ಇವತ್ತು ಯುಜಿಸಿ ನೆಟ್
ಎಕ್ಸಾಂ ಬರ್ಯೋಕೆ ಅಂತಾ ಬೆಂಗಳೂರಿಗೆ ಹೋಗಿದ್ದೆ! ಮಧ್ಯಾಹ್ನದ ಪೇಪರ್ರು ಒಂದೇ ಗಂಟೆಯೊಳಗೆ ಬರೆದು
ಮುಗಿದು ಹೋಗಿತ್ತು! ಕನಿಷ್ಠ 3 ಗಂಟೆಯವರೆಗಾದರೂ ಎಕ್ಸಾಂ ಹಾಲನ್ನು ಬಿಟ್ಟು ಬರುವ ಹಾಗಿರಲಿಲ್ಲ. ಹಾರ್ಡಾದ
ಡೆಸ್ಕು ಬೆಂಚಿನ ಮೇಲೆ ಬೆಳಗಿನಿಂದಲೂ ಕುಳಿತಿದ್ದರಿಂದ ಸೊಂಟ, ಬೆನ್ನು, ಕುತ್ತಿಗೆ ಎಲ್ಲವೂ
ಹಿಂಡತೊಡಗಿದ್ದವು! ಹಾಳಾದ ಬಿಸಿಗಾಳಿ..... ಸೆಖೆಯನ್ನು ಸಹಿಸಿಕೊಳ್ಳದೇ ವಿಧಿಯಿಲ್ಲ. ಸೂಪರ್ ಆಗಿದ್ದ ಸೂಪರ್ ವೈಸರ್ ಸ್ಮೈಲ್ ಮಾಡುತ್ತಲೇ
ಹೊರಗೆ ಹೋಗೋ ಹಾಗಿಲ್ಲ ಅಂದು ಬಿಟ್ಟರು! ಹಾಗಾಗಿ ಪ್ರಶ್ನೆ ಪತ್ರಿಕೆಯ ಬೆನ್ನಿನಲ್ಲಿ ‘ಬಯಲು ಬಲು
ದೂರ’ ಬರೆಸಿಕೊಂಡಿತ್ತು!
ಬಯಲು
ಬಲು ದೂರ
ಬೆನ್ನಹುರಿಯಾಳದಲಿ ಚುರುಚು
ರು ಚುಳುಕು ಹೆಗಲ ಬುಡದುದ್ದಕ್ಕೂ
ಹರಡಿ ತಲೆಯೆಲ್ಲ ಕರಡ!
ಎದೆಯ ಮೂಲೆಯಲ್ಲೆಲ್ಲೋ ಸರಿವ
ಸರ್ಪಗಂಧಿಯ ಸುಳಿ
ನೆತ್ತಿಯನ್ನೇರಿ ಸರ್ರನೆ
ಸಂದಿಗೊಂದಿಗಳಿಗಿಳಿದು
ಹುಬ್ಬಿನಂಚಲಿ ಮಿಂಚುವ
ಬೆವರಸಾಲೆ.
ಆಸೆಯಾಗುತ್ತಿದೆ, ಪಸೆಯಾರಿದ
ನಾಲಗೆಗೆ; ಗುಟುಕು ನೀರೂ ಸಿಗದ
ಬೆಂಗಾಡು, ನೀರೆ
ನಗುತ್ತಾಳೆ; ಕಾಲನೋಡಿ!
ಕಾಯಬೇಕಿದೆ ಇನ್ನೂ..... ತಾಸು-
ಗಳಿಗೆ, ಗುಂಯ್ ಗುಡುವ
ಗಿರಗಿಟ್ಟಿ, ಗಿರಿಗುಡುವ ತಲೆ
ಯೊಳಗೆ ಆಸೆ-ಬಯಕೆಗಳ
ನೆಲ್ಲ ರುಬ್ಬಿ ಬೀಸಿ ಒಗೆಯಲು
ಬಯಲು ಬಲುದೂರ......
-ವಸಂತ,
ಮಧ್ಯಾಹ್ನ 2-30 ರಿಂದ 3 ರವರೆಗೆ!
ಎಂಇಎಸ್, ಕಾಲೇಜು, ಕೊಠಡಿ ಸಂಖ್ಯೆ 42 (ಎ)
ಬೆಂಗಳೂರು.