Friday, August 22, 2014

ಮನಸ್ಸು ಭಾವುಕವಾಗಿದೆ. ಮೇಷ್ಟ್ರೇ...... ನೀವು ಹೋಗಿಬಿಟ್ಟಿರಿ....... ಅನಂತ... ಆಕಾಶಕ್ಕೆ!


ಅನಂತಮೂರ್ತಿ ಅವರು ತೀವ್ರ ಅಸ್ವಸ್ಥಸ್ಥಿತಿಯಲ್ಲಿದ್ದಾರೆ ಎಂಬ ಫೇಸ್ ಬುಕ್ ಸ್ಟೇಟಸ್ ತಿಳಿದು ಬಂದಿದ್ದು  ಹೊತ್ತು ನಡು ಮದ್ಯಾಹ್ನ. ಆಗಿನಿಂದಲೂ ಒಂದು ರೀತಿಯ ಅವ್ಯಕ್ತ ಕಸಿವಿಸಿ, ತಳಮಳ ನನ್ನನ್ನಾವರಿಸಿತ್ತು. ಅವರು ನನ್ನ ತಲೆಮಾರಿನ ಹುಡುಗರಿಗೆಲ್ಲ ಮೇಷ್ಟ್ರೇ! ಇಡೀ ಪರಂಪರೆಯ ಸಾಕ್ಷಿಪ್ರಜ್ಞೆಯಾಗಿ ಹಲವಾರು ವಿಧಗಳಲ್ಲಿ ನಮ್ಮಂತಹವರನ್ನು ಕಾಡಿದವರು, ಕಾಪಾಡಿದವರೂ ಕೂಡ! ಮೇಷ್ಟ್ರ ಏನೆಲ್ಲ ಗುಣದೋಷಗಳನಡುವೆಯೂ ಅವರೊಳಗಿನ ಮಗುಸಹಜ ಭಾವದ ಮೂಲಕ ನಮ್ಮನ್ನೆಲ್ಲ ನಿರಂತರವಾಗಿ ಕಾಪಿಡುವ  ತಾಯಿಯ  ಗುಣುದ ಕಾರಣಕ್ಕಾಗಿಯೇ ನನಗೆ ಅವರು ಬಹುಮುಖ್ಯರೆನಿಸುತ್ತಾರೆ. ಅವರ ನಿಧನವನ್ನು ನನಗಿನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಯು.ಆರ್.ಅನಂತಮೂರ್ತಿ ನನಗೆ ಪರಿಚಯವಾಗಿದ್ದು ಅವರ ಘಟಶ್ರಾದ್ಧ ಸಿನಿಮಾದ ಮೂಲಕ. ನಾನಾಗ ಪ್ರೈಮರಿ ಶಾಲೆಯ ನಾಲ್ಕೋ ಐದನೆಯ ತರಗತಿಯ ವಿದ್ಯಾರ್ಥಿ. ನಮ್ಮೂರಿನ ಹೈಸ್ಕೂಲಿನಲ್ಲಿ ನೀನಾಸಂ ಸಹಯೋಗದೊಂದಿಗೆ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು. ಅದನ್ನು ಅರ್ಥ ಮಾಡಿಕೊಳ್ಳುವ ವಯಸ್ಸೇನೂ ಅಲ್ಲ ಅದು.ಆದರೂ ಆ ಸಿನಿಮಾ ನೋಡುತ್ತ  “ನಾಣೀ.... ಹಾವೂ....” ಎಂದು ಕೂಗಿದ್ದು ಮಾತ್ರ ಇನ್ನೂ ನೆನಪಿದೆ!   
ಆ ನಂತರದಲ್ಲಿ ಏಳು-ಎಂಟನೇ ತರಗತಿಯ ಸುಮಾರಿಗೆ ಜಿ.ಕೆ.ಮಾಸ್ತರರ ಪ್ರಭಾವದಿಂದಾಗಿ ಅವರ ಸಂಸ್ಕಾರ, ಭಾರತೀಪುರ, ಅವಸ್ಥೆ ಮುಂತಾದ ಕಾದಂಬರಿಗಳನ್ನು ಓದಿದ್ದರೂ ಅವರು ನನ್ನನ್ನು ಕಾಡತೊಡಗಿದ್ದು ಈಗೊಂದು ಐದಾರು ತಿಂಗಳ ಹಿಂದೆ ಮಾತ್ರ!  ಇಂಗ್ಲೀಷ್ ಎಂ.ಎ.ಓದುವಾಗ ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯವನ್ನು ಹೊಸದಾಗಿ ಓದಿದಾಗ! ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅವರ ಮಾತುಗಳನ್ನು ಕೇಳಿಸಿಕೊಂಡಾಗ! ಈ ಮನುಷ್ಯ ಜೀವಿತವಿದ್ದ ಕಾಲದಲ್ಲಿ ನಾವೂ ಇದ್ದೇವಲ್ಲ. ಅದರಲ್ಲೂ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದೇವಲ್ಲ ಎಂಬ ಪುಳಕ ಹೇಳಲು ಬರುವುದಿಲ್ಲ.
ಅನಂತಮೂರ್ತಿ ನಮಗೆ ಹತ್ತಿರವೆನಿಸುವಂತಾಗಿದ್ದು ಹೆಗ್ಗೋಡಿನ ಮೂಲಕ. ಮೊತ್ತಮೊದಲ ಸಲ ನಾನು ಅವರನ್ನು ನನ್ನ ಎಂಟನೆಯ ತರಗತಿಯಲ್ಲಿರುವಾಗ ಕಂಡಿದ್ದು ಹೆಗ್ಗೋಡಿನಲ್ಲಿ! ಒಂದು ರೀತಿಯ ಆರಾಧನೆ... ಒಂದು ರೀತಿಯ ಗೌರವದ ಭಾವವದು. ದೂರದಿಂದಲೇ ಅವರನ್ನು ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ನಿರಂತರವಾಗಿ ಗಮನಿಸುತ್ತ ಅವರ ಸುತ್ತಮುತ್ತಲೇ ಸುಳಿದಾಡುತ್ತ ತುಸು ದೂರದಿಂದಲೇ ಗಮನಿಸುತ್ತಿದ್ದೆ.ಆದರೆ... ಮಾತನಾಡಿಸುವ ಧೈರ್ಯವಾಗಿರಲಿಲ್ಲ! ನಮ್ಮ ತಂದೆಯವರು ಅವರಿಗೆ ಸುಮಾರು ವರ್ಷಗಳಿಂದಲೂ ಆಪ್ತರು.  ತಂದೆಯವರ ಹೆಸರು ಹೇಳಿಕೊಂಡು ‘ಇಂತವರ ಸಂಬಂಧಿಕರು’ ಎಂದು ಪರಿಚಯಿಸಿಕೊಂಡು ಅವರ ಹತ್ತಿರ ಬಹಳೇ ಸಲುಗೆಯಿಂದ ಮಾತಾನಾಡುತ್ತಿರುವವರನ್ನು ಗಮನಿಸಿಯೂ, ನಾನೂ “ಇಂತವರ ಮಗ” ಎಂದು ಹೇಳಿಕೊಂಡು ಅವರನ್ನು ಮಾತನಾಡಬೇಕೆಂದು, ಹತ್ತಿರದಿಂದ ಒಡನಾಡಬೇಕೆಂದು  ಅನಿಸಿತ್ತಾದರೂ, ಏಕೋ ಏನೋ ಮುಜುಗರ ಪಟ್ಟುಕೊಂಡು ದೂರ ಸರಿದಿದ್ದೆ!
ಆದರೆ ಇತ್ತೀಚೆಗೆ ಆರು ತಿಂಗಳ ಹಿಂದೆ ಅವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸುದೀರ್ಘವಾಗಿ ಮಾಡಿದ ಪನ್ಯಾಸವನ್ನು ಕೇಳಿದ ಮೇಲೆ, ತಡೆಯಲಾರದೆ ಓಡಿ ಹೋಗಿ ಅವರ ಕೈಯನ್ನು ಹಿಡಿದು “ಗುರುಗಳೇ, ಭೀಮಸೇನ ಜೋಶಿಯವರ ದರ್ಬಾರಿ ಕಾನಡಾ ಕೇಳಿದ ಹಾಗಾಯಿತು”, ಅಂತ ಹೇಳಿ ಬಂದಿದ್ದೆ! ತಿಪಟೂರಿನ ಸ್ನೇಹಿತ ಗಂಗಾಧರಯ್ಯ ನೀಡಿದ ಅವರ ದೂರವಾಣಿ ಸಂಖ್ಯೆಗೆ ಸುಮಾರು ಹದಿನೈದು ದಿನಗಳ ನಂತರ ಒಮ್ಮೆ ಮಾತನಾಡಿದಾಗ “ ಯಾರಯ್ಯಾ ನೀನು? ಇಷ್ಟು ಚೆನ್ನಾಗಿ ಮಾತನಾಡುತ್ತೀಯಾ? ಯಾವೂರು ನಿಂದು ಅಂತ ಕೇಳಿದ್ದರು! ಆಗ ನಾನು ಮಲೆನಾಡಿನವನು. ಇಂತವರ ಮಗ ಎಂದು ಹೇಳಿದಾಗ, “ಏನಯ್ಯಾ ಮೊದಲೇ ಹೇಳಬಾರದಿತ್ತೇನು? ನಿನ್ನಪ್ಪ ನನಗೆ ಬಹಳ ಆತ್ಮೀಯ. ನನ್ನ ಪ್ರೀತಿಯ ಗಾಯಕರಲ್ಲಿ ಒಬ್ಬ. ಅದ್ಭುತ ಪ್ರತಿಭಾವಂತ. ಒಂದೆರಡು ವರ್ಷಗಳ ಹಿಂದೆ ನಿಮ್ಮೂರು ಮಂಚೀಕೇರಿಯಲ್ಲಿ ನನಗಾಗಿ ಆತ ಹಾಡಿದ ತರಾನಾಗಳು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ” ಎಂದೆಲ್ಲ ಆತ್ಮೀಯವಾಗಿ ಹರಟಿ ‘ಹೇಗಿದ್ದಾರೆ ನಿಮ್ಮಪ್ಪ? ಅವರಿಗೆ ನಾನು ಕೇಳಿದ್ದೇನೆ ಎಂದು ಹೇಳು. ನಿನ್ನ ಹೆಂಡತಿ  ಚೆನ್ನಾಗಿ ಬರೀತಾಳಪ್ಪ. ಇಬ್ಬರೂ ಮನೆಗೆ ಬನ್ನಿ” ಎಂದು ಹೇಳಿದಾಗ ನಾನು ಮೂಕವಿಸ್ಮಿತನಾಗಿದ್ದೆ.
ಇದಾದ ಒಂದು ತಿಂಗಳ ನಂತರ ಪ್ರಜಾವಾಣಿಯಲ್ಲಿ ಅವರದೊಂದು ಕಥೆ, ಸುಮಾರು ಐವತ್ತು ವರ್ಷಗಳ ಹಿಂದೆ ಬರೆದದ್ದು.... ಪ್ರಕಟವಾಗಿತ್ತು. ಓದಿದ ಕೂಡಲೇ ನನಗೆ ನೆನಪಾದದ್ದು ಜಾರ್ಜ್ ಹರ್ಬರ್ಟ್ ನ ‘ದ ಪುಲಿ’ ಕವನ.  ಕಥೆಯ ತುಂಬೆಲ್ಲ ಮೆಟಾಫಿಸಿಕಲ್ ಪೋಯೆಟ್ರಿಯ ಛಾಯೆ ಗಾಢವಾಗಿದೆ ಎನ್ನಿಸಿತ್ತು. ಅನಂತಮೂರ್ತಿಯವರಿಗೆ ಫೋನಾಯಿಸಿ ನನ್ನ ಅಭಿಪ್ರಾಯವನ್ನು ಹೇಳಿದಾಗ, “ಹೌದೇನಯ್ಯಾ ವಸಂತಾ!  ಇಂಟರೆಸ್ಟಿಂಗ್ ಒಬ್ಸರ್ವೇಶನ್. ನಾನೂ ಇದನ್ನು ಯೋಚಿಸಿಯೇ ಇರಲಿಲ್ಲ ನೋಡು! ನನಗೆ ಯಾರೂ ಇದನ್ನು ಹೇಳಿರಲೂ ಇಲ್ಲ! ಯೆಸ್.... ನಾನಾಗ  ಒಂಥರಾ ಮೆಟಾಫಿಸಿಕಲ್ ಸ್ಟ್ಐಲಿನ ಪ್ರಭಾವಕ್ಕೆ ಒಳಗಾಗಿದ್ದೆ ಅನ್ನಿಸತೊಡಗಿದೆ! ಥ್ಯಾಂಕ್ಸ್ ಕಣೊ. ಮನೆಗೆ ಬಾರೊ, ನಿಮ್ಮಂತ ಹುಡುಗರ ಕೂಡ ಮಾತನಾಡುವುದು ಖುಷಿಕೊಡುತ್ತೆ ಅಂತ ಅಂದಿದ್ದರು. ಅದಾದ ನಂತರವೂ ಒಂದೆರಡು ಸಲ ಫೋನಿನಲ್ಲಿಯೇ ಮಾತನಾಡಿದ್ದೆ. ಕೊನೆಗೂ ಅವರನ್ನು ಕಂಡು ಮಾತನಾಡಬೇಕೆಂಬ ಹಂಬಲ ಹಂಬಲವಾಗಿಯೇ ಉಳಿಯಿತು!
ಇವತ್ತು ಗಂಗಾಧರಯ್ಯ ಅವರಿಗೆ ಫೋನಾಯಿಸಿದೆ. ಹೋಗಿ ನೋಡಿಕೊಂಡು ಬರೋಣ ಅಂದರು. ಐದು ಗಂಟೆಯ ಸುಮಾರಿಗೆ ತುಮಕೂರಿಗೆ ಬಂದರು. ನಾನು, ಗಂಗಾಧರಯ್ಯ, ಹಾಗೂ ಇನ್ನೋರ್ವ ಸ್ನೇಹಿತ ಡಾ.ಸ್ವಾಮಿ ಕೂಡಿ ಹೊರಟೆವು. ಅರ್ಧ ದಾರಿಗೆ ಹೋಗುವಷ್ಟರಲ್ಲಿ ಮೇಷ್ಟ್ರು ತೀರಿಕೊಂಡರು ಎಂಬ ಸುದ್ದಿ. ನಿಜವಾಗಿಯೂ ಪ್ತವಾದದ್ದನ್ನು ಕಳೆದುಕೊಂಡ ಭಾವ. ಎಲ್ಲ ಖಾಲಿ... ಖಾಲಿ... ನೆನಪುಗಳು ಮಾತ್ರ! ಅಪ್ಪಟ ಮನುಷ್ಯನೊಬ್ಬನನ್ನು.... ಆತ್ಮೀಯ ಗೆಳೆಯನನ್ನು.... ಪ್ರೀತಿಯ ವ್ಯಕ್ತಿಯೊಬ್ಬನನ್ನು ಕಳೆದುಕೊಂಡ ಮಂಕು... ಮನಸ್ಸು ಭಾವುಕವಾಗಿದೆ. ಮೇಷ್ಟ್ರೇ ಮತ್ತೆ ಮತ್ತೆ ನಿಮ್ಮ ಸಾಂಗತ್ಯ ಬೇಕೆನಿಸುತ್ತಿದೆ! ನೀವು ಹೋಗಿಬಿಟ್ಟಿರಿ....... ಅನಂತ... ಆಕಾಶಕ್ಕೆ!  

ಇಂತಿ ನಮಸ್ಕಾರಗಳು

ವಸಂತ.