Sunday, August 5, 2012

Remembering you.... Dharwad


ಶ್ರಾವಣದ ಮಳೆ ಮತ್ತು ಧಾರವಾಡದ ಘಮಲು


      ಧಾರವಾಡಕ್ಕೆ ಧಾರವಾಡವೇ ಒಂದು ತರಹದ ಆಕರ್ಷಣೆ! ಹಳೆಯ ಬ್ರಿಟಿಷ್ ಶೈಲಿಯ ಕರ್ನಾಟಕ ಕಾಲೇಜು, ಅದರೆದುರೇ ಒಂದು ಕೂಗಳತೆಯ ದೂರದಲ್ಲಿರುವ  ಆಕಾಶವಾಣಿ, ಅಲ್ಲಿನ ಹಿರಿಯ ಮಿತ್ರರು, ಕಲಾವಿದರು,  ಎದುರಿನಲ್ಲಿಯೇ ಇರುವ ಪಂ.ಮಲ್ಲಿಕಾರ್ಜುನ ಮನ್ಸೂರ್ ಅವರ ಮನೆ,  ಹಾಗೆಯೇ ಕೆಳಗಿಳಿದು ಹೋದರೆ ‘ಬಾರೋ ಸಾಧನ ಕೇರಿಗೆ, ನನ್ನ  ಒಲುಮೆಯ ಗೂಡಿಗೆ’ಎಂದು ಕೈಬೀಸಿ ಕರೆಯುವ ಸಾಧನಕೇರಿ, ಬೇಂದ್ರೆ ಅಜ್ಜ! ಚುಮುಚುಮು ಶ್ರಾವಣದ ಮಳೆ, ಮಳೆಯೊಂದಿಗೇ ತೂರಿ ಬರುವ ಹಳೆಯ ನೆನಪುಗಳು. 

ಸಾಧನ ಕೇರಿಯಲ್ಲಿದ್ದ ಸಂಶೋಧನಾ ಒಂಟಿಸಲಗ  ಶಂಬಾ ಜೋಶಿಯವರ ಮನೆಯಲ್ಲಿ ನಾನು ಭಾಡಿಗೆಗಿದ್ದ ದಿನಗಳು, ಅವರ ಮನೆಯೆದುರಿನ, ಅವರಂತೆಯೇ ಅಷ್ಟುದ್ದ… ಎತ್ತರದ ಸುರಗಿ ಮರ,  ಅದರಡಿಯಲ್ಲಿ ಹಾಸಿ ಬಿದ್ದಿರುವ ಘಮಘಮದ ಸುರಗಿ ಹೂವುಗಳು. ಅಲ್ಲಿಯೇ ಗೇಟಿಗೆ ತೂಗು ಹಾಕಿರುವ ಲೆಟರ್ ಬಾಕ್ಸು! ಶಂಕರಪಾರ್ವತಿ ನಿಲಯ, ಎರಡನೆಯ ಅಡ್ಡರಸ್ತೆ, ಸಾಧನಕೇರಿ, ಧಾರವಾಡ.  ವಾರಕ್ಕೆರಡುಬಾರಿ ಮದ್ಯಾಹ್ನ, ಸಾಯಂಕಾಲ ಸೈಕಲ್ ಬೆಲ್ ಬಾರಿಸಿ ಪತ್ರಬಂದಿದೆಯೆಂದು ಕೂಗಿ ಕರೆಯುತ್ತಿದ್ದ ಗೆಳೆಯ ಪೋಸ್ಟ್ ಮ್ಯಾನ್, ನಾನಿಲ್ಲದಾಗ ಅದನ್ನು ಜೋಪಾನವಾಗಿ ತೆಗೆದಿರಿಸಿ ನಂತರ ನಗುನಗುತ್ತಲೇ ‘ಪತ್ರಾ ಬಂದಾದ ನೋಡು’ಎಂದು ನೀಡುತ್ತ ಪ್ರೀತಿಯಿಂದ ಕಾಣುತ್ತಿದ್ದ ಅಜ್ಜಿ ವಿಮಲ್ ಡಿಸ್ಕಳ್ಕರ್ (ಶಂ.ಬಾರ ಮಗಳು). ಆ ಮನೆಯ ಹಜಾರದಲ್ಲಿದ್ದ ತೂಗುಯ್ಯಾಲೆ. ಎಷ್ಟೋದಿನ ಅದರ ಮೇಲೆ ತೂಗುತ್ತಲೇ  ಪೋಸ್ಟ್ಮನ್ನನನ್ನು ಕಾಯುತ್ತಿದ್ದ ಕಾತರದ ಕ್ಷಣಗಳು! 

ಅಶೋಕನೊಂದಿಗೆ ಸುತ್ತಾಡಲು ಹೋಗುತ್ತಿದ್ದ ಕೆಲಗೇರಿ ಕೆರೆ, ಅದರಾಚೆಗಿನ ಮಾವಿನ ತೋಪು,  ಸಾಧನಕೇರಿಯ ಮಿತ್ರಮಂಡಳಿ, ಮಾನೆ ಮನೆಯ ಹಬ್ಬದೂಟಗಳು, ಭಾರತೀನಗರದ ಗುಂಟ ಶ್ರೀನಗರಕ್ಕೆ ಹೋಗುವ ಆ ರಸ್ತೆ! ಅಲ್ಲಿಯ ಇಳುಕಲಿನ ಬುಡದಲ್ಲಿರುವ ಹಿರಿಯ ಕವಿಮಿತ್ರ ಸಿದ್ದಲಿಂಗ ದೇಸಾಯರ ಆ ಪುಟ್ಟ ಕೋಣೆ… ಶ್ರೀನಗರದ ಕುರ್ತಕೋಟಿಯವರ ಮನೆ, 720 ಎಕರೆ ವಿಸ್ತಾರದಲ್ಲಿ ಹಬ್ಬಿರುವ ಕರ್ನಾಟಕ ವಿಶ್ವವಿದ್ಯಾಲಯ, ನನ್ನ ಜರ್ನಲಿಸಂ ಡಿಪಾರ್ಟ್ಮೆಂಟು, ಟೈವಾಕ್ ಗುಡ್ಡ, ಪಕ್ಕದ ನಿಸರ್ಗಕಾಲನಿಯ ವ್ಯಾಲಿಯಲ್ಲಿರುವ ಬಾಲಬಳಗ ಶಾಲೆ, ಅಲ್ಲಿಯೇ ನವನಗರದಲ್ಲಿರುವ  ಆಮೂರಜ್ಜ, ಗಿರಡ್ಡಿ, ಮೋಹನ ನಾಗಮ್ಮನವರ ಮನೆಗಳು, ಹಾಗೆ ಮುಂದುವರೆದರೆ ನಿರ್ಮಲನಗರ.

 ನಾನು ಕೆಲಕಾಲ ವಾಸವಿದ್ದ, ಸಕ್ಕರೆಯಂತಹ ಮನಸ್ಸುಳ್ಳ ಸಕ್ರಿಯವರ ಮನೆ ಯೂನಿಸ್, ಓನರ್ ಅಂಕಲ್, ಆಂಟಿ ಸಕ್ರಿ ಟೀಚರ್, ಗೆಳೆಯ ಸಹೃದಯ ಸ್ಟ್ಯಾನ್ಲಿ, ಆತನ ಪತ್ನಿ ಐರಿನ್, ಮಕ್ಕಳಾದ ಕೆನೆಥ್, ರಾಬಿನ್, ಮನೆಗೆಲಸದ ಶಾಹಿದಾ, ಹಾಲಿನ ಹುಡುಗ ಬಸೂ, ಪಾಂಡೂ… ಸುಮಾ ಆಂಟಿ ಹಾಗೂ ಅವಳ  ಒಡ್ಡೋಲಗ, ತೇಜಸ್ವಿಯನ್ನು ನೋಡಿಕೊಳ್ಳುತ್ತಿದ್ದ ಗೀತಾ ಆಂಟಿ ಹಾಗೂ ಅವರ ಮನೆ ಅಜ್ಜ-ಅಜ್ಜಿ, ತೇಜೂನ್ನ ಶಾಲೆಗೆ ಕರ್ಕೊಂಡು ಹೋಗುತ್ತಿದ್ದ ಬೀಬೀಜಾನ್ ಅಜ್ಜಿ, ಪಕ್ಕದ ಬೀದಿಯಲ್ಲಿರುವ ವಿದ್ವಾಂಸ ವೃಷಭೇಂದ್ರಸ್ವಾಮಿಯವರ ಮನೆ, ಅದರ ಪಕ್ಕದಲ್ಲಿ ಕಕಾ ಬಳ್ಳಿಯ ಗೆಳೆಯರೆಂದೇ ಪ್ರಸಿದ್ಧರಾಗಿರುವ ಕಲಬುರ್ಗಿ, ಕಣವಿಯವರ ಮನೆಗಳು, ಅದರ ಮುಂದೆ ಅತ್ತಿಕೊಳ್ಳ, ಹಾಸಿ ಮುಂದೆಬಂದರೆ ರೇಲ್ವೇ ಸ್ಟೇಷನ್.

 ಶಂಕರ ಮೊಕಾಶಿಯವರ ಹಳೇಕಾಲದ ವಿಸ್ತಾರವಾದ ಕಂಪೌಂಡಿನ ಮನೆ, ಮಾಳಮಡ್ಡಿ, ರಾಜಗುರುಚಾಳ,  ಎಮ್ಮೀಕೇರಿ,ಅಲ್ಲಿನ ರಾಮ ರಹೀಮ ಹಾಲಿನ ಡೇರಿ,  ಗೌಳಿಗಲ್ಲಿ, ಅಲ್ಲಿ ಇವತ್ತಿಗೂ ಕಾಣಬರುವ ‘ಧಾರವಾಡದ ಎಮ್ಮೆಗಳು’  ಹೆಡ್ ಪೋಸ್ಟು, ಬಾಸೆಲ್ ಮಿಶನ್ ಪ್ರೌಢಶಾಲೆ, ಹಿಂದೀ ಪ್ರಚಾರ ಸಭಾ, ಉಳವಿ ಬಸಪ್ಪನ ಗುಡಿ, ಬೃಂದಾವನ ಹೋಟೆಲ್ಲು, ಕೋರ್ಟ್ ಸರ್ಕಲ್, ಬಸ್ಟ್ಯಾಂಡು, ಸುಭಾಷ ರಸ್ತೆ, ಸಮಾಜ ಪುಸ್ತಕಾಲಯ, ಮನೋಹರ ಗ್ರಂಥಮಾಲೆ ಅದರ ಮೇಲಿನ ಅಟ್ಟ, ಟಿಕಾರೆ ರಸ್ತೆ, ಹಾಲಗೇರಿ ದತ್ತಾತ್ರಯ ಗುಡಿ, ಶತಮಾನಗಳ  ಇತಿಹಾಸವುಳ್ಳ ಶಂಕರಾಚಾರ್ಯ ಪಾಠಶಾಲೆ.

ಅದರೊಂದಿಗೇ ನೆನಪಾಗುವ ಹಿರಿಯ ಘನವಿದ್ವಾಂಸ ಪಂ.ಭಾಲಚಂದ್ರ ಶಾಸ್ತ್ರಿಗಳು, ಅವರ ಮಕ್ಕಳೂ ನಮಗೆ ಕಾಲೇಜಿನಲ್ಲಿ ಸಂಸ್ಕೃತ ಪಾಠ ಮಾಡಿದ ಗುರುಗಳಾದ ಎಂ.ಎನ್.ಜೋಶಿ, ವಿ.ಬಿ.ಜೋಶಿ ಅವರೂ, ಚಿಕ್ಕ ಸಂದಿಯಂತಹ ಗಲ್ಲಿಯಲ್ಲಿರುವ  ಅವರ ಮನೆ,   ಹೊಸಯಲ್ಲಾಪುರದ ಹಳೇ ಧಾರವಾಡ, ಮಂಗ್ಯಾನ ಮಹಲ್, ಮಾಧವಗುಡಿಯವರ ಮನೆ… ಹೊಸಯಲ್ಲಾಪುರದಲ್ಲಿದ್ದ ಸ್ನೇಹಿತ ಹಲಕರರ್ಣಿಮಠನ ಆರಡಿ ಕೋಣೆ, ಅದು ನಮ್ಮ ದೀಕ್ಷಾ ಮಂದಿರ! ನಾವೆಲ್ಲ ಸಹಪಾಠಿಗಳು ಎಂ.ಎ ಮಾಡುತ್ತಿರುವಾಗ ಹಳೆ ಮಂಗ್ಯಾ ಬ್ರ್ಯಾಂಡ್ ‘ರಂ’ ಗೇರಿಸಿ ಸಹಾಧ್ಯಾಯ ಮಾಡುತ್ತಿದ್ದ ಪವಿತ್ರಸ್ಥಳ!  ಓಹ್ ನೆನಪುಗಳು ಸಾಲುಗಟ್ಟಿವೆ!

      ಮೊನ್ನೆ ಅದೆಷ್ಟೋ ದಿನಗಳ ನಂತರ ಧಾರವಾಡಕ್ಕೆ ಹೋಗಿದ್ದೆ. ಅಪ್ಪನ ಮನೆಗೆ ಹೋದಂತಹ  ಅನುಭವ! ಬೆಳ್ಳಂಬೆಳಿಗ್ಗೆ ಬಸ್ ಇಳಿಯುತ್ತಿದ್ದಂತೆಯೇ ಸಾಲುಗಟ್ಟಿ ನಿಂತಿದ್ದ  ಅಟೋಮಾಮಾಗಳು. “ಬರ್ರೀ ಸರ… ಯಾಕಡಿಗ್ರಿ? ನಾಲ್ವತ್ತ್ ಕೊಡ್ರಿ” ಎಂದು ಹೇಳುವ ಪರಿಯಲ್ಲಿಯೇ ಧಾರವಾಡದ  ಆತ್ಮೀಯತೆಯ ಸೊಗಡಿತ್ತು. ಆತ್ಮೀಯತೆ ಇಲ್ಲಿನ ನೆಲದಗುಣ. ಅದಿನ್ನೂ ಜೀವಂತವಾಗಿದ್ದದ್ದು ಮನಸಿಗೆ ಸಮಾಧಾನ ನೀಡಿತ್ತು.

ಶ್ರಾವಣದ ಮಳೆ ಹನಿಯುತ್ತಿತ್ತು. ನಿರ್ಮಲ ನಗರದ ಜಾನಕಿ ಅಪಾರ್ಟ್ ಮೆಂಟಿನಲ್ಲಿ ಇನ್ನೂ ಗೆಳೆಯ ಮಾಂಡ್ರೆ ಎದ್ದಿರಲಿಲ್ಲ. ಅವನ ಸವಿನಿದ್ದೆಯನ್ನೇಕೆ ಹಾಳುಮಾಡಲಿ ಎಂದು ವಾಕಿಂಗ್ ಹೊರಟೆ. ಗಿರಡ್ಡಿ, ಮೋಹನ ನಾಗಮ್ಮನವರ ಮನೆಗುಂಟ ಸಾಗಿ ಬಾಲಬಳಗದ ಶಾಲೆಯನ್ನೊಮ್ಮೆ ಸುತ್ತುಹಾಕಿ ಎಂ.ಐ ಸವದತ್ತಿಯವರ ಮನೆಗುಂಟ ನಿರ್ಮಲನಗರದ ಸಕ್ರಿಯವರ ಮನೆಯ ಕಡೆ ಹೆಜ್ಜೆ ಹಾಕಿದೆ. ಅದಾಗಲೇ ಬೆಲಗಿನ 6.45. ಸ್ಟ್ಯಾನ್ಲಿ ಎದ್ದಿದ್ದರು. “ಒಹ್ ಇದೇನಿದು ಸರ? ಸರ್ಪ್ರೈಸೂ… ಬರ್ರಿ… ಬರ್ರೀ.. ಎ ಐರೀ ಇಲ್ಯಾರ್ ಬಂದಾರ್ ನೋಡಿಲ್ಲೆ!” ಎನ್ನುತ್ತಲೇ ಅದೇ ಆತ್ಮೀಯ ರೀತಿಯಲ್ಲಿ ಸ್ವಾಗತಿಸಿದ್ರು. ಸಕ್ರಿ ಅಂಕಲ್ ಬಂದ್ರು, ಅವರ ಹಿಂದೇನೇ ಸಕ್ರಿ ಟೀಚರ್ ಆಂಟಿನೂ ಬಂದ್ರು. ಚಹಾದ ಜೊತೀನೇ! ಒಳ್ಳೆಯ ಧಾರವಾಡೀ ಚಹಾ ಆತು. ಜೊತೆಗೇ  ಸಕ್ಕರೆಯಂತಹ ಮಾತುಗಳೂ. ಮಳೆ ಜೋರಾಗತೊಡಗಿತ್ತು. ಕಣವಿ ಅಜ್ಜನ ನಾಯಿ ವಾಕಿಂಗಿಗೆ ಹೊರಟಿತ್ತು. ಆದರೆ ಕಣವಿ ಅಜ್ಜ ಮಾತ್ರ ಕಾಣಲಿಲ್ಲ.
         
 ಮಾಂಡ್ರೆ ಮನೆವರೆಗೂ ಸಕ್ರಿ ಅಂಕಲ್ ಕಾರಲ್ಲಿಯೇ ಬಿಟ್ಕೊಟ್ರು! ನಾನು ಅವರ ಮನೆಯಲ್ಲಿ ಮೂರುವರ್ಷ ಭಾಡಿಗೆಗಿದ್ದೆ. ಆದರೆ ಇವತ್ತಿಗೂ ನಾವೆಲ್ಲ  ಒಂದೇ ಮನೆಯವರೆಂಬ ಭಾವ! ಅದು ಧಾರವಾಡದ ಮೋಡಿ ನೋಡಿ! ಮಾಂಡ್ರೆ ತುಂಬ ಸಂತೋಷಪಟ್ಟಿದ್ದ.  ಅಣ್ಣಾ, ಅಣ್ಣಾ ಅನ್ನುತ್ತಲೇ ಸ್ನಾನಕ್ಕೆಲ್ಲ ರೆಡಿಮಾಡಿಟ್ಟಿದ್ದ. ಪ್ಲೇಟಿನ ತುಂಬ ಅಕ್ಕರೆ ತುಂಬಿದ ಇಡ್ಲಿ ಚಟ್ನಿಹಾಕಿ ಕೊಟ್ಟ. ಜೊತೆಗೆ ಫಸ್ಟ್ ಕ್ಲಾಸ್ ಚಹಾ!
         
 “ ಇದೇನ್ರೀ, ಇದ್ದಕ್ಕಿದ್ಹಾಂಗೆ ಬರೋಣಾತು! ಯಾವಾಗ್ಬಂದಿ? ಎನ್ಸಮಾಚಾರ? ಗೀತಾ, ತೇಜು, ಯಶು ಎಲ್ಲಾ ಆರಾಮಿದಾರ?” ಎನ್ನುತ್ತಲೇ ಪ್ರೀತಿಯಿಂದ ಮಾತನಾಡಿಸಿದ್ದು ನಾಗವೇಣಕ್ಕ. ಶಿವಗಿರಿಯ  ಅವರ ಮನೆ ರಾಗೇಶ್ರಿಯಲ್ಲಿ ಸಂಭ್ರಮವೋ ಸಂಭ್ರಮ. ಶ್ರೀಪಾದ ಹೆಗಡೆ ಕಂಪ್ಲಿ (ಖ್ಯಾತ ಹಿಂದೂಸ್ತಾನೀ ಗಾಯಕರು)…ಶ್ರೀಪಾದಣ್ಣ ( ನಾವೆಲ್ಲ ಅವರನ್ನು ಕರೆಯುವುದು) ಶ್ರೀಪಾದಜ್ಜನಾಗಿ ಪ್ರಮೋಷನ್ ಪಡೆದಿದ್ದರು. ಅವರ ಮಗ ಹರ್ಷ ದಂಪತಿಗಳಿಗೆ ಮಗ ಹುಟ್ಟಿದ ಸಂಭ್ರಮ…  ಅವನಿಗೆ ಹೆಸರಿಡುವ ಸಂಭ್ರಮ.. ‘ಮಾಯಾಂಕ’ ಆಮನೆಗೆ ಹೊಸ ಹರ್ಷದ ಹೊನಲನ್ನೇ ಹರಿಸಿದ್ದ. ಹೀಗೆಯೇ ನೂರ್ಕಾಲ  ಸಂತೋಷ ಆ ಮನೆಯಲ್ಲಿ ನೆಲೆಸಿರಲಿ.
         
 ಹಳೆದೋಸ್ತ ಹಲಕರ್ಣೀ ಮಠ ನಾನೂ ಸೇರಿ ನಮ್ಮ ಜರ್ನಲಿಸಂ ಡಿಪಾರ್ಟ್ ಮೆಂಟಿಗೆ ಹೋಗಿದ್ವಿ. ಗುರುಗಳಾದ ಬಾಲಸುಬ್ರಹ್ಮಣ್ಯ ಬಹುಕಾಲದ ನಂತರ ಭೇಟಿಯಾದರು. ಕಮ್ಮಾರ  ಇನ್ನೂ ಅಲ್ಲಿಯೇ ಇದ್ದಾನೆ. ಅವನತ್ರ ಹೇಳಿ ಚಹಾತರಿಸಿದರು. ಒಂತಾಸು ಆತ್ಮೀಯವಾಗಿ ಮಾತನಾಡಿದ್ವಿ. ಆಮೇಲೆ ಕರ್ನಾಟಕ ಕಾಲೇಜಿಗೆ ಪಯಣ. ಅಲ್ಲಿ ಭೇಟಿಯಾದವ ಮಂಜುನಾಥ ಹಿರೇಮಠನೆಂಬ ಇನ್ನೋರ್ವ ಹಳೇ ದೋಸ್ತ! ಫಿಲಾಸಫರ್, ಪ್ರೆಂಡು. ಈಗ ಅದೇ ಕಾಲೇಜಿನ್ಯಾಗನ ಇಂಗ್ಲೀಷ್ ಮಾಸ್ತರ್ರ. ತುಂಬ ಭಾವಜೀವಿ. ಕನಸುಗಳನ್ನ-ಆದರ್ಶಗಳನ್ನು ಇನ್ನೂ ಹಸಿಹಸಿಯಾಗಿಯೇ ಕಾಪಿಟ್ಟುಕೊಂಡಿದ್ದಾನೆ! ‘ಮಗನ, ನೀ ಬಾಳಾ ಬದ್ಲಾಗಿದೀ’ಅಂತಂದ. ‘ಲೇ ಮಂಜ್ಯಾ, ಲಗೂನ ಮದ್ವಿ ಮಾಡ್ಕೋ ಮಗನ, ಕೂದ್ಲಾ ಎಲ್ಲ ಬೆಳ್ಳಗಾಗ್ಹಾಕತ್ತಾವು. ಮದ್ವಿಮಾಡ್ಕೊಂಡ್ ಮ್ಯಾಲೆ ನೀ ಹ್ಯಾಂಗ್ ಬದ್ಲಾಗಿದೀ ಅಂತ ನಾನ್ ಹೇಳ್ತೇನ್ ನೋಡ್’ಎಂದೆನ್ನುತ್ತ ಅವರ ತಾಯಿ ಕಟ್ಟಿಕೊಟ್ಟ ರುಚಿಯಾದ ಚಪಾತಿ ಪಲ್ಯದ ಡಬ್ಬಿ ಖಾಲಿಮಾಡಿದ್ದೆ, ಕರ್ನಾಟಕ ಕಾಲೇಜಿನ ವಿ.ಕೆ.ಗೋಕಾಕ್ ಲೈಬ್ರರಿಯ ಕೋಣೆಯೊಂದರಲ್ಲಿ!
           
   ತುಂಬ  ಅಪರೂಪದ ಗ್ರಂಥಗಳನ್ನೊಳಗೊಂಡ ಹಳೆಯ ಗ್ರಂಥಾಲಯವದು. ಇದೇ ಜಾಗದಲ್ಲಿ ಗೋಕಾಕರ ಕೊನೆಯ ಭಾಷಣವನ್ನು ಕೇಳುವ  ಅಪರೂಪದ   ಅವಕಾಶ 1992ರಲ್ಲಿ ನಮಗೆ ಲಭಿಸಿತ್ತು. ನಾವು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾಗ ಕುಳಿತುಕೊಳ್ಳುತ್ತಿದ್ದ ಜಾಗಗಳಲ್ಲೆಲ್ಲ ಓಡಾಡಿದ್ದೆವು. ವೀಣಾ ಶಾಂತೇಶ್ವರ ಮೇಡಂ, ವಿ.ಎಸ್.ಕುಲಕರ್ಣಿ ಸರ್, ಜಾಡರ್ ಸರ್, ಮಾರ್ಥಾ ಮೇಡಂ, ಜಾಲಿಹಾಳ ಮೇಡಂ, ಜಮಖಂಡೀ ಮೇಡಂ, ಮ್ಯಾಥ್ಯೂ ಸರ್, ಗ್ಯಾಲರೀ ಕ್ಲಾಸ್ ರೂಂಗಳು, ಎಲ್ಲಾ ಮತ್ತೊಮ್ಮೆ ರಿವೈಂಡಾದಾಂಗಾತು.
          
 ಲಕ್ಷ್ಮಿ ಟಾಕೀಸಿನವರೆಗೆ ಅದೂ ಇದು ಮಾತನಾಡಿಕೊಂಡು ಬರುತ್ತಿದ್ದಂತೆಯೇ ಮಂಜನಿಗೆ ಇನ್ನೇನೋ ನೆನಪಾಗಿತ್ತು. ‘ಲೇ ದೋಸ್ತ, ಹತ್ಮಿನಿಟ್ ನ್ಯಾಗ ಬರ್ತೇನಲೇ, ಜೀನ್ಸ್ ಕಾರ್ನರ್ ನ್ಯಾಗ ನಿನ ಕೆಲಸಾ ಮುಗ್ಸು. ಇಲ್ಲೇ ಬರತೇನಿ’, ಅಂತ್ಹೇಳಿ ಕಾರನ್ನು ವಾಪಾಸ್ ಕಾಲೇಜಿನತ್ತ ತಿರುಗಿಸಿದ. ನಾನೂ ಸಂಗಮ್ ಟಾಕೀಸು, ಬಾಬೂಸಿಂಗ್ ಫೇಡಾ ಅಂಗಡಿಗುಂಟ ಟಿಕಾರೆ ರಸ್ತೆಯ ನನ್ನ ಪ್ರೀತಿಯ ಜೀನ್ಸ್ ಕಾರ್ನರಿಗೆ ಹೋದರೆ ಅದು ಬೀಗಹಾಕಿತ್ತು. ಈ ಸಲ ಜೀನ್ಸ್ ಖರೀದಿಯ ಭಾಗ್ಯ  ಇಲ್ಲಿಲ್ಲ  ಎದು ಕೊಂಡು, ಒಂದಿಷ್ಟು ಪ್ರಖ್ಯಾತ ಬಾಬೂಸಿಂಗನ ಫೇಡಾ ತಗೊಂಡು ಮರಳಿ ಲಕ್ಷ್ಮಿ ಟಾಕೀಸಿನಹತ್ತಿರ ಬಂದೆ. ಅರ್ಧಗಂಟೆಯಾಯಿತು ಮಂಜನ ಪತ್ತೆಯೇ ಇಲ್ಲಾ!   

ರೋಡ್ ಸೈಡಿನ ಮೋರಿಯ ಮೇಲೆ ಕುಂತು ಧಾರವಾಡದ ಜನಗಳನ್ನ, ವಾಹನಗಳನ್ನ,  ಎಮ್ಮೆಗಳನ್ನ, ನೋಡತೊಡಗಿದ್ದೆ. ಲಕ್ಷ್ಮಿಯಲ್ಲಿ ’ನೊಣ’ ಪಿಕ್ಚರ್ ಹತ್ತಿತ್ತು. ಇಲ್ಲಿ ನನಗೆ ಮೋರಿಯ ನೊಣಗಳ ಕಾಟ ಸುರುವಾಗಿತ್ತು. ಮಳೆ ಬೇರೆ ಜೋರಾಗತೊಡಗಿತ್ತು. ಟಾಕೀಸಿನ ಪಕ್ಕದ ಪಾನಂಗಡಿಯಲ್ಲಿ ನಿಂತು ಅದ್ಭುತವಾದ ಬನಾರಸ್ 120 ಪಾನನ್ನು ಕಟ್ಟಹೇಳಿದೆ. ಅದಾಗಲೇ ಒಂದು ತಾಸು ಕಳೆದಿತ್ತು. ಅಷ್ಟರಲ್ಲಾಗಲೇ ಒಂದ್ಹತ್ತು ಸಲ ಫೋನ್ ಮಾಡಿದ್ದೆ ಮಂಜನಿಗೆ. ಆಸಾಮಿ ಉತ್ತರಿಸುತ್ತಲೇ ಇಲ್ಲ! ಇವಾ ಮಾತ್ರ ಹೋದ್ಹೋದಲ್ಲೇ ಅಸ್ತ, ಒಂಚೂರೂ ಬದಲಾಗಿಲ್ವಲ್ಲ ಅಂತ್ಹೇಳಿ ಬಾಯಲ್ಲಿ ರಸಗವಳವನ್ನು ಮೆಲ್ಲತೊಡಗಿದೆ. 

ಧಾರವಾಡದ ಘಮ, ಶ್ರಾವಣದ ಮಳೆ, ಸುಭಾಷರಸ್ತೆ, ಕರ್ನಾಟಕ ಕಾಲೇಜು, ಪಾವಟೆನಗರ, ಕೆಲಗೇರಿ, ಸಾಧನಕೇರಿ, ನಾರಾಯಣಪುರ, ಮುರುಘಾಮಠ, ಬಸವರಾಜ ರಾಜಗುರುಗಳ ಸಂಗೀತ ಮತ್ತು ‘ಮೊಮ್ಮಗನೇ, ಇಕಾ ಬೇಸಿನ್ ಉಂಡೀ ಮಾಡ್ಯೇನಿ, ರುಚಿ ನೋಡಿ ಹ್ಯಾಂಗಾಗ್ಯೇದ ಹೇಳು. ಇನ್ನೊಂದ್ ಕೊಡ್ತೀನಿ’ಎಂದು ಪ್ರೀತಿಯಿಂದ ತಲೆದಡವಿ ನೀಡುತ್ತಿದ್ದ ಅವರೇ ಮಾಡಿದ ಉಂಡೆ! ನೆನಪಿನ ಬುತ್ತಿ ಬಿಚ್ಚತೊಡಗಿತ್ತು. ಕವಳಕ್ಕೆ ರಂಗೇರಿತ್ತು! ಧಾರವಾಡದ ಘಮಲು ಅಮಲಿನಂತಾಗಿ ಒಂಥರಾ ಅವ್ಯಕ್ತ ಆನಂದದೆತ್ತರಕ್ಕೆ ಒಯ್ದಿತ್ತು. ಮಳೆಯೂ ಕೂಡ  ಮೇಘಮಲ್ಹಾರದ ಅಬ್ಬರದ ತಾನುಗಳಂತೆ ಧೋ ಎಂದು ಸುರಿಯುತ್ತಲಿತ್ತು!

No comments:

Post a Comment