾಗಿ ನೀನು ಹಾತೊರೆಯುವಂತೆ, ನಿನಗಾಗಿ ನಿನ್ನಪ್ಪ ಕಾತರಿಸುವಂತೆ, ನಾನೂ ಕೂಡ!


ಅಪ್ಪ! ನನಗಿನ್ನೂ ನೆನಪಿದೆ ಸಣ್ಣವನಿದ್ದಾಗ ನೀನು ನಮಗಾಗಿ ತರುತ್ತಿದ್ದ ಆಪಲ್ ಬಾಕ್ಸುಗಳು! ಚಾಕಲೇಟ್ ಡಬ್ಬಿಗಳು! ಆಪಲ್ ಗಳ ರುಚಿ ಇನ್ನೂ ಇದೀಗ ತಿಂದಂತಿದೆ! ಚಾಕಲೇಟ್ ಡಬ್ಬವಿನ್ನೂ ನನ್ನ ಚಿಲ್ಲರೆ ಬಾಕ್ಸಾಗಿ ಭದ್ರವಾಗಿದೆ! ನನ್ನ ಮಗ ದಿನವೂ ಅದರಲ್ಲಿ ಚಿಲ್ಲರೆ ಹಾಕುತ್ತ ತನ್ನ ಮುಗ್ಧ ಕೈಗಳಿಂದ ಸ್ಪರ್ಷಿಸುತ್ತಿರುತ್ತಾನೆ!

ನೀನೊಮ್ಮೆ ಹೇಳಿದ ಮಾತು, ಸುಮಾರು ಹದಿನೈದು ವರ್ಷಗಳ ಹಿಂದೆ ಹೇಳಿದ್ದು, ಈಗ ಅರ್ಥವಾಗುತ್ತಿದೆ! “ನಿನಗೆ ಮಕ್ಕಳಾದಾಗ ನಿನ್ನ ಅಪ್ಪ ನಿನಗೆ ಚೆನ್ನಾಗಿ ಅರ್ಥವಾಗುತ್ತಾನೆ”ಎಂದಿದ್ದು! ಹಾಗೆಯೇ ತೊಂಭತ್ತು ದಾಟಿದ ನಿನ್ನ ಅಪ್ಪನ ಸಾಂಗತ್ಯಕ್ಕಾಗಿ ನೀನು ಹಾತೊರೆಯುವುದು ಕೂಡಾ! ವಾರವಾರವೂ ಅರವತ್ತೊಂದರ ಈ ವಯಸ್ಸಿನಲ್ಲಿಯೂ ಅಜ್ಜನಮನೆಗೆ ಓಡುವ ನಿನ್ನ ಕಾಳಜಿಯನ್ನು ನಾನು ಈಗ ಚೆನ್ನಾಗಿ ಅರ್ಥಮಾಡಿಕೊಳ್ಳಲ್ಲೆ!

ಅಪ್ಪಾ, ಅನೇಕ ಸಂದರ್ಭಗಳಲ್ಲಿ ನೀನು ಒಗಟು! ಇನ್ನು ಹಲವಾರು ಸಂದರ್ಭಗಳಲ್ಲಿ ಒಗರು, ಬಹುತೇಕ ಸಮಯಗಳಲ್ಲಿ ಚಿಗುರು. ಈ ಎಲ್ಲವುಗಳೊಟ್ಟಿಗೇ ಮೌನವಾಗಿ ಬದುಕನ್ನು ಪಾಠಮಾಡುವ ನಿನ್ನ ಅಗಾಧ ಅಂತರಂಗದ  ಆಳಕ್ಕೆ  ಇಳಿಯುವುದು ಕಷ್ಟವಾದರೂ ಆ ಪ್ರಯತ್ನದಲ್ಲೊಂದು ಸಾಹಸದ ಬೆರಗಿದೆ, ತಣ್ಣನೆಯ ತಂಪಿದೆ, ಬೆವರಿನಿಂದ ಬಸವಳಿಯುವ ಆತಂಕದ ಛಾಯೆಯಿದೆ. ಒಮ್ಮೊಮ್ಮೆ ಕುಸಿದು ಬೀಳುವ ಕಂಪನವೂ ಇಲ್ಲದಿಲ್ಲ! ನೀನೊಬ್ಬ ಅವಧೂತನೇ ಸೈ!

ನಿನ್ನಿಂದ ಪಾಠವಾಗಬೇಕಾದದ್ದು, ನನ್ನ ಅರಿವಿನ ಬಿಂದಿಗೆಯಲ್ಲಿ ಹಿಡಿದುಕೊಳ್ಳುವುದು ಇನ್ನೂ ತುಂಬಾ ಇದೆ! ನಾನೂ ಕಾಲಕ್ಕೆ ಕಾಯುತ್ತಲಿದ್ದೇನೆ. ನಿನ್ನಪ್ಪನಿಗಾಗಿ ನೀನು ಹಾತೊರೆಯುವಂತೆ, ನಿನಗಾಗಿ ನಿನ್ನಪ್ಪ ಕಾತರಿಸುವಂತೆ, ನಾನೂ ಕೂಡ!  ಸರಿಸುಮಾರು ನನಗಿಂತ ಎರಡು ಪಟ್ಟು ಕಾಲ ಸಂದಿರುವ ನಿನ್ನರಿವಿನ ತಪನೆಗೆ ನಾನಿನ್ನೂ ನಾಲ್ಕು ತಪಗಳ ಕಾಲ ಕಾಯುತ್ತೇನೆ! ಅಲ್ಲಿಯವರೆಗೂ ನೀನು ವಿರಾಗಿಯಾಗುವಂತಿಲ್ಲ, ನಿನ್ನೆದೆಯ ರಾಗರಸಧಾರೆಯ ಜೀವಾಮೃತ ಅಕ್ಷಯವಾಗಿ ನಿನ್ನ ಇನಿದನಿಗೆ ಮುಪ್ಪೇ ಬಾರದಿರಲಿ.  ಒಡಲನುಡಿಗೆ, ಅದರೊಳಗಣ ಗುಡಿಗೆ ನಿರ್ಮಾಲ್ಯವೆಂದೂ ಕಾಲ ಕಸವಾಗದಿರಲಿ. ರಾಗರಸ, ಸರಸ, ಸಮರಸದ ಪಾಕ ಹುರಿಗೊಳ್ಳಲಿ ಅರಿವಿನಾಗಸದ ಬಯಲ ವಿಸ್ತಾರದಲ್ಲಿ. ನಾನೂ-ನೀನೂ, ನಾವೆಲ್ಲರೂ ಬಯಲ ತುಂಬ ಬಯಲಾಗುವ, ಪದವಾಗುವ, ಅರ್ಥವಾಗುವ, ನಾದವಾಗುವ, ಅನುಸ್ಸಂಧಾನವಾಗುವ, ಯೋಗವಾಗುವ ಗಣೇಶವಿದ್ಯೆಯ ವಶವಾಗುವ…. ಕಾಲಕ್ಕೆ ಕಾಯುತ್ತೇನೆ! ಅಲ್ಲಿಯವರೆಗೂ ಪ್ರತಿವರ್ಷವೂ ನಿನ್ನ ಜೀವಂತ ಜನ್ಮದಿನ ಬರುತ್ತಲೇ ಇರಲಿ! 

 ನಿನ್ನ ಪ್ರೀತಿಯ
 ವಸಂತ  

                                               
61 ರ  ಅಪ್ಪ 92ರ  ಅವನಪ್ಪ!


Saturday, August 25, 2012

ಸ್ವಾತಂತ್ರ್ಯ ಮತ್ತು ಕಪ್ಪು ಬಿಳುಪಿನ ಚಿತ್ರ


ಸ್ವಾತಂತ್ರ್ಯ ಮತ್ತು ಕಪ್ಪು ಬಿಳುಪಿನ ಚಿತ್ರ

ಕಪ್ಪು-ಬಿಳುಪು ಚಿತ್ರಗಳು
ಕೂಡ ಖಾಲಿಹಾಳೆಯ ಮೇಲೆ
ಮೂಡಲಾರದೇ ಒದ್ದಾಡುತ್ತಿದೆ
ಮೂಕಮನಸು.
ಕೊಟ್ಟುಬಿಡು ಒಂದೇ ಒಂದು
ಅವಕಾಶ, ಬೇಕಾಗಿದೆ ನನಗೆ
ಹೊಸ ಉಸಿರು,ಕನಸು,ಬಣ್ಣ
ಗೊಳ್ಳಬೇಕಿದೆ ಮನಸು.
ಎಂಥ ಕಟುಕ ನೀನು! ಒಂದೇ
ಒಂದು ಬಾರಿ ನನ್ನೊಳಗಿನ ಹೊಯ್ದಾಟ
ಅಬ್ಬರದ ಅಲೆಗಳಪ್ಪಳಿಕೆ ಒಪ್ಪಿಸಿಕೊಳ್ಳಲಾರೆಯಾ?
ನನ್ನ ಕಣ್ನಂಚಿನ ಪಸೆಯಪಿಸುವನ್ನೂ
ಕೇಳಿಸಿಕೊಳ್ಳದ ಕುರುಡು ಕಿವುಡುತನವೇಕೆ?
ನನಗೆ ಬೇಕಾಗಿದೆ ಒಂದಷ್ಟು ಏಕಾಮತ
ತಂಗಾಳಿ, ಬಿಸಿಯುಸಿರು, ಬಿಟ್ಟುಬಿಡು
ನನ್ನ ಪಾಡಿಗೆ ನನ್ನಷ್ಟಕ್ಕೇ
ಸ್ವಾತಂತ್ರಕ್ಕೀಗ ಅರವತ್ತಾರು! ನನಗೆ
ಇನ್ನೂ ಕೈಗೆ ಹತ್ತುತ್ತಿಲ್ಲ, ಬಿಡುಗಡೆ
ಯ ದಾಹ ಬೆಂಕಿಯಾಗುವ ಮೊದಲು
ತೆರೆದುಬಿಡು ಎಲ್ಲ ದಾರಿಗಳ…
ಬೆಸೆದುಕೊಳ್ಳಲಿ ಭುವಿಭಾನು
ನಕ್ಷತ್ರ….. ಕ್ಷಣಮಾತ್ರದಲ್ಲಿ
ಅಣುಮಾತ್ರದಲ್ಲಿ…. ತೃಣಮೂಲದಲ್ಲಿ….
-      ವಸಂತ
14-ಅಗಷ್ಟ್ 2012

Saturday, August 18, 2012

ಹಸಿಮಣ್ಣ ಕಂಪು ಮತ್ತು ತಂಪೆರೆವ ಮಳೆ


ಕಾಳಿಂಗನೆಂಬ ಗೊಲ್ಲನೂ….ಡುಮಿಂಗನೆಂಬ ಹೂಟೆಯವನೂ ಹಾಗೂ ವಸಂತನೆಂಬ ಸಂಜೆಗೆಂಪು ಬಣ್ಣದ  ಎತ್ತು…

ಬಿಸಿಬಿಸಿ ತೆಳ್ಳವ್ವು! ಘಮಗಮಿಸುವ ತುಪ್ಪ-ಬೆಲ್ಲ… ಅದರೊಂದಿಗೆ ಬೆರೆತ ಆಯಿಯ ಪ್ರೀತಿ… ಹೊರಗೆ ಧೋ ಎಂದು ಹೊಯ್ಯುವ ಮಳೆ….ಒಂದಾದಮೇಲೊಂದು ಎಷ್ಟು ಇಳಿದವೋ! ಕೂಗಳತೆಯ ದೂರದಲ್ಲಿ ಡ…ಡ್ಡ…ಡ್ಡ…ಡಡಡಡಡ…ಸದ್ದು ತೇಲಿ ಬಂದಾಗಲೇ ಗದ್ದೆ ಹೂಟೆಯ ಪವರ್ ಟಿಲ್ಲರ್ ನನ್ನ ಮಗನ ಕುತೂಹಲವನ್ನು ಕೆರಳಿಸಿತ್ತು… ನನ್ನ ಮನಸ್ಸಾಗಲೇ ದೊಡ್ಡಬೈಲು ಗದ್ದೆಯಲ್ಲಿ ಕೊರಡುಹೊಡೆದ ಹುಡುಗಾಟದ ಕ್ಷಣಗಳನ್ನು ಮೆಲುಕುಹಾಕತೊಡಗಿತ್ತು…. ಬಾಯಲ್ಲಿನ ಕವಳಕ್ಕೆ ರಂಗೇರಿತ್ತು!
ಕಿರಿಸ್ತಾನರ ಡುಂಗ್ಯಾ… ಅವನ ಪ್ರೀತಿಯ ಬಂಡ್ಯಾ ಮತ್ತು ನನ್ನದೇ ಹೆಸರಿನ ವಸಂತ ಎಂಬೆರಡು ಪೊಗದಸ್ತಾದ ಎತ್ತುಗಳು ನಮ್ಮ ಮನೆಯ ಆಗಿನ ಕಾಲದ ಪವರ್ ಟಿಲ್ಲರುಗಳು! ಸುಮಾರು ಹದಿನೆಂಟು ಹೂಟೆಗಳನ್ನು ಮಾಡಿದ ಇವೆರಡೂ ಎತ್ತುಗಳು ನನ್ನ ಅಜ್ಜನಾದಿಯಿಂದ ಹಿಡಿದು ರವಿಕಾಕಾ, ರಾಮನಾಥಕಾಕಾ, ಸುಬ್ಬುಕಾಕಾ, ಸೂರ್ಣಾಣ್ ಭಾವ, ಪ್ರಶಾಂತ ಭಾವ, ಹಿಲ್ಲೂರ ವೆಂಕಣ್ಣ, ಕೊನೆಗೆ ನನ್ನಪ್ಪ….ಆಮೇಲೆ ನಾನು…. ಹೀಗೆ ಎಲ್ಲರಿಗೂ ತುಂಬ ಪ್ರಿಯವಾಗಿದ್ದವು. ನಾವು ಚಿಕ್ಕವರಿರುವಾಗ ಶಾಲೆಗೆ ಹೋಗುವ ಮೊದಲು ಕೊಟ್ಟಿಗೆ ಚಾಕರಿ ಮಾಡಿ ಎಲ್ಲ ದನಗಳನ್ನೂ ಬ್ಯಾಣಕ್ಕೆ ಹೊಡೆದುಕೊಂಡು ಹೋಗಿ ಬಿಟ್ಟುಬರಬೇಕಾಗಿತ್ತು. ಸಾಯಂಕಾಲ ಶಾಲೆಬಿಟ್ಟು ಬಂದ ಮೇಲೆ ಪುನಃ ಅವುಗಳನ್ನು ಕೊಟ್ಟಿಗೆಗೆ ಕರೆತರಬೇಕಾಗಿತ್ತು.
ದನಕಾಯುವ ಕೆಲಸದ ಮಜವೇ ಬೇರೆ! ಸುಮಾರು ಎರಡೂವರೆ ಕಿಲೋಮೀಟರುಗಳ ದೂರದ ಬ್ಯಾಣ….. ಕೊಟ್ಟಿಗೆಯ ದಾಬಿನ ಕಣ್ಣಿ ಬಿಚ್ಚಿದ ಕೂಡಲೇ ಆಚೀಚೆಯೆಲ್ಲೂ ನಿಲ್ಲದೇ ನೇರವಾಗಿ ಬ್ಯಾಣದ ದಾರಿ ಹಿಡಿಯುವ ಸುಮಾರು ಮೂವತ್ತೈದು-ನಲವತ್ತು ದನಗಳು…. ಅವುಗಳ ಹಿಂದೆ ಗೋವಿನ ಹಾಡಿನ ಕಾಳಿಂಗನೆಂಬ ಗೊಲ್ಲನ  ಸಾಕ್ಷಾತ್ ಅಪರರೂಪ! ಗೌಳ್ಯಾನ ಗುಡ್ಡೆ, ಓಣಜಿಹಳ್ಳ, ಶಾಲೆಮನೆ, ಅದರ ಗುಂಟ ಸ್ಮಶಾನದ ದಾರಿಹಾಯ್ದು ಬ್ಯಾಣದ ದಣಪೆಯನ್ನು ತಲುಪುವದರಲ್ಲಾಗಲೇ ಎಲ್ಲ ದನಗಳೂ ಅಲ್ಲಿ ಸೇರಿಯಾಗಿರುತ್ತಿತ್ತು. ಸರಗೋಲನ್ನು  ಸರಿಸಿ ಅವನ್ನೆಲ್ಲ ಒಳಗೆ ಸೇರಿಸಿ ಮತ್ತೆ ಹಾಕಿ ಮನೆಗೆ ಬರುವಷ್ಟರಲ್ಲಿ ತಿಂದ ಆಸರಿಯೆಲ್ಲ ಕರಗಿ ನೀರಾಗಿರುತ್ತಿತ್ತು!
ಮಳೆಗಾಲದಲ್ಲಿ ಮದ್ಯಾಹ್ನ ಶಾಲೆ ಬಿಟ್ಟಮೇಲೆ ಹೂಟೆಯಾಳು ಡುಂಗ್ಯಾನಿಗೆ ಊಟ ತೆಗೆದುಕೊಂಡು ಹೋಗುವುದೂ ತಿಂಗಳಾನುಗಟ್ಟಲಿನ ದಿನಚರಿಯಾಗಿರುತ್ತಿತ್ತು. ಧೋ…ಧೋ… ಎಂದು ರಪಗುಡುವ ಮಳೆ… ಕಾನುಬೇಣದ ಕಾಲುದಾರಿ….. ನೀರಾಟವಾಡುತ್ತಲೇ ಒಂದು ಕೈಯೊಳಗಿನ ಕ್ಯಾನಿನ ಊಟ, ಇನ್ನೊಂದರಲ್ಲಿ ತುಂಬಿದ ಬೆಲ್ಲದ ಕಷಾಯ ಚೆಲ್ಲದಂತೆ ಸಂಭಾಳಿಸಿ, ಜಾರುದಾರಿಯಲ್ಲಿ ಗದ್ದೆಮುಟ್ಟುವದೆಂದರೇ ತಂತಿಯ ಮೇಲೆ ನಡೆವ ಹುಡುಗಿ ಸರ್ಕಸ್ ಮಾಡಿದ ಅನುಭವ.
ಅಂತೂ-ಇಂತೂ ಗದ್ದೆ ತಲುಪಿದರೆ, ತಡೆಯಲಾಗದ ಮಣ್ಣಿನ ಆಕರ್ಷಣೆ. ಕೆಸರುಗದ್ದೆಗಳಲ್ಲೆಲ್ಲ ಕುಣಿದಾಡಿ, ಮೈಗೆಲ್ಲ ಮಡ್ ಬಾತಿನ ಮಾಘಸ್ನಾನ! ಕೊನೆಗೆ ಗಳಿಯ ಹೊಡೆಯುವ ಹುರುಪು. ಏಯ್… ಹಾ…ಹಾ…ಹ್ಯೀ…ಹೋ’ ಎಂದೆನ್ನುತ್ತ…ಡುಂಗ್ಯಾ ಆ ಎತ್ತುಗಳೊಂದಿಗೆ ಸಲೀಸಾಗಿ ಮಾತನಾಡುವಂತೆ ನಾನು ಪ್ರಯತ್ನಿಸಿದರೂ… ನನ್ನ ಭಾಷೆ ಅವುಗಳಿಗೆ ಅರ್ಥವಾಗುತ್ತಿರಲಿಲ್ಲ. ಎಲ್ಲೆಲ್ಲಿಯೋ ಎಳೆದೊಯ್ಯುತ್ತಿದ್ದವು. ಅದಾಗಲೇ ಎರಡು ಕೊಟ್ಟೆಯೇರಿಸಿದ ಡುಂಗ್ಯಾ ಹಲ್ಕಿರಿದು ನಗತೊಡಗುತ್ತಿದ್ದ!... ಕೊರಡು ಹೊಡೆಯುವಾಗಲಂತೂ ಇನ್ನಿಲ್ಲದ ಸಂಭ್ರಮ! ಗದ್ದೆಯತುಂಬ ತುಂಬಿದ ರಾಡಿ ನೀರಿನಲ್ಲಿ ಕೊರಡಿನ ಮೇಲೆ ನಿಂತು ಎರಡೂಕೈಯಲ್ಲಿ ಗಳಿಯದ ದಾಬುಹಿಡಿದು ಕೊರಡಿನ ಮೇಲೆ ಕಾಲಗಲಿಸಿ ನಿಂತು ಗದ್ದೆಯಲ್ಲಿ ಹೋಗುವುದು ಸಮುದ್ರದಲ್ಲಿ ದೋಣಿಯಮೇಲೆ ಹೋದಂತಾಗುತ್ತಿತ್ತು.
       ಮಗನಿಗೆ ಟಿಲ್ಲರ್ ತೋರಿಸಲು ಮಾವನ ಮನೆ ಗದ್ದೆಗೆ ಹೋದಾಗ ಇವೆಲ್ಲ ನೆನಪಾಗಿತ್ತು. ಈಗ ಟಿಲ್ಲರ್ ಕೂಡ ನನ್ನ ಮಾತು ಕೇಳುತ್ತಿರಲಿಲ್ಲ! ಹೇಗ್ಹೇಗೋ ಮಾಡಿ ಮೂರ್ನಾಲ್ಕು ರೌಂಡು ತಿರುಗಿಸುವಷ್ಟರಲ್ಲಿ ಸುಸ್ತಾಗಿದ್ದೆ. ಮಗ ಗದ್ದೆಯ ಕೆಸರಲ್ಲಿ ಬಿದ್ದು ಹೊರಳಾಡುತ್ತಿದ್ದ. ಕೆಸರು ಗದ್ದೆಯಲ್ಲಿ ಮುಟ್ಟಾಟ ಆಡೋಣವೆಂದು ನನ್ನ ಕೈಹಿಡಿದು ಎಳೆಯುತ್ತಿದ್ದ. ಆಡದೇ ಬೇರೆ ಗತಿಯಿಲ್ಲ. ಸುಸ್ತಾಗಿ ಹಾಳಿಯ ಮೇಲೆ ಕುಳಿತರೆ ಅವನಿಗೆ ಇನ್ನೂ ಹುರುಪು. ಕೆಸರು ನೀರನ್ನು ಚೆಲ್ಲಾಡುತ್ತ ಖುಷಿಯಿಂದ ಕೇಕೇ ಹಾಕಿ ಕುಣಿದಾಡುತ್ತಿದ್ದ. ನಡೆಯೋ ಮಗನೇ ಮನೆಗೆ ಹೋಗೋಣವೆಂದರೆ….. ಬೇಡ… ವಾಪಸ್ ಹೋಗೋಕೆ ಮನಸೇ ಆಗುತ್ತಿಲ್ಲ…. ಇನ್ನೂ ಆಡೋಣ ಬಾ ಎಂದು ಕೈಹಿಡಿದು ಎಳೆಯತೊಡಗಿದ್ದ. ಮಳೆ ಹೊಯ್ಯುತ್ತಲೇ ಇತ್ತು….  

Monday, August 13, 2012

Rain..... Rain......Rain......

 


ಮಳೆಗಾಲದ ಒಂದು ದಿನ…..ಮತ್ತು ನನ್ನ ಪ್ರೀತಿಯ ಕನ್ನಡಶಾಲೆ!

ಬಹುಶಃ ನಾನಾಗ ಮೂರೋ.. ನಾಲ್ಕೋ…ಸರಿಯಾಗಿ ನೆನಪಿಲ್ಲ. ಆದರೆ ಧೋ…ಎಂದು ಸುರಿಯುತ್ತಿದ್ದ ಮಳೆಯ ಚಿತ್ರವಿನ್ನೂ ಕಣ್ಣಿಗೆ ಕಟ್ಟಿದಹಾಗಿದೆ. ಭಾಗೀರಥಿ ಬಾಯೋರು ನಮಗಾಗ ಕಲಿಸುತ್ತಿದ್ದರು. ಕ್ಲಾಸ್ ರೂಂ ಎಂದರೆ ಕಗ್ಗತ್ತಲ ಕೋಣೆ! ಮಳೆಯ ರಭಸಕ್ಕೆ ಹೇಳಿದ್ದೊಂದೂ ಕೇಳುತ್ತಿರಲಿಲ್ಲ. ಬೆಳಿಗ್ಗೆ ಪ್ರಾರಂಭವಾದ ಮಳೆ ಇಡೀದಿನ ಬೇಸರಿಸದೇ ಒಂದೇ ಸವನೆ ಹೊಯ್ಯುತ್ತಿತ್ತು! ಮಲೆನಾಡ ಮಳೆಯೇ ಹಾಗಿರುತ್ತಿದ್ದ ಕಾಲವದು. ತುಂಬ ಹಳೆಯ ಕಾಲವೇನಲ್ಲ. ಸುಮಾರು 1984-85ರ ದಿನಗಳವು.

ಭಾಗೀರಥಿ ಬಾಯೋರು ನಮಗೆಲ್ಲ ತುಂಬ  ಅಕ್ಕರೆಯ ಅಕ್ಕೋರು. ಆಗ ಶಾಲೆಯೆಂದರೆ ನಮ್ಮ ಪ್ರೀತಿಯ ಆಟದ ಮನೆ! ಮೊದಲನೇ ತರಗತಿಗೆ ಹೋಗುವಾಗ ಮೊದಮೊದಲು ಅಳುತ್ತ ತಪ್ಪಿಸಿಕೊಳ್ಳುತ್ತಿದ್ದೆ! ದಿನವೂ ಇದೇ ಕಥೆಯಾಗತೊಡಗಿದಾಗ ಅಮ್ಮ ಮೊದಲು ಹೊಡೆದು ಶಾಲೆಗೆ ಅಟ್ಟುತ್ತಿದ್ದಳು. ದಿನವೂ ಸಾಯುವವರಿಗೆ ಅಳುವವರಾರು? ದಿನವೂ ಥಡಿರಾಶಿಯ ಸಂದಿನಲ್ಲೋ, ದೇವಸ್ಥಾನದ ಮೆತ್ತಿನ ಮೇಲಿನ ತೊಲೆಗಳ ಮೇಲೆಯೋ, ತೋಟದಲ್ಲಿನ ಬಚ್ಚಲು ಮನೆಯ ಅಟ್ಟದ ಮೇಲೆಯೋ ಅಡಗಿಕುಳಿತುಕೊಳ್ಳುತ್ತಿದ್ದ ನನ್ನನ್ನು ಹುಡುಕಿ ಹುಡುಕಿ ಅಮ್ಮ ಬೇಸೆತ್ತಿರುತ್ತಿದ್ದಳು. ಆಮೇಲಾಮೇಲೆ ಪಕ್ಕದ ಮನೆಯ ಚಂಪಾ ಭಟ್ಟರು, ಸುಬ್ಬಾ ಭಟ್ಟರು, ವಿಜಯತ್ತೆ, ಸಾವಿಂತ್ರಿ ಬೊಬ್ಬೆ, ಮಾದೇ ಅಕ್ಕ, ಸುಬ್ಬಾಣಿ, ತಮ್ಮಾಣಿ, ಶಿವರಾಂ ಭಟ್ಟರು…. ಅವರು… ಇವರು… ಎಲ್ಲರೂ ನನ್ನ ಮೇಲೆ ತಮ್ಮ ಹೊಡೆಯುವ ಚಟವನ್ನು ತೀರಿಸಿಕೊಂಡಿದ್ದರು!

ಕೊನೆಗೆ ಭಾಗೀರಥಿ ಬಾಯೋರು ದಿನವೂ ಚಾಕಲೇಟು ಕೊಡಲು ಆರಂಭಿಸಿದಾಗ, ಹೊಡೆತ ತಪ್ಪಿಸಿಕೊಳ್ಳುವ ಸಲುವಾಗಿಯಾದರೂ ಚಾಕಲೇಟಿನಾಸೆಗೆ ಶಾಲೆಗೆ ಹೋಗುವುದು ರೂಢಿಯಾಯಿತು! ಅವರ ಕಾರಣಕ್ಕಾಗಿಯೇ ಶಾಲೆ ಪ್ರಿಯವಾಗತೊಡಗಿತು. ಇವತ್ತು ಸ್ವಲ್ಪನಾದರೂ ಓದು-ಬರಹ ಕಲಿತಿದ್ದಿದ್ದರೆ ಅದರ ಶ್ರೇಯಸ್ಸು ನನ್ನನ್ನು ತಿದ್ದಿ ತೀಡಿದ, ತೀಡಿಸಿದ ಭಾಗೀರಥಿ ಬಾಯೋರಿಗೆ ಸಲ್ಲ ಬೇಕು. ಅವರು ನೂರ್ಕಾಲ ನೆಮ್ಮದಿಯಿಂದ ಬಾಳಲಿ.  
ಆದಿನ ಮಳೆಗಾಲದ ಒಂದು ದಿನ ನಿಬಂಧ ಬರೆಯಲು ಹೇಳಿದ್ದರು. ತಿಣುಕಾಡಿದರೂ ಒಂದು ಪುಟ ಬರೆಯುವಷ್ಟರಲ್ಲಿ ಶಬ್ದ ಭಂಡಾರವೆಲ್ಲ ಮುಗಿದಿತ್ತು! ‘ಮಳೆ ಎಂದರೆ ನಮಗೆ ಖುಷಿಯೋ ಖುಷಿ. ಜೋರು  ಮಳೆಬಂದರೆ ಶಾಲೆಗೆ ರಜೆಕೊಡುತ್ತಾರೆ. ಮನೆಗೆ ಹೋಗುವ ದಾರಿಯಲ್ಲಿ ನೀರಾಟ ಆಡಬಹುದು. ಹಲಸಿನ ಹಣ್ಣಿನ ಕಡುಬಿಗೆ ತುಪ್ಪ ಸೇರಿಸಿ ತಿಂದರೆ ಮಜವೋ ಮಜ! ಕಾಗದದ ದೋಣಿ ಮಾಡಿ ನೀರಲ್ಲಿ ತೇಲಿಬಿಡುವುದು ತುಂಬ ಖುಷಿಕೊಡುತ್ತದೆ. ಮಳೆ ಬಂದರೆ ಗದ್ದೆ ನೆಟ್ಟಿ ಶುರುವಾಗುತ್ತದೆ. ಗದ್ದೆಯಲ್ಲಿ ಭತ್ತ ಬಂದರೆ ನಮಗೆ ಊಟಕ್ಕೆ ಸಾಕಾಗುತ್ತದೆ. ಮಳೆಗಾಲದಲ್ಲಿ ಅಡಿಕೆಗೆ ಮದ್ದು ಹೊಡೆಯುತ್ತಾರೆ….”ಹೀಗೆ ಬಾಲ್ಯದ ಬಾಲಿಶ ಭಾಷೆ ಈಗ ನಗುಬರಿಸುತ್ತದೆ!
ಮೊನ್ನೆ ಊರಿಗೆ ಹೋಗಿದ್ದೆ. ಅದ್ಭುತವಾಗಿ ಮಳೆ ಸುರಿಯುತ್ತಿದ್ದದ್ದು ಬಾಲ್ಯದ ನೆನಪನ್ನು ಮರುಕಳಿಸಿತ್ತು. ಕಾಟಿಮನೆ, ಶಿರಸಿಯ ಹತ್ತಿರದ ಎಕ್ಕಂಬಿಯ ಸಮೀಪದ ಊರು. ಊರೆಂದರೆ… ಕಾಡನಡುವಿನ ಒಂಟಿ ಮನೆ. ನನ್ನ ಗೆಳೆಯನೋರ್ವ ಇದನ್ನು ಸ್ವಿಡ್ಜರ್ಲ್ಯಾಂಡ್ ಎಂದೇ ಕರೆಯುತ್ತಾನೆ!  

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ಕಾಡುಮನೆಯನ್ನು ತಲುಪುವಾಗ ಅದಾಗಲೇ ಬರೋಬ್ಬರಿ ಬೆಳಗಿನ ಜಾವದ ಒಂದು ಗಂಟೆಯ ಸಮಯ. ಸಾಧಾರಣವಾಗಿ ದೆವ್ವಗಳು ಓಡಾಡುವ ಅಕಾಲವೆಂದು ಹಳ್ಳಿಗರು ಇಂದೂ ಹೇಳುತ್ತಿರುತ್ತಾರೆ. ನೀರವ ಮೌನದ ಕಾರ್ಗತ್ತಲಿನಲ್ಲಿ ದಾರಿ ಸಾಗುತ್ತಿರುವಾಗ ಸ್ಟೀರಿಯೋದಲ್ಲಿ ಓಶೋನ ನಿರರ್ಗಳವಾದ, ಸಹಜ ಸೌಂದರ್ಯ ಭಾಷೆಯಲ್ಲಿನ ಮೌನದ ಕುರಿತ ಮಾತುಗಳು ಮಳೆಯಂತೆ ಹನಿಸುತ್ತಿದ್ದವು. ನಡುನಡುವೆ ಕಾರು ನಿಲ್ಲಿಸಿ ಗುಟುಕು ಗುಟುಕಾಗಿ ಪ್ರೇಯಸಿಯ ಅಮೃತ ಮಿಶ್ರಿತ ಒಗರು ಅಧರವನ್ನೊಮ್ಮೆ ಹೀರುವಾಗ… ಕಾಡಿನ ಮೌನ… ಸುಂಯ್ ಗುಡುವ ತಂಗಾಳಿ…. ಹನಿಹನಿ ಶ್ರಾವಣದ ಮಳೆ…. ನನ್ನೊಳಗಣ ಪ್ರಜ್ಞೆಯನ್ನು ತಪ್ಪಿಸಿ, ನಾನು ಕಳೆದುಹೋದಂತಹ ಅನುಭವವದು! ಮನೆ… ನನ್ನದಲ್ಲದ ಕಾರಣಕ್ಕೋ…. ಮಾವನ ಮನೆಯಾಗಿದ್ದಕ್ಕೋ! ನಿದ್ರೆಯೇ ಹತ್ತುತ್ತಿಲ್ಲ. ಜೊಂಯ್ ಗುಡುವ ಮಳೆ!

ಬೆಳ್ಳಂಬೆಳಿಗೆ ನನ್ನ ಗೂಡಲ್ಲಿ ಬೆಚ್ಚಗೆ ಹೊಕ್ಕಿ ಮಲಗಿದ್ದ ಮಗನನ್ನೊಮ್ಮೆ ಮುದ್ದಿ ಎಬ್ಬಿಸಿದ್ದೆ. ‘ಬಾರೋ, ಅಪರೂಪದ ಮಳೆ ಹೊಯ್ಯುತ್ತಿದೆ. ಕಟ್ಟೆಯ ಮೇಲೆ ಕುಳಿತು ನೋಡೋಣ ಬಾ….’ಎಂದು ಸವಿನಿದ್ದೆಯಲ್ಲಿದ್ದ ಅವನನ್ನು ಆರುಗಂಟೆಗೇ ಎಬ್ಬಿಸಿ ಕರೆದೊಯ್ದೆ…. ಅಂಗಳಕ್ಕೆ! ಎದುರು ದೊಡ್ಡೂರ ಗುಡ್ಡ! ಬುಡದಲ್ಲಿ ಆಗತಾನೆ ಅಗೆ ಹಾಕಿ ಗೇಣುದ್ದ ಬೆಳೆದು ನಿಂತ ಭತ್ತದ ಗದ್ದೆ. ಪಕ್ಕದಲ್ಲಿ ಮಂಜು ಮುಸುಕಿದಂತೆ ಕಾಣುವ ಅಡಿಕೆ ತೋಟ. ಅಂಗಳದಲ್ಲಾಗಲೇ ಬೆಳೆದು ಹಸಿರಿನಿಂದ ತುಂಬಿದ, ಆಯಿಯ ಆರೈಕೆಯ ಸೌತೆ, ಬೆಂಡೆ, ಬದನೆ, ಸೋಡಿಗೆಯ ತರಹೇವಾರಿ ತರಕಾರಿ ಗಿಡಗಳು. ನಡುನಡುವೆ ಸ್ನಿಗ್ಧ ಸೌಂದರ್ಯರಾಶಿಯನ್ನೇ ಹನಿಸುವ ಡೇರೆ, ಜಾಜಿ, ಮಲ್ಲಿಗೆ, ದಾಸವಾಳ, ಗೆಂಟಿಗೆ, ಶಂಕಪುಷ್ಪ, ನಿತ್ಯಪುಷ್ಪ…. ಕಣ್ಣಿಗೆ ಹಬ್ಬ! ಮನಸಿಗೆ ವಿವರಿಸಲಾಗದ ಸಚ್ಚಿದಾನಂದ! ನಾನೂ, ಮಗನೂ ಸಕತ್ ಖುಷಿ ಪಟ್ವಿ. ‘ಆಸ್ರಿ ಕುಡ್ಯಲ್ಲಾತ್ರೋ, ಲಗೂನೆ ಬನ್ನಿ, ಕೊನೆಗೆ ದ್ವಾಸೆ ಬಂಡಿ ಗಾರೆದ್ಹೋಗ್ತು’, ಎಂದು ಆಯಿ ಕರೆದಾಗಲೇ ನಾವಿಬ್ಬರೂ ಹೇಡಿಗೆ ಕಟ್ಟೆಯಿಂದ ಕುಂಡೆಯೆಬ್ಬಿಸಿದ್ದೆವು!
                                                                                                (ಮುಂದುವರೆಯುತ್ತದೆ)

Sunday, August 5, 2012

Remembering you.... Dharwad


ಶ್ರಾವಣದ ಮಳೆ ಮತ್ತು ಧಾರವಾಡದ ಘಮಲು


      ಧಾರವಾಡಕ್ಕೆ ಧಾರವಾಡವೇ ಒಂದು ತರಹದ ಆಕರ್ಷಣೆ! ಹಳೆಯ ಬ್ರಿಟಿಷ್ ಶೈಲಿಯ ಕರ್ನಾಟಕ ಕಾಲೇಜು, ಅದರೆದುರೇ ಒಂದು ಕೂಗಳತೆಯ ದೂರದಲ್ಲಿರುವ  ಆಕಾಶವಾಣಿ, ಅಲ್ಲಿನ ಹಿರಿಯ ಮಿತ್ರರು, ಕಲಾವಿದರು,  ಎದುರಿನಲ್ಲಿಯೇ ಇರುವ ಪಂ.ಮಲ್ಲಿಕಾರ್ಜುನ ಮನ್ಸೂರ್ ಅವರ ಮನೆ,  ಹಾಗೆಯೇ ಕೆಳಗಿಳಿದು ಹೋದರೆ ‘ಬಾರೋ ಸಾಧನ ಕೇರಿಗೆ, ನನ್ನ  ಒಲುಮೆಯ ಗೂಡಿಗೆ’ಎಂದು ಕೈಬೀಸಿ ಕರೆಯುವ ಸಾಧನಕೇರಿ, ಬೇಂದ್ರೆ ಅಜ್ಜ! ಚುಮುಚುಮು ಶ್ರಾವಣದ ಮಳೆ, ಮಳೆಯೊಂದಿಗೇ ತೂರಿ ಬರುವ ಹಳೆಯ ನೆನಪುಗಳು. 

ಸಾಧನ ಕೇರಿಯಲ್ಲಿದ್ದ ಸಂಶೋಧನಾ ಒಂಟಿಸಲಗ  ಶಂಬಾ ಜೋಶಿಯವರ ಮನೆಯಲ್ಲಿ ನಾನು ಭಾಡಿಗೆಗಿದ್ದ ದಿನಗಳು, ಅವರ ಮನೆಯೆದುರಿನ, ಅವರಂತೆಯೇ ಅಷ್ಟುದ್ದ… ಎತ್ತರದ ಸುರಗಿ ಮರ,  ಅದರಡಿಯಲ್ಲಿ ಹಾಸಿ ಬಿದ್ದಿರುವ ಘಮಘಮದ ಸುರಗಿ ಹೂವುಗಳು. ಅಲ್ಲಿಯೇ ಗೇಟಿಗೆ ತೂಗು ಹಾಕಿರುವ ಲೆಟರ್ ಬಾಕ್ಸು! ಶಂಕರಪಾರ್ವತಿ ನಿಲಯ, ಎರಡನೆಯ ಅಡ್ಡರಸ್ತೆ, ಸಾಧನಕೇರಿ, ಧಾರವಾಡ.  ವಾರಕ್ಕೆರಡುಬಾರಿ ಮದ್ಯಾಹ್ನ, ಸಾಯಂಕಾಲ ಸೈಕಲ್ ಬೆಲ್ ಬಾರಿಸಿ ಪತ್ರಬಂದಿದೆಯೆಂದು ಕೂಗಿ ಕರೆಯುತ್ತಿದ್ದ ಗೆಳೆಯ ಪೋಸ್ಟ್ ಮ್ಯಾನ್, ನಾನಿಲ್ಲದಾಗ ಅದನ್ನು ಜೋಪಾನವಾಗಿ ತೆಗೆದಿರಿಸಿ ನಂತರ ನಗುನಗುತ್ತಲೇ ‘ಪತ್ರಾ ಬಂದಾದ ನೋಡು’ಎಂದು ನೀಡುತ್ತ ಪ್ರೀತಿಯಿಂದ ಕಾಣುತ್ತಿದ್ದ ಅಜ್ಜಿ ವಿಮಲ್ ಡಿಸ್ಕಳ್ಕರ್ (ಶಂ.ಬಾರ ಮಗಳು). ಆ ಮನೆಯ ಹಜಾರದಲ್ಲಿದ್ದ ತೂಗುಯ್ಯಾಲೆ. ಎಷ್ಟೋದಿನ ಅದರ ಮೇಲೆ ತೂಗುತ್ತಲೇ  ಪೋಸ್ಟ್ಮನ್ನನನ್ನು ಕಾಯುತ್ತಿದ್ದ ಕಾತರದ ಕ್ಷಣಗಳು! 

ಅಶೋಕನೊಂದಿಗೆ ಸುತ್ತಾಡಲು ಹೋಗುತ್ತಿದ್ದ ಕೆಲಗೇರಿ ಕೆರೆ, ಅದರಾಚೆಗಿನ ಮಾವಿನ ತೋಪು,  ಸಾಧನಕೇರಿಯ ಮಿತ್ರಮಂಡಳಿ, ಮಾನೆ ಮನೆಯ ಹಬ್ಬದೂಟಗಳು, ಭಾರತೀನಗರದ ಗುಂಟ ಶ್ರೀನಗರಕ್ಕೆ ಹೋಗುವ ಆ ರಸ್ತೆ! ಅಲ್ಲಿಯ ಇಳುಕಲಿನ ಬುಡದಲ್ಲಿರುವ ಹಿರಿಯ ಕವಿಮಿತ್ರ ಸಿದ್ದಲಿಂಗ ದೇಸಾಯರ ಆ ಪುಟ್ಟ ಕೋಣೆ… ಶ್ರೀನಗರದ ಕುರ್ತಕೋಟಿಯವರ ಮನೆ, 720 ಎಕರೆ ವಿಸ್ತಾರದಲ್ಲಿ ಹಬ್ಬಿರುವ ಕರ್ನಾಟಕ ವಿಶ್ವವಿದ್ಯಾಲಯ, ನನ್ನ ಜರ್ನಲಿಸಂ ಡಿಪಾರ್ಟ್ಮೆಂಟು, ಟೈವಾಕ್ ಗುಡ್ಡ, ಪಕ್ಕದ ನಿಸರ್ಗಕಾಲನಿಯ ವ್ಯಾಲಿಯಲ್ಲಿರುವ ಬಾಲಬಳಗ ಶಾಲೆ, ಅಲ್ಲಿಯೇ ನವನಗರದಲ್ಲಿರುವ  ಆಮೂರಜ್ಜ, ಗಿರಡ್ಡಿ, ಮೋಹನ ನಾಗಮ್ಮನವರ ಮನೆಗಳು, ಹಾಗೆ ಮುಂದುವರೆದರೆ ನಿರ್ಮಲನಗರ.

 ನಾನು ಕೆಲಕಾಲ ವಾಸವಿದ್ದ, ಸಕ್ಕರೆಯಂತಹ ಮನಸ್ಸುಳ್ಳ ಸಕ್ರಿಯವರ ಮನೆ ಯೂನಿಸ್, ಓನರ್ ಅಂಕಲ್, ಆಂಟಿ ಸಕ್ರಿ ಟೀಚರ್, ಗೆಳೆಯ ಸಹೃದಯ ಸ್ಟ್ಯಾನ್ಲಿ, ಆತನ ಪತ್ನಿ ಐರಿನ್, ಮಕ್ಕಳಾದ ಕೆನೆಥ್, ರಾಬಿನ್, ಮನೆಗೆಲಸದ ಶಾಹಿದಾ, ಹಾಲಿನ ಹುಡುಗ ಬಸೂ, ಪಾಂಡೂ… ಸುಮಾ ಆಂಟಿ ಹಾಗೂ ಅವಳ  ಒಡ್ಡೋಲಗ, ತೇಜಸ್ವಿಯನ್ನು ನೋಡಿಕೊಳ್ಳುತ್ತಿದ್ದ ಗೀತಾ ಆಂಟಿ ಹಾಗೂ ಅವರ ಮನೆ ಅಜ್ಜ-ಅಜ್ಜಿ, ತೇಜೂನ್ನ ಶಾಲೆಗೆ ಕರ್ಕೊಂಡು ಹೋಗುತ್ತಿದ್ದ ಬೀಬೀಜಾನ್ ಅಜ್ಜಿ, ಪಕ್ಕದ ಬೀದಿಯಲ್ಲಿರುವ ವಿದ್ವಾಂಸ ವೃಷಭೇಂದ್ರಸ್ವಾಮಿಯವರ ಮನೆ, ಅದರ ಪಕ್ಕದಲ್ಲಿ ಕಕಾ ಬಳ್ಳಿಯ ಗೆಳೆಯರೆಂದೇ ಪ್ರಸಿದ್ಧರಾಗಿರುವ ಕಲಬುರ್ಗಿ, ಕಣವಿಯವರ ಮನೆಗಳು, ಅದರ ಮುಂದೆ ಅತ್ತಿಕೊಳ್ಳ, ಹಾಸಿ ಮುಂದೆಬಂದರೆ ರೇಲ್ವೇ ಸ್ಟೇಷನ್.

 ಶಂಕರ ಮೊಕಾಶಿಯವರ ಹಳೇಕಾಲದ ವಿಸ್ತಾರವಾದ ಕಂಪೌಂಡಿನ ಮನೆ, ಮಾಳಮಡ್ಡಿ, ರಾಜಗುರುಚಾಳ,  ಎಮ್ಮೀಕೇರಿ,ಅಲ್ಲಿನ ರಾಮ ರಹೀಮ ಹಾಲಿನ ಡೇರಿ,  ಗೌಳಿಗಲ್ಲಿ, ಅಲ್ಲಿ ಇವತ್ತಿಗೂ ಕಾಣಬರುವ ‘ಧಾರವಾಡದ ಎಮ್ಮೆಗಳು’  ಹೆಡ್ ಪೋಸ್ಟು, ಬಾಸೆಲ್ ಮಿಶನ್ ಪ್ರೌಢಶಾಲೆ, ಹಿಂದೀ ಪ್ರಚಾರ ಸಭಾ, ಉಳವಿ ಬಸಪ್ಪನ ಗುಡಿ, ಬೃಂದಾವನ ಹೋಟೆಲ್ಲು, ಕೋರ್ಟ್ ಸರ್ಕಲ್, ಬಸ್ಟ್ಯಾಂಡು, ಸುಭಾಷ ರಸ್ತೆ, ಸಮಾಜ ಪುಸ್ತಕಾಲಯ, ಮನೋಹರ ಗ್ರಂಥಮಾಲೆ ಅದರ ಮೇಲಿನ ಅಟ್ಟ, ಟಿಕಾರೆ ರಸ್ತೆ, ಹಾಲಗೇರಿ ದತ್ತಾತ್ರಯ ಗುಡಿ, ಶತಮಾನಗಳ  ಇತಿಹಾಸವುಳ್ಳ ಶಂಕರಾಚಾರ್ಯ ಪಾಠಶಾಲೆ.

ಅದರೊಂದಿಗೇ ನೆನಪಾಗುವ ಹಿರಿಯ ಘನವಿದ್ವಾಂಸ ಪಂ.ಭಾಲಚಂದ್ರ ಶಾಸ್ತ್ರಿಗಳು, ಅವರ ಮಕ್ಕಳೂ ನಮಗೆ ಕಾಲೇಜಿನಲ್ಲಿ ಸಂಸ್ಕೃತ ಪಾಠ ಮಾಡಿದ ಗುರುಗಳಾದ ಎಂ.ಎನ್.ಜೋಶಿ, ವಿ.ಬಿ.ಜೋಶಿ ಅವರೂ, ಚಿಕ್ಕ ಸಂದಿಯಂತಹ ಗಲ್ಲಿಯಲ್ಲಿರುವ  ಅವರ ಮನೆ,   ಹೊಸಯಲ್ಲಾಪುರದ ಹಳೇ ಧಾರವಾಡ, ಮಂಗ್ಯಾನ ಮಹಲ್, ಮಾಧವಗುಡಿಯವರ ಮನೆ… ಹೊಸಯಲ್ಲಾಪುರದಲ್ಲಿದ್ದ ಸ್ನೇಹಿತ ಹಲಕರರ್ಣಿಮಠನ ಆರಡಿ ಕೋಣೆ, ಅದು ನಮ್ಮ ದೀಕ್ಷಾ ಮಂದಿರ! ನಾವೆಲ್ಲ ಸಹಪಾಠಿಗಳು ಎಂ.ಎ ಮಾಡುತ್ತಿರುವಾಗ ಹಳೆ ಮಂಗ್ಯಾ ಬ್ರ್ಯಾಂಡ್ ‘ರಂ’ ಗೇರಿಸಿ ಸಹಾಧ್ಯಾಯ ಮಾಡುತ್ತಿದ್ದ ಪವಿತ್ರಸ್ಥಳ!  ಓಹ್ ನೆನಪುಗಳು ಸಾಲುಗಟ್ಟಿವೆ!

      ಮೊನ್ನೆ ಅದೆಷ್ಟೋ ದಿನಗಳ ನಂತರ ಧಾರವಾಡಕ್ಕೆ ಹೋಗಿದ್ದೆ. ಅಪ್ಪನ ಮನೆಗೆ ಹೋದಂತಹ  ಅನುಭವ! ಬೆಳ್ಳಂಬೆಳಿಗ್ಗೆ ಬಸ್ ಇಳಿಯುತ್ತಿದ್ದಂತೆಯೇ ಸಾಲುಗಟ್ಟಿ ನಿಂತಿದ್ದ  ಅಟೋಮಾಮಾಗಳು. “ಬರ್ರೀ ಸರ… ಯಾಕಡಿಗ್ರಿ? ನಾಲ್ವತ್ತ್ ಕೊಡ್ರಿ” ಎಂದು ಹೇಳುವ ಪರಿಯಲ್ಲಿಯೇ ಧಾರವಾಡದ  ಆತ್ಮೀಯತೆಯ ಸೊಗಡಿತ್ತು. ಆತ್ಮೀಯತೆ ಇಲ್ಲಿನ ನೆಲದಗುಣ. ಅದಿನ್ನೂ ಜೀವಂತವಾಗಿದ್ದದ್ದು ಮನಸಿಗೆ ಸಮಾಧಾನ ನೀಡಿತ್ತು.

ಶ್ರಾವಣದ ಮಳೆ ಹನಿಯುತ್ತಿತ್ತು. ನಿರ್ಮಲ ನಗರದ ಜಾನಕಿ ಅಪಾರ್ಟ್ ಮೆಂಟಿನಲ್ಲಿ ಇನ್ನೂ ಗೆಳೆಯ ಮಾಂಡ್ರೆ ಎದ್ದಿರಲಿಲ್ಲ. ಅವನ ಸವಿನಿದ್ದೆಯನ್ನೇಕೆ ಹಾಳುಮಾಡಲಿ ಎಂದು ವಾಕಿಂಗ್ ಹೊರಟೆ. ಗಿರಡ್ಡಿ, ಮೋಹನ ನಾಗಮ್ಮನವರ ಮನೆಗುಂಟ ಸಾಗಿ ಬಾಲಬಳಗದ ಶಾಲೆಯನ್ನೊಮ್ಮೆ ಸುತ್ತುಹಾಕಿ ಎಂ.ಐ ಸವದತ್ತಿಯವರ ಮನೆಗುಂಟ ನಿರ್ಮಲನಗರದ ಸಕ್ರಿಯವರ ಮನೆಯ ಕಡೆ ಹೆಜ್ಜೆ ಹಾಕಿದೆ. ಅದಾಗಲೇ ಬೆಲಗಿನ 6.45. ಸ್ಟ್ಯಾನ್ಲಿ ಎದ್ದಿದ್ದರು. “ಒಹ್ ಇದೇನಿದು ಸರ? ಸರ್ಪ್ರೈಸೂ… ಬರ್ರಿ… ಬರ್ರೀ.. ಎ ಐರೀ ಇಲ್ಯಾರ್ ಬಂದಾರ್ ನೋಡಿಲ್ಲೆ!” ಎನ್ನುತ್ತಲೇ ಅದೇ ಆತ್ಮೀಯ ರೀತಿಯಲ್ಲಿ ಸ್ವಾಗತಿಸಿದ್ರು. ಸಕ್ರಿ ಅಂಕಲ್ ಬಂದ್ರು, ಅವರ ಹಿಂದೇನೇ ಸಕ್ರಿ ಟೀಚರ್ ಆಂಟಿನೂ ಬಂದ್ರು. ಚಹಾದ ಜೊತೀನೇ! ಒಳ್ಳೆಯ ಧಾರವಾಡೀ ಚಹಾ ಆತು. ಜೊತೆಗೇ  ಸಕ್ಕರೆಯಂತಹ ಮಾತುಗಳೂ. ಮಳೆ ಜೋರಾಗತೊಡಗಿತ್ತು. ಕಣವಿ ಅಜ್ಜನ ನಾಯಿ ವಾಕಿಂಗಿಗೆ ಹೊರಟಿತ್ತು. ಆದರೆ ಕಣವಿ ಅಜ್ಜ ಮಾತ್ರ ಕಾಣಲಿಲ್ಲ.
         
 ಮಾಂಡ್ರೆ ಮನೆವರೆಗೂ ಸಕ್ರಿ ಅಂಕಲ್ ಕಾರಲ್ಲಿಯೇ ಬಿಟ್ಕೊಟ್ರು! ನಾನು ಅವರ ಮನೆಯಲ್ಲಿ ಮೂರುವರ್ಷ ಭಾಡಿಗೆಗಿದ್ದೆ. ಆದರೆ ಇವತ್ತಿಗೂ ನಾವೆಲ್ಲ  ಒಂದೇ ಮನೆಯವರೆಂಬ ಭಾವ! ಅದು ಧಾರವಾಡದ ಮೋಡಿ ನೋಡಿ! ಮಾಂಡ್ರೆ ತುಂಬ ಸಂತೋಷಪಟ್ಟಿದ್ದ.  ಅಣ್ಣಾ, ಅಣ್ಣಾ ಅನ್ನುತ್ತಲೇ ಸ್ನಾನಕ್ಕೆಲ್ಲ ರೆಡಿಮಾಡಿಟ್ಟಿದ್ದ. ಪ್ಲೇಟಿನ ತುಂಬ ಅಕ್ಕರೆ ತುಂಬಿದ ಇಡ್ಲಿ ಚಟ್ನಿಹಾಕಿ ಕೊಟ್ಟ. ಜೊತೆಗೆ ಫಸ್ಟ್ ಕ್ಲಾಸ್ ಚಹಾ!
         
 “ ಇದೇನ್ರೀ, ಇದ್ದಕ್ಕಿದ್ಹಾಂಗೆ ಬರೋಣಾತು! ಯಾವಾಗ್ಬಂದಿ? ಎನ್ಸಮಾಚಾರ? ಗೀತಾ, ತೇಜು, ಯಶು ಎಲ್ಲಾ ಆರಾಮಿದಾರ?” ಎನ್ನುತ್ತಲೇ ಪ್ರೀತಿಯಿಂದ ಮಾತನಾಡಿಸಿದ್ದು ನಾಗವೇಣಕ್ಕ. ಶಿವಗಿರಿಯ  ಅವರ ಮನೆ ರಾಗೇಶ್ರಿಯಲ್ಲಿ ಸಂಭ್ರಮವೋ ಸಂಭ್ರಮ. ಶ್ರೀಪಾದ ಹೆಗಡೆ ಕಂಪ್ಲಿ (ಖ್ಯಾತ ಹಿಂದೂಸ್ತಾನೀ ಗಾಯಕರು)…ಶ್ರೀಪಾದಣ್ಣ ( ನಾವೆಲ್ಲ ಅವರನ್ನು ಕರೆಯುವುದು) ಶ್ರೀಪಾದಜ್ಜನಾಗಿ ಪ್ರಮೋಷನ್ ಪಡೆದಿದ್ದರು. ಅವರ ಮಗ ಹರ್ಷ ದಂಪತಿಗಳಿಗೆ ಮಗ ಹುಟ್ಟಿದ ಸಂಭ್ರಮ…  ಅವನಿಗೆ ಹೆಸರಿಡುವ ಸಂಭ್ರಮ.. ‘ಮಾಯಾಂಕ’ ಆಮನೆಗೆ ಹೊಸ ಹರ್ಷದ ಹೊನಲನ್ನೇ ಹರಿಸಿದ್ದ. ಹೀಗೆಯೇ ನೂರ್ಕಾಲ  ಸಂತೋಷ ಆ ಮನೆಯಲ್ಲಿ ನೆಲೆಸಿರಲಿ.
         
 ಹಳೆದೋಸ್ತ ಹಲಕರ್ಣೀ ಮಠ ನಾನೂ ಸೇರಿ ನಮ್ಮ ಜರ್ನಲಿಸಂ ಡಿಪಾರ್ಟ್ ಮೆಂಟಿಗೆ ಹೋಗಿದ್ವಿ. ಗುರುಗಳಾದ ಬಾಲಸುಬ್ರಹ್ಮಣ್ಯ ಬಹುಕಾಲದ ನಂತರ ಭೇಟಿಯಾದರು. ಕಮ್ಮಾರ  ಇನ್ನೂ ಅಲ್ಲಿಯೇ ಇದ್ದಾನೆ. ಅವನತ್ರ ಹೇಳಿ ಚಹಾತರಿಸಿದರು. ಒಂತಾಸು ಆತ್ಮೀಯವಾಗಿ ಮಾತನಾಡಿದ್ವಿ. ಆಮೇಲೆ ಕರ್ನಾಟಕ ಕಾಲೇಜಿಗೆ ಪಯಣ. ಅಲ್ಲಿ ಭೇಟಿಯಾದವ ಮಂಜುನಾಥ ಹಿರೇಮಠನೆಂಬ ಇನ್ನೋರ್ವ ಹಳೇ ದೋಸ್ತ! ಫಿಲಾಸಫರ್, ಪ್ರೆಂಡು. ಈಗ ಅದೇ ಕಾಲೇಜಿನ್ಯಾಗನ ಇಂಗ್ಲೀಷ್ ಮಾಸ್ತರ್ರ. ತುಂಬ ಭಾವಜೀವಿ. ಕನಸುಗಳನ್ನ-ಆದರ್ಶಗಳನ್ನು ಇನ್ನೂ ಹಸಿಹಸಿಯಾಗಿಯೇ ಕಾಪಿಟ್ಟುಕೊಂಡಿದ್ದಾನೆ! ‘ಮಗನ, ನೀ ಬಾಳಾ ಬದ್ಲಾಗಿದೀ’ಅಂತಂದ. ‘ಲೇ ಮಂಜ್ಯಾ, ಲಗೂನ ಮದ್ವಿ ಮಾಡ್ಕೋ ಮಗನ, ಕೂದ್ಲಾ ಎಲ್ಲ ಬೆಳ್ಳಗಾಗ್ಹಾಕತ್ತಾವು. ಮದ್ವಿಮಾಡ್ಕೊಂಡ್ ಮ್ಯಾಲೆ ನೀ ಹ್ಯಾಂಗ್ ಬದ್ಲಾಗಿದೀ ಅಂತ ನಾನ್ ಹೇಳ್ತೇನ್ ನೋಡ್’ಎಂದೆನ್ನುತ್ತ ಅವರ ತಾಯಿ ಕಟ್ಟಿಕೊಟ್ಟ ರುಚಿಯಾದ ಚಪಾತಿ ಪಲ್ಯದ ಡಬ್ಬಿ ಖಾಲಿಮಾಡಿದ್ದೆ, ಕರ್ನಾಟಕ ಕಾಲೇಜಿನ ವಿ.ಕೆ.ಗೋಕಾಕ್ ಲೈಬ್ರರಿಯ ಕೋಣೆಯೊಂದರಲ್ಲಿ!
           
   ತುಂಬ  ಅಪರೂಪದ ಗ್ರಂಥಗಳನ್ನೊಳಗೊಂಡ ಹಳೆಯ ಗ್ರಂಥಾಲಯವದು. ಇದೇ ಜಾಗದಲ್ಲಿ ಗೋಕಾಕರ ಕೊನೆಯ ಭಾಷಣವನ್ನು ಕೇಳುವ  ಅಪರೂಪದ   ಅವಕಾಶ 1992ರಲ್ಲಿ ನಮಗೆ ಲಭಿಸಿತ್ತು. ನಾವು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾಗ ಕುಳಿತುಕೊಳ್ಳುತ್ತಿದ್ದ ಜಾಗಗಳಲ್ಲೆಲ್ಲ ಓಡಾಡಿದ್ದೆವು. ವೀಣಾ ಶಾಂತೇಶ್ವರ ಮೇಡಂ, ವಿ.ಎಸ್.ಕುಲಕರ್ಣಿ ಸರ್, ಜಾಡರ್ ಸರ್, ಮಾರ್ಥಾ ಮೇಡಂ, ಜಾಲಿಹಾಳ ಮೇಡಂ, ಜಮಖಂಡೀ ಮೇಡಂ, ಮ್ಯಾಥ್ಯೂ ಸರ್, ಗ್ಯಾಲರೀ ಕ್ಲಾಸ್ ರೂಂಗಳು, ಎಲ್ಲಾ ಮತ್ತೊಮ್ಮೆ ರಿವೈಂಡಾದಾಂಗಾತು.
          
 ಲಕ್ಷ್ಮಿ ಟಾಕೀಸಿನವರೆಗೆ ಅದೂ ಇದು ಮಾತನಾಡಿಕೊಂಡು ಬರುತ್ತಿದ್ದಂತೆಯೇ ಮಂಜನಿಗೆ ಇನ್ನೇನೋ ನೆನಪಾಗಿತ್ತು. ‘ಲೇ ದೋಸ್ತ, ಹತ್ಮಿನಿಟ್ ನ್ಯಾಗ ಬರ್ತೇನಲೇ, ಜೀನ್ಸ್ ಕಾರ್ನರ್ ನ್ಯಾಗ ನಿನ ಕೆಲಸಾ ಮುಗ್ಸು. ಇಲ್ಲೇ ಬರತೇನಿ’, ಅಂತ್ಹೇಳಿ ಕಾರನ್ನು ವಾಪಾಸ್ ಕಾಲೇಜಿನತ್ತ ತಿರುಗಿಸಿದ. ನಾನೂ ಸಂಗಮ್ ಟಾಕೀಸು, ಬಾಬೂಸಿಂಗ್ ಫೇಡಾ ಅಂಗಡಿಗುಂಟ ಟಿಕಾರೆ ರಸ್ತೆಯ ನನ್ನ ಪ್ರೀತಿಯ ಜೀನ್ಸ್ ಕಾರ್ನರಿಗೆ ಹೋದರೆ ಅದು ಬೀಗಹಾಕಿತ್ತು. ಈ ಸಲ ಜೀನ್ಸ್ ಖರೀದಿಯ ಭಾಗ್ಯ  ಇಲ್ಲಿಲ್ಲ  ಎದು ಕೊಂಡು, ಒಂದಿಷ್ಟು ಪ್ರಖ್ಯಾತ ಬಾಬೂಸಿಂಗನ ಫೇಡಾ ತಗೊಂಡು ಮರಳಿ ಲಕ್ಷ್ಮಿ ಟಾಕೀಸಿನಹತ್ತಿರ ಬಂದೆ. ಅರ್ಧಗಂಟೆಯಾಯಿತು ಮಂಜನ ಪತ್ತೆಯೇ ಇಲ್ಲಾ!   

ರೋಡ್ ಸೈಡಿನ ಮೋರಿಯ ಮೇಲೆ ಕುಂತು ಧಾರವಾಡದ ಜನಗಳನ್ನ, ವಾಹನಗಳನ್ನ,  ಎಮ್ಮೆಗಳನ್ನ, ನೋಡತೊಡಗಿದ್ದೆ. ಲಕ್ಷ್ಮಿಯಲ್ಲಿ ’ನೊಣ’ ಪಿಕ್ಚರ್ ಹತ್ತಿತ್ತು. ಇಲ್ಲಿ ನನಗೆ ಮೋರಿಯ ನೊಣಗಳ ಕಾಟ ಸುರುವಾಗಿತ್ತು. ಮಳೆ ಬೇರೆ ಜೋರಾಗತೊಡಗಿತ್ತು. ಟಾಕೀಸಿನ ಪಕ್ಕದ ಪಾನಂಗಡಿಯಲ್ಲಿ ನಿಂತು ಅದ್ಭುತವಾದ ಬನಾರಸ್ 120 ಪಾನನ್ನು ಕಟ್ಟಹೇಳಿದೆ. ಅದಾಗಲೇ ಒಂದು ತಾಸು ಕಳೆದಿತ್ತು. ಅಷ್ಟರಲ್ಲಾಗಲೇ ಒಂದ್ಹತ್ತು ಸಲ ಫೋನ್ ಮಾಡಿದ್ದೆ ಮಂಜನಿಗೆ. ಆಸಾಮಿ ಉತ್ತರಿಸುತ್ತಲೇ ಇಲ್ಲ! ಇವಾ ಮಾತ್ರ ಹೋದ್ಹೋದಲ್ಲೇ ಅಸ್ತ, ಒಂಚೂರೂ ಬದಲಾಗಿಲ್ವಲ್ಲ ಅಂತ್ಹೇಳಿ ಬಾಯಲ್ಲಿ ರಸಗವಳವನ್ನು ಮೆಲ್ಲತೊಡಗಿದೆ. 

ಧಾರವಾಡದ ಘಮ, ಶ್ರಾವಣದ ಮಳೆ, ಸುಭಾಷರಸ್ತೆ, ಕರ್ನಾಟಕ ಕಾಲೇಜು, ಪಾವಟೆನಗರ, ಕೆಲಗೇರಿ, ಸಾಧನಕೇರಿ, ನಾರಾಯಣಪುರ, ಮುರುಘಾಮಠ, ಬಸವರಾಜ ರಾಜಗುರುಗಳ ಸಂಗೀತ ಮತ್ತು ‘ಮೊಮ್ಮಗನೇ, ಇಕಾ ಬೇಸಿನ್ ಉಂಡೀ ಮಾಡ್ಯೇನಿ, ರುಚಿ ನೋಡಿ ಹ್ಯಾಂಗಾಗ್ಯೇದ ಹೇಳು. ಇನ್ನೊಂದ್ ಕೊಡ್ತೀನಿ’ಎಂದು ಪ್ರೀತಿಯಿಂದ ತಲೆದಡವಿ ನೀಡುತ್ತಿದ್ದ ಅವರೇ ಮಾಡಿದ ಉಂಡೆ! ನೆನಪಿನ ಬುತ್ತಿ ಬಿಚ್ಚತೊಡಗಿತ್ತು. ಕವಳಕ್ಕೆ ರಂಗೇರಿತ್ತು! ಧಾರವಾಡದ ಘಮಲು ಅಮಲಿನಂತಾಗಿ ಒಂಥರಾ ಅವ್ಯಕ್ತ ಆನಂದದೆತ್ತರಕ್ಕೆ ಒಯ್ದಿತ್ತು. ಮಳೆಯೂ ಕೂಡ  ಮೇಘಮಲ್ಹಾರದ ಅಬ್ಬರದ ತಾನುಗಳಂತೆ ಧೋ ಎಂದು ಸುರಿಯುತ್ತಲಿತ್ತು!

Thursday, August 2, 2012

George Orwell


 
 Eric Arthur Blair (George Orwell)
 25 June 1903 – 21 January 1950

£Á£ÉÃPÉ §gÉAiÀÄÄvÉÛãÉ?  
eÁeïð DªÉð¯ï
C£ÀÄ: ªÀ¸ÀAತ

(ಈ ಪ್ರಬಂಧವನ್ನು ಜಾರ್ಜ್  ಆರ್ವೆಲ್ ಬರೆದದ್ದು 1946 ರಲ್ಲಿ. ಬಿಹಾರ ರಾಜ್ಯದ ಮೋತಿಹಾರಿಯಲ್ಲಿ ಜನಿಸಿದ  ಇವರು ಮುಂದೆ ಇಂಗ್ಲೀಷ್ ಕಾದಂಬರಿಕಾರ ಹಾಗೂ ಪತ್ರಕರ್ತರಾಗಿ ಬರವಣಿಗೆಯಲ್ಲಿನ ಸ್ಪಷ್ಟತೆ, ಬೌದ್ಧಿಕತೆ, ಹಾಸ್ಯ, ಸಾಮಾಜಿಕ ನ್ಯಾಯದ ಕುರಿತ ತಿಳುವಳಿಕೆ, ಸರ್ವಾಧಿಕಾರದ ವಿರೋಧ ಹಾಗೂ ಸಮಾಜವಾದೀ ಪ್ರಜಾಪ್ರಭುತ್ವದ ಮೇಲಿನ ನಂಬಕೆಗಳ ಮೂಲಕ ಹೆಸರುವಾಸಿಯಾದರು. 20ನೇ ಶತಮಾನದಲ್ಲಿ ಇಂಗ್ಲೀಷ್ ಸಂಸ್ಕೃತಿಯ  ಅತ್ಯುತ್ತಮ  ಇತಿಹಾಸಕಾರರೆಂದೇ ಗುರುತಿಸಲ್ಪಟ್ಟಿರುವ  ಜಾರ್ಜ್ ಆರ್ವೆಲ್, ಸಾಹಿತ್ಯಕ ವಿಮರ್ಶೆ, ಕವನಗಳು, ಕಥೆಗಳು, ಕಾದಂಬರಿಗಳು ಹಾಗೂ ಚರ್ಚಾಸ್ಪದ ಪತ್ರಿಕೋದ್ಯಮ ಬರಹಗಳ ಮೂಲಕ ವಿಶೇಷವಾಗಿ ಗುರುತಿಸಲ್ಪಡುತ್ತಾರೆ.)

ತುಂಬಾ ಚಿಕ್ಕ ವಯಸ್ಸಿನಿಂದಲೇ, ಪ್ರಾಯಶಃ ಐದು ಅಥವಾ ಆರನೇ ವಯಸ್ಸಿನಲ್ಲಿರಬೇಕು, ಬೆಳೆದು ದೊಡ್ಡವನಾದ ಮೇಲೆ ನಾನೊಬ್ಬ ಬರಹಗಾರನಾಗಬೇಕು ಎಂಬುದು ನನಗೆ ಅರಿವಾಗಿತ್ತು. ಹದಿನೇಳರಿಂದ ಇಪ್ಪತ್ನಾಲ್ಕರ ವಯಸ್ಸಿನ ನಡುವೆ ಈ ವಿಚಾರವನ್ನು ಬಿಟ್ಟುಬಿಡಲು ನಾನು ಪ್ರಯತ್ನಿಸಿದೆ. ಎಷ್ಟು ಪ್ರಜ್ಞಾಪೂರ್ವಕವಾಗಿ ನಾನು ಅದನ್ನು ಮಾಡಿದ್ದೆನೆಂದರೆ, ಬಲು ಬೇಗನೆ ಬದುಕಿನಲ್ಲಿ ತಳವೂರುವ ಕುರಿತು ಮೊದಲು ಗಮನ ಹರಿಸಿ ನಂತರ ಪುಸ್ತಕಗಳನ್ನು ಬರೆಯುವದಾಗಿ ನನ್ನ ನೈಜ ಸ್ವಭಾವಕ್ಕೆ ತಡಯೊಡ್ಡುವಂತೆ ವಿಚಾರ ಮಾಡಿದ್ದೆ.

ನಮ್ಮ ತಂದೆ-ತಾಯಿಗಳ ಮೂವರು ಮಕ್ಕಳಲ್ಲಿ ನಾನು ನಡುವಿನವನು. ಆದರೆ ಅಲ್ಲಿ ಎರಡೂ ಕಡೆಯಿಂದಲೂ ಐದುವರ್ಷಗಳ ಅಂತರವಿತ್ತು. ಎಂಟು ವರ್ಷಗಳಾಗುವವರೆಗೂ ನಾನು ನನ್ನ ಅಪ್ಪನನ್ನು ಕಂಡಿದ್ದೇ ಬಲು ಅಪರೂಪಕ್ಕೊಮ್ಮೆ.  ಈ ಹಾಗೂ ಇನ್ನಿತರ ಕಾರಣಗಳಿಗಾಗಿ ನಾನು ಒಂಥರಾ ಒಂಟಿಯಾಗಿದ್ದೆ. ನನ್ನ ಶಾಲಾದಿನಗಳುದ್ದಕ್ಕೂ ನನ್ನನ್ನು ಕುಪ್ರಸಿದ್ಧನಾಗಿ ಗುರುತಿಸಲು ಕಾರಣವಾದ ಸರ್ವಸಮ್ಮತವಲ್ಲದ ನಡುವಳಿಕೆಗಳನ್ನು  ಬಲುಬೇಗನೇ ಬೆಳೆಸಿಕೊಂಡಿದ್ದೆ. ಸಾಮಾನ್ಯವಾಗಿ ಇತರ ಒಂಟಿ ಮಕ್ಕಳು ಮಾಡುವಂತೆ ನನ್ನಷ್ಟಕ್ಕೇ ಕತೆಗಳನ್ನು ಹೆಣೆಯುವ, ಕಾಲ್ಪನಿಕ ವ್ಯಕ್ತಿತ್ವಗಳೊಂದಿಗೆ ಸಂಭಾಷಣಾನಿರತನಾಗಿರುವ ಹವ್ಯಾಸವನ್ನು ಹೊಂದಿದ್ದೆ. ಪ್ರಾರಂಭದ ನನ್ನ ಸಾಹಿತ್ಯಕ ಮಹಾತ್ವಾಕಾಂಕ್ಷೆಗಳು ಒಂಟಿತನ ಹಾಗೂ ಕಡೆಗಣಿಸಲ್ಪಟ್ಟ ಭಾವನೆಗಳ ಸಮ್ಮಿಶ್ರಣವಾಗಿದ್ದವು. ಶಬ್ದಗಳ ಒಡನಾಟ ಹಾಗೂ ಅಪ್ರಿಯ ಸಂಗತಿಗಳನ್ನು ಎದುರಿಸುವ ಶಕ್ತಿ ನನ್ನಲ್ಲಿತ್ತು ಎಂಬುದು ನನಗೆ ತಿಳಿದಿತ್ತು. ಇದು ನನ್ನೊಳಗೆ ಒಂದು ರೀತಿಯ ಖಾಸಗೀ ಜಗತ್ತನ್ನು ನಿರ್ಮಾಣ ಮಾಡಿ, ನನ್ನ ದೈನಂದಿನ ಜೀವನದಲ್ಲಿನ ಸೋಲುಗಳಿಗೆ ನಾನೇ ಜವಾಬ್ದಾರನಾಗುವಂತೆ  ಮಾಡಿತ್ತು ಎಂದು ನನಗನಿಸಿತ್ತು. ಅದೇನೇ ಇರಲಿ, ನನ್ನ ಬಾಲ್ಯದಲ್ಲಿ ಹಾಗೂ ಹುಡುಗತನದಲ್ಲಿ ಬರೆದ ಗಂಭೀರವಾದ ಅಂದರೆ, ಗಂಭೀರವಾಗಿ ಬರೆಯಲು ಉದ್ದೇಶಿಸಿದ ಬರವಣಿಗೆ ಅರ್ಧ ಡಜನ್ನಿಗೂ ಮಿಕ್ಕಿಲ್ಲ. ನಾಲ್ಕು ಅಥವಾ ಐದನೆಯ ವಯಸ್ಸಿನಲ್ಲಿ ನಾನು ನನ್ನ ಮೊದಲ ಕವನವನ್ನು ಬರೆದೆ. ನನ್ನ ತಾಯಿ ಅದನ್ನು ನಾನು ಹೇಳಿದಂತೆ ಕಾಗದದಲ್ಲಿ ಬರೆದಿದ್ದಳು. ಅದು ಹುಲಿಯ ಕುರಿತಾಗಿತ್ತು ಹಾಗೂ ಹುಲಿ ಖುರ್ಚಿಯಂತಹ ಹಲ್ಲುಗಳನ್ನು ಹೊಂದಿತ್ತು- ಎನ್ನುವ ಒಳ್ಳೆಯ ಪದಗುಚ್ಛವನ್ನು ಹೊಂದಿತ್ತು, ಅದೂ ಕೂಡ ಬ್ಲೇಕ್‌ನ ಟೈಗರ್ ಟೈಗರ್ಪದ್ಯದ ಕೃತಿಚೌರ್ಯವಾಗಿತ್ತು ಎಂಬುದಷ್ಟೇ ನೆಪಿದೆಯೇ ವಿನಃ ಮತ್ತೇನೂ ಇಲ್ಲ. ಹನ್ನೊಂದನೇ ವಯಸ್ಸಿಗೆ, ೧೯೧೪-೧೮ರ ಯುದ್ಧವು ನಡೆಯುತ್ತಿದ್ದಾಗ, ನಾನೊಂದು ದೇಶಭಕ್ತಿ ಕವನವನ್ನು ಬರೆದೆ. ಅದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂತೆಯೇ ಇನ್ನೊಂದು ಕವನ, ಎರಡು ವರ್ಷಗಳ ನಂತರ, ಕಿಚ್ನರ್‌ನ ಸಾವನ್ನು ಕುರಿತು ಬರೆದದ್ದು. ಕಾಲಕಾಲಕ್ಕೆ, ನಾನು ಸ್ವಲ್ಪ ದೊಡ್ಡವನಾದ ಮೇಲೆ, ಕೆಟ್ಟದಾದ ಹಾಗೂ ಸಾಮಾನ್ಯವಾಗಿ ಕೊನೆಗೊಳ್ಳದ ನಿಸರ್ಗ ಕವನಗಳನ್ನು ಜಾರ್ಜಿಯನ್ ಶೈಲಿಯಲ್ಲಿ ಬರೆದೆ. ಹಾಗೆಯೇ ನಾನು, ಎರಡು ಸಾರೆ, ಕತೆಯನ್ನು ಬರೆಯಲೂ ಪ್ರಯತ್ನಿಸಿದೆ, ಆದರೆ ಇದು ಭಯಾನಕ ಸೋಲಾಗಿತ್ತು. ಈ ವರ್ಷಗಳಲ್ಲಿ ನಾನು ನಿಜವಾಗಿ ಕುಳಿತು ಕಾಗದದ ಮೇಲಿಳಿಸಿದ ಈ ಎಲ್ಲ, ಒಟ್ಟು ಸೇರಿ ಭಾವೀ-ಗಂಭೀರ ಲೇಖನಗಳಾಗಿದ್ದವು.

ಅದೇನೇ ಇರಲಿ, ಈ ಕಾಲದುದ್ದಕ್ಕೂ ನಾನು ಒಂದು ರೀತಿಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಪ್ರಾರಂಭದಲ್ಲಿ ನಾನು ಬಲು ಬೇಗನೇ, ಸುಲಭವಾಗಿ ಹಾಗೂ ನನ್ನೊಳಗೇ ಅಂತಹ ಸಂತೋಷನ್ನು ಉಂಟುಮಾಡದ ಬರೆಯಲೇಬೇಕೆಂದು ಹಟಹಿಡಿದು ಬರೆದ ಬರವಣಿಗೆಗಳನ್ನು ಮಾಡಿದೆ. ಶಾಲಾ ಕೆಲಸಗಳ ಹೊರತಾಗಿ, ಈಗ ತಿರುಗಿ ನೋಡಿದರೆ, ನನಗೇ ಆಶ್ಚರ್ಯವೆನಿಸುವ ವೇಗದಲ್ಲಿ ದ ಒಕೇಶನ್, ಎನ್ನುವ ಅರೆ-ಹಾಸ್ಯಭರಿತ ಪದ್ಯಗಳನ್ನು ಬರೆದೆ. ಹದಿನಾಲ್ಕನೇ ವಯಸ್ಸಿಗೆ ಒಂದೇ ವಾರದಲ್ಲಿ ಅರಿಸ್ಟೋಫನ್ ಶೈಲಿಯನ್ನನುಕರಿಸಿ ಒಂದಿಡೀ ಪ್ರಾಸ ನಾಟಕವನ್ನು ಬರೆದೆ. ಹಾಗೆಯೇ ಮುದ್ರಣವಾಗುತ್ತಿದ್ದ ಹಾಗೂ ಕೈಬರಹ ರೂಪದ ಎರಡೂ ರೀತಿಯ ಶಾಲಾ ಮ್ಯಾಗಜಿನ್‌ಗಳನ್ನು ಸಂಪಾದನೆ ಮಾಡುವಲ್ಲಿ ಸಹಾಯ ಮಾಡಿದೆ. ಈ ಮ್ಯಾಗಜಿನ್ನುಗಳು ನೀವು ಊಹಿಸಿಕೊಳ್ಳಬಲ್ಲ ಕಾರುಣ್ಯ ಪೂರಿತ ವಿಡಂಬನಾತ್ಮಕ ವಿಷಯಗಳನ್ನು ಒಳಗೊಂಡಿದ್ದವು. ನಾನು ಈಗಿನ ತೀರಾ ಲಘುವಾದ ಪತ್ರಿಕೋದ್ಯಮದಲ್ಲಿ ಮಾಡುತ್ತಿರುವುದಕ್ಕಿಂತಲೂ ತುಂಬ ಸುಲಭವಾಗಿ ಈ ಕೆಲಸವನ್ನು ನಿರ್ವಹಿಸಿದ್ದೆ. ಆದರೆ, ಈ ಎಲ್ಲವುಗಳೊಟ್ಟಿಗೇ, ಹದಿನೈದು ವರ್ಷಗಳಿಗೂ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ, ನಾನು ಬೇರೆಯದೇ ರೀತಿಯ ಸಾಹಿತ್ಯಕ ಅಭ್ಯಾಸಕ್ರಮಗಳನ್ನು ಅಳವಡಿಸಿಕೊಂಡಿದ್ದೆ. ಇದು ನನ್ನನ್ನು ರೂಪಿಸಿಕೊಳ್ಳುವಲ್ಲಿ, ಒಂದು ರೀತಿಯ ಡೈರಿ ಸ್ವರೂಪದ, ಆದರೆ ಕೇವಲ ತಲೆಯಲ್ಲಿಯಷ್ಟೇ ಉಳಿದುಕೊಂಡ ನನ್ನ ಬಗ್ಗಿನ ನಿರಂತರವಾದ ಕತೆ. ಇದು ಮಕ್ಕಳು ಹಾಗೂ ಹದಿವಯಸ್ಸಿನವರಲ್ಲಿ ಸಾಮಾನ್ಯವಾಗಿರುವ ಹವ್ಯಾಸವೆಂದೇ ನಾನು ತಿಳಿಯುತ್ತೇನೆ. ಚಿಕ್ಕ ಮಗುವಾಗಿ ನನ್ನನ್ನು ನಾನು, ರೋಮಾಂಚಕ ಅನುಭವಗಳ ಹೀರೋ ಆದ ರಾಬಿನ್ ಹುಡ್ ಥರಾ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಆದರೇ ಅಷ್ಟೇ ಬೇಗನೆ ನನ್ನ ಕತೆಯು ಹಸಿಹಸಿಯಾದ ಆತ್ಮರತಿಯಲ್ಲಿ ಕೊನೆಗೊಂಡು ನಾನು ಮಾಡುತ್ತಿರುವ ಹಾಗೂ ನೋಡುತ್ತಿರುವ ವಸ್ತು-ವಿಷಯಗಳ ಅತಿಯಾದ ವಿವರಣೆಯನ್ನು ಮಾತ್ರ ಒಳಗೊಂಡಿರುತ್ತಿತ್ತು. ನಿಮಿಷಗಳಕಾಲ ಈ ರೀತಿಯ ವಿಚಾರಗಳು ನನ್ನ ತಲೆಯಲ್ಲಿ ಸುತ್ತುತ್ತಿರುತ್ತಿದ್ದವು: ಅವನು ಬಾಗಿಲನ್ನು ದೂಡಿ ತೆರೆದನು ಹಾಗೂ ಕೋಣೆಯನ್ನು ಪ್ರವೇಶಿಸಿದನು. ಸೂರ್ಯನ ಹಳದಿ ಕಿರಣವು ಮಸ್ಲಿನ್‌ಬಟ್ಟೆಯ ಪರದೆಯನ್ನು ತೂರಿಕೊಂಡು, ಇಂಕ್ ಪಾಟಿನ ಬದಿಯಲ್ಲಿಟ್ಟ ಅರೆತೆರೆದ ಕಡ್ಡಿ ಪೆಟ್ಟಿಗೆ ಇಡಲಾದ ಟೇಬಲ್ಲಿನ ಮೇಲೆ ಬೀಳುತ್ತಿತ್ತು. ಬಲಗೈಯನ್ನು ಕಿಸೆಯಲ್ಲಿ ತೂರಿಕೊಂಡ ಅವನು ಕಿಟಕಿಯ ಕಡೆಗೆ ಚಲಿಸಿದನು. ಕೆಳಗೆ ಬೀದಿಯಲ್ಲಿ ಆಮೆಚಿಪ್ಪಿನ ಬೆಕ್ಕೊಂದು ಸತ್ತ ಎಲೆಯನ್ನು ಬೆನ್ನೆತ್ತಿತ್ತು,ಇತ್ಯಾದಿ.. ಇತ್ಯಾದಿ.. ನನಗೆ ಇಪ್ಪತ್ತೈದು ವರ್ಷಗಳಾಗುವವರೆಗೂ, ನನ್ನ ಅ-ಸಾಹಿತ್ಯಿಕ ವರ್ಷಗಳವರೆಗೂ ಇದು ಮುಂದುವರೆದಿತ್ತು. ಆದಾಗ್ಯೂ ನಾನು ಸರಿಯಾದ ಶಬ್ದಗಳಿಗಾಗಿ ಹುಡುಕಬೇಕಾಗುತ್ತಿತ್ತು, ಹುಡುಕಾಡುತ್ತಿದ್ದೆ ಕೂಡಾ. ನನ್ನ ಮನಸ್ಸಿಗೆ ಬಹುತೇಕ ವಿರುದ್ಧವಾಗಿ, ಹೊರಗಡೆಯ ಒಂದು ರೀತಿಯ ಒತ್ತಾಯಕ್ಕೆ ನಾನು ಈ ವಿವರಣಾತ್ಮಕ ಪ್ರಯತ್ನವನ್ನು ಮಾಡುತ್ತಿರುವಂತೆ ತೋರುತ್ತಿತ್ತು. ಕತೆ, ನನಗನಿಸುವಂತೆ ನಾನು ವಿವಿಧ ವಯಸ್ಸಿನಲ್ಲಿ  ಇಷ್ಟಪಟ್ಟ ಹಲವಾರು ಸಾಹಿತಿಗಳ ಶೈಲಿಯನ್ನು ಪ್ರತಿಬಿಂಬಿಸಿತ್ತು. ಆದರೆ, ನನಗೆ ನೆನಪಿರುವಂತೆ ಅದು ಯಾವಾಗಲೂ ಅದೇ ಅತಿಸೂಕ್ಷ್ಮದ ವಿವರಣಾತ್ಮಕ ಗುಣವನ್ನು ಹೊಂದಿತ್ತು.

ಸುಮಾರು ಹದಿನಾರು ವರ್ಷದವನಿದ್ದಾಗ, ಹಠಾತ್ತಾಗಿ ಕೇವಲ ಶಬ್ದಗಳಲ್ಲಿನ ಆನಂದವನ್ನು, ಅಂದರೆ ಧ್ವನಿ ಹಾಗೂ ಶಬ್ದಗಳ ಸಹಯೋಗವನ್ನು ನಾನು ಕಂಡುಕೊಂಡೆ. ಪ್ಯಾರಾಡೈಸ್ ಲೊಸ್ಟ್ ಪದ್ಯದ ಸಾಲುಗಳು

So hee with difficulty and labour hard
Moved on: with difficulty and labour hee,

ಈಗ ಅಷ್ಟೇನೂ ಆಶ್ಚರ್ಯವಾಗಿ ಕಾಣಲಾರದ್ದು ಆಗ ತುಂಬ ಆಕರ್ಷಣೀಯವಾಗಿತ್ತು, ನನ್ನ ಬೆನ್ನುಹುರಿಯಲ್ಲಿ ಚುಳುಕನ್ನು ಮೂಡಿಸಿತ್ತು, ಅದರಲ್ಲಿಯೂ ಹಿ ಶಬ್ದಕ್ಕೆ ಬದಲಾಗಿ ಹೀ ಯನ್ನು ಉಪಯೋಗಿಸಿದ್ದು ಆನಂದಕ್ಕೆ ಇನ್ನಷ್ಟು ಪುಳಕವನ್ನು ನೀಡಿತ್ತು. ವಿಷಯಗಳನ್ನು ವಿವರಿಸಬೇಕಾದ ಅವಶ್ಯಕತೆಯಿದ್ದಾಗ, ಅದರ ಬಗ್ಗೆ ನನಗಾಗಲೇ ಸಂಪೂರ್ಣ ತಿಳಿವಳಿಕೆ ಇತ್ತು. ಆಕಾಲದಲ್ಲಿ ನಾನು ಬರೆಯಲು ಇಚ್ಛಿಸಿದ ಪುಸ್ತಕಗಳ ಕುರಿತು ಈವರೆಗೂ ಹೇಳಿದುದರಲ್ಲಿ ಅದು ನಿಚ್ಚಳವಾಗಿದೆ. ನಾನು ಅಸಮಾಧಾನದಿಂದ ಕೊನೆಗೊಳ್ಳುವ, ಪೂರ್ಣ ವಿವರಣೆಗಳಿಂದ ಹಾಗೂ ಉಪಮೆಗಳಿಂದ ಭರಿತವಾದ, ಶಬ್ದಗಳನ್ನು ಆಂಶಿಕವಾಗಿ ಅವುಗಳ ಧ್ವನಿಗಳಿಗಾಗಿ ಉಪಯೋಗಿಸುವ ಪರ್ಪಲ್ ಪ್ಯಾಸೇಜುಗಳಿಂದ ಕೂಡಿದ  ಬ್ರಹತ್ತಾದ ನಿಸರ್ಗವಾದಿ ಕಾದಂಬರಿಗಳನ್ನು ಬರೆಯಲು ಇಚ್ಛಿಸಿದ್ದೆ. ವಾಸ್ತವಿಕವಾಗಿ, ನನ್ನ ಮೂವತ್ತನೆಯ ವಯಸ್ಸಿನಲ್ಲಿ ಬರೆದ, ಆದರೆ ಅದಕ್ಕಿಂತಲೂ ಹಿಂದೆಯೇ ಬರೆದದ್ದೆಂದು ಹೇಳಲಾದ ನನ್ನ ಮೊದಲ ಪೂರ್ಣಪ್ರಮಾಣದ ಕಾದಂಬರಿ, ಬರ್ಮಿಸ್ ಡೇಸ್, ಅದಕ್ಕಿಂತ ಹೆಚ್ಚಾಗಿ ಆ ರೀತಿಯ ಪುಸ್ತಕ.

ಈ ಎಲ್ಲ ಪೂರ್ವ ಪೀಠಿಕಾ ಮಾಹಿತಿಗಳನ್ನು ನಾನು ನೀಡುತ್ತಿರುವುದು ಯಾಕೆಂದರೆ, ಸಾಹಿತಿಯೊಬ್ಬನ ಎಳವೆಯ ಪ್ರಗತಿಯನ್ನು ಅರಿಯದೇ ಅವನ ಪ್ರೇರಣೆಗಳನ್ನು ಗುರುತಿಸುವುದು ಸಾಧ್ಯವಿಲ್ಲ ಎಂದು ನಾನು ಭಾವಿಸಿರುವುದರಿಂದ. ಅವನ ವಸ್ತು-ವಿಷಯಗಳು-ಸಾಧಾರಣವಾಗಿ, ನಮ್ಮದೇ ಆದ ಪ್ರಕ್ಷುಬ್ದ, ಕ್ರಾಂತಿಕಾರಕ ಯುಗದಂತೆ, ಅವನು ವಾಸಿಸುವ ಕಾಲಮಾನದ ಆಧಾರದಮೇಲೆ ನಿರ್ಧಾರಿತವಾಗಬಹುದು. ಆದರೆ, ಬರೆಯಲಾರಂಭಿಸುವುದಕ್ಕೂ ಮೊದಲು, ಅವನು ಎಂದೂ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾಗದ ಭಾವನಾತ್ಮಕ ನಡೆನುಡಿಯನ್ನು ಸಾಧಿಸಿಕೊಂಡಿರುತ್ತಾನೆ. ತನ್ನ ಮನೋಧರ್ಮಗಳನ್ನು ಶಿಸ್ತಿಗೊಳಪಡಿಸಿಕೊಳ್ಳುವುದು ಹಾಗೂ ಅಪಕ್ವವಾದ ಹಂತದಲ್ಲಿ ಸಿಲುಕಿಕೊಳ್ಳುವುದನ್ನು ಅಥವಾ ಕೆಲವು ಹಠಮಾರಿ ಸ್ಥಿತಿಗಳನ್ನು ತಪ್ಪಿಸುವುದು ಅವನ ಕೆಲಸ, ಅದರಲ್ಲಿ ಸಂಶಯವೇ ಇಲ್ಲ: ಆದರೆ, ತನ್ನ ಆದಿ ಪ್ರಭಾವಗಳಿಂದ ಅವನು ತಪ್ಪಿಸಿಕೊಂಡರೆ, ಅವನು ಬರವಣಿಗೆಗೆ ಬೇಕಾದ ತನ್ನ ಅಂತಃಪ್ರೇರಣೆಯನ್ನು ಕೊಂದುಕೊಳ್ಳುತ್ತಾನೆ. ಜೀವನ ನಿರ್ವಹಣೆಗೆ ಬೇಕಾದ ಆದಾಯಗಳಿಸುವ ಅವಶ್ಯಕತೆಯ ಹೊರತಾಗಿ, ಯಾವುದೇ ರೀತಿಯ ಗದ್ಯವನ್ನು ಬರೆಯಲು ನಾಲ್ಕು ಉನ್ನತ ಪ್ರಚೋದನೆಗಳು ಇರುತ್ತವೆ ಎಂದು ನಾನಂದುಕೊಂಡಿದ್ದೇನೆ. ಪ್ರತಿಯೊಬ್ಬ ಬರಹಗಾರನಲ್ಲಿಯೂ ಅವು ವಿವಿಧ ಪ್ರಮಾಣದಲ್ಲಿರುತ್ತವೆ ಹಾಗೂ ಯಾವುದೋ ಒಬ್ಬ ಬರಹಗಾರನಲ್ಲಿ ಪ್ರಮಾಣಗಳು ಅವನು ವಾಸಿಸುವ ಪರಿಸರಕ್ಕನುಗುಣವಾಗಿ ಕಾಲಕಾಲಕ್ಕೆ ವ್ಯತ್ಯಾಸ ಕಾಣುತ್ತಿರುತ್ತವೆ.  ಅವುಗಳೆಂದರೆ:
೧.      ಶುದ್ಧಾಂಗವಾದ ಅಹಂಭಾವ. ಬುದ್ಧಿವಂತನಂತೆ ತೋರಗೊಡುವ, ನಾಲ್ಕು ಜನ ತನ್ನನ್ನು ಕುರಿತು ಮಾತನಾಡಬೇಕು ಎನ್ನುವ, ಸಾವಿನ ನಂತರವೂ ಜನ ತನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂಬ, ಬಾಲ್ಯದಲ್ಲಿ ತನ್ನನ್ನು ಅಸಡ್ಡೆ ಮಾಡಿದ ಹಿರಿಯರ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಅಭಿಲಾಷೆ ಇತ್ಯಾದಿ.. ಇತ್ಯಾದಿ.. ಇದು ಪ್ರೇರಣೆ ಹಾಗೂ ಬಲವಾದ ಪ್ರೇರಣೆ ಅಲ್ಲ ಎಂದು ಸೋಗು ಹಾಕುವುದು ಕಪಟತನ. ಬರಹಗಾರರು  ಈ ಗುಣಲಕ್ಷಣವನ್ನು ವಿಜ್ಞಾನಿಗಳು, ಕಲಾವಿದರು, ರಾಜಕಾರಣಿಗಳು, ವಕೀಲರು, ಸೈನಿಕರು, ಯಶಸ್ವೀ ಉದ್ದಿಮೆದಾರರು- ಚಿಕ್ಕದಾಗಿ ಹೇಳಬೇಕೆಂದರೆ, ಉತ್ತುಂಗದಲ್ಲಿರುವ ಇಡೀ ಮನುಕುಲದ ಕೆನೆಪದರದೊಂದಿಗೆ ಹಂಚಿಕೊಂಡಿರುತ್ತಾರೆ. ಇಡಿಯಾದ ಮನುಷ್ಯ ಸಮೂಹ ಯಾವಾಗಲೂ ನಿಜವಾದ ಸ್ವಾರ್ಥಿಯಾಗಿರುವುದಿಲ್ಲ. ಮೂವತ್ತರ ವಯಸ್ಸಿನ ನಂತರ ಅವರು ವೈಯಕ್ತಿಕ ಮಹಾತ್ವಾಕಾಂಕ್ಷೆಯನ್ನು ಬಿಟ್ಟುಬಿಡುತ್ತಾರೆ- ಅನೇಕ ಸಂಗತಿಗಳಲ್ಲಿ, ವಾಸ್ತವವಾಗಿಯೂ, ಅವರು ಬಹುತೇಕವಾಗಿ ತಾವೊಬ್ಬ ವ್ಯಕ್ತಿಯೆಂಬ ಸಂಗತಿಯನ್ನೇ ಮರೆತು ಬಿಟ್ಟಿರುತ್ತಾರೆ- ಹಾಗೂ ಮುಖ್ಯವಾಗಿ ಇತರರಿಗೋಸ್ಕರ ಬದುಕುತ್ತಾರೆ ಅಥವಾ ಕತ್ತೆಚಾಕರಿ ಮಾಡುತ್ತ ಹಾಯಾಗಿರುತ್ತಾರೆ. ಆದರೆ ಅಲ್ಲಿಯೂ ಪಡೆದುಕೊಂಡು ಬಂದಿರುವ, ಕೊನೆಯವರೆಗೂ ತಮಗೆ ಬೇಕಾದಂತೆ ತಮ್ಮ ಬದುಕನ್ನು ಬದುಕುವ ಚಿಕ್ಕದೊಂದು ಅಲ್ಪಸಂಖ್ಯಾತರ ಗುಂಪಿರುತ್ತದೆ. ಬರಹಗಾರರು ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಗಂಭೀರವಾದ ಬರಹಗಾರರು, ನಾನು ಹೇಳಲೇ ಬೇಕು, ಹಣದ ವಿಷಯದಲ್ಲಿ ಕಡಿಮೆ ಆಸಕ್ತಿಯನ್ನು ಹೊಂದಿದವರಾಗಿದ್ದರೂ ಇಡಿಯಾಗಿ ಸ್ವಭಾವದಲ್ಲಿ ಪತ್ರಕರ್ತರಿಗಿಂತಲೂ ಸ್ವಾರ್ಥಿಗಳಾಗಿರುತ್ತಾರೆ.
೨.      ಕಲಾತ್ಮಕತೆಯ ಕುತೂಹಲ. ಹೊರಜಗತ್ತಿನ ಸೌಂದರ್ಯದ ಕಲ್ಪನೆ ಅಥವಾ ಇನ್ನೊಂದು ದೃಷ್ಟಿಯಲ್ಲಿ, ಶಬ್ದಗಳು ಮತ್ತು ಅವುಗಳ ಸರಿಯಾದ ಜೋಡಣೆಯಲ್ಲಿ. ಒಂದು ಉತ್ತಮ ಗದ್ಯದ ನಿರ್ವಿಕಾರತ್ವದಲ್ಲಿ ಅಥವಾ ಒಂದು ಒಳ್ಳೆಯ ಕತೆಯ ಲಯದಲ್ಲಿ ಮತ್ತೊಂದರ ಮೇಲೆ ಒಂದು ಧ್ವನಿಯ ಪರಿಣಾಮದಿಂದುಂಟಾಗುವ ಆನಂದ. ಓರ್ವನು ಮೌಲ್ಯಯುತವಾದದ್ದೆಂದು ಭಾವಿಸುವ ಹಾಗೂ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೆಂದೆನಿಸುವ ಅನುಭವವನ್ನು ಹಂಚಿಕೊಳ್ಳುವ ಅಭಿಲಾಷೆ. ಹಲವಾರು ಬರಹಗಾರರಲ್ಲಿ ಕಲಾತ್ಮಕತೆಯ ಪ್ರೇರಣೆಯು ತುಂಬ ನಿತ್ರಾಣವಾಗಿರುತ್ತದೆ, ಆದರೆ ಒಬ್ಬ ಚಿಕ್ಕ ಬರಹಗಾರ ಅಥವಾ ಪಠ್ಯಪುಸ್ತಕಗಳನ್ನು ಬರೆಯುವವ ಕೂಡ ಅವಕಾಶವಾದಿಯಲ್ಲದ ಕಾರಣಗಳಿಗಾಗಿ ತನಗೆ ಪ್ರಿಯವಾದ ಶಬ್ದಗಳನ್ನು ಹಾಗೂ ನುಡಿಗಟ್ಟುಗಳನ್ನು ಹೊಂದಿರುತ್ತಾನೆ; ಅಥವಾ ಮುದ್ರಣ ಶೈಲಿ, ಮಾರ್ಜಿನ್ನುಗಳ ಅಗಲ ಇತ್ಯಾದಿಗಳ ಕುರಿತು ನಿಖರವಾದ ಭಾವನೆಗಳನ್ನು ಹೊಂದಿರಬಹುದು. ರೇಲ್ವೆ ಗೈಡಿನ ಮಟ್ಟಕ್ಕಿಂತಲೂ ಹೆಚ್ಚಿನದಾಗಿ, ಯಾವ ಪುಸ್ತಕವೂ ಕೂಡ ಕಲಾತ್ಮಕ ಪರಿಗಣನೆಗಳಿಂದ ತೀರ ಹೊರತಾಗಿಲ್ಲ.
೩.      ಐತಿಹಾಸಿಕ ಅಂತಃಪ್ರೇರಣೆ. ವಸ್ತುಗಳನ್ನು ಅವು ಇದ್ದಂತೆಯೇ ಕಾಣುವ, ನಿಜದ ಅಂಶಗಳನ್ನು ಕಂಡುಕೊಳ್ಳುವ ಹಾಗೂ ಅವುಗಳನ್ನು ಪ್ರಗತಿಯ ಉಪಯೋಗಕ್ಕಾಗಿ ಶೇಖರಿಸಿಡುವ ಅಭಿಲಾಷೆ.
೪.      ರಾಜಕೀಯ ಉದ್ದೇಶಗಳು- ರಾಜಕೀಯಈ ಶಬ್ದವನ್ನು ಅತ್ಯಂತ ವಿಶಾಲ ಕ್ಯಾನ್ವಾಸಿನ ಹಿನ್ನೆಲೆಯಲ್ಲಿ ಉಪಯೋಗಿಸುವ ದೃಷ್ಟಿಯಿಂದ. ಜಗತ್ತನ್ನು ಕೆಲ ನಿರ್ದಿಷ್ಟ ದಿಕ್ಕಿನಲ್ಲಿ ದೂಡುವ, ಜನ ಹಾತೊರೆಯುವ ಸಮಾಜದ ರೀತಿಯ ಕುರಿತು ಅವರ ವಿಚಾರಗಳನ್ನು ಬದಲುಮಾಡುವ ಅಭಿಲಾಷೆ. ಮತ್ತೊಮ್ಮೆ ಪುನರುಚ್ಚರಿಸಬೇಕೆಂದರೆ, ಯಾವ ಗ್ರಂಥವೂ ಕೂಡ ನೈಜವಾದ ರಾಜಕೀಯ ಪೂರ್ವಾಗ್ರಹಗಳಿಂದ ಹೊರತಾಗಿಲ್ಲ. ಕಲೆಯು ರಾಜಕೀಯದೊಂದಿಗೆ ಮಾಡುವಂಥಾದ್ದು ಏನೂ ಇಲ್ಲ ಎಂಬ ಅಭಿಪ್ರಾಯವೇ ಒಂದು ರಾಜಕೀಯ ಮನೋಭಾವ.

ಹೇಗೆ ವಿವಿಧ ರೀತಿಯ ಅಂತಃಪ್ರೇರಣೆಗಳು ಒಂದರೊಟ್ಟಿಗೊಂದು ಯುದ್ಧಕ್ಕಿಳಿಯಬೇಕು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಕಾಲದಿಂದ ಕಾಲಕ್ಕೆ ಅವು ಹೇಗೆ ಬದಲಾವಣೆ ಹೊಂದಬೇಕು ಎಂಬುದನ್ನು ನಿಚ್ಚಳವಾಗಿ ಕಾಣಬಹುದಾಗಿದೆ. ನೀವು ಮೊದಲು ದೊಡ್ಡವರಾಗಿ ಬೆಳೆಯುತ್ತಿದ್ದಂತೆಯೇ ನಿಮ್ಮದೇ ಸ್ವಭಾವದ ಬಗ್ಗೆ ಮಾತನಾಡತೊಡಗುವುದು ಸ್ವಾಭಾವಿಕ. ನನ್ನ ವ್ಯಕ್ತಿತ್ವದಲ್ಲಿ, ಬರಹದ ಕುರಿತಾದ ಈ ಮೇಲೆ ಹೇಳಿದ ಮೊದಲ ಮೂರೂ ಪ್ರೇರಣೆಗಳು ನಾಲ್ಕನೆಯದನ್ನು ಮೀರಿಸುತ್ತವೆ. ಶಾಂತವಾದ ವಯಸ್ಸಿನಲ್ಲಿ ನಾನು ಅಲಂಕಾರಮಯ ಅಥವಾ ಕೇವಲ ವಿವರಣಾತ್ಮಕತೆಯಿಂದ ಕೂಡುದ ಪುಸ್ತಕಗಳನ್ನು ಬರೆದಿರಬಹುದು. ರಾಜಕೀಯದ ಕುರಿತಾದ ನನ್ನ ಒಲವಿನಿಂದಾಗಿ ಬಹುತೇಕವಾಗಿ ಅವು ಬಹಳಷ್ಟು ಜನರಿಗೆ ಗೊತ್ತಾಗದೇ ಹೋಗಿರಬಹುದು. ಈಗಿದ್ದಂತೆಯೇ, ಓಮದು ರೀತಿಯ ಒತ್ತಾಯದ ಕಾರಣಕ್ಕಾಗಿ ನಾನು ಒಬ್ಬ ರಾಜಕೀಯ ಗ್ರಂಥಕಾರನಾಗಿ ಬೆಳಕಿಗೆ ಬರಬೇಕಾಯಿತು. ಮೊದಲು, ನಾನು ಐದು ವರ್ಷಗಳ ಕಾಲವನ್ನು ನನಗೆ ಒಗ್ಗದ ವೃತ್ತಿಯಲ್ಲಿ ದುಡಿಯಬೇಕಾಯಿತು. ( ಬರ್ಮಾದಲ್ಲಿದ್ದ ಇಂಡಿಯನ್ ಇಂಪೀರಿಯಲ್ ಪೋಲಿಸ್ ಇಲಾಖೆಯಲ್ಲಿ). ಆ ಮೇಲೆ ನಾನು ಬಡತನವನ್ನು, ಸೋಲಿನ ರುಚಿಯನ್ನು ಅನುಭವಿಸಬೇಕಾಯಿತು. ಇದು ಅಧಿಕಾರದ ಬಗೆಗಿನ ನನ್ನ ಆಕ್ರೋಶವನ್ನು ಹೆಚ್ಚಿಸಿತು. ಅಲ್ಲದೇ, ಕೆಲಸಗಾರ ವರ್ಗವೊಂದರ ಇರುವಿಕೆಯ ಕುರಿತಾಗಿ ಮೊತ್ತಮೊದಲಬಾರಿಗೆ ನನ್ನಲ್ಲಿ ಅರಿವನ್ನು ಉಂಟುಮಾಡಿತು. ಹಾಗೆಯೇ, ಬರ್ಮಾದಲ್ಲಿ ನಾನು ಮಾಡಿದ ಕೆಲಸದ ಅನುಭವವು ಸಾಮ್ರಾಜ್ಯಶಾಹಿಯ ಕುರಿತು ನನಗೆ ಕೆಲಮಟ್ಟಿನ ತಿಳುವಳಿಕೆಯನ್ನು ನೀಡಿತ್ತು. ಅದರೆ ಈ ಅನುಭವಗಳು ನನಗೆ ಒಂದು ಕರಾರುವಾಕ್ಕಾದ ರಾಜಕೀಯ ದೃಷ್ಟಿಕೋನವನ್ನು ನೀಡಲು ಸಾಕಾಗುವಷ್ಟಿರಲಿಲ್ಲ. ಆನಂತರ ಬಂದದ್ದೆಂದರೆ ಹಿಟ್ಲರ್, ಸ್ಪ್ಯಾನಿಶ್ ಸಿವಿಲ್ ವಾರ್, ಇತ್ಯಾದಿ. ೧೯೩೫ರ ಕೊನೆಯ ಹೊತ್ತಿಗೆ ನಾನು ದೃಢವಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಇನ್ನೂ ಸಫಲನಾಗಿರಲಿಲ್ಲ.

೧೯೩೬-೩೭ರಲ್ಲಿ ನಡೆದ  ಸ್ಪ್ಯಾನಿಶ್ ಸಿವಿಲ್ ವಾರ್ ಮತ್ತಿತರ ಘಟನೆಗಳು ನನ್ನ ದಿಕ್ಕನ್ನು ಬದಲಾಯಿಸಿದವು. ತದನಂತರ ನಾನೆಲ್ಲಿ ನಿಂತಿದ್ದೇನೆಂಬುದರ ಅರಿವು ನನಗಾಯಿತು. ೧೯೩೬ ರಿಂದ ನಾನು ಬರೆದ ಗಂಭೀರ ಬರಹಗಳ ಪ್ರತಿಯೊಂದೂ ಸಾಲೂ, ನಾನು ತಿಳಿದುಕೊಂಡಂತೆ, ನೇರವಾಗಿ ಅಥವಾ ಪರೋಕ್ಷವಾಗಿ ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ಅಥವಾ ಪ್ರಜಾಪ್ರಭುತ್ವ ಮಾದರಿಯ ಸಮಾಜವಾದದ ಪರವಾಗಿ ಬರೆದವಾಗಿದ್ದವು.  ನಮ್ಮದೇ ಆದ ಕಾಲಘಟ್ಟದ ಸಂದರ್ಭದಲ್ಲಿ ಈ ರೀತಿಯ ವಸ್ತು-ವಿಷಯಗಳನ್ನು ಬರೆಯಲು ತಪ್ಪಿಸಿಕೊಳ್ಳುವುದು ಶುದ್ಧ ಮತಿಹೀನ ಕೆಲಸವೆಂದೇ ನನಗನ್ನಿಸುತ್ತದೆ. ಪ್ರತಿಯೊಬ್ಬರೂ ಗುರುತು ಮರೆಸಿ ಅಥವಾ ತಲೆತಪ್ಪಿಸಿಕೊಂಡು ಇವುಗಳ ಬಗ್ಗೆ ಬರೆಯುತ್ತಾರೆ. ಯಾವ ಪಕ್ಷವನ್ನು ಓರ್ವನು ವಹಿಸುತ್ತಾನೆ ಹಾಗೂ ಯಾವರೀತಿಯ ಕ್ರಮವನ್ನು ಪಾಲಿಸುತ್ತಾನೆ ಎಂಬುದೇ ಇಲ್ಲಿರುವ ಸರಳ ಪ್ರಶ್ನೆ. ಇದೆಲ್ಲದಕ್ಕಿಂತ ಹೆಚ್ಚಿನದಾಗಿ ಓರ್ವನ ರಾಜಕೀಯ ಪೂರ್ವಾಗ್ರಹವೂ ಇಲ್ಲಿ ಪ್ರಸ್ತುತವಾಗುತ್ತದೆ. ಸೌಂದರ್ಯಾನುಭೂತಿಯನ್ನು ಹಾಗೂ ಬೌದ್ಧಿಕ ಐಕ್ಯತೆಯನ್ನು ತ್ಯಾಗ ಮಾಡದೇ ರಾಜಕೀಯವಾಗಿ ನಾಟಕವಾಡುವ ಸಂಭವವೇ ಇಲ್ಲಿ ಹೆಚ್ಚಾಗಿ ಕಾಣಬರುತ್ತದೆ.

ಕಳೆದ ಹತ್ತುವರ್ಷಗಳ ಉದ್ದಕ್ಕೂ ನಾನು ಹೆಚ್ಚಾಗಿ ಮಾಡಬಯಸಿದ್ದೇನೆಂದರೆ ರಾಜಕೀಯ ಬರವಣಿಗೆಯನ್ನು ಒಂದು ಕಲೆಯನ್ನಾಗಿಸಲು ಪ್ರಯತ್ನಿಸಿದ್ದು. ನನ್ನ ಬರವಣಿಗೆಯ ಪ್ರಾರಂಭದ ಭಾಗವು ಯಾವಾಗಲೂ ಒಂದು ರೀತಿಯ ಸಹಭಾಗಿತ್ವದ ಭಾವನೆಯನ್ನು, ನ್ಯಾಯದ ಪರಿಕಲ್ಪನೆಯನ್ನು ನೀಡುತ್ತದೆ. ನಾನೊಂದು ಪುಸ್ತಕವನ್ನು ಬರೆಯಲು ಕುಳಿತಾಗಲೆಲ್ಲ, ನನಗೆ ನಾನು ಹೇಳಿಕೊಳ್ಳದೇ ಇರುವುದೇನೆಂದರೆ, ನಾನು ಒಂದು ಕಲಾತ್ಮಕವಾದ ಬರವಣಿಗೆಯನ್ನು ಮಾಡುತ್ತಿದ್ದೇನೆ, ಎನ್ನುವುದು. ನಾನೇಕೆ ಅದನ್ನು ಬರೆಯುತ್ತಿದ್ದೇನೆಂದರೆ, ಅಲ್ಲಿ ನಾನು ತೆರೆದು ತೋರಿಸಲಿಚ್ಛಿಸುವ ಶುದ್ಧ ಸುಳ್ಳೊಂದಿದೆ. ಆ ಕೆಲ ಅಂಶಗಳ ಮೇಲೆ ನಾನು ಗಮನವನ್ನು ಸೆಳೆಯಲು ಇಚ್ಛಿಸುತ್ತೇನೆ. ನನ್ನ ಪ್ರಾರಂಭದ ಗಮನವೆಲ್ಲ ಇರುವುದು ಅದನ್ನು ಕೇಳುವ ಕಿವಿಯನ್ನು ಪಡೆದುಕೊಳ್ಳುವುದರಲ್ಲಿ. ಒಂದುವೇಳೆ ಅದು ಸೌಂದರ್ಯಾನುಭೂತಿಯ ಅನುಭವವನ್ನು ನೀಡದೇ ಹೋದರೆ, ಒಂದು ಪುಸ್ತಕವನ್ನು ಬರೆಯುವ ಅಥವಾ ನಿಯತಕಾಲಿಕಕ್ಕೆ ಉದ್ದವಾದ ಒಂದು ಲೇಖನವನ್ನು ಬರೆಯುವ ಬರವಣಿಗೆಯನ್ನು ಮಾಡುವುದು ನನಗೆ ಶಕ್ಯವಿಲ್ಲ. ನನ್ನ ಕೆಲಸವನ್ನು ಪರೀಕ್ಷೆ ಮಾಡಬಯಸುವ ಯಾರೇ ಇರಲಿ, ಪೂರ್ಣಪ್ರಮಾಣದ ರಾಜಕಾರಣಿಯು ಅಪ್ರಸ್ತುತವೆಂದು ಕಡೆಗಣಿಸಬಹುದಾದ ಒಂದು ನಿರ್ಭಿಡೆಯ ತಾತ್ವಿಕ ಪ್ರತಿಪಾದನೆ ಅಲ್ಲಿರುವುದನ್ನು ಕಾಣಬಹುದು. ನಾನು ಬಾಲ್ಯದಲ್ಲಿ ಪಡೆದುಕೊಂಡ ಜಗತ್ತಿನ ಕುರಿತಾದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಇಚ್ಛಿಸುವುದಿಲ್ಲ ಅಥವಾ ಹಾಗೆ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಎಲ್ಲಿಯವರೆಗೆ ನಾನು ಜೀವಂತವಾಗಿರುತ್ತೇನೆಯೋ, ಅಲ್ಲಿಯವರೆಗೂ ಈ ಭೂಮಿಯನ್ನು ಪ್ರೀತಿಸುವ ಹಾಗೂ ಇಲ್ಲಿರುವ ಘನ ವಿಷಯಗಳನ್ನು ಆಸ್ವಾದಿಸುವ ಹಾಗೂ ಉಪಯುಕ್ತವಲ್ಲದ ಮಾಹಿತಿಗಳನ್ನು ತಿರಸ್ಕರಿಸುವ ಗದ್ಯದ ಶೈಲಿಯನ್ನು ನಾನು ಬಲವಾಗಿ ಅನುಭವಿಸುತ್ತೇನೆ.ನನ್ನೊಳಗಿನ ಆ ಭಾಗವನ್ನು ಅದುಮಿಕೊಳ್ಳುವುದರಲ್ಲಿ ಪ್ರಯತ್ನ ಮಾಡುವುದು ಏನನ್ನೂ ಸಾಧಿಸಗೊಡುವುದಿಲ್ಲ. ಪ್ರಾಥಮಿಕವಾಗಿ ಸಾರ್ವಜನಿಕವಾಗಿರುವ, ಈ ಕಾಲಘಟ್ಟವು ನಮ್ಮೆಲ್ಲರ ಮೇಲೆ ಹೇರುವ ಒತ್ತಡವಾದ, ವೈಯಕ್ತಿಕವಲ್ಲದ ಚಟುವಟಿಕೆಗಳ ಮದ್ಯೆ ನನ್ನ ಸ್ವಭಾವರೂಢವಾದ ನನಗೆ ಮೆಚ್ಚುಗೆಯಾಗುವ ಹಾಗೂ ಹಿಡಿಸಲಾರದ ಸಂಗತಿಗಳ ಸಮನ್ವಯಗೊಳಿಸುವ ಕೆಲಸವಾಗಬೇಕಿದೆ.

ಅದಷ್ಟು ಸುಲಭದ ಮಾತಲ್ಲ. ಅದು ನಿರ್ಮಿತಿಯ ಹಾಗೂ ಭಾಷೆಯ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಸತ್ಯದ ಕುರಿತಾದ ಸಮಸ್ಯೆಗಳನ್ನು ಹೊಸದಾದ ದಾರಿಯಲ್ಲಿ ಅದು ತೆರೆದಿಡುತ್ತದೆ. ಅದು ಹುಟ್ಟುಹಾಕುವ ಅಹಿತಕರ ಸಂಕಷ್ಟವನ್ನು ವಿವರಿಸಲು ನಾನಿಲ್ಲೊಂದು ಉದಾಹರಣೆಯನ್ನು ನೀಡುತ್ತೇನೆ. ಸ್ಪ್ಯಾನಿಷ್ ಸಿವಿಲ್ ವಾರಿನ ಕುರಿತಾದ ನನ್ನ ಪುಸ್ತಕ, ಹೋಮೇಜ್ ಟೊ ಕೆಟಲೋನಿಯಾ, ಒಂದು ಶುದ್ಧಾಂಗವಾದ ರಾಜಕೀಯ ಗ್ರಂಥ. ಆದರೆ ಬಹುಮುಖ್ಯವಾಗಿ ಒಂದು ರೀತಿಯ ನಿರ್ಲಿಪ್ತತೆಯಿಂದ ಹಾಗೂ ಆ ರೂಪದ ಬರಹದ ಮೇಲಣ ಗೌರವದಿಂದ ಅದು ಬರೆಯಿಸಿಕೊಂಡಿದೆ. ನನ್ನ ಸಾಹಿತ್ಯಿಕ ಸ್ಫುರಣೆಗಳನ್ನು ಮೀರದೇ ಅಥವಾ ಮುರಿಯದೇ, ಸಂಪೂರ್ಣ ಸತ್ಯವನ್ನು ಹೇಳಲು ಅಲ್ಲಿ ತುಂಬ ಕಷ್ಟಪಟ್ಟಿದ್ದೇನೆ. ಆದರೆ, ಇನ್ನಿತರ ವಿಷಯಗಳಲ್ಲಿ ಅದು ತುಂಬ ದೀರ್ಘವಾದ ಅಧ್ಯಾಯವನ್ನು, ವಿಪುಲವಾದ ಸುದ್ದಿಪತ್ರಿಕೆಗಳ ಹೇಳಿಕೆಗಳನ್ನು ಹಾಗೂ ಪ್ರಾಂಕೋನೊಂದಿಗೆ ಸಂಚುಗಾರಿಕೆಯಲ್ಲಿ ತೊಡಗಿದ್ದರೆಂಬ ಅಪವಾದವನ್ನು ಹೊಂದಿದ ಟ್ರೋಟ್ಸ್‌ಕಿಯಿಸ್ಟ್‌ರನ್ನು ಸಮರ್ಥಿಸಿ ಬರೆಯಲ್ಪಟ್ಟಿದೆ. ಒಂದೆರಡು ವರ್ಷಗಳ ನಂತರ ಸಾಮಾನ್ಯ ಓದುಗನ ಆಸಕ್ತಿಯನ್ನು ಕಳೆದುಕೊಳ್ಳುವ ಈ ರೀತಿಯ ಅಧ್ಯಾಯವು ಖಂಡಿತವಾಗಿಯೂ ಇಡೀ ಗ್ರಂಥವನ್ನು ಹಾಳುಮಾಡುತ್ತದೆ. ನಾನು ತುಂಬ ಗೌರವಿಸುವ ಓರ್ವ ವಿಮರ್ಶಕರೊಬ್ಬರು ಒಂದು ಭಾಷಣವನ್ನು ನನಗೆ ಓದಿಹೇಳಿದರು. ಎಲ್ಲ ವಿಷಯಗಳನ್ನೂ ನೀನಲ್ಲಿ ಏಕೆ ಇಟ್ಟಿರುವೆ?ಎಂದು ಕೇಳಿ ಹೇಳಿದ್ದರು, ಒಂದು ಉತ್ತಮ ಗ್ರಂಥವಾಗಬಹುದಾದ ಪುಸ್ತಕವನ್ನು ನೀನು ಪತ್ರಿಕೋದ್ಯಮದ ಬರವಣಿಗೆಯನ್ನಾಗಿ ಮಾಡಿದ್ದೀಯಾ, ಎಂದು. ಅವರು ಹೇಳಿದ್ದೂ ಕೂಡ ಸತ್ಯವಾಗಿತ್ತು. ಆದರೆ ಆರೀತಿ ಬರೆಯುವುದು ನನಗೆ ಸಾಧ್ಯವಾಗಿರಲಿಲ್ಲ. ಇಂಗ್ಲೆಂಡಿನಲ್ಲಿ ಕೆಲವೇ ಕೆಲವು ಜನರು ತಿಳಿದುಕೊಳ್ಳಲು ಅರ್ಹರಾಗಿದ್ದ, ಮುಗ್ಧ ಗಂಡಸರು ತಪ್ಪಾಗಿ ಅಪರಾಧಿಗಳೆಂದು ಬಿಂಬಿಸಲ್ಪಟ್ಟ ಒಂದು ಸಂಗತಿಯು ನನಗೆ ಹೇಗೋ ಗೊತ್ತಾಯಿತು. ಆ ಕುರಿತು ನಾನು ಕೋಪಗೊಳ್ಳದೇ ಹೋಗಿದ್ದರೆ, ನಾನೆಂದೂ ಆ ಗ್ರಂಥವನ್ನು ಬರೆಯುತ್ತಿರಲಿಲ್ಲ.
ಒಂದಲ್ಲ ಒಂದು ರೀತಿಯಲ್ಲಿ ಈ ಸಮಸ್ಯೆಯು ಮತ್ತೆ ಬರುತ್ತದೆ. ಭಾಷೆಯ ಸಮಸ್ಯೆಯು ಸೂಕ್ಷ್ಮವಾದದ್ದು. ಇದು ಚರ್ಚೆಗೆ ತುಂಬ ದೀರ್ಘವಾದ ಸಮಯವನ್ನು ತೆಗೆದುಕೊಳ್ಳುತ್ತದೆ. ಕಳೆದ ವರ್ಷಗಳಲ್ಲಿ ನಾನು ಕಡಿಮೆ ರಂಜನೀಯವಾಗಿ ಹಾಗೂ ಹೆಚ್ಚು ಕರಾರುವಾಕ್ಕಾಗಿ ಬರೆಯಲು ಪ್ರಯತ್ನಿಸಿದ್ದೇನೆ ಎಂದಷ್ಟೇ ನಾನು ಹೇಳಬಹುದು. ಯಾವುದೇ ಕಾರಣಕ್ಕೂ, ಯಾವುದೇ ರೀತಿಯ ಶೈಲಿಯ ಬರವಣಿಗೆಯಲ್ಲಿ ನೀವು ಪರಿಣತಿ ಪಡೆದುಕೊಂಡ ಸಮಯದಲ್ಲಿಯೂ ಅದನ್ನು ಮೀರಿ ಬೆಳೆದಿರುತ್ತೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ರಾಜಕೀಯ ಉದ್ದೇಶ ಹಾಗೂ ಕಲಾತ್ಮಕ ಉದ್ದೇಶಗಳೆರಡನ್ನೂ ಒಂದಾಗಿ ಹೆಣೆಯಲು, ಸಂಪೂರ್ಣ ಪ್ರಜ್ಞಾಪೂರ್ವಕವಾಗಿ ನಾನೇನು ಮಾಡುತ್ತಿದ್ದೇನೆಂಬುದನ್ನು ನನ್ನ ಮೊದಲ ಪುಸ್ತಕ ಆನಿಮಲ್ ಫಾರ್ಮ್ನಲ್ಲಿ ನಾನು ಪ್ರಯತ್ನಿಸಿದ್ದೇನೆ. ಕಳೆದ ಏಳು ವರ್ಷಗಳಲ್ಲಿ ನಾನು ಕಾದಂಬರಿಯನ್ನೇ ಬರೆಯಲಿಲ್ಲ. ಆದರೆ ಇನ್ನೊಂದನ್ನು ಕೆಲವೇ ದಿನಗಳಲ್ಲಿ ಬರೆಯುವ ಭರವಸೆಯಿದೆ. ಅದು ಸೋಲಾಗಲೆಂದೇ ಇದೆ. ಪ್ರತಿಯೊಂದೂ ಪುಸ್ತಕವೂ ಕೂಡ ಒಂದು ಸೋಲೇ! ಆದರೆ, ನಾನು ಯಾವ ರೀತಿಯ ಗ್ರಂಥವನ್ನು ಬರೆಯಬೇಕೆಂಬುದರ ಕುರಿತ ಕೆಲ ಮಟ್ಟಿನ ಸಾದೃಶ್ಯತೆ ನನಗೆ ಗೊತ್ತಿದೆ.

ಹಿಂದಿನ ಒಂದು ಅಥವಾ ಎರಡು ಪುಟಗಳನ್ನು ಪುನಃ ನೋಡಿದರೆ, ನನ್ನ ಬರವಣಿಗೆಯು ಸಂಪೂರ್ಣವಾಗಿ ಸಾರ್ವತ್ರಿಕ ಉತ್ಸಾಹದಿಂದ ಕಂಡುಬಂದಿರುವ ಪ್ರೇರಣೆಗಳೆಂಬಂತೆ ಮಾಡಿರುವುದನ್ನು ನಾನು ಕಾಣಬಲ್ಲೆ. ಅದೇ ಕೊನೆಯ ಛಾಪಾಗಿ ಉಳಿಯಬೇಕೆಂದು ನಾನು ಬಯಸುವುದಿಲ್ಲ. ಎಲ್ಲ ಬರಹಗಾರರೂ ಪೊಳ್ಳು ಪ್ರತಿಷ್ಠೆಯನ್ನು ಹೊಂದಿರುತ್ತಾರೆ, ಸ್ವಾರ್ಥಿಗಳಾಗಿರುತ್ತಾರೆ, ಹಾಗೂ ಆಲಸಿಗಳಾಗಿರುತ್ತಾರೆ. ಅವರೆಲ್ಲರ ಅಂತಃಪ್ರೇರಣೆಗಳ ಮೂಲದಲ್ಲಿ ಗಾಢವಾದ ಗುಟ್ಟಿರುತ್ತದೆ. ಪುಸ್ತಕವೊಂದನ್ನು ಬರೆಯುವುದು ಭಯಂಕರವಾದದ್ದು, ಬಸವಳಿಯುವಂತಹದ್ದು. ಇದೊಂದು ಹೋರಾಟ, ದೀರ್ಘ ಆವರ್ತಗಳುಳ್ಳ ನೋವಿನಿಂದ ಕೂಡಿರುವ ಅನಾರೋಗ್ಯ ಸ್ಥಿತಿಯಂತೆ. ಯಾವವನು ರಾಕ್ಷಸನನ್ನೊಬ್ಬನನ್ನು ತಡೆದು ಕೊಳ್ಳುವುದು ಅಥವಾ ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲವೋ ಹಾಗೆ ಅಂತಹ ರಾಕ್ಷಸೀ ಶಕ್ತಿಯೊಂದು ಇಲ್ಲದೇ ಹೋದರೆ ಈ ರೀತಿಯ ಬರವಣಿಗೆಯ ಕೆಲಸವನ್ನು ಯಾವಾಗಲೂ ಕೈಗೆತ್ತಿಕೊಳ್ಳಬಾರದು. ಅದೇ ರಾಕ್ಷಸೀ ಸ್ವಭಾವವೇ ಮಗುವಿನ ಕೀರಲು ಕೂಗನ್ನು ಕೂಡಲೇ ಗಮನಿಸುವಂತೆ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಷ್ಟೆಲ್ಲ ಆಗಿಯೂ, ನಿರಂತರವಾಗಿ ತನ್ನದೇ ಸ್ವಂತ ವ್ಯಕ್ತಿತ್ವವನ್ನು ಅಳಿಸಲು ಹೋರಾಟ ಮಾಡದೇ, ಓದಬಹುದಾದ ಬರವಣಿಗೆಯನ್ನು ಮಾಡುವುದು ಸಾಧ್ಯವಿಲ್ಲವೆಂಬುದೂ ಸತ್ಯವಾದ ಸಂಗತಿ. ಒಂದು ಒಳ್ಳೆಯ ಗದ್ಯವೆಂದರೆ ಕಿಟಕಿಯ ಚೌಕಟ್ಟಿನಂತೆ. ನನ್ನ ಯಾವ ಪ್ರೇರಣೆಗಳು ಬಲವತ್ತರವಾಗಿವೆ ಎಂಬುದನ್ನು ನಿಖರವಾಗಿ ನಾನು ಹೇಳಲಾರೆ, ಆದರೆ, ಅವುಗಳಲ್ಲಿ ಯಾವವುಗಳನ್ನು ನಾನು ಅನುಸರಿಸಬೇಕೆಂಬುದು ನನಗೆ ತಿಳಿದಿದೆ. ನನ್ನೆಲ್ಲ ಕೃತಿಗಳನ್ನು ಪುನಃ ಅವಲೋಕಿಸಿದಾಗ, ನಾನು ಬರೆದಿರುವ ಜೀವವಿಲ್ಲದ ಬರಹಗಳಲ್ಲಿ ಏಕರೂಪತೆಯಿಂದ ಕೂಡಿದ, ರಾಜಕೀಯ ಉದ್ದೇಶಗಳ ಕೊರತೆಯಿರುವ ಹಾಗೂ ಪರ್ಪಲ್ ಪ್ಯಾಸೇಜುಗಳಲ್ಲಿ ನಿಷ್ಠೆ ತಪ್ಪಿರುವ, ಅರ್ಥವೇ ಇಲ್ಲದ ವಾಕ್ಯಗಳನ್ನು ರಚಿಸಿರುವ, ಅಲಂಕಾರಿಕ ವಿಶೇಷಣಗಳು ಹಾಗೂ ಸಾಮಾನ್ಯವಾಗಿ ಅಸಂಬದ್ಧವಾಗಿರುವ  ಎಲ್ಲವನ್ನೂ ನಾನು ನೋಡಬಲ್ಲೆ.