ಸದಾ ಆನಂದವನ್ನೇ ಹಂಚುತ್ತಿದ್ದ ನಮ್ಮ ‘ಸವಿ’ ಮನೆಯ
ಸದಾನಂದ ಕನವಳ್ಳಿ
ಘಾಟಿ ಮನುಷ್ಯ....ಗಟ್ಟಿ ಮನುಷ್ಯ.....
ನೇರ ಮಾತು.....ಅಷ್ಟೇ ಮೃದು ಹೃದಯ.... ಬೆನ್ನು ತಟ್ಟಿ ಹುರಿದುಂಬಿಸುವ ಗುಣ.... ಅಷ್ಟೇ ಕಾಳಜಿಯಿಂದ....ಒಮ್ಮೊಮ್ಮೆ
ತೀಕ್ಷ್ಣವಾಗಿ....ಇನ್ನೊಮ್ಮೆ ಬ್ಯಾಡಗಿ ಮೆಣಸಿನಷ್ಟು ಖಾರವಾಗಿ....ಕರಾರುವಾಕ್ಕಾಗಿ ಮಾತನಾಡಿದರೂ
ಈ ವ್ಯಕ್ತಿಯ ಸಹವಾಸದಲ್ಲಿರಬೇಕು ಎಂಬ ಭಾವ ಮೂಡಿಸಿ ಹತ್ತಿರಕ್ಕೆಳೆದುಕೊಳ್ಳುವ ಖರೇ ಖರೇ ಆಪ್ತ ವ್ಯಕ್ತಿತ್ವ. ಯಾವಾಗಲೂ ಆನಂದವನ್ನು ಹರಡುವ,
ಹೃದಯ ಶ್ರೀಮಂತ ಸದಾನಂದ ಕನವಳ್ಳಿ ಸರ್ ತಮ್ಮ ಪಾತ್ರ
ಮುಗಿಸಿ ಹೊರಟು ಹೋದರು ಎಂಬ ಸುದ್ದಿ ತಿಳಿಯುವ ಹೊತ್ತಿನಲ್ಲಿ ನಾನು ನಾಗರ ಹೊಳೆಯ ಕಾಡಿನಲ್ಲಿ ಮೂರು
ಮೂರು ಕಾಡಾನೆಗಳಿಂದ ಕೇವಲ ಹದಿನೈದಿಪ್ಪತ್ತು ಅಡಿಗಳ ದೂರದಲ್ಲಿದ್ದೆ! ಮೈ ಝುಂ ಎನಿಸುವ ಕ್ಷಣವದು.
ಸ್ವಲ್ಪವೇ ಶಬ್ದ ಮಾಡಿದರೂ ಸಲಗ ಸಲೀಸಾಗಿ ಎತ್ತಿ ಬಿಸುಡುವ ಸಾಧ್ಯತೆ! ಫೋನಾಯಿಸಿದ ಅಪ್ಪನಿಗೆ ಏನೂ
ಹೇಳಲು ತೋಚದೇ ಹತ್ತಿರ ಹತ್ತಿರ ಬರತೊಡಗಿದ ಸಲಗವನ್ನು ಗರಬಡಿದವನಂತೆ ನೋಡತೊಡಗಿದ್ದೆ! ಏನೆನ್ನಿಸಿತೋ
ಅದಕ್ಕೆ ನಾಲ್ಕು ಮಾರು ಮುಂದೆ ಬಂದು ಅಡ್ಡ ಸರಿದು ಹೋಯಿತು.
ನಾನಾಗ ಧಾರವಾಡದಲ್ಲಿ ಪಿಯುಸಿ
ಓದುತ್ತಿದ್ದೆ. ಅಪ್ಪನಿಗೆ ಮೊದಲಿನಿಂದಲೂ ಆಪ್ತರಾಗಿದ್ದ ಕನವಳ್ಳಿ ಸರ್ ಆಗ ಕರ್ನಾಟಕ ವಿಶ್ವವಿದ್ಯಾನಿಲಯದ
ಪ್ರಸಾರಾಂಗದ ನಿರ್ದೇಶಕರಾಗಿದ್ದರು. ಪಾವಟೆ ನಗರದ ಕ್ವಾರ್ಟರ್ಸಿನಲ್ಲಿ ಅವರ ವಾಸ. ಆವಾಗೀವಾಗ ಅವರ
ಮನೆಗೆ ಹೋಗುವ ಸಲಿಗೆ. ಹೋದಾಗಲೆಲ್ಲಾ ಹೇಗೆ ಓದಬೇಕು. ಸಾಹಿತ್ಯ ಸಂಗೀತದ ಸಂಬಂಧಗಳು, ವಿವಿಧ ಕಲಾವಿದರ
ವಿಶೇಷತೆ ಮತ್ತು ಅವರೊಡನೆ ಒಡನಾಡಿದ ಸಂಬಂಧಗಳ ರಸವತ್ತಾದ ವರ್ಣನೆ. ಜೊತೆಗೆ ತಾಯಿ ವಿಶಾಲಾಕ್ಷಿ ಕನವಳ್ಳಿ
ಅವರು ಪ್ರೀತಿಯಿಂದ ಬಡಿಸುವ ಜೋಳದ ರೊಟ್ಟಿ ಊಟ! ಅವರ
ಮನೆಗೆ ಹೋಗುವುದೆಂದರೆ ಒಂದು ರೀತಿಯಲ್ಲಿ ‘ಅಪ್ಪನ
ಮನೆಗೆ ಹೋಗುವ’ ಬೆಚ್ಚಗಿನ ಅನುಭವ. ಇತ್ತೀಚಿನವರೆಗೂ ಧಾರವಾಡಕ್ಕೆ ಹೋದಾಗಲೆಲ್ಲ ಅವರ ಮನೆಗೆ ಹೋಗಿ ಕೆಲಹೊತ್ತು ಹರಟೆ ಹೊಡೆದು ಬರುವುದು ವಾಡಿಕೆಯಾಗಿತ್ತು.
ನನಗೆ ಯಾವಾಗಲೂ ಅವರು ‘ವೈಸ್
ರಾಯ್’ ಎನ್ನುತ್ತಿದ್ದರು! ಅನೇಕ ಸಂದರ್ಭಗಳಲ್ಲಿ ನಾನು ಅಪ್ಪನ ಪ್ರತಿನಿಧಿಯಾಗಿ ಅವರು ಯೋಜಿಸಿದ ಕೆಲಸಗಳಲ್ಲಿ
ಭಾಗಿಯಾಗುತ್ತಿದ್ದೆ ಮತ್ತು ವಾಲಂಟಿಯರ್ ಆಗಿ ನನಗೆ ವಹಿಸಿದ ಕೆಲಸ ಮಾಡುತ್ತಿದ್ದೆ. ‘ಏನಪಾ ವೈಸ್ ರಾಯ್’
ನಿಮ್ಮಪ್ಪ ಭಾಳಾ ಶಾಣ್ಯಾ ಅದಾನ್ ನೋಡು. ಲಗೂನ ಮದಿವಿ ಆದ್ರ ಇದೊಂದು ಅಡ್ವಾಂಟೇಜ್! ನಿನ್ನನ್ನ ತನ್ನ
ರಿಪ್ರಸೆಂಟೇಟಿವ್ ಆಗಿ ಕಳಸ್ಯಾನ. ಅರಾಂ ಅದಾನೇನಪಾ? ನಿಮ್ಮವ್ವ ಆರಾಂ ಅದಾಳ? ತ್ವಾಟಾ ಪಟ್ಟಿ ಕಮತಾ
ಚೆನ್ನಾಗಿ ನಡದೈತಿ? ವಿಶಾಲಾಕ್ಷಿ ನೋಡ... ವಸಂತ ಬಂದಾನ’ ಹೀಂಗಂತ ಅಗದೀ ಆತ್ಮೀಯವಾಗಿ ಮಾತನಾಡಿಸುತ್ತ
ಒಂದು ರೀತಿಯ ಕಂಫರ್ಟ್ ಝೋನ್ ನಿರ್ಮಿಸಿಬಿಡುತ್ತಿದ್ದರು.
ಅವರ ಖಡಕ್ ಶಿಸ್ತು. ಏನೇ ಮಾಡಬೇಕಾದರೂ ಅತ್ಯಂತ ನೀಟಾಗಿ, ಕರಾರುವಾಕ್ಕಾಗಿ ಯೋಜಿಸಿ, ಯೋಚಿಸಿ ಕೈಗೊಳ್ಳುತ್ತಿದ್ದ
ಅವರ ಕಾರ್ಯಶೀಲತೆ, ಬದ್ಧತೆ, ವಿವಿಧ ವಿಷಯಗಳೆಡೆಗಿನ ಅವರ ಪ್ರೀತಿ, ಜನಸಾಮಾನ್ಯರ ಬಗೆಗಿರುವ ಅವರ ಕಾಳಜಿ,
ಅವರನ್ನು ನಿಜವಾದ ದೊಡ್ಡಮನುಷ್ಯನನ್ನಾಗಿ ಮಾಡಿದ್ದವು.
ಒಂದು ರೀತಿಯಲ್ಲಿ ಅವರೊಂದು ಸಲಗ!
ಅತ್ಯಂತ ಗ್ರಾಮೀಣ ಪ್ರದೇಶದಿಂದ ಬಂದು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ವಿದ್ಯಾಭ್ಯಾಸ ಪಡೆದು, ಇಂಗ್ಲೀಷ್
ಮೇಷ್ಟ್ರಾಗಿ ಕೆಲಸ ಆರಂಭಿಸಿ, ಸೇವೆ ಸಲ್ಲಿಸಿದ ಜಾಗಗಳಲ್ಲೆಲ್ಲ ಗಜಗಾಂಭೀರ್ಯದಿಂದ ಕೆಲಸ ನಿರ್ವಹಿಸಿ
ಆ ಸಂಸ್ಥೆಗಳಿಗೂ, ಸುತ್ತಮುತ್ತಲಿನ ಸಾಮಾನ್ಯ ಜನತೆಗೂ ಪರಸ್ಪರ ಪ್ರೀತಿ-ಸ್ನೇಹ-ಅಭಿಮಾನಗಳ ಬಾಂಧವ್ಯದ ಕೊಂಡಿಯನ್ನು ಬಲಪಡಿಸಿದವರು ಕನವಳ್ಳಿ ಸರ್. ತಮ್ಮ
ಅರಿವಿನ ದಾರಿಯಲ್ಲಿ ಹಲವರನ್ನು ಒಗ್ಗೂಡಿಸಿಕೊಂಡು ಮುನ್ನಡೆದವರು, ಮುನ್ನಡೆಸಿದವರು. ಮನೆಗೆ ಬಂದ ಯಾರನ್ನೇ
ಆಗಲಿ ಬರಿದೇ ಕಳಿಸಿದವರಲ್ಲ. ಅನ್ನವನ್ನು ನೀಡುವುದಲ್ಲದೇ ವಿವೇಕ, ವಿಚಾರಗಳ ಮುದ್ದೆ ಮಾತುಗಳೊಂದಿಗೆ
ರಸಗವಳ ನೀಡಿ ಜಲದರ್ಶಿನಿ ನಗರದ ‘ಸವಿ’ಯಲ್ಲಿ ಸವಿ ಬದುಕ ಸವಿದವರು. ಕನವಳ್ಳಿ ಸರ್..... ದೈಹಿಕವಾಗಿ
ನೀವು ನಮ್ಮೊಂದಿಗೆ ಇಲ್ಲದೇ ಹೋದರೂ, ಸವಿ ನೆನಪಾಗಿ, ಪ್ರಜ್ಞೆಯಾಗಿ ನಮ್ಮಂತವರ ಭಾಗವಾಗಿ ಬಹುಕಾಲದವರೆಗೂ
ಇರುತ್ತೀರಿ. ನೀವು ತುಂಬು ಬದುಕನ್ನು ಬಾಳಿದ ಮನೆ ‘ಸವಿ’ಯಲ್ಲಿ ಸದಾ ನೆಮ್ಮದಿ ನೆಲೆಸಿರಲಿ.
ನಮಸ್ಕಾರಗಳು.
ನಿಮ್ಮ ಪ್ರೀತಿಯ
ವೈಸ್ ರಾಯ್