Showing posts with label ಮಳೆ ಮತ್ತು ಇಳೆ. Show all posts
Showing posts with label ಮಳೆ ಮತ್ತು ಇಳೆ. Show all posts

Saturday, August 18, 2012

ಹಸಿಮಣ್ಣ ಕಂಪು ಮತ್ತು ತಂಪೆರೆವ ಮಳೆ


ಕಾಳಿಂಗನೆಂಬ ಗೊಲ್ಲನೂ….ಡುಮಿಂಗನೆಂಬ ಹೂಟೆಯವನೂ ಹಾಗೂ ವಸಂತನೆಂಬ ಸಂಜೆಗೆಂಪು ಬಣ್ಣದ  ಎತ್ತು…

ಬಿಸಿಬಿಸಿ ತೆಳ್ಳವ್ವು! ಘಮಗಮಿಸುವ ತುಪ್ಪ-ಬೆಲ್ಲ… ಅದರೊಂದಿಗೆ ಬೆರೆತ ಆಯಿಯ ಪ್ರೀತಿ… ಹೊರಗೆ ಧೋ ಎಂದು ಹೊಯ್ಯುವ ಮಳೆ….ಒಂದಾದಮೇಲೊಂದು ಎಷ್ಟು ಇಳಿದವೋ! ಕೂಗಳತೆಯ ದೂರದಲ್ಲಿ ಡ…ಡ್ಡ…ಡ್ಡ…ಡಡಡಡಡ…ಸದ್ದು ತೇಲಿ ಬಂದಾಗಲೇ ಗದ್ದೆ ಹೂಟೆಯ ಪವರ್ ಟಿಲ್ಲರ್ ನನ್ನ ಮಗನ ಕುತೂಹಲವನ್ನು ಕೆರಳಿಸಿತ್ತು… ನನ್ನ ಮನಸ್ಸಾಗಲೇ ದೊಡ್ಡಬೈಲು ಗದ್ದೆಯಲ್ಲಿ ಕೊರಡುಹೊಡೆದ ಹುಡುಗಾಟದ ಕ್ಷಣಗಳನ್ನು ಮೆಲುಕುಹಾಕತೊಡಗಿತ್ತು…. ಬಾಯಲ್ಲಿನ ಕವಳಕ್ಕೆ ರಂಗೇರಿತ್ತು!
ಕಿರಿಸ್ತಾನರ ಡುಂಗ್ಯಾ… ಅವನ ಪ್ರೀತಿಯ ಬಂಡ್ಯಾ ಮತ್ತು ನನ್ನದೇ ಹೆಸರಿನ ವಸಂತ ಎಂಬೆರಡು ಪೊಗದಸ್ತಾದ ಎತ್ತುಗಳು ನಮ್ಮ ಮನೆಯ ಆಗಿನ ಕಾಲದ ಪವರ್ ಟಿಲ್ಲರುಗಳು! ಸುಮಾರು ಹದಿನೆಂಟು ಹೂಟೆಗಳನ್ನು ಮಾಡಿದ ಇವೆರಡೂ ಎತ್ತುಗಳು ನನ್ನ ಅಜ್ಜನಾದಿಯಿಂದ ಹಿಡಿದು ರವಿಕಾಕಾ, ರಾಮನಾಥಕಾಕಾ, ಸುಬ್ಬುಕಾಕಾ, ಸೂರ್ಣಾಣ್ ಭಾವ, ಪ್ರಶಾಂತ ಭಾವ, ಹಿಲ್ಲೂರ ವೆಂಕಣ್ಣ, ಕೊನೆಗೆ ನನ್ನಪ್ಪ….ಆಮೇಲೆ ನಾನು…. ಹೀಗೆ ಎಲ್ಲರಿಗೂ ತುಂಬ ಪ್ರಿಯವಾಗಿದ್ದವು. ನಾವು ಚಿಕ್ಕವರಿರುವಾಗ ಶಾಲೆಗೆ ಹೋಗುವ ಮೊದಲು ಕೊಟ್ಟಿಗೆ ಚಾಕರಿ ಮಾಡಿ ಎಲ್ಲ ದನಗಳನ್ನೂ ಬ್ಯಾಣಕ್ಕೆ ಹೊಡೆದುಕೊಂಡು ಹೋಗಿ ಬಿಟ್ಟುಬರಬೇಕಾಗಿತ್ತು. ಸಾಯಂಕಾಲ ಶಾಲೆಬಿಟ್ಟು ಬಂದ ಮೇಲೆ ಪುನಃ ಅವುಗಳನ್ನು ಕೊಟ್ಟಿಗೆಗೆ ಕರೆತರಬೇಕಾಗಿತ್ತು.
ದನಕಾಯುವ ಕೆಲಸದ ಮಜವೇ ಬೇರೆ! ಸುಮಾರು ಎರಡೂವರೆ ಕಿಲೋಮೀಟರುಗಳ ದೂರದ ಬ್ಯಾಣ….. ಕೊಟ್ಟಿಗೆಯ ದಾಬಿನ ಕಣ್ಣಿ ಬಿಚ್ಚಿದ ಕೂಡಲೇ ಆಚೀಚೆಯೆಲ್ಲೂ ನಿಲ್ಲದೇ ನೇರವಾಗಿ ಬ್ಯಾಣದ ದಾರಿ ಹಿಡಿಯುವ ಸುಮಾರು ಮೂವತ್ತೈದು-ನಲವತ್ತು ದನಗಳು…. ಅವುಗಳ ಹಿಂದೆ ಗೋವಿನ ಹಾಡಿನ ಕಾಳಿಂಗನೆಂಬ ಗೊಲ್ಲನ  ಸಾಕ್ಷಾತ್ ಅಪರರೂಪ! ಗೌಳ್ಯಾನ ಗುಡ್ಡೆ, ಓಣಜಿಹಳ್ಳ, ಶಾಲೆಮನೆ, ಅದರ ಗುಂಟ ಸ್ಮಶಾನದ ದಾರಿಹಾಯ್ದು ಬ್ಯಾಣದ ದಣಪೆಯನ್ನು ತಲುಪುವದರಲ್ಲಾಗಲೇ ಎಲ್ಲ ದನಗಳೂ ಅಲ್ಲಿ ಸೇರಿಯಾಗಿರುತ್ತಿತ್ತು. ಸರಗೋಲನ್ನು  ಸರಿಸಿ ಅವನ್ನೆಲ್ಲ ಒಳಗೆ ಸೇರಿಸಿ ಮತ್ತೆ ಹಾಕಿ ಮನೆಗೆ ಬರುವಷ್ಟರಲ್ಲಿ ತಿಂದ ಆಸರಿಯೆಲ್ಲ ಕರಗಿ ನೀರಾಗಿರುತ್ತಿತ್ತು!
ಮಳೆಗಾಲದಲ್ಲಿ ಮದ್ಯಾಹ್ನ ಶಾಲೆ ಬಿಟ್ಟಮೇಲೆ ಹೂಟೆಯಾಳು ಡುಂಗ್ಯಾನಿಗೆ ಊಟ ತೆಗೆದುಕೊಂಡು ಹೋಗುವುದೂ ತಿಂಗಳಾನುಗಟ್ಟಲಿನ ದಿನಚರಿಯಾಗಿರುತ್ತಿತ್ತು. ಧೋ…ಧೋ… ಎಂದು ರಪಗುಡುವ ಮಳೆ… ಕಾನುಬೇಣದ ಕಾಲುದಾರಿ….. ನೀರಾಟವಾಡುತ್ತಲೇ ಒಂದು ಕೈಯೊಳಗಿನ ಕ್ಯಾನಿನ ಊಟ, ಇನ್ನೊಂದರಲ್ಲಿ ತುಂಬಿದ ಬೆಲ್ಲದ ಕಷಾಯ ಚೆಲ್ಲದಂತೆ ಸಂಭಾಳಿಸಿ, ಜಾರುದಾರಿಯಲ್ಲಿ ಗದ್ದೆಮುಟ್ಟುವದೆಂದರೇ ತಂತಿಯ ಮೇಲೆ ನಡೆವ ಹುಡುಗಿ ಸರ್ಕಸ್ ಮಾಡಿದ ಅನುಭವ.
ಅಂತೂ-ಇಂತೂ ಗದ್ದೆ ತಲುಪಿದರೆ, ತಡೆಯಲಾಗದ ಮಣ್ಣಿನ ಆಕರ್ಷಣೆ. ಕೆಸರುಗದ್ದೆಗಳಲ್ಲೆಲ್ಲ ಕುಣಿದಾಡಿ, ಮೈಗೆಲ್ಲ ಮಡ್ ಬಾತಿನ ಮಾಘಸ್ನಾನ! ಕೊನೆಗೆ ಗಳಿಯ ಹೊಡೆಯುವ ಹುರುಪು. ಏಯ್… ಹಾ…ಹಾ…ಹ್ಯೀ…ಹೋ’ ಎಂದೆನ್ನುತ್ತ…ಡುಂಗ್ಯಾ ಆ ಎತ್ತುಗಳೊಂದಿಗೆ ಸಲೀಸಾಗಿ ಮಾತನಾಡುವಂತೆ ನಾನು ಪ್ರಯತ್ನಿಸಿದರೂ… ನನ್ನ ಭಾಷೆ ಅವುಗಳಿಗೆ ಅರ್ಥವಾಗುತ್ತಿರಲಿಲ್ಲ. ಎಲ್ಲೆಲ್ಲಿಯೋ ಎಳೆದೊಯ್ಯುತ್ತಿದ್ದವು. ಅದಾಗಲೇ ಎರಡು ಕೊಟ್ಟೆಯೇರಿಸಿದ ಡುಂಗ್ಯಾ ಹಲ್ಕಿರಿದು ನಗತೊಡಗುತ್ತಿದ್ದ!... ಕೊರಡು ಹೊಡೆಯುವಾಗಲಂತೂ ಇನ್ನಿಲ್ಲದ ಸಂಭ್ರಮ! ಗದ್ದೆಯತುಂಬ ತುಂಬಿದ ರಾಡಿ ನೀರಿನಲ್ಲಿ ಕೊರಡಿನ ಮೇಲೆ ನಿಂತು ಎರಡೂಕೈಯಲ್ಲಿ ಗಳಿಯದ ದಾಬುಹಿಡಿದು ಕೊರಡಿನ ಮೇಲೆ ಕಾಲಗಲಿಸಿ ನಿಂತು ಗದ್ದೆಯಲ್ಲಿ ಹೋಗುವುದು ಸಮುದ್ರದಲ್ಲಿ ದೋಣಿಯಮೇಲೆ ಹೋದಂತಾಗುತ್ತಿತ್ತು.
       ಮಗನಿಗೆ ಟಿಲ್ಲರ್ ತೋರಿಸಲು ಮಾವನ ಮನೆ ಗದ್ದೆಗೆ ಹೋದಾಗ ಇವೆಲ್ಲ ನೆನಪಾಗಿತ್ತು. ಈಗ ಟಿಲ್ಲರ್ ಕೂಡ ನನ್ನ ಮಾತು ಕೇಳುತ್ತಿರಲಿಲ್ಲ! ಹೇಗ್ಹೇಗೋ ಮಾಡಿ ಮೂರ್ನಾಲ್ಕು ರೌಂಡು ತಿರುಗಿಸುವಷ್ಟರಲ್ಲಿ ಸುಸ್ತಾಗಿದ್ದೆ. ಮಗ ಗದ್ದೆಯ ಕೆಸರಲ್ಲಿ ಬಿದ್ದು ಹೊರಳಾಡುತ್ತಿದ್ದ. ಕೆಸರು ಗದ್ದೆಯಲ್ಲಿ ಮುಟ್ಟಾಟ ಆಡೋಣವೆಂದು ನನ್ನ ಕೈಹಿಡಿದು ಎಳೆಯುತ್ತಿದ್ದ. ಆಡದೇ ಬೇರೆ ಗತಿಯಿಲ್ಲ. ಸುಸ್ತಾಗಿ ಹಾಳಿಯ ಮೇಲೆ ಕುಳಿತರೆ ಅವನಿಗೆ ಇನ್ನೂ ಹುರುಪು. ಕೆಸರು ನೀರನ್ನು ಚೆಲ್ಲಾಡುತ್ತ ಖುಷಿಯಿಂದ ಕೇಕೇ ಹಾಕಿ ಕುಣಿದಾಡುತ್ತಿದ್ದ. ನಡೆಯೋ ಮಗನೇ ಮನೆಗೆ ಹೋಗೋಣವೆಂದರೆ….. ಬೇಡ… ವಾಪಸ್ ಹೋಗೋಕೆ ಮನಸೇ ಆಗುತ್ತಿಲ್ಲ…. ಇನ್ನೂ ಆಡೋಣ ಬಾ ಎಂದು ಕೈಹಿಡಿದು ಎಳೆಯತೊಡಗಿದ್ದ. ಮಳೆ ಹೊಯ್ಯುತ್ತಲೇ ಇತ್ತು….  

Monday, August 13, 2012

Rain..... Rain......Rain......





 


ಮಳೆಗಾಲದ ಒಂದು ದಿನ…..ಮತ್ತು ನನ್ನ ಪ್ರೀತಿಯ ಕನ್ನಡಶಾಲೆ!

ಬಹುಶಃ ನಾನಾಗ ಮೂರೋ.. ನಾಲ್ಕೋ…ಸರಿಯಾಗಿ ನೆನಪಿಲ್ಲ. ಆದರೆ ಧೋ…ಎಂದು ಸುರಿಯುತ್ತಿದ್ದ ಮಳೆಯ ಚಿತ್ರವಿನ್ನೂ ಕಣ್ಣಿಗೆ ಕಟ್ಟಿದಹಾಗಿದೆ. ಭಾಗೀರಥಿ ಬಾಯೋರು ನಮಗಾಗ ಕಲಿಸುತ್ತಿದ್ದರು. ಕ್ಲಾಸ್ ರೂಂ ಎಂದರೆ ಕಗ್ಗತ್ತಲ ಕೋಣೆ! ಮಳೆಯ ರಭಸಕ್ಕೆ ಹೇಳಿದ್ದೊಂದೂ ಕೇಳುತ್ತಿರಲಿಲ್ಲ. ಬೆಳಿಗ್ಗೆ ಪ್ರಾರಂಭವಾದ ಮಳೆ ಇಡೀದಿನ ಬೇಸರಿಸದೇ ಒಂದೇ ಸವನೆ ಹೊಯ್ಯುತ್ತಿತ್ತು! ಮಲೆನಾಡ ಮಳೆಯೇ ಹಾಗಿರುತ್ತಿದ್ದ ಕಾಲವದು. ತುಂಬ ಹಳೆಯ ಕಾಲವೇನಲ್ಲ. ಸುಮಾರು 1984-85ರ ದಿನಗಳವು.

ಭಾಗೀರಥಿ ಬಾಯೋರು ನಮಗೆಲ್ಲ ತುಂಬ  ಅಕ್ಕರೆಯ ಅಕ್ಕೋರು. ಆಗ ಶಾಲೆಯೆಂದರೆ ನಮ್ಮ ಪ್ರೀತಿಯ ಆಟದ ಮನೆ! ಮೊದಲನೇ ತರಗತಿಗೆ ಹೋಗುವಾಗ ಮೊದಮೊದಲು ಅಳುತ್ತ ತಪ್ಪಿಸಿಕೊಳ್ಳುತ್ತಿದ್ದೆ! ದಿನವೂ ಇದೇ ಕಥೆಯಾಗತೊಡಗಿದಾಗ ಅಮ್ಮ ಮೊದಲು ಹೊಡೆದು ಶಾಲೆಗೆ ಅಟ್ಟುತ್ತಿದ್ದಳು. ದಿನವೂ ಸಾಯುವವರಿಗೆ ಅಳುವವರಾರು? ದಿನವೂ ಥಡಿರಾಶಿಯ ಸಂದಿನಲ್ಲೋ, ದೇವಸ್ಥಾನದ ಮೆತ್ತಿನ ಮೇಲಿನ ತೊಲೆಗಳ ಮೇಲೆಯೋ, ತೋಟದಲ್ಲಿನ ಬಚ್ಚಲು ಮನೆಯ ಅಟ್ಟದ ಮೇಲೆಯೋ ಅಡಗಿಕುಳಿತುಕೊಳ್ಳುತ್ತಿದ್ದ ನನ್ನನ್ನು ಹುಡುಕಿ ಹುಡುಕಿ ಅಮ್ಮ ಬೇಸೆತ್ತಿರುತ್ತಿದ್ದಳು. ಆಮೇಲಾಮೇಲೆ ಪಕ್ಕದ ಮನೆಯ ಚಂಪಾ ಭಟ್ಟರು, ಸುಬ್ಬಾ ಭಟ್ಟರು, ವಿಜಯತ್ತೆ, ಸಾವಿಂತ್ರಿ ಬೊಬ್ಬೆ, ಮಾದೇ ಅಕ್ಕ, ಸುಬ್ಬಾಣಿ, ತಮ್ಮಾಣಿ, ಶಿವರಾಂ ಭಟ್ಟರು…. ಅವರು… ಇವರು… ಎಲ್ಲರೂ ನನ್ನ ಮೇಲೆ ತಮ್ಮ ಹೊಡೆಯುವ ಚಟವನ್ನು ತೀರಿಸಿಕೊಂಡಿದ್ದರು!

ಕೊನೆಗೆ ಭಾಗೀರಥಿ ಬಾಯೋರು ದಿನವೂ ಚಾಕಲೇಟು ಕೊಡಲು ಆರಂಭಿಸಿದಾಗ, ಹೊಡೆತ ತಪ್ಪಿಸಿಕೊಳ್ಳುವ ಸಲುವಾಗಿಯಾದರೂ ಚಾಕಲೇಟಿನಾಸೆಗೆ ಶಾಲೆಗೆ ಹೋಗುವುದು ರೂಢಿಯಾಯಿತು! ಅವರ ಕಾರಣಕ್ಕಾಗಿಯೇ ಶಾಲೆ ಪ್ರಿಯವಾಗತೊಡಗಿತು. ಇವತ್ತು ಸ್ವಲ್ಪನಾದರೂ ಓದು-ಬರಹ ಕಲಿತಿದ್ದಿದ್ದರೆ ಅದರ ಶ್ರೇಯಸ್ಸು ನನ್ನನ್ನು ತಿದ್ದಿ ತೀಡಿದ, ತೀಡಿಸಿದ ಭಾಗೀರಥಿ ಬಾಯೋರಿಗೆ ಸಲ್ಲ ಬೇಕು. ಅವರು ನೂರ್ಕಾಲ ನೆಮ್ಮದಿಯಿಂದ ಬಾಳಲಿ.  
ಆದಿನ ಮಳೆಗಾಲದ ಒಂದು ದಿನ ನಿಬಂಧ ಬರೆಯಲು ಹೇಳಿದ್ದರು. ತಿಣುಕಾಡಿದರೂ ಒಂದು ಪುಟ ಬರೆಯುವಷ್ಟರಲ್ಲಿ ಶಬ್ದ ಭಂಡಾರವೆಲ್ಲ ಮುಗಿದಿತ್ತು! ‘ಮಳೆ ಎಂದರೆ ನಮಗೆ ಖುಷಿಯೋ ಖುಷಿ. ಜೋರು  ಮಳೆಬಂದರೆ ಶಾಲೆಗೆ ರಜೆಕೊಡುತ್ತಾರೆ. ಮನೆಗೆ ಹೋಗುವ ದಾರಿಯಲ್ಲಿ ನೀರಾಟ ಆಡಬಹುದು. ಹಲಸಿನ ಹಣ್ಣಿನ ಕಡುಬಿಗೆ ತುಪ್ಪ ಸೇರಿಸಿ ತಿಂದರೆ ಮಜವೋ ಮಜ! ಕಾಗದದ ದೋಣಿ ಮಾಡಿ ನೀರಲ್ಲಿ ತೇಲಿಬಿಡುವುದು ತುಂಬ ಖುಷಿಕೊಡುತ್ತದೆ. ಮಳೆ ಬಂದರೆ ಗದ್ದೆ ನೆಟ್ಟಿ ಶುರುವಾಗುತ್ತದೆ. ಗದ್ದೆಯಲ್ಲಿ ಭತ್ತ ಬಂದರೆ ನಮಗೆ ಊಟಕ್ಕೆ ಸಾಕಾಗುತ್ತದೆ. ಮಳೆಗಾಲದಲ್ಲಿ ಅಡಿಕೆಗೆ ಮದ್ದು ಹೊಡೆಯುತ್ತಾರೆ….”ಹೀಗೆ ಬಾಲ್ಯದ ಬಾಲಿಶ ಭಾಷೆ ಈಗ ನಗುಬರಿಸುತ್ತದೆ!
ಮೊನ್ನೆ ಊರಿಗೆ ಹೋಗಿದ್ದೆ. ಅದ್ಭುತವಾಗಿ ಮಳೆ ಸುರಿಯುತ್ತಿದ್ದದ್ದು ಬಾಲ್ಯದ ನೆನಪನ್ನು ಮರುಕಳಿಸಿತ್ತು. ಕಾಟಿಮನೆ, ಶಿರಸಿಯ ಹತ್ತಿರದ ಎಕ್ಕಂಬಿಯ ಸಮೀಪದ ಊರು. ಊರೆಂದರೆ… ಕಾಡನಡುವಿನ ಒಂಟಿ ಮನೆ. ನನ್ನ ಗೆಳೆಯನೋರ್ವ ಇದನ್ನು ಸ್ವಿಡ್ಜರ್ಲ್ಯಾಂಡ್ ಎಂದೇ ಕರೆಯುತ್ತಾನೆ!  

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ಕಾಡುಮನೆಯನ್ನು ತಲುಪುವಾಗ ಅದಾಗಲೇ ಬರೋಬ್ಬರಿ ಬೆಳಗಿನ ಜಾವದ ಒಂದು ಗಂಟೆಯ ಸಮಯ. ಸಾಧಾರಣವಾಗಿ ದೆವ್ವಗಳು ಓಡಾಡುವ ಅಕಾಲವೆಂದು ಹಳ್ಳಿಗರು ಇಂದೂ ಹೇಳುತ್ತಿರುತ್ತಾರೆ. ನೀರವ ಮೌನದ ಕಾರ್ಗತ್ತಲಿನಲ್ಲಿ ದಾರಿ ಸಾಗುತ್ತಿರುವಾಗ ಸ್ಟೀರಿಯೋದಲ್ಲಿ ಓಶೋನ ನಿರರ್ಗಳವಾದ, ಸಹಜ ಸೌಂದರ್ಯ ಭಾಷೆಯಲ್ಲಿನ ಮೌನದ ಕುರಿತ ಮಾತುಗಳು ಮಳೆಯಂತೆ ಹನಿಸುತ್ತಿದ್ದವು. ನಡುನಡುವೆ ಕಾರು ನಿಲ್ಲಿಸಿ ಗುಟುಕು ಗುಟುಕಾಗಿ ಪ್ರೇಯಸಿಯ ಅಮೃತ ಮಿಶ್ರಿತ ಒಗರು ಅಧರವನ್ನೊಮ್ಮೆ ಹೀರುವಾಗ… ಕಾಡಿನ ಮೌನ… ಸುಂಯ್ ಗುಡುವ ತಂಗಾಳಿ…. ಹನಿಹನಿ ಶ್ರಾವಣದ ಮಳೆ…. ನನ್ನೊಳಗಣ ಪ್ರಜ್ಞೆಯನ್ನು ತಪ್ಪಿಸಿ, ನಾನು ಕಳೆದುಹೋದಂತಹ ಅನುಭವವದು! ಮನೆ… ನನ್ನದಲ್ಲದ ಕಾರಣಕ್ಕೋ…. ಮಾವನ ಮನೆಯಾಗಿದ್ದಕ್ಕೋ! ನಿದ್ರೆಯೇ ಹತ್ತುತ್ತಿಲ್ಲ. ಜೊಂಯ್ ಗುಡುವ ಮಳೆ!

ಬೆಳ್ಳಂಬೆಳಿಗೆ ನನ್ನ ಗೂಡಲ್ಲಿ ಬೆಚ್ಚಗೆ ಹೊಕ್ಕಿ ಮಲಗಿದ್ದ ಮಗನನ್ನೊಮ್ಮೆ ಮುದ್ದಿ ಎಬ್ಬಿಸಿದ್ದೆ. ‘ಬಾರೋ, ಅಪರೂಪದ ಮಳೆ ಹೊಯ್ಯುತ್ತಿದೆ. ಕಟ್ಟೆಯ ಮೇಲೆ ಕುಳಿತು ನೋಡೋಣ ಬಾ….’ಎಂದು ಸವಿನಿದ್ದೆಯಲ್ಲಿದ್ದ ಅವನನ್ನು ಆರುಗಂಟೆಗೇ ಎಬ್ಬಿಸಿ ಕರೆದೊಯ್ದೆ…. ಅಂಗಳಕ್ಕೆ! ಎದುರು ದೊಡ್ಡೂರ ಗುಡ್ಡ! ಬುಡದಲ್ಲಿ ಆಗತಾನೆ ಅಗೆ ಹಾಕಿ ಗೇಣುದ್ದ ಬೆಳೆದು ನಿಂತ ಭತ್ತದ ಗದ್ದೆ. ಪಕ್ಕದಲ್ಲಿ ಮಂಜು ಮುಸುಕಿದಂತೆ ಕಾಣುವ ಅಡಿಕೆ ತೋಟ. ಅಂಗಳದಲ್ಲಾಗಲೇ ಬೆಳೆದು ಹಸಿರಿನಿಂದ ತುಂಬಿದ, ಆಯಿಯ ಆರೈಕೆಯ ಸೌತೆ, ಬೆಂಡೆ, ಬದನೆ, ಸೋಡಿಗೆಯ ತರಹೇವಾರಿ ತರಕಾರಿ ಗಿಡಗಳು. ನಡುನಡುವೆ ಸ್ನಿಗ್ಧ ಸೌಂದರ್ಯರಾಶಿಯನ್ನೇ ಹನಿಸುವ ಡೇರೆ, ಜಾಜಿ, ಮಲ್ಲಿಗೆ, ದಾಸವಾಳ, ಗೆಂಟಿಗೆ, ಶಂಕಪುಷ್ಪ, ನಿತ್ಯಪುಷ್ಪ…. ಕಣ್ಣಿಗೆ ಹಬ್ಬ! ಮನಸಿಗೆ ವಿವರಿಸಲಾಗದ ಸಚ್ಚಿದಾನಂದ! ನಾನೂ, ಮಗನೂ ಸಕತ್ ಖುಷಿ ಪಟ್ವಿ. ‘ಆಸ್ರಿ ಕುಡ್ಯಲ್ಲಾತ್ರೋ, ಲಗೂನೆ ಬನ್ನಿ, ಕೊನೆಗೆ ದ್ವಾಸೆ ಬಂಡಿ ಗಾರೆದ್ಹೋಗ್ತು’, ಎಂದು ಆಯಿ ಕರೆದಾಗಲೇ ನಾವಿಬ್ಬರೂ ಹೇಡಿಗೆ ಕಟ್ಟೆಯಿಂದ ಕುಂಡೆಯೆಬ್ಬಿಸಿದ್ದೆವು!
                                                                                                (ಮುಂದುವರೆಯುತ್ತದೆ)