“ನೆವಾ ಹೇಳ್ಕೋತಾ ಬರ್ಬೇಡಾ
ಮತ್ತೆ. ಹೂಂ....ಸರಿ ಕಣಯ್ಯಾ.... ಈಗ್ ಹೋಗಿ ಕ್ಲಾಸು ಅಟೆಂಡ್ ಮಾಡು...” ಕನಸಿನಲ್ಲೂ ಕಾಡುವ ಬಾಲುಸರ್
ಮಾತುಗಳು!
“ಏಯ್
ಭಟ್ಟಾ... ಸರಿ ಕ್ಲಾಸಿಗ್ ಬಾರಯ್ಯಾ... ಕಲಿಯೋ ಕಾಲಕ್ಕೆ ಸರ್ಯಾಗಿ ಕಲ್ತಕೋಬೇಕು. ಆಮೇಲೆ ಬುದ್ಧಿ
ಬಂದ್ರೆ ಏನ್ಬಂತು. ಪಿಟಿಐ ಕಾಪಿ ಟ್ರಾನ್ಸ್ಲೇಶನ್ ಮಾಡ್ತಾ ಇದೀಯಾ? ನಿಮ್ಗೆ ಇವತ್ ಗೊತ್ತಾಗೋದಿಲ್ಲ.
ನಾನೂಂದ್ರೆ ಬರೆ ಬಯ್ಕೋತಾ ಇರೋಂವಾ ಅಂತಾ ತಿಳ್ಕೋತೀರಯ್ಯಾ. ವಿದ್ಯಾಸಮಾಚಾರ ಏನಾಯ್ತು? ಮುಂದಿನ್ ವಾರಾ
ಪ್ರಿಂಟಾಗಿ ಬರ್ಲೇ ಬೇಕು ನೋಡು. ನೆವಾ ಹೇಳ್ಬೇಡಾ ಮತ್ತೆ. ಹೂಂ... ಸರಿ ಕಣಯ್ಯಾ... ಈಗ್ ಹೋಗಿ ಕ್ಲಾಸು
ಅಟೆಂಡ್ ಮಾಡು...” ಇದು ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಓದುವಾಗ ಎಂ.ಎ. ಮೊದಲ ವರ್ಷದ ಉತ್ತರಾರ್ಧದಲ್ಲಿ ಬಾಲು ಸರ್
ನನಗೆ ಹೇಳಿದ್ದ ಮಾತು! ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ!
ತುಂಬ
ನೇರ ಸ್ವಭಾವದ, ನೋಡಲು ಕೊಂಚ ಒರಟು ಎನ್ನಿಸಿದರೂ ಅಪ್ಪಟ ಸ್ವಚ್ಛ ಹೃದಯದ ಬಾಲುಸರ್ ಅವರ ವಿದ್ಯಾರ್ಥಿಗಳ ಮೇಲಿನ ಕಾಳಜಿ ಯಾವತ್ತೂ ಕಡಿಮೆಯಾಗಿಲ್ಲ. ಬಹುಶಃ ಕರ್ನಾಟಕ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ
ಓದಿದ ಎಲ್ಲರ ಅನುಭವವೂ ಇದೇ ಆಗಿರುತ್ತದೆ ಎಂಬುದು ನನ್ನ ಬಲವಾದ ನಂಬಿಕೆ.
ನಾನು
ಎಂ.ಎ.ಮಾಡುವ ಕಾಲಕ್ಕೆ ನಂದು ಇನ್ನೂ ಎಳಸು ಬುದ್ಧಿ. ಹುಡುಗಾಟಿಕೆಯ ಕಾಲ! ಬಾಲು ಮಾಸ್ತರ್ ಬಂದ್ರು
ಅಂದ್ರೆ, ‘ಬಯ್ಯೋ ಮಿಶನ್ ಬಂದಾಂಗೆ’ ಅಂತಾ ತಮಾಷೆ ಮಾಡ್ಕೋತಿದ್ವಿ. ಬಯ್ಕೋತಾ ಬಯ್ಕೋತಾನೇ ಅವರು ಕೊಟ್ಟಿದ್ದ
ಅಸೈನ್ಮೆಂಟುಗಳನ್ನ ಮಾಡ್ತಿದ್ವಿ. ಆದರೆ ಈಗ ಅವರ ಕಾಳಜಿ ಅರ್ಥ ಆಗ್ತಿದೆ. ಇವತ್ತು ಬದುಕಿನ ದಾರಿಯಲ್ಲಿ
ಅಂದು ಬಾಲು ಸರ್ ಹೇಳಿದ ಅದೆಷ್ಟೋ ಸಂಗತಿಗಳು ನೈಜವಾಗಿ ಎದುರಾದಾಗ, ಸಮರ್ಥವಾಗಿ ಎದುರಿಸುವುದು ಹೇಗೆಂಬ
ಧೈರ್ಯ ಮೂಡಲು ಪ್ರಾಯಶಃ ಅವರ ಕಾಳಜಿ ಮತ್ತು ಅಂತಃಕರಣ ಪೂರ್ವಕವಾದ ಬುದ್ಧಿ ಮಾತುಗಳು ದಾರಿಯ ಬುತ್ತಿಯಾಗಿ
ನೆರವಿಗೆ ಬರುತ್ತಿರುವ ಈ ಸಂದರ್ಭದಲ್ಲಿ ಬಾಲು ಸರ್ ಬಗ್ಗೆ ಗೌರವ ಇನ್ನೂ ಹೆಚ್ಚಾಗುತ್ತದೆ.
ಪತ್ರಿಕೋದ್ಯಮ
ಎಂ.ಎ ಮೊದಲ ವರ್ಷದ ನಂತರ ಇಂಟರ್ನ್ ಶಿಪ್ ಗಾಗಿ ಮುಂಬೈ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೋಗಬೇಕೆಂಬ
ಆಲೋಚನೆಗೆ ಒತ್ತು ನೀಡಿದವನು ಗೆಳೆಯ, ಸಹಪಾಠಿ, ಮನೋಜ್ ಕುಮಾರ್. ಅಲ್ಲಿನ ವಸತಿ ಸಮಸ್ಯೆಯನ್ನು ನಿಭಾಯಿಸಲು
ಸಹಾಯ ಮಾಡಿದವನು ನನ್ನ ಸಹೋದರ ವೆಂಕಟ್ ರಮಣ್. ಈ ಪೂರ್ವಸಿದ್ಧತೆಗಳೊಂದಿಗೆ ಬಾಲು ಸರ್ ಅವರನ್ನು ಪರ್ಮಿಷನ್
ಕೇಳಲು ಹೋದಾಗ, “ಪರ್ವಾಗಿಲ್ವಯ್ಯಾ, ನಿನ್ ಧೈರ್ಯಕ್ಕೆ ಮೆಚ್ಕೋಬೇಕು. ಏನೂ ಗೊತ್ತೇ ಇಲ್ಲದ ಮುಂಬೈಗೆ
ಹೋಗ್ತೀಯಾ ಅಂದ್ರೆ ಅದು ಸಣ್ಣ ಮಾತಲ್ಲ. ಹೊರಗಡೆ ಹೋಗ್ಬೇಕು ಕಣಯ್ಯಾ. ಆವಾಗ್ಲೇ ಬದುಕು ಅರ್ಥ ಆಗೋದು.
ಹೋಗ್ ಬನ್ನಿ. ನಮ್ಮ ವಿಶ್ವವಿದ್ಯಾನಿಲಯದಿಂದ ಮೊದಲನೇ ಬಾರಿಗೆ ಮುಂಬೈಗೆ ಹೋಗ್ತಾ ಇದ್ದೀರಿ. ಯಾಕೆ
ಹೋಗ್ತಾ ಇದ್ದೀರಿ ಅಂತಾ ನೆನಪಿಟ್ಕೊಳ್ಳಿ. ಚೆನ್ನಾಗಿ ಕಲ್ತುಕೊಂಡ್ ಬನ್ನಿ. ಹುಡುಗಾಟಾ ಮಾಡ್ಲಿಕ್ಕೆ
ಹೋಗ್ಬೇಡಿ. ಒಳ್ಳೇದ್ ಆಗ್ಲಿ ಕಣಯ್ಯಾ”, ಅಂತ ಹೇಳಿ ಪರ್ಮಿಷನ್ ಮತ್ತು ರಿಕ್ವೆಸ್ಟ್ ಲೆಟರ್ ಕೊಟ್ಟಿದ್ದರು.
ಮುಂದೆ ನಾನು, ಮನೋಜ ಇಬ್ರೂ ಮುಂಬೈ ಎಂಬ ಮಾಯಾ ನಗರಿಯಲ್ಲಿ ಠಾಣೆಯಲ್ಲಿರುವ ನನ್ನ ಸಹೋದರನ ಮನೆಯಿಂದ ಚರ್ಚ್ ಗೇಟ್ ನಲ್ಲಿರುವ
ಎಕ್ಸ್ ಪ್ರೆಸ್ ಕಛೇರಿವರೆಗೆ ದಿನಾಲೂ ನಾಲ್ಕರಿಂದ ಐದು ತಾಸು ಲೋಕಲ್ ಟ್ರೇನಿನಲ್ಲಿ ಅಡ್ಡಾಡ್ತಾನೇ,
ಮೊದಲು ತೀರಾ ಅಪರಿಚಿತವಾಗಿದ್ದ ಮುಂಬೈ ಎಂಬ ಮಾಯಾ ನಗರಿಯ ಮಾಯಾಜಾಲದಲ್ಲಿ ಬದುಕುವುದು ಹೇಗೆ ಎಂಬ ಪ್ರಾಥಮಿಕ
ಪಾಠವನ್ನು ಕಲಿತೆವು! ಇಂಟರ್ನ್ ಶಿಪ್ ಮುಗಿಯುವದರೊಳಗಾಗಿ ಅಂದಿನ ಸಂಪಾದಕ ವಿವೇಕ್ ರಾವ್ ಮತ್ತು ನಮಗೆ
ನಿಜವಾಗಿಯೂ ಎಡಿಟಿಂಗ್ ಕೆಲಸ ಕಲಿಸಿದ ಮ್ಯಾಸ್ಕಿ (ಮ್ಯಾಸ್ಕರ್ಹಾನಸ್), ಕ್ರೈಂ ರಿಪೋರ್ಟಿಂಗಿನ ಓನಾಮ
ಹಾಕಿಕೊಟ್ಟ ಜೇ ಡೇ, ತುಂಬ ಆತ್ಮೀಯರಾಗಿಬಿಟ್ಟಿದ್ದರು. ವಿವೇಕ್ ರಾವ್ ಅಂತೂ ಡಿಗ್ರಿ ಮುಗಿಸಿದ ಕೂಡಲೇ
ಬಂದು ಮುಂಬೈ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿಗಾರರಾಗಲು ಸೂಚಿಸಿದ್ದರು. ಇದಕ್ಕೆಲ್ಲ ಬಾಲು
ಸರ್ ಅವರ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳೆಡೆಗೆ ಅವರಿಗಿರುವ ಕಳಕಳಿ ಕಾರಣವೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ವಿಶ್ವವಿದ್ಯಾನಿಲಯದ ಬೋಧನಾ ಕೊಠಡಿಯೊಳಗಿನಕಿಂತಲೂ ವಿದ್ಯಾರ್ಥಿಗಳು ಬಯಲೆಂಬ ವಿಶ್ವವಿದ್ಯಾಲಯದಲ್ಲಿ
ಜೀವನ ಪಾಠ ಕಲಿತುಕೊಳ್ಳಬೇಕು ಎಂಬುದು ಅವರ ನಿಲುವು.
ಮುಂದೆ
1999ರಲ್ಲಿ ನನ್ನ ಎಂ.ಎ. ವಿದ್ಯಾಭ್ಯಾಸ ಮುಗಿಯುವವರೆಗೂ ನಾನು ನೊಟೋರಿಯಸ್ ವಿದ್ಯಾರ್ಥಿಗಳ ಪೈಕಿ ಒಬ್ಬವನೆಂದು
ಗುರುತಿಸಲ್ಪಟ್ಟು, ಸೆಕೆಂಡ್ ಕ್ಲಾಸ್ನಲ್ಲಿ ಪಾಸಾದ ಬರ್ಬಾದ್ ಗಿರಾಕಿ ಎಂದು ಅದಾಗಲೇ ಎಸ್ಟಾಬ್ಲಿಷ್
ಆಗಿಬಿಟ್ಟಿತ್ತು! ನಾನು ಎಂ.ಎ.ಫೈನಲ್ ನಲ್ಲಿ ಉತ್ತರ ಕನ್ನಡ ಪತ್ರಿಕೋದ್ಯಮ ಪಿತಾಮಹ, ಕನ್ನಡದ ಚುಟುಕ
ಬ್ರಹ್ಮ ದಿನಕರ ದೇಸಾಯಿ ಅವರ ‘ಜನಸೇವಕ’ ಪತ್ರಿಕೆಯ ಮೇಲೆ ಮಾಡಿದ ಡೆಸರ್ಟೇಶನ್ ಓದಿದ ಅಂದಿನ ಪತ್ರಿಕಾ
ಅಕಾಡೆಮಿಯ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜರು, “ತುಂಬ ಚೆನ್ನಾಗಿದೆ. ಇದನ್ನು ‘ಪತ್ರಿಕಾ ಲೋಕದ
ಧೀಮಂತರು’ ಮಾಲಿಕೆಯಲ್ಲಿ ಪ್ರಕಟಿಸಬಹುದಲ್ಲ”, ಎಂದು ಹೇಳಿದ್ದಷ್ಟೇ ಅಲ್ಲ 2001ನೇ ಇಸ್ವಿಯಲ್ಲಿ ಪ್ರಕಟಿಸಿಯೂ
ಬಿಟ್ಟರು! ಅದರ ಒಂದು ಪ್ರತಿಯನ್ನು ಕೊಡಲು ಪತ್ರಿಕೋದ್ಯಮ ವಿಭಾಗಕ್ಕೆ ಹೋದಾಗ ಅತ್ಯಂತ ಖುಷಿಪಟ್ಟ ಬಾಲು ಸರ್ ಮತ್ತು ಅದೇ ಮೊದಲ ಬಾರಿಗೆ
ಅವರ ಮುಖದಲ್ಲಿ ಹೆಮ್ಮೆಯ ನಗುವನ್ನು ನೋಡಿದ ನನಗೆ ಹೃದಯ ತುಂಬಿಬಂದಿತ್ತು.
ಇವತ್ತಿಗೂ
ಆಗಾಗ ಸಿಕ್ಕಾಗ, ದೂರವಾಣಿಯಲ್ಲಿ ಅಪರೂಪಕ್ಕೊಮ್ಮೆ ಮಾತನಾಡುವಾಗ, “ ಹಾಂ, ಹೇಳಯ್ಯಾ, ಏನ್ ಹೊಸಾ ಸಾಹಸಾ
ಮಾಡಿದೀಯಾ?” ಅಂತಾನೇ ಮಾತಿಗೆ ಶುರುವಿಟ್ಟುಕೊಳ್ಳುವ ಬಾಲು ಸರ್ ಆಪ್ತರೆನಿಸಿಬಿಡುತ್ತಾರೆ. ಪತ್ರಿಕೋದ್ಯಮ
ವಿಷಯದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಪ್ರಾರಂಭ ಮಾಡಿದ ನಂತರ ನಾನು ಸ್ಥಳೀಯ ಪತ್ರಿಕೆಯೊಂದರಲ್ಲಿ
ಉಪಸಂಪಾದಕ, ವರದಿಗಾರನಾಗಿ, ನಂತರ ಬೆಂಗಳೂರಿನಲ್ಲಿ ‘ದ ಮುಂಬೈ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ
ವಾಣಿಜ್ಯ ವಿಭಾಗದ ಪತ್ರಿಕೆಗಳ ಹಿರಿಯ ವರದಿಗಾರನಾಗಿ, ಕಾರ್ಪೋರೇಟ್ ಕಂಪನಿಗಳಲ್ಲಿ ಉತ್ತರ ಕರ್ನಾಟಕದ
ಎಚ್.ಆರ್. ಮತ್ತು ಟ್ರೇನಿಂಗ್ ವಿಭಾಗಗಳ ಮುಖ್ಯಸ್ಥನಾಗಿ, ಸಧ್ಯ ಪಬ್ಲಿಕ್ ರಿಲೇಶನ್ ಮತ್ತು ಕಾರ್ಪೋರೇಟ್
ಕಮ್ಯೂನಿಕೇಶನ್ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕನಾಗಿ, ಜೊತೆಗೆ ಸ್ವತಂತ್ರವಾಗಿ ನನ್ನ ಕ್ಷೇತ್ರದಲ್ಲಿ
ಅನುಭವಿ ಅನುವಾದಕನೆಂದು ಗುರುತಿಸಲ್ಪಟ್ಟು ನನ್ನ ಜೀವನೋಪಾಯದ ದಾರಿಯನ್ನು ಕಂಡುಕೊಂಡಿದ್ದೇನೆ. ಇದಕ್ಕೆಲ್ಲ
ಪೂರಕವಾಗಿ ನನ್ನ ಮೇಲೆ ಕಾಳಜಿ ತೋರಿದ, ಪ್ರೀತಿಯಿಟ್ಟಿರುವ ಬಾಲು ಸರ್ ಹಾಗೂ ಅವರಂತಹ ಅನೇಕ ವಿದ್ಯಾಗುರುಗಳ
ಶುಭೇಚ್ಛೆ ಬೆನ್ನೆಲುಬಾಗಿದೆ ಎಂಬುದು ನನಗೆ ಖಂಡಿತವಾಗಿಯೂ ಅರಿವಿಗೆ ಬಂದಿದೆ.
ಕರ್ನಾಟಕ
ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವನ್ನು ಸಮರ್ಥವಾಗಿ ಕಟ್ಟಿ, ಬೆಳೆಸಿ,
ಮುನ್ನಡೆಸಿದ ಬಾಲು ಸರ್ ಇವತ್ತು ದೇಶದಾದ್ಯಂತ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಅವರೆಲ್ಲರೂ ಒಂದಲ್ಲ
ಒಂದು ರೀತಿಯಲ್ಲಿ ಬಾಲು ಸರ್ ಅವರ ಪ್ರೀತಿ, ಕಾಳಜಿ ಕಳಕಳಿಯನ್ನು ಅನುಭವಿಸಿದ್ದಾರೆ. ಅವರು ಇಂದು ವೃತ್ತಿಯಿಂದ
ನಿವೃತ್ತಿಯನ್ನು ಹೊಂದುತ್ತಿದ್ದರೂ ಅವರು ನಮ್ಮಲ್ಲಿ ನೆಟ್ಟು ಬೆಳೆಸಿದ ಜೀವನ ಮೌಲ್ಯಗಳ ಬೀಜಗಳು ಎಂತಹ
ಪರಿಸ್ಥಿತಿಯಲ್ಲೂ ಹುಸಿಹೋಗಲಾರವು. ನಮ್ಮ ಬದುಕಿನಲ್ಲಿ ಬೆಳಕಿನ ದೀಪವಾಗಿ ನಾವು ಸರಿದಾರಿಯಲ್ಲಿ ಮುಂದೆ
ಮುಂದೆ ಸಾಗಲು ಬಾಲು ಸರ್ ಅವರ ‘ಗಂಭೀರ ಗಂಟು ಮುಖ’ ನಮ್ಮನ್ನು ಸದಾ ಕಾಡುತ್ತಿರುತ್ತದೆ, ಕಾಪಾಡುತ್ತಿರುತ್ತದೆ
ಎಂಬ ಅಂಬೋಣ ನನ್ನದು.
-ವಸಂತ
********