Saturday, April 4, 2015

ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ

ಸದಾ ಆನಂದವನ್ನೇ ಹಂಚುತ್ತಿದ್ದ ನಮ್ಮ ‘ಸವಿ’ ಮನೆಯ ಸದಾನಂದ ಕನವಳ್ಳಿ


ಘಾಟಿ ಮನುಷ್ಯ....ಗಟ್ಟಿ ಮನುಷ್ಯ..... ನೇರ ಮಾತು.....ಅಷ್ಟೇ ಮೃದು ಹೃದಯ.... ಬೆನ್ನು ತಟ್ಟಿ ಹುರಿದುಂಬಿಸುವ ಗುಣ.... ಅಷ್ಟೇ ಕಾಳಜಿಯಿಂದ....ಒಮ್ಮೊಮ್ಮೆ ತೀಕ್ಷ್ಣವಾಗಿ....ಇನ್ನೊಮ್ಮೆ ಬ್ಯಾಡಗಿ ಮೆಣಸಿನಷ್ಟು ಖಾರವಾಗಿ....ಕರಾರುವಾಕ್ಕಾಗಿ ಮಾತನಾಡಿದರೂ ಈ ವ್ಯಕ್ತಿಯ ಸಹವಾಸದಲ್ಲಿರಬೇಕು ಎಂಬ ಭಾವ ಮೂಡಿಸಿ ಹತ್ತಿರಕ್ಕೆಳೆದುಕೊಳ್ಳುವ  ಖರೇ ಖರೇ ಆಪ್ತ ವ್ಯಕ್ತಿತ್ವ. ಯಾವಾಗಲೂ ಆನಂದವನ್ನು ಹರಡುವ, ಹೃದಯ ಶ್ರೀಮಂತ  ಸದಾನಂದ ಕನವಳ್ಳಿ ಸರ್ ತಮ್ಮ ಪಾತ್ರ ಮುಗಿಸಿ ಹೊರಟು ಹೋದರು ಎಂಬ ಸುದ್ದಿ ತಿಳಿಯುವ ಹೊತ್ತಿನಲ್ಲಿ ನಾನು ನಾಗರ ಹೊಳೆಯ ಕಾಡಿನಲ್ಲಿ ಮೂರು ಮೂರು ಕಾಡಾನೆಗಳಿಂದ ಕೇವಲ ಹದಿನೈದಿಪ್ಪತ್ತು ಅಡಿಗಳ ದೂರದಲ್ಲಿದ್ದೆ! ಮೈ ಝುಂ ಎನಿಸುವ ಕ್ಷಣವದು. ಸ್ವಲ್ಪವೇ ಶಬ್ದ ಮಾಡಿದರೂ ಸಲಗ ಸಲೀಸಾಗಿ ಎತ್ತಿ ಬಿಸುಡುವ ಸಾಧ್ಯತೆ! ಫೋನಾಯಿಸಿದ ಅಪ್ಪನಿಗೆ ಏನೂ ಹೇಳಲು ತೋಚದೇ ಹತ್ತಿರ ಹತ್ತಿರ ಬರತೊಡಗಿದ ಸಲಗವನ್ನು ಗರಬಡಿದವನಂತೆ ನೋಡತೊಡಗಿದ್ದೆ! ಏನೆನ್ನಿಸಿತೋ ಅದಕ್ಕೆ ನಾಲ್ಕು ಮಾರು ಮುಂದೆ ಬಂದು ಅಡ್ಡ ಸರಿದು ಹೋಯಿತು.

ನಾನಾಗ ಧಾರವಾಡದಲ್ಲಿ ಪಿಯುಸಿ ಓದುತ್ತಿದ್ದೆ. ಅಪ್ಪನಿಗೆ ಮೊದಲಿನಿಂದಲೂ ಆಪ್ತರಾಗಿದ್ದ ಕನವಳ್ಳಿ ಸರ್ ಆಗ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದರು. ಪಾವಟೆ ನಗರದ ಕ್ವಾರ್ಟರ್ಸಿನಲ್ಲಿ ಅವರ ವಾಸ. ಆವಾಗೀವಾಗ ಅವರ ಮನೆಗೆ ಹೋಗುವ ಸಲಿಗೆ. ಹೋದಾಗಲೆಲ್ಲಾ ಹೇಗೆ ಓದಬೇಕು. ಸಾಹಿತ್ಯ ಸಂಗೀತದ ಸಂಬಂಧಗಳು, ವಿವಿಧ ಕಲಾವಿದರ ವಿಶೇಷತೆ ಮತ್ತು ಅವರೊಡನೆ ಒಡನಾಡಿದ ಸಂಬಂಧಗಳ ರಸವತ್ತಾದ ವರ್ಣನೆ. ಜೊತೆಗೆ ತಾಯಿ ವಿಶಾಲಾಕ್ಷಿ ಕನವಳ್ಳಿ ಅವರು ಪ್ರೀತಿಯಿಂದ ಬಡಿಸುವ ಜೋಳದ ರೊಟ್ಟಿ ಊಟ!  ಅವರ ಮನೆಗೆ ಹೋಗುವುದೆಂದರೆ  ಒಂದು ರೀತಿಯಲ್ಲಿ ‘ಅಪ್ಪನ ಮನೆಗೆ ಹೋಗುವ’ ಬೆಚ್ಚಗಿನ ಅನುಭವ. ಇತ್ತೀಚಿನವರೆಗೂ ಧಾರವಾಡಕ್ಕೆ ಹೋದಾಗಲೆಲ್ಲ  ಅವರ ಮನೆಗೆ ಹೋಗಿ ಕೆಲಹೊತ್ತು ಹರಟೆ ಹೊಡೆದು ಬರುವುದು ವಾಡಿಕೆಯಾಗಿತ್ತು.
ನನಗೆ ಯಾವಾಗಲೂ ಅವರು ‘ವೈಸ್ ರಾಯ್’ ಎನ್ನುತ್ತಿದ್ದರು! ಅನೇಕ ಸಂದರ್ಭಗಳಲ್ಲಿ ನಾನು ಅಪ್ಪನ ಪ್ರತಿನಿಧಿಯಾಗಿ ಅವರು ಯೋಜಿಸಿದ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೆ ಮತ್ತು ವಾಲಂಟಿಯರ್ ಆಗಿ ನನಗೆ ವಹಿಸಿದ ಕೆಲಸ ಮಾಡುತ್ತಿದ್ದೆ. ‘ಏನಪಾ ವೈಸ್ ರಾಯ್’ ನಿಮ್ಮಪ್ಪ ಭಾಳಾ ಶಾಣ್ಯಾ ಅದಾನ್ ನೋಡು. ಲಗೂನ ಮದಿವಿ ಆದ್ರ ಇದೊಂದು ಅಡ್ವಾಂಟೇಜ್! ನಿನ್ನನ್ನ ತನ್ನ ರಿಪ್ರಸೆಂಟೇಟಿವ್ ಆಗಿ ಕಳಸ್ಯಾನ. ಅರಾಂ ಅದಾನೇನಪಾ? ನಿಮ್ಮವ್ವ ಆರಾಂ ಅದಾಳ? ತ್ವಾಟಾ ಪಟ್ಟಿ ಕಮತಾ ಚೆನ್ನಾಗಿ ನಡದೈತಿ? ವಿಶಾಲಾಕ್ಷಿ ನೋಡ... ವಸಂತ ಬಂದಾನ’ ಹೀಂಗಂತ ಅಗದೀ ಆತ್ಮೀಯವಾಗಿ ಮಾತನಾಡಿಸುತ್ತ ಒಂದು ರೀತಿಯ  ಕಂಫರ್ಟ್ ಝೋನ್ ನಿರ್ಮಿಸಿಬಿಡುತ್ತಿದ್ದರು. ಅವರ ಖಡಕ್ ಶಿಸ್ತು. ಏನೇ ಮಾಡಬೇಕಾದರೂ ಅತ್ಯಂತ ನೀಟಾಗಿ, ಕರಾರುವಾಕ್ಕಾಗಿ ಯೋಜಿಸಿ, ಯೋಚಿಸಿ ಕೈಗೊಳ್ಳುತ್ತಿದ್ದ ಅವರ ಕಾರ್ಯಶೀಲತೆ, ಬದ್ಧತೆ, ವಿವಿಧ ವಿಷಯಗಳೆಡೆಗಿನ ಅವರ ಪ್ರೀತಿ, ಜನಸಾಮಾನ್ಯರ ಬಗೆಗಿರುವ ಅವರ ಕಾಳಜಿ, ಅವರನ್ನು ನಿಜವಾದ ದೊಡ್ಡಮನುಷ್ಯನನ್ನಾಗಿ ಮಾಡಿದ್ದವು.

ಒಂದು ರೀತಿಯಲ್ಲಿ ಅವರೊಂದು ಸಲಗ! ಅತ್ಯಂತ ಗ್ರಾಮೀಣ ಪ್ರದೇಶದಿಂದ ಬಂದು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ವಿದ್ಯಾಭ್ಯಾಸ ಪಡೆದು, ಇಂಗ್ಲೀಷ್ ಮೇಷ್ಟ್ರಾಗಿ ಕೆಲಸ ಆರಂಭಿಸಿ, ಸೇವೆ ಸಲ್ಲಿಸಿದ ಜಾಗಗಳಲ್ಲೆಲ್ಲ ಗಜಗಾಂಭೀರ್ಯದಿಂದ ಕೆಲಸ ನಿರ್ವಹಿಸಿ ಆ ಸಂಸ್ಥೆಗಳಿಗೂ, ಸುತ್ತಮುತ್ತಲಿನ ಸಾಮಾನ್ಯ ಜನತೆಗೂ ಪರಸ್ಪರ ಪ್ರೀತಿ-ಸ್ನೇಹ-ಅಭಿಮಾನಗಳ  ಬಾಂಧವ್ಯದ ಕೊಂಡಿಯನ್ನು ಬಲಪಡಿಸಿದವರು ಕನವಳ್ಳಿ ಸರ್. ತಮ್ಮ ಅರಿವಿನ ದಾರಿಯಲ್ಲಿ ಹಲವರನ್ನು ಒಗ್ಗೂಡಿಸಿಕೊಂಡು ಮುನ್ನಡೆದವರು, ಮುನ್ನಡೆಸಿದವರು. ಮನೆಗೆ ಬಂದ ಯಾರನ್ನೇ ಆಗಲಿ ಬರಿದೇ ಕಳಿಸಿದವರಲ್ಲ. ಅನ್ನವನ್ನು ನೀಡುವುದಲ್ಲದೇ ವಿವೇಕ, ವಿಚಾರಗಳ ಮುದ್ದೆ ಮಾತುಗಳೊಂದಿಗೆ ರಸಗವಳ ನೀಡಿ ಜಲದರ್ಶಿನಿ ನಗರದ ‘ಸವಿ’ಯಲ್ಲಿ ಸವಿ ಬದುಕ ಸವಿದವರು. ಕನವಳ್ಳಿ ಸರ್..... ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲದೇ ಹೋದರೂ, ಸವಿ ನೆನಪಾಗಿ, ಪ್ರಜ್ಞೆಯಾಗಿ ನಮ್ಮಂತವರ ಭಾಗವಾಗಿ ಬಹುಕಾಲದವರೆಗೂ ಇರುತ್ತೀರಿ. ನೀವು ತುಂಬು ಬದುಕನ್ನು ಬಾಳಿದ ಮನೆ ‘ಸವಿ’ಯಲ್ಲಿ  ಸದಾ ನೆಮ್ಮದಿ ನೆಲೆಸಿರಲಿ.

ನಮಸ್ಕಾರಗಳು.
ನಿಮ್ಮ ಪ್ರೀತಿಯ

ವೈಸ್ ರಾಯ್

Tuesday, September 30, 2014

ಆಯುಧ ಪೂಜೆಯ ಹೊತ್ತಲ್ಲಿ.........

ಬೆಳಿಗ್ಗೆ 8:30 ಕ್ಲಾಸಿನಲ್ಲಿ ಅಮೇರಿಕದ ರಾಷ್ಟ್ರಕವಿ ವಾಲ್ಟ್ ವಿಟ್ಮನ್  ಕುರಿತು ಪಾಠಮಾಡಿ ಅದಾಗ ತಾನೇ ಡಿಪಾರ್ಟ್ ಮೆಂಟಿನ ಸ್ಟಾಫ್ ರೂಂ ಗೆ ಬಂದು ಕುಳಿತಿದ್ದೆ. ಕೆಲ ಹುಡುಗರು ಸಂಭ್ರಮದಿಂದ ಓಡಾಡಿ ಎಲ್ಲ ಕಡೆ ಸಿಂಗರಿಸುತ್ತಿದ್ದರು. ಪ್ರಿನ್ಸಿಪಾಲರು 250/- ಕೊಟ್ಟು ಆಯುಧ ಪೂಜೆ ಮಾಡಿ ಸಂಭ್ರಮಿಸಿ ಎಂದಿದ್ದರಂತೆ! ಅಂತೆಯೇ ಹುಡುಗರು ಖುಷಿಯಿಂದ ಓಡಾಡಿಕೊಂಡಿದ್ದರು. ‘ಅವರವರ ಭಕುತಿಗೆ’ ಎಂಬಂತೆ ಹೂವು ಗಂಧಾದಿಗಳಿಂದ ಸ್ಟಾಫ್ ರೂಮಿನ ಫ್ಯಾನು... ಕಂಪ್ಯೂಟರ್ರು....ಟೇಬಲ್ಲು....ಖುರ್ಚಿ...ಕಪಾಟು........ಚಾಕ್ ಬಾಕ್ಸ್....ಅಟೆಟಂಡೆನ್ಸ್ ರಜಿಸ್ಟ್ರು....ಅಸೈನ್ಮೆಂಟುಗಳು... ಎಲ್ಲವುಗಳನ್ನೂ ಸಿಂಗರಿಸುತ್ತಿದ್ದರು! ನನಗೆ ಛಕ್ಕನೆ ಗಮನ ಸೆಳೆದದ್ದು ವಿದ್ಯಾರ್ಥಿಯೋರ್ವ ಅಲ್ಲಿದ್ದ ಶೇಕ್ಸ್ ಪಿಯರನ ಫೋಟೋಕ್ಕೆ ಹಣೆಯ ಮೇಲೆ ಭಸ್ಮ ಲೇಪಿಸಿ, ಕುಂಕುಮದ ಬೊಟ್ಟನ್ನಿಟ್ಟಿದ್ದು!...........


ಶೇಕ್ಸ್ ಪಿಯರ್ ಹಣೆಗೆ
ವಿಭೂತಿ ಹಚ್ಚಿ ಕುಂಕುಮವಿಟ್ಟು
ಹೊಸ ಗೆಟಪ್ಪಿನಲ್ಲಿ ಕಂಡಾಗ
ಬಸವಣ್ಣ ಹೊಟ್ಟೆಹುಣ್ಣಾಗುವಷ್ಟು
ನಗುತ್ತಿದ್ದ ಇಂಗ್ಲಿಷ್ ಕೋಟು-ಷರಾಯಿ
ತೊಟ್ಟು! ಸ್ವಾಮೀ......
ಫಿಯರ್ರು ಶೇಕಾಗುವ ಸಮಯದಲ್ಲಿ
ಅಲ್ಲ....ಮನ ಶಬ್ದಲಜ್ಜೆ ಕಳಚಿ
ಬೆತ್ತಲು ಬಯಲಾಗುವ ಪರಿಗೆ
ಕಥಾರ್ಸಿಸ್ ನರ್ತನ!
ಶೇಕಣ್ಣ, ಬಸ್ವೋಸ್ಪಿಯರ್
ಕ್ಲೋನಿಂಗು ಅಪೂರ್ವ
ಪಶ್ಚಿಮದ ಅಪರಿಮಿತ ಅನುಭಾವ...
ನುಡಿಯ ಬೆರಗು!

-ವಸಂತ

1-10-2014, ಬೆಳಿಗ್ಗೆ 10 ಗಂಟೆ.....

Thursday, September 25, 2014

ಹೀಗೊಂದು ಕಟ್ಟೆಪುರಾಣ........


ನಿನ್ನೆ ಬೆಳಿಗ್ಗೆ ಎದ್ದವನು ನನ್ನ ಪಾಲಿನ ದಿನವನ್ನು ಮುಗಿಸಿ ಮಲಗಿ ಕೊಂಡಾಗ ಅದು ಬೆಳಗಿನ ಜಾವ 4:10 ಗಂಟೆ! ಬೆಳಿಗ್ಗೆ 8:30 ಗಂಟೆಗೆ ಹುಡುಗರು ಕಾದಿರುತ್ತಾರೆ ಎಂಬ ವಿಚಾರ ನನ್ನನ್ನು ಮಲಗಲು ಬಿಡಲಿಲ್ಲ. 6 ಗಂಟೆಗೇ ಎಚ್ಚರವಾದರೂ ಹಾರ್ಟ್ ಕ್ರೇನ್ ಬರೆದ “ಟು ಬ್ರೂಕ್ಲಿನ್ ಬ್ರಿಡ್ಜ್ “ ಕವನವನ್ನು ಮೆಲಕು ಹಾಕುತ್ತ ಮಗ್ಗಲು ತಿರುವ್ಯಾಡಿದ್ದೆ. ಬಹಳ ಹೊತ್ತು ಹಾಸಿಗೆಯಲ್ಲಿರಲಾಗಲಿಲ್ಲ. ರಾಜಗುರುಗಳ ಭಟಿಯಾರ್, ಅಲೈಯಾ ಬಿಲಾವಲ್ ಕೇಳುತ್ತ...ಕೇಳುತ್ತ ... ಕಳೆದು ಹೋದೆ! ಸುಮಾರು ಮೂರು ಗಂಟೆಯ ಅವಧಿಯಕ್ಲಾಸು ಅದು ಹೇಗೆ ಕಳೆಯಿತೋ ಗೊತ್ತಾಗಲಿಲ್ಲ! ಶಬ್ದ ಪದವಾಗಿ, ಪದ ಅರ್ಥವಾಗಿ...ಪದಾರ್ಥವಾಗಿ.... ಪೂರ್ವರೂಪ ‘ಗ’ಕಾರ, ಮಧ್ಯಮ ರೂಪದ ‘ಅ’ ಕಾರ, ಅಂತ್ಯದ ಅನುಸ್ವಾರ, ಬಿಂದುವಿನ ಉತ್ತರದಲ್ಲಿ ಸೇರಿ ನಾದಸ್ಸಂಧಾನವಾಗುವ ಪರಿಯನ್ನು ಅಕ್ಷರಶಃ ಅನುಭವಿಸಿದೆ! ಕಳೆದು ಹೋಗಿರುವ ನಾನು ಇನ್ನೂ ಪೂರ್ತಿ ಸಿಗುತ್ತಲಿಲ್ಲ!
ಮದ್ಯಾಹ್ನ 3 ಗಂಟೆಗೆ ‘ಸಾಫ್ಟ್ ಸ್ಕಿಲ್ಸ್’ ಕುರಿತು ಸುಮಾರು ನೂರರ ಆಸು ಪಾಸು ಸಂಖ್ಯೆಯಲ್ಲಿರುವ ಕಾಲೇಜು ಮಕ್ಕಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದಿದೆ. ಗ್ರೂಮಿಂಗ್ ಬಗ್ಗೆ ಹೇಳಬೇಕಾದರೆ ನಾನು ವೆಲ್ ಗ್ರೂಮಾಗಿ ಹೋಗದಿದ್ದರೆ ಹೇಗೆ? ಡ್ರೆಸ್ ಕೋಡ್ ಬಗ್ಗೆ ಅಡ್ರೆಸ್ ಮಾಡಬೇಕಾದರೆ ನಾನು ಮೊದಲು ಅದನ್ನು ಆಚರಣೆಗೆ ತರಬೇಕಲ್ಲವೇ? ‘ನೀಲಿ’ ಬಣ್ಣದ ವ್ಯಾಮೋಹ ನನಗೆ! ನೀಲಿ ಬಣ್ಣದ ಶರಟಿನ್ನು ಇಸ್ತ್ರಿ ಮಾಡಿಸಲೆಂದು ಹೋದರೆ ಆಗಲೇ ಕರೆಂಟು ಹೋಗಬೇಕೆ?

ಅಗಸ ಹೇಳಿದ, “ ಎಲ್ಲಾದರೂ ಹೋಗಿ ಬಿಟ್ಟು ಬನ್ನಿ ಸಾರ್’ ಅಂತ” ಎಲ್ಲಿ ಹೋಗಲಿ? ಏನನ್ನು ಬಿಟ್ಟು ಬರಲಿ?.....ಬೇಕೆಂತಲೇ ಬೆಳಗಿನಿಂದ ಕಳೆದುಕೊಂಡವನಿಗೆ ಬಿಟ್ಟು ಬರುವಂತಹದೇನಿದೆ?.....ಎಂದೆಲ್ಲ ಫಿಲಾಸಫಿ ವಿಚಾರ ಮಾಡುತ್ತಿದ್ದಾಗಲೇ ಪಕ್ಕದ ಅಂಗಡಿಯ ದರ್ಜಿ ಹೊರಗೆ ಬಂದ. ಎದುರಿನ ಅಂಗಡಿಯ ಹುಡುಗ ಬಂದ. ನಾನೂ ಅಲ್ಲೇ ಇದ್ದ ಸ್ಟೂಲೊಂದರ ಮೇಲೆ ಸುಖಾಸೀನನಾದೆ. ಕವಳದ ಸಂಚಿ ಬಿಚ್ಚಿ ಕವಳ ಮೆಲ್ಲುತ್ತ ಕಿವಿಯಾದೆ!
ಹುಡುಗ: ಏನಣ್ಣಾ ಕರೆಂಟು ತಗ್ದು ಬುಟ್ರು ಹಾಳ್ ಕೆಇಬಿನವ್ರು. ಹೊತ್ತು ಗೊತ್ತು ಇಲ್ಲ ಅವ್ರಿಗೆ. ಇನ್ನೇನು ಅದು ಬರಾಕಿಲ್ಲ ಬಡಾನೆ.
ಅಗಸ: ಏಯ್ ಲೌಡಿ ಮಗ್ನೆ! ಬುಡ್ತು ಅನ್ನು. ಹಾಂಗ್ ಅನ್ಬೇಡಾ. ಬೆಳಾಗಿಂದ ಇಲ್ಲೀಗಂಟ ಬೋಣೀನೇ ಆಗಿಲ್ಲೋ. ಐನ್ ಟೇಮಿಗೇ ಹೊಟ್ಟೆ ಮೇಲೆ ಹೊಡೀತಾರೆ ಕಣ್ಲಾ ಈ ಕರೆಂಟ್ ನವ್ರು
ದರ್ಜಿ: ಆತು ಬುಡ್ಲಾ... ನಿನ್ನೆ ಅಮಾಸೆ ಉಪವಾಸ....ಈವೊತ್ತು ಈ ನಮೂನಿ.... ಏನ್ಲಾ ಇದು ನಮ್ಮಂತೋರಿಗೆ ಕೆಲ್ಸಾ ಮಾಡ್ತೇವಂದ್ರೂ ಮಾಡಾಕ ಬಿಡಾದಿಲ್ಲಾ ನೋಡೂ
ಹುಡುಗ: ನಿನ್ನೆ ಸಿದ್ರಾಮಯ್ಯ ಬಂದಿದ್ದಾ ಕಣಣ್ಣೋ. ಅದೆಂತದೋ ಜ್ಯೂಸು ಕುಡುಸ್ತಾನಂತೆ ಎಲ್ಲಾರ್ಗೂ. ನಿನ್ನೆ ಅದೆಂತದೋ ಜ್ಯೂಸ್ ಫ್ಯಾಕ್ಟ್ರಿ ತಾವಕ್ಕೆ ಹೋಗಿದ್ನಂತೆ ತುಮ್ಕೂರ್ತಾವ. ರಿಬ್ಬನ್ ಕಟ್ಮಾಡಿದ್ನಂತೆ. ನಾನೂ ಅಪ್ಲಿಕೇಷನ್ನು ಹಾಕಾವ ಅಂದ್ಕಂಡಿದೀನಿ ಕಣ್ಲಾ.
ದರ್ಜಿ: ಎಲ್ಲಾ ರೆಡಿ ಮಾಡಿ ಇಕ್ಯ. ಹಾಕಾಕೆ ಹೋಗ್ಬೇಡ. ಹಾಕ್ದವ್ ರ್ಗೇ ಇನ್ನೂ ಏನೂ ಸಿಕ್ಕಿಲ್ಲಾಂತೆ....
ಹುಡುಗ: ಏನ್ಲಾ ನಿನ್ನೆ..... ಅದೇನದೂ....ಮೋದಿ ಮಾತ್ರಾ ಸಕತ್ ಪರ್ಫಾರ್ಮ್ ಮಾಡ್ತವ್ನೆ! ಕನ್ನಡಾ ಮಾತಾಡ್ದಂಗೆ ಹಿಂದೀ ಮಾತಾಡ್ದ! ಒಂಚೂರು ಛೇಂಜು ಅಷ್ಟೇಯಾ. ನಂಗಂತೂ ಕನ್ನಡಾ ಅರ್ಥಾದ್ಹಾಂಗೆ ಅರ್ಥಾ ಆತು ನೋಡು.
ಅಗಸ: ಒಂಚೂರೂ ಟೆಂಗ್ಶನ್ ತಗಳ್ದಾಂಗೆ ಇರ್ತಾನೆ ನೋಡಪಾ ಅವಾ. ಭಾರೀ ಮಾತಾಡಿದಾ. ಬೆಂಗ್ಳೂರ್ನಾಗೆ ಭಾಷಣಾ ಮಾಡಿ ಇಲ್ಲೀಗ್ ಬಂದವ್ನಂತೆ ನೋಡು. ತಗಳಪ್ಪಾ ಏನು ಗತ್ತು ಅವಂದು......ಮಂಗಳ ಗ್ರಹದ ಬಗ್ಗೆ ಮಾತಾಡವ್ನೆ.
ದರ್ಜಿ: ಹೌದಪಾ.. ಪ್ಯಾರೇ ದೇಶ್ ವಾಸಿಯೋ, ಆಜ್ ಡೋಲ್ ಬಜಾಕೆ ಹಂ ಇಸ್ ಸಾಧನಾ ಕೋ ಮನಾಯೇಂಗೇ... ಅಂತಂದವ್ನೆ. ಹೀಂಗೇ ಎಲ್ಲಾದಕ್ಕೂ ಡೋಲು ಬಾರಿಸ್ಕ್ಯಂತಾ ಹೋದ್ರೆ ನಮ್ಮ ಕೇಳೋರ್ಯಾರ್ಲಾ? ಆದ್ರೂ ಬುಡು ಚೆಂದಾಕಿ ಮಾತಾಡ್ತವ್ನೆ. ನಿಂತ್ಕಂಡು ಕೇಲೋವಾಂಗಿರ್ತದೆ.
ಹುಡುಗ: ಅಣ್ಣೋ, ಜೀ ಅಂದ್ರೆ ಯೇನ್ಲಾ? ಮಾತ್ ಮಾತಿಗೆ ಸಿದ್ರಾಮಯ್ಯಾ ಜೀ, ಸದಾನಂದ ಗೌಡಾಜೀ ಅಂತಿದ್ನಲ್ಲಾ ಅವಾ.
ಅಗಸ: ಅದೊಂತರಾ ಏಕವಚನಾನಾ ಭೋವಚನ್ದಾಗೆ ಮಾತೋಡೋದು ಕಣ್ಲಾ. ಯಡ್ಯೂರಪ್ಪಾ ಬಂದಾ ಅಂದ್ರೆ ಕಮ್ಮೀ ಅದು. ಯಡ್ಯೂರಪ್ನೋರು ಬಂದ್ರು ಅಂತಾನೇ ಅನ್ಬೇಕು.
ದರ್ಜಿ: ಜೀ ಅಂತಂದ್ರೆ ಭೋವಚನಾ ತಮ್ಮಾ. ಯಾವ್ನಾರೂ ಇಲ್ಲೀಗೆ ಬಂದು ಏನ್ಲಾ, ಏನ ಮಡೀಕ್ಕಂಡು ಗುಡ್ಡೆ ಹಾಕ್ಕಂಡಿದೀಯಾ? ಅಂತ ಕೇಳಿದ್ರೆ ನಂಗೆ ಅವ್ಮಾನಾ ಆಗಲ್ವಾ?
ಅಗಸ: ಅದ್ಕೇ ಅಣ್ಣಾ ಅನ್ನೋದು ಕಣ್ಲಾ. ಅದೂ ಭೊವಚನ್ದಾಗೆ ಮಾತಾಡಿಸಿ ಗೌರ್ವಾ ಕೊಟ್ಟಾಂಗೆ. ಹಾಂಗಾಗೀ ನೇ ಮೋದಿ ಎಲ್ಲಾರ್ಗೂ ಜೀ...ಜೀ...ಜೀ ಅಂತವ್ನೆ.
ದರ್ಜಿ: ದಸರಾಕ್ಕೆ ಹೋಯ್ತೀಯೇನಲೋ ಹುಡುಗಾ?
ಹುಡುಗ:ಎಲ್ಲೀಗೇ?
ದರ್ಜಿ: ಇನ್ನೇಲ್ಲೀಗೆ... ಮೈಸೂರಿಗೆ. ಎಷ್ಟೊಂದು ಬಸ್ ಬಿಟ್ಟವ್ರೆ. ನೀ ಬ್ಯಾಚುಲರ್ರು. ನಿನ್ನಂತವ್ರು ಹೋಗ್ಬೇಕು. ನಮ್ದೆಲ್ಲಾ ಇನ್ನೇನೈತೆ? ಮಕ್ಳು, ಮರಿ, ಹೆಂಡ್ತೀ ಕಾಟಾನೇ ಜಾಸ್ತಿ ಆಗಿರೋವಾಗ... ಚಂಡಿ ಚಾಮುಂಡಿ ದುರ್ಗಿ ಎಲ್ಲಾ ನಮ್ಮನ್ಯಾಗೇ ಐತೆ!
ಹುಡುಗ: ಹೋಗ್ ಕಣಣ್ಣೋ ನಿಂದೇ ವಾಸಿ. ನಂಗಂತೂ ಸಾಕಾಗೋಗೈತೆ. ಲವ್ ಎಲ್ಲಾ ಹಾಂಗ್ ಹಾಂಗೇ ಬುಟ್ಬುಟ್ ಹೋಯ್ತವ್ರೆ. ಏನೂ ಬ್ಯಾಡಾ ಎರ್ಡ್ ಕ್ವಾರ್ಟರ್ ಹಾಕಿ ದುಕ್ಕಾ ಮರ್ಯೋದೇ ಸರಿ ಅಂತನಿಸ್ತೈತೆ. ಸರ್ರು ನಗ್ತವ್ರೆ ನೊಡು!
*********

Thursday, September 11, 2014

ವಿಷಾದದಿಂದ ವಿಕಾಸಕ್ಕೆ ನೆಗೆಯುವ ಸಂಸ್ಕಾರ:


ಅನಂತವನ್ನು ಮೂರ್ತವಾಗಿಸಿಕೊಂಡವರು.....ಆನಂತರ...... ಅನಂತದಲ್ಲೂ ಅಮೂರ್ತವಾದವರು ಅನಂತಮೂರ್ತಿ!
-      ವಸಂತ ಭಟ್, ಹಾಸಣಗಿ

ಅನಂತಮೂರ್ತಿ!....... ಹೆಸರನ್ನೇ ಇಡಬೇಕೆಂದು ಅವರ ತಂದೆ-ತಾಯಿಗೆ ಹೊಳೆದಿದ್ದಾದರೂ ಹೇಗೆ? ಹುಟ್ಟು...ಹುಟ್ಟುತ್ತಲೇ.... ಹೆಸರಿನಲ್ಲೇ ಅನಂತವನ್ನು ಮೂರ್ತವಾಗಿಸಿಕೊಂಡವರು.....ಆನಂತರ...... ಅನಂತದಲ್ಲೂ ಅಮೂರ್ತವಾದವರುಸಂದರ್ಭದಲ್ಲಿ ನನಗೆ ಥಟ್ಟನೆ ಹೊಳೆಯುವ ಇನ್ನೊಂದು ವಿಸ್ಮಯ ಎಂದರೆ ಗಾಯನ ಜಗತ್ತಿನ ಅನಭಿಷಿಕ್ತ ಸಾಮ್ರಾಟಭೀಮಸೇನ ಜೋಶಿ’! ಇಬ್ಬರಲ್ಲೂ ಎಂಥ ಸಾಮ್ಯತೆ ನೋಡಿ! ಒಬ್ಬರು ಅನಂತದೊಳಗಣ ಮೂರ್ತಿ...ಇನ್ನೊಬ್ಬರು ಕಾಯಾ, ವಾಚಾ, ಮನಸಾ, ಭೀಮಸೇನ! ಈರ್ವರೂ ಸವಾಲುಗಳು ಮತ್ತು ಸಲಾಮುಗಳನ್ನು ಪಳಗಿಸಿಕೊಂಡವರು! ಸಾಮು ಹೊಡೆದರೇ ಹೊರತು ಸಲಾಮು ಮಾಡಿದವರಲ್ಲ! ಎತ್ತರೆತ್ತರಕ್ಕೇರುತ್ತಲೇ ಜಾರಿ ಪ್ರಪಾತಕ್ಕೆ ಬೀಳದಂತೆ  ಎಚ್ಚರವಹಿಸಿದವರು.....ಧ್ಯಾನಿಸಿದವರು.... ಎಚ್ಚೆತ್ತುಕೊಂಡವರು.....ಮತ್ತು ಅನಂತರೂ......ಭೀಮಸೇನರೂ ಆಗಿ ಅನ್ವರ್ಥಕರಾದವರು!

ಇವರೀರ್ವರೂ ಭೌತಿಕವಾಗಿ ಈಗ ಇಲ್ಲದೇ ಇರಬಹುದು. ಆದರೆ... ನಮ್ಮ ನಿಮ್ಮೆಲ್ಲರ ಮಾನಸದಲ್ಲಿರುವ ಒಂದು ಪರಂಪರೆಯ ಭಾಗವಾಗಿ, ವೈಯಕ್ತಿಕ ಭಾವದೊಳಗಣ ಪರಂಪರೆಯಾಗಿ ಎಂದಿಗೂ ದೂರಸರಿಯುವುದಿಲ್ಲ!
ನಾನಿಂದುಸಂಸ್ಕಾರಕಾದಂಬರಿಯ ಕುರಿತು ನಿಮ್ಮೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ. ಅದಕ್ಕಿಂತಲೂ ಮೊದಲು ಒಂದು ಪೀಠಿಕೆಯೊಂದಿಗೆ ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಅಭಿವ್ಯಕ್ತಿಸಲು ಪ್ರಯತ್ನಿಸುತ್ತೇನೆ. ಉಡುಪಿ ರಾಜಗೋಪಾಲಾಚಾರ್ಯ ಅನಂತ ಮೂರ್ತಿ ಕನ್ನಡದ, ಆಧುನಿಕವೆಂದು ನಾವು ಕರೆಯುವ ಸಾಹಿತ್ಯಕ್ಕೆ ಏನು ಕೊಟ್ಟು ಕಡಿದು ಗುಡ್ಡೆಹಾಕಿದರು? ಎಂಬ ಪ್ರಶ್ನೆಯನ್ನಿಟ್ಟರೆ.........ಉತ್ತರಿಸುವುದು ತುಸು ಕಷ್ಟವೇ!

ಅಡಿಗರಿಂದಾರಂಭಿಸಿ ಆಡೆನ್ ವರಗೆ, ಸಾರ್ತ್ರ್, ಕಮೂ, ಎಲಿಯಟ್ ಮುಂತಾದವರನ್ನು.....ಅವರ ಅಭಿವ್ಯಕ್ತಿಯನ್ನು ಅರಗಿಸಿಕೊಂಡು ನಮಗೆ ದಾಟಿಸುವಲ್ಲಿ ಮಹತ್ವದ ಪಾತ್ರವಾದವರು. ಕನ್ನಡ ಹಾಗೂ ಕನ್ನಡದ ಆಚೆಗೆ ಮತ್ತು ಆಚಿನಿಂದ ಈಚೆಗೆ ಪರಂಪರೆ ಸಂಪ್ರದಾಯವನ್ನು ದಾಟಿಸುವ ಹರಿಗೋಲು ಮೀಟಿದವರು. ಹಾಗೆ ಮೀಟುತ್ತಲೇ ನಡು-ನಡುವೆಸರೋದಿನ ತಂತಿ ಹರಿದು ಅಪಸವ್ಯಕ್ಕೆಡೆಯಾಗುವಂತೆಆದರೂ, ಮಾನವನ್ನೂ, ಅನುಮಾನವನ್ನೂ, ಅಪಮಾನವನ್ನೂ ಸನ್ಮಾನವನ್ನೂ ಏಕಕಾಲಕ್ಕೆ ತಂಬೂರಿಯ.ಸಾ.ಸಾ.ಸಾಸ್ವರದಂತೆ ಶೃತಿಗೊಳಿಸುವಲ್ಲಿ ಹದವರಿತವರು! ಅಪಶೃತಿಯನ್ನೂ ಮೀಟಿ ಬೇಸೂರು ಸೂರಾಗಿಸುವ ತಾಂತ್ರಿಕರು!
ಲೋಕವನ್ನು ಪ್ರಶ್ನಿಸುತ್ತಲೇ, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಲು ಅವರು ಹಿಂಜರಿಯಲಿಲ್ಲ. ಸ್ವಯಂಸಂಶಯ ಮತ್ತು ಒಂದುರೀತಿಯ ಸಮಾಧಿಸ್ಥ ಎಚ್ಚರ ಸಾಮಾನ್ಯರಾದ ನಮಗೆ ವೈರುಧ್ಯವೆಂದು ಅನಿಸಬಹುದು. ಇರಲಿ...ಮುಂದೆ ಸಾಗೋಣ....
ಅನಂತಮೂರ್ತಿಯವರ ಭಾಷೆ ಸಂಗೀತದ ಹಾಗೆಅದರಲ್ಲಿ ಜನರನ್ನು ಒಳಗೊಳ್ಳುವ ಶಕ್ತಿಯಿದೆ. ಆಪ್ತವಾಗಿ ತೆಕ್ಕೆಗೇ ತೆಗೆದುಕೊಳ್ಳುವ ಹಾಗೆ. ಅಲ್ಲಿ ಅಹಂಕಾರಕ್ಕೆ ಎಡೆಯಿಲ್ಲ. ಬೋಧನೆಯಿಲ್ಲ. ಇದು ಹೀಗೇ ಎಂಬ ಉಪದೇಶವಿಲ್ಲ. ಮನಸ್ಸನ್ನು ತಟ್ಟುತ್ತ, ತಡವುತ್ತ, ಆನಂದವನ್ನು ಅನುಭವಿಸುವಂತೆ ಮಾಡುತ್ತಲೇ ಅರಿವಿನ ಅಲಗಿಗೆ ಸಿಲುಕಿಸುವ ಅನಂತತೆಯ ಮುಖಾಮುಖಿಯದು.

ಮುಂದೆ ಗುರಿ, ಹಿಂದೆ ಗುರುಇದ್ದರಷ್ಟೇ ಸಾಕಾಗದು. ಅದನ್ನು ಸೇರುವ ಮಾರ್ಗವೂ ಋತವಾಗಿರಬೇಕು ಎನ್ನುವ ಗಾಂಧಿತತ್ವ ಅನಂತಮೂರ್ತಿಯವರದ್ದು. ಏನೆಲ್ಲ ವೈರುಧ್ಯಗಳನ್ನು ಸಾರಿ ಹೇಳುತ್ತಲೇ ಎಲ್ಲವನ್ನೂ ಒಳಗೊಳ್ಳುವ ಅವಧೂತ ಅಲ್ಲಮನ ಮಾತಿನಹಾಗೆ ಅನಂತಮೂರ್ತಿ ಒಂದು ಬಾಗಿಗೆ ನಿಲುಕುವರಲ್ಲ. ಹಾಗೆ ಅವರನ್ನು ಬಗ್ಗಿಸುವುದೂ ಸಾಧುವಲ್ಲನೇತಿ... ನೇತಿ ಎಂದು ನೋಡಿದರೆ.... ಅಥವಾಐದರ್ ದಿಸ್ ಆರ್ ದ್ಯಾಟ್’’ ಎಂದುಕೊಂಡರೆ ಅನಂತಮೂರ್ತಿ ಇಡಿಯಾಗಿ ನಮಗೆ ಸಿಗದೇ ಹೋಗಬಹುದು!
ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆ, ಭಾಷೆ, ನುಡಿಕಟ್ಟು ಕೊಟ್ಟ ಅನಂತಮೂರ್ತಿಯವರ ಹೊರತಾಗಿ ಕನ್ನಡ ಸಾರಸ್ವತ ಲೋಕದ ಕುರಿತು ಮಾತನಾಡರೊಡಗಿದರೆ ಅದು ಅಪೂರ್ಣವಾಗಿಬಿಡುತ್ತದೆ. ‘ಸಂಸ್ಕಾರ’, ‘ಅವಸ್ಥೆ’, ಭಾರತೀಪುರ, ‘ಭವ’ ಮುಂತಾದ ಕಾದಂಬರಿಗಳು, ‘ಎಂದೆಂದೂ ಮುಗಿಯದ ಕತೆ’, ‘ಪ್ರಶ್ನೆ’, ‘ಮೌನಿ’, ‘ಆಕಾಶ ಮತ್ತು ಬೆಕ್ಕು’, ‘ಸೂರ್ಯನ ಕುದುರೆ’ ಇತ್ಯಾದಿ ಕಥಾಸಂಕಲನಗಳು ಹಾಗೂ ‘ಸನ್ನಿವೇಶ’, ‘ಸಮಕ್ಷಮ’, ‘ಪ್ರಜ್ಞೆ ಮತ್ತು ಪರಿಸರ’, ‘ಬೆತ್ತಲೆ ಪೂಜೆ ಯಾಕೆ ಕೂಡದು?’ ‘ಋಜುವಾತು’, ‘ವಾಲ್ಮೀಕಿಯ ನೆವದಲ್ಲಿ’ ಮುಂತಾದ ವೈಚಾರಿಕ ಬರಹಗಳ ಮೂಲಕ ವಿಶಿಷ್ಟ ಒಳನೋಟಗಳನ್ನು ಹೊಳೆಸಿ, ಚಿಂತನೆಗೆ ಹೊಸ ದಿಕ್ಕನ್ನೊದಗಿಸುವ ಕಾಣ್ಕೆಯನ್ನು ನೀಡಿದವರು ಅನಂತಮೂರ್ತಿ. ಸಾಹಿತ್ಯಾಭ್ಯಾಸಿಗಳಿಗೆ ಹೊಸದಿಸೆಯನ್ನು ಪರಿಚಯಿಸಿದ ಅವರು ಇಂದಿನ ಪೀಳಿಗೆಯ ಬಹುತೇಕರಿಗೆ ಪಾಠ ಮಾಡಿಯೂ, ಮಾಡದೆಯೂ ‘ಮೇಷ್ಟ್ರಾ’ದವರು.

ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಗಳೆರಡನ್ನೂ ಆಳವಾಗಿ ಓದಿ ಅರಗಿಸಿಕೊಂಡಮೇಲೆ ಸ್ವಂತದ್ದನ್ನು ಅಕ್ಷರವಾಗಿಸಿದ ಇವರಲ್ಲಿ ಯುಗಪ್ರಜ್ಞೆಯ ಅನಿವಾರ್ಯ ಲಕ್ಷಣ ಎಂದು ಹೇಳಬಹುದಾದ; ‘ಹೊಸತು’ ಎಂದೆನ್ನಬಹುದಾದ ಸ್ವಯಂಪ್ರತಿಭೆಯ ಅಂತಃಸತ್ವವನ್ನು ಕಾಣಬಹುದು. ದೂರ್ವಾಸಪುರದ ದೂರ್ವಾಸರೆಂದೇ ಕರೆಯಬೇಕಾದ ರಾಜಗೋಪಾಲಾಚಾರ್ಯ ಅವರ ಮಗನಾಗಿ, ಸಂಪ್ರದಾಯವನ್ನು ವಿರೋಧಿಸುತ್ತಲೇ ಆಧುನಿಕತೆಯನ್ನು ಒಪ್ಪಿಕೊಳ್ಳುತ್ತ, ಆದರೆ ಸಂಪ್ರದಾಯವನ್ನು ತಿರಸ್ಕರಿಸಲಾಗದೇ, ಒಳಗೊಳಗೇ ಆರಾಧಿಸುತ್ತ, ಅತ್ತ ಆಧುನಿಕತೆಯನ್ನೂ ಸಂಪೂರ್ಣವಾಗಿ ಅಪ್ಪಿಕೊಳ್ಳಲಾಗದೇ ಚಡಪಡಿಸುತ್ತ, ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬಂತೆ ಆಂತರಿಕ ಸಂಘರ್ಷಗಳ ನಡುವೆಯೇ ಬೇಯುತ್ತ ಬೇಯುತ್ತ ಹದಗೊಂಡು ‘ಭವ’ ವನ್ನು ಮೀರಿದವರು.
‘ಎಂದೆಂದಿಗೂ ಮುಗಿಯದ ಕಥೆ’ ಯಿಂದಾರಂಭವಾಗುವ ಅನಂತಸಾಹಿತ್ಯಯಾತ್ರೆ ಅಷ್ಟು ಸುಲಭಕ್ಕೆ ದಕ್ಕುವ ದಾರಿಯಲ್ಲಿಲ್ಲ. ‘ಪ್ರಶ್ನೆ’ಗಳ ಮೂಲಕ ಬೆಳೆಯುತ್ತ ಗೋಪಾಲಕೃಷ್ಣ ಅಡಿಗರ ಒತ್ತಾಸೆ ಹಾಗೂ ಇಲಿಯಟ್ಟನ ‘ಪ್ರೆಲ್ಯೂಡ್’ ಪದ್ಯದ ಪ್ರಭಾವಗಳಿಂದಾಗಿ ‘ಸಂಸ್ಕಾರ’ವನ್ನು ಪಡೆಯುವಂತಾಯಿತು ಎಂದು 1970ರ ದಶಕದಾರಂಭದಲ್ಲಿ ಸ್ವತಃ ಅನಂತಮೂರ್ತಿಯವರೇ ಹೇಳಿಕೊಂಡಿದ್ದಾರೆ.

‘ಎಂದೆಂದೂ ಮುಗಿಯದೆ ಕತೆ’ ಗೂ ‘ಪ್ರಶ್ನೆ’ ಗೂ  ದಶಕಗಳ ಕಾಲದ ಅಂತರವಿದೆ. ಈ ವೇಳೆಗಾಗಲೇ ಅನಂತದಾರಿ ತೆರೆದುಕೊಂಡು ಬರವಣಿಗೆಯ ನಡೆಯಲ್ಲಿ ಹದ ಸಿಕ್ಕಿತ್ತು. ‘ಪ್ರಶ್ನೆ’ಯ ಕುರಿತು ಸ್ವತಃ ಅನಂತಮೂರ್ತಿ ಹೇಳುತ್ತಾರೆ,”ಇಲ್ಲಿ ಯಾವ ಮುಖವಾಡವನ್ನೂ ಹಾಕಿಕೊಳ್ಳದೆ ಕತೆ ಬರೆದಿದ್ದೇನೆಂದುಕೊಂಡಿದ್ದೇನೆ. ಆದರೆ ಒಂದು ಮುಖವಾಡವನ್ನು ಕಳಚಿದಾಗ, ವಾಸ್ತವವಾಗಿ ಅದರ ಬದಲು ಇನ್ನೊಂದು ಮೊಗವಾಡವೇ ಇರಬಹುದಲ್ಲವೇ? ಎಂಬ ಶಂಕೆಯೂ ಬರುವುದುಂಟು”. ಇದು ಅನಂತಮೂರ್ತಿಯ ಸತ್ಯದರ್ಶನಕ್ಕೆ ಹಿಡಿಯಬಹುದಾದ ಕನ್ನಡಿ.
ನೆಪೋಲಿಯನ್, ಸಾಕ್ರೆಟಿಸ್, ಕಾರ್ಲ್ ಮಾರ್ಕ್ಸ್, ವಾಲ್ಟರ್ ಬೆಂಜಮಿನ್, ಹಾಗೂ ಇನ್ನೂ ಅನೇಕ ಶಕ್ತಿಗಳ ಹಾಗೆ ಅನಂತಮೂರ್ತಿ ಕೂಡಾ ಒಂದು ವ್ಯಕ್ತಿಯ ರೂಪವಷ್ಟೇ ಅಲ್ಲ. ಹಲವು ವ್ಯಕ್ತಿತ್ವಗಳನ್ನು ಒಳಗಿಳಿಸಿ ಜೀರ್ಣಿಸಿಕೊಂಡ ವ್ಯಕ್ತಿಗಳ ಸಮ್ಯಕ್ ಗೀತ. ಹಲವು ಧ್ವನಿಗಳ ಸಿಂಫನಿ. ಸುಮಾರು ಐದು ದಶಕಗಳಿಗೂ ಮಿಕ್ಕಿದ ಕಾಲವನ್ನು ವೈಚಾರಿಕ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಕಳೆಯುವ ಮೂಲಕ ಬೆಳೆದವರು ಅವರು. ಈ ಕಾಲಘಟ್ಟದಲ್ಲಿ ಕಟ್ಟಾ ವಿಚಾರವಾದದಿಂದ ಹಿಡಿದು ಮುಂದುವರೆದು ಒಣವೈಚಾರಿಕತೆಯನ್ನು ಪ್ರಶ್ನಾರ್ಥಕವಾಗಿ ಕಾಣುವ ಕ್ರಮಣವೂ ಕಂಡುಬರುತ್ತದೆ.  ಅನಂತಮೂರ್ತಿ ನಡೆ ಪ್ರಾರಂಭದಲ್ಲಿ ಧರ್ಮ, ಆಧ್ಯಾತ್ಮ, ಪರಂಪರೆ ಕುರಿತು ಅನೇಕ ವಿರೋಧಗಳ ನಡುವೆ ಆರಂಭವಾಗಿ ಕೊನೆಕೊನೆಗೆ ವಿನಮ್ರತೆ, ಉದಾರತೆಯ ಹೆಜ್ಜೆಯಾಗಿ ಪರಿವರ್ತನೆಗೊಂಡದ್ದನ್ನೂ ಗಮನಿಸಬಹುದು. ಸಾಂಸ್ಕೃತಿಕ ಇತಿಹಾಸ ಗೊತ್ತಿಲ್ಲದೇ ಇದ್ದರೆ ಅವರ  ದಾರಿಯ ಹೆಜ್ಜೆಗುರುತುಗಳು ಅರ್ಥವಾಗಲಿಕ್ಕಿಲ್ಲ.

“ ‘ಸಂಸ್ಕಾರ’ ಪ್ರಾಣೇಶಾಚಾರ್ಯರ ಮಾನಸಿಕ ಗೊಂದಲದಲ್ಲಿ ಕೊನೆಗೊಳ್ಳುತ್ತದೆ. ಕಾದಂಬರಿಯ ಕೊನೆಯಲ್ಲಿ ಅವರು ಊರಿಗೆ ಮರಳಲು ಎತ್ತಿನಗಾಡಿಯೇರುತ್ತಾರೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ‘ಭಾರತೀಪುರ’ದಲ್ಲಿ ಕ್ರಾಂತಿ ಕೊನೆಗೊಳ್ಳುವುದು ದೇವರ ಮೂರ್ತಿ ಕಳುವಾಗುವ ಮೂಲಕ. ಇಲ್ಲಿಯೂ ಯಾವುದೇ ಕ್ರಿಯೆಯಿಲ್ಲ. ಮುಂದಾಗಬಹುದಾದ ಕ್ರಿಯೆಯ ಸೂಚನೆಯೂ ಇಲ್ಲ. ಆದರೆ ಮುಂದಿನ ಕೃತಿ ‘ಅವಸ್ಥೆ’ ಮಾತ್ರ ಅಂಥದೊಂದು ಸೂಚನೆಯನ್ನು ನೀಡುತ್ತದೆ. ಇನ್ನೂ ದಡ ದಾಟದವರು ಸಿಡಿದೇಳದೇ ಯಾವ ಕ್ರಾಂತಿಯೂ ಸಾಧ್ಯವಿಲ್ಲ, ಅಲ್ಲಿಯ ತನಕ ಯಾವ ರಾಜಕೀಯ ವ್ಯವಸ್ಥೆಗೂ ಅರ್ಥವಿಲ್ಲ ಎಂಬ ಕೃಷ್ಣಪ್ಪನ ವಿಚಾರದೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ. ಈ ಮೂರೂ ಕಾದಂಬರಿಗಳನ್ನು ಒಂದು ಟ್ರಿಲಜಿಯಾಗಿ ಕೆ.ವಿ.ಸುಬ್ಬಣ್ಣ ಗುರುತಿಸಿದ್ದಾರೆ. ಇವುಗಳ ಟ್ರಾಜೆಕ್ಟರಿ ಕೂಡ ಅನಂತಮೂರ್ತಿಯವರ ವೈಚಾರಿಕ ಬೆಳವಣಿಗೆಯ ಪ್ರತೀಕವೇ ಎಂದು ಗುರುತಿಸಬೇಕಾಗುತ್ತದೆ”, ಎಂದು ಕೆ.ವಿ.ತಿರುಮಲೇಶರು ಹೇಳುತ್ತಾರೆ.
ಅನಂತಮೂರ್ತಿಯವರೊಳಗಡೆಗೆ ಪೋಸ್ಟ್ ಮಾಡರ್ನಿಸಂ ವಿಚಾರ ತೀವ್ರವಾಗಿ ತಿಣುಕಾಡುತ್ತಿದ್ದ ಸಂದರ್ಭದಲ್ಲಿ ‘ಸಂಸ್ಕಾರ’ ಮೂಡಿಬಂದಿತೆನ್ನಬಹುದು. ಪಾಶ್ಚಾತ್ಯ  ಅನುಕರಣೆಗೆ ವಿರುದ್ಧವಾಗಿ ವಿಚಾರ ಮಾಡುತ್ತಿದ್ದ ಸಮಯವದು. ಕೇವಲ ಪಾಶ್ಚಾತ್ಯ ಸಾಹಿತ್ಯದ ಪ್ರಭಾವಮಾತ್ರದಿಂದಲೇ ಒಂದು ಕೃತಿ ಮೇಲ್ಮಟ್ಟದ್ದಾಗುತ್ತದೆ ಎಂಬುದನ್ನು ಅನಂತಮೂರ್ತಿ ಎಂದೂ ಒಪ್ಪಿದವರಲ್ಲ.”ಒಳ್ಳೆಯ ಸಾಹಿತ್ಯಕ್ಕೆ ಅನಿವಾರ್ಯವಾದ ಅನನ್ಯತೆಯೆಂದರೆ ಪಾಶ್ಚಾತ್ಯರ ಅನುಕರಣೀಯ ನವ್ಯಪ್ರವೃತ್ತಿಯಲ್ಲ. ಕನ್ನಡತನವೇ ಅದರ ಜೀವಸತ್ವ. ಅಡಿಗರ ಅನೇಕ ವಿಚಾರಗಳನ್ನು ನಾನು ಒಪ್ಪುವುದಿಲ್ಲವಾದರೂ, ಕನ್ನಡತನದ ಬಗ್ಗೆ ಇರುವ ಜರೂರು ಅಡಿಗರ ಬರವಣಿಗೆಯ ವೈಶಿಷ್ಟ್ಯ. ರಮ್ಯ ಕಾವ್ಯ ಮಾರ್ಗವನ್ನನುಸರಿಸಿದ ನಮ್ಮ ಹಿರಿಯ ಕವಿಗಳೂ ಕೂಡ ಪಾಶ್ಚಾತ್ಯರ ಅನುಕರಣೆಯಿಂದ ದೊಡ್ಡವರಾಗಲಿಲ್ಲ. ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ- ಇವರ ಹಿರಿಮೆಗೆ ಅವರ ಕೃತಿಗಳ ಕನ್ನಡತನವೆ ಕಾರಣ. ಯಾವುದನ್ನು ಬರೆದರೂ ಅದು ಭಾಷೆಯಲ್ಲಿ ಅವತಾರವಾಗಬೇಕೆಂಬುದು ಅಡಿಗರ ಸಿದ್ಧಾಂತ.  ಸೂತ್ರವನ್ನನುಸರಿಸಿದ್ದರಿಂದಲೇ ‘ಸಂಸ್ಕಾರ’ದ ಸಾರ್ಥಕ್ಯ. ನನ್ನ ಮೇಲೆ ಅಡಿಗರ ಪ್ರಭಾವವಿಲ್ಲದಿದ್ದರೆ ಬಹುಶಃ ಈ ಕಾದಂಬರಿ ನೂರೈವತ್ತಕ್ಕಿಂತ ಕಡಿಮೆ ಪುಟಗಳಲ್ಲಿ ಇಷ್ಟೊಂದು ದಟ್ಟವಾಗಿ ಬರುತ್ತಿರಲಿಲ್ಲ. ಬಹುಶಃ ಇದು ನಾನೂರು ಐನೂರು ಪುಟಗಳಿಗೆ ಹಿಗ್ಗುತ್ತಿತ್ತು.

ನಮ್ಮ ಸಾಹಿತ್ಯ ದೊಡ್ಡದಾಗಬೇಕಾದರೆ ಪಾಶ್ಚಾತ್ಯ ಪ್ರಭಾವದಿಂದ ದೂರವಾದ ನಮ್ಮ ಸ್ವಂತ ಅನುಭವಗಳನ್ನೇ ಆರಿಸಿಕೊಳ್ಳಬೇಕು. ಆಗ ಮಾತ್ರವೇ ಕೃತಿಯಲ್ಲಿ ಪ್ರಾಮಾಣಿಕತೆ ಸಾಧ್ಯ. ಆದ್ದರಿಂದಲೇ ನಾನು ನನ್ನ ಬಾಲ್ಯದ ಅನುಭವವನ್ನೇ, ಅಂದಿನ ಪರಿಸರವನ್ನೇ, ಈ ಕಾದಂಬರಿಗೆ ವಸ್ತುವಾಗಿ ಆರಿಸಿಕೊಂಡೆ. ‘ಕಾನೂರು ಹೆಗ್ಗಡತಿ’ಯಲ್ಲಿ ಕುವೆಂಪುರವರೂ, ‘ಗ್ರಾಮಾಯಣ’ದಲ್ಲಿ ರಾವಬಹಾದ್ದೂರರೂ, ತಮ್ಮ ಅನೇಕ ಕಾದಂಬರಿಗಳಲ್ಲಿ ಶಿವರಾಮ ಕಾರಂತರೂ ಮಾಡಿದ್ದಾದರೂ ಇದನ್ನೇ” ಎಂದು ಅನಂತಮೂರ್ತಿಯವರೇ ಹೇಳಿಕೊಂಡಿದ್ದಾರೆ.
ಮಲೆನಾಡು...ಮೈಸೂರು...ಬರ್ಮಿಂಗ್ ಹ್ಯಾಮ್ ಸುತ್ತಾಡಿ, ಪೂರ್ವ-ಪಶ್ಚಿಮಗಳ ಕೊಂಡಿಯಾಗಿ ಎರಡು ಮಹಾಯುದ್ಧಗಳ ಕಾಲದ ಪಶ್ಚಿಮದ ಸಾಹಿತ್ಯವನ್ನು ಅಭ್ಯಸಿಸಿದ ಅನಂತಮೂರ್ತಿಯ ‘ಸಂಸ್ಕಾರ’ ಅನೇಕ ಪರಿಧಿಗಳ ಸಮ್ಮಿಳನ. ಅನೇಕ ವೈಚಾರಿಕ ಪೂರ್ಣಪ್ರಶ್ನೆಗಳ ಸಮನ್ವಯದ ಪ್ರಯತ್ನ. ಮಲೆನಾಡಿನ ಹಳ್ಳಿಯ ಬ್ರಾಹ್ಮಣ ಸಮಾಜವೊಂದರ ಚಿತ್ರಣವನ್ನು ಇಲ್ಲಿ ಕಾಣಬಹುದಾದರೂ ಇದು ಎಲ್ಲ ಜನಾಂಗಗಳಿಗೂ ಅನ್ವಯವಾಗುವ ಶಾಶ್ವತ ಪ್ರಶ್ನೆಯೊಂದನ್ನು ಎತ್ತುತ್ತದೆ. ‘ಸಂಸ್ಕಾರ’ ಚಲನಚಿತ್ರವನ್ನು ನೋಡಿದ ಶ್ರೀಮತಿ ರೂಬೆನ್ಸ್ ಎಂಬುವವರು ಬರೆಯುತ್ತಾರೆ, “ ಇದು ಕನ್ನಡದ ನೆಲಗಟ್ಟಿನ ಮೇಲೆ ನಿಲ್ಲಿಸಿದ ಸಾರ್ವತ್ರಿಕ ವಸ್ತು. ಇದು ಮಾಧ್ವ ಸಮುದಾಯಕ್ಕೆ ಮಾತ್ರವೇ ಅನ್ವಯಿಸುವ ಸಮಸ್ಯೆಯಲ್ಲ. ಯಾವ ಧರ್ಮಗ್ರಂಥವೇ ಆಗಲಿ, ಸಂದಿಗ್ಧ ಸಮಯದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲವೆಂಬುದು ಈ ಕೃತಿಯ ಅಂತಃಸೂತ್ರ. ಇಡಿಯ ಸಮಾಜವನ್ನೇ ಕೆಣಕುವ ಉತ್ಕಟ ಸಂದರ್ಭದಲ್ಲಿ ವ್ಯಕ್ತಿಗೆ ತನ್ನಿಂದ ಹೊರಗೆ ಸಮರ್ಪಕ ಉತ್ತರವೇನೂ ಸಿಗುವುದಿಲ್ಲ.” ಅನಂತಮೂರ್ತಿಯವರ ದೃಷ್ಟಿಯಲ್ಲಿ ಸ್ಥೂಲವಾಗಿ ಇದೇ ಸಂಸ್ಕಾರದಲ್ಲಿ ಕಾಣಬೇಕಾದ ವಿಚಾರ.

“ಸಂಸ್ಕಾರವನ್ನು ಬರೆಯುವ ವೇಳೆಗೆ ನನ್ನ ಮೇಲೆ ಅನೇಕರು ಪ್ರಭಾವ ಬೀರಿದ್ದರು. ಜೀನ್ ಪಾಲ್ ಸಾರ್ತ್ರೆ ಒಬ್ಬರು. ಇನ್ನೊಬ್ಬರು ನಮ್ಮವರೇ ಆದ ಜೆ.ಕೃಷ್ಣಮೂರ್ತಿ. ಪಾಶ್ಚಾತ್ಯ ತತ್ವಜ್ಞಾನಿಗಳಾದ ಹೆಗೆಲನೂ ಮಾರ್ಕ್ಸ್ ನೂ ಇನ್ನಿಬ್ಬರು. ಇವರೆಲ್ಲರ ವಿಚಾರ ಮಥನ ಮಾಡಿ, ಅವನ್ನು ಅನುಭವದ ಒರೆಗೆ ತಿಕ್ಕಿದಾಗ ಹುಟ್ಟಿದ್ದೇ ‘ಸಂಸ್ಕಾರ’ ಎಂದು ಅನಂತಮೂರ್ತಿಯವರೇ ಹೇಳಿಕೊಂಡಿದ್ದಾರೆ.

‘ಯದ್ಭಾವಂ ತದ್ಭವತಿ’ ಎನ್ನುವುದು ಸ್ಥೂಲವಾಗಿ ಸಾರ್ತ್ರೆಯ ವಿಚಾರ. ಆದರೆ ಕೇವಲ ಸಂಕಲ್ಪಬಲದಿಂದಲೇ ಯಾವುದೂ ಸಾಧ್ಯವಿಲ್ಲ ಎಂಬುದು ಕೃಷ್ಣಮೂರ್ತಿಯವರ ಆಲೋಚನೆಯ ಸಾರ. ಸಂಕಲ್ಪಶಕ್ತಿಯ ಆಚೆಗಿನ ಸಹಜಜೀವನಕ್ಕೆ ತುಡಿಯಬೇಕು ಎಂಬ ಡಿ.ಎಚ್.ಲಾರೆನ್ಸನ ವಾದಕ್ಕೆ ಇದು ಹತ್ತಿರ ಹತ್ತಿರವಾಗಿದೆ ಎನ್ನಬಹುದು. ಮಾನವನ ಜೀವಂತಿಕೆ ನಾಶವಾಗುತ್ತಿರುವ ಚಿತ್ರವನ್ನೇ ಸಾಮಾಜಿಕವಾಗಿ ಮಾರ್ಕ್ಸ್ ಕೂಡ ಕಂಡುಕೊಂಡ. ಬಂಡವಾಳ ವ್ಯವಸ್ಥೆಯ ಫಲವಾಗಿ ವ್ಯಕ್ತಿಗಳ ನಡುವಿನ ಸಂಬಂಧ ಅಪ್ರತ್ಯಕ್ಷವೂ ವಿಮುಖವೂ ಆಗುವುದೆಂಬುದಾಗಿ ಮಾರ್ಕ್ಸ್ ಹೇಳಿದ. ಯಾವುದನ್ನೂ ಅತಿಗೆ ಕೊಂಡೊಯ್ದಾಗ ಅದರ ಒಳಗಡೆಯೇ  ಅದನ್ನು ನಾಶಮಾಡುವ ಶಕ್ತಿ ಹುಟ್ಟಿ ಬೆಳೆಯುತ್ತದೆ ಎಂಬುದು ಹೆಗೆಲನ ತತ್ವ.  ಎಲ್ಲವನ್ನೂ ಕೈಯಾಡಿಸಿ ಪ್ರಮಾಣಿಸುವ ಪ್ರಯತ್ನವೇ ‘ಸಂಸ್ಕಾರ’.
ಇಲ್ಲಿ ಪ್ರಾಣೇಶಾಚಾರ್ಯನೂ, ನಾರಾಣಪ್ಪನೂ ಹೊರಗಣ್ಣುಗಳಿಗೆ ಪರಸ್ಪರ ಭಿನ್ನವಾಗಿ ಕಂಡರೂ ಆಂತರ್ಯದಲ್ಲಿ ಇಬ್ಬರೂ ಒಂದೇ! ಆದರ್ಶ ಜೀವನವನ್ನೇ ನಡೆಸುತ್ತೇನೆ ಎಂಬುದು ಪ್ರಾಣೇಶಾಚಾರ್ಯನ ಸಂಕಲ್ಪ. ಅದಕ್ಕಾಗಿಯೇ ಅವನು ಜೀವನಕ್ಕೆ ಬೆನ್ನುಹಾಕುವ ಪ್ರಯತ್ನ ಮಾಡಿ ಸೋತಂತ ಭಾವವನ್ನು ಅನುಭವಿಸುತ್ತಾನೆ. ಪ್ರಾಣೇಶಾಚಾರ್ಯನ ಧಾರ್ಮಿಕ ‘ಕೊಳ್ಳುಬಾಕತನ’ ವನ್ನು ಅಲ್ಲಗಳೆದು, ಅದನ್ನು ಸಾಧಿಸುವ ಸಲುವಾಗಿಯೇ ನಾರಣಪ್ಪನು ಆಚಾರ್ಯನಿಗೆ ವಿರೋಧವಾಗಿ ಸಂಪೂರ್ಣ ವಿರೋಧಿಯಾದ ಜೀವನವನ್ನು ಬದುಕುತ್ತಾನೆ. ಬಾಲ್ಯದಲ್ಲಿ ಕಾಶಿಯಲ್ಲಿ ಪ್ರಾಣೇಶಾಚಾರ್ಯನ ಒಡನಾಡಿಯಾಗಿದ್ದ ಮಹಾಬಲ, ಇದ್ದಕ್ಕಿದ್ದಂತೆಯೇ ದಾರಿಬಿಟ್ಟಿದ್ದನ್ನು, ಗುಡುಗುಡಿ ಸೇದುತ್ತ, ಹೆಣ್ಣಿನ ಹಿಂದೆ ನಡೆದದ್ದನ್ನೂ ಕಂಡಿದ್ದ ಪ್ರಾಣೇಶಾಚಾರ್ಯ, ಅದೇ ರೀತಿಯ ಅರಾಜಕ ನಡೆಯನ್ನು ನಡೆದ ನಾರಣಪ್ಪನಲ್ಲಿ ಮಹಾಬಲನನ್ನು ಕಂಡಿದ್ದರು. ಅವನನ್ನು ಪರಿವರ್ತಿಸುವ ಹಾದಿಯಲ್ಲಿ ತಾವು ಸೋತರು. ಪ್ರಾಣೇಶಾಚಾರ್ಯರ ಸಂಕಲ್ಪಕ್ಕೆ ವಿರುದ್ಧವಾದ ಹಠತೊಟ್ಟಿದ್ದ ನಾರಣಪ್ಪನೂ ಸೋತ. ಪ್ರಾಣೇಶಾಚಾರ್ಯ ಏನನ್ನು ದೃಢವಾಗಿ ನಂಬಿದ್ದನೋ, ಅದರಂತೆ ನಡೆದಿದ್ದನೋ, ಅದೇ ಧರ್ಮ ಅವನ ದ್ದೇಶಕ್ಕೆ ವಿರುದ್ಧವಾದ ಪರಿಣಾಮವನ್ನು ಉಂಟುಮಾಡಿದ್ದನ್ನರಿತಾಗ, ಪ್ರಾಣೇಶಾಚಾರ್ಯನ ಶ್ರೇಷ್ಠತೆಯ ವ್ಯಸನಕ್ಕೆ ಬಲವಾದ ಪೆಟ್ಟು ಬಿದ್ದಾಗ ಸತ್ಯದ ದರ್ಶನವಾಗುತ್ತದೆ. ಬದುಕನ್ನು ಇದ್ದ ಹಾಗೆ ಸ್ವೀಕರಿಸುವ ಮಾಲೇರ ಪುಟ್ಟನ ಮೂಲಕ ಪ್ರಾಣೇಶಾಚಾರ್ಯ ತನ್ನನ್ನು ಮರುರಚಿಸಿಕೊಳ್ಳುವತ್ತ ಚಿತ್ತೈಸುತ್ತಾನೆ. ಹೆಣ್ಣು, ಹೊನ್ನಿನ ಮಣ್ಣಿನ ಪದರವನ್ನು ಜಾಲಾಡಿಸಿದಾಗ ಬಾಳಸತ್ವ ಏನೆಂಬ ಗಟ್ಟಿಕಾಳು ಕಾಣುತ್ತದೆ. ಕಾದಂಬರಿಯಲ್ಲಿ ಹೆಣ್ಣುಗಂಡುಗಳು ಪರಸ್ಪರ ಮೈಥುನದಲ್ಲಿ ತೊಡಗಿರುವ ಸಂದರ್ಭಗಳಲ್ಲಿಯೂ ಈ ವಿಚಾರ ಸ್ಖಲಿಸುವುದನ್ನು ಕಾಣಬಹುದು!

ನಾರಾಣಪ್ಪನ ಶವಸಂಸ್ಕಾರದ ಕುರಿತಂತೆ ಪ್ರಾರಂಭವಾಗುವ ಕಾದಂಬರಿ ಕೊನೆಯಲ್ಲಿ ಪ್ರಾಣೇಶಾಚಾರ್ಯನಿಗೆ ಹೊಸ ಸಂಸ್ಕಾರದ ಹೊಳಹನ್ನು ನೀಡುವುದರ ಮೂಲಕ ಒಂದು ರೀತಿಯ ಟ್ರಾನ್ಸೆಂಡೆಂಟಲ್ ಟ್ರಾನ್ಸ್ಫಾರ್ಮೇಶನ್ನಿಗೆ ಒಳಗಾಗಿ ಬೆರಗು ಮೂಡಿಸುತ್ತದೆ. ಸಂಸ್ಕಾರವನ್ನು ಪಡೆಯಲಾರದೇ ಕೊಳೆತು ನಾರಹತ್ತಿದ ನಾರಾಣಪ್ಪನಿಗೆ ಒಂದು ರೀತಿಯಲ್ಲಿ ಪ್ರಾಣೇಶಾಚಾರ್ಯನಿಂದಲೇ ಸಂಸ್ಕಾರವಾಗುತ್ತದೆ. ಚಂದ್ರಿಯೊಡನೆ ಸಂಭವಿಸುವ ಸಂಭೋಗ ಅದಕ್ಕೆ ಮುನ್ನುಡಿಯಾಗುತ್ತದೆ. ಧರ್ಮಶಾಸ್ತ್ರ ಹೇಳದ, ತೋರದ ಸರಳ ಸತ್ಯ ಚಂದ್ರಿಯ ತುಂಬು ಮೈ, ಮೊಲೆಗಳ ಮೂಲಕ ತೆರೆದುಕೊಳ್ಳುತ್ತ ಸಾಗಿ ಬಿಗಿದು ಕಟ್ಟಿದ  ಕೌಪೀನದ ಕಟ್ಟಿನಿಂದ ರಭಸದಿಂಧ ಒಡೆದುಬಂದು ಚಿಮ್ಮಿದ ಪ್ರಾಣೇಶಾಚಾರ್ಯನ ವೀರ್ಯ ಹೊಸ ಧರ್ಮ ದರ್ಶನವನ್ನು ಪ್ರಾಣೇಶಾಚಾರ್ಯನಲ್ಲಿ ಸ್ಫುರಿಸುತ್ತದೆ. ಮಹಾಬಲ, ನಾರಾಣಪ್ಪ ಪರೋಕ್ಷವಾಗಿ ಈ ಮಾರ್ಗಕ್ಕೆ ಪ್ರಾಣೇಶಾಚಾರ್ಯನನ್ನು ಎಳೆಯುವ ಮೂಲಕ ಹೊಸ ಸಂಸ್ಕಾರವೊಂದರ ಬೀಜ ಬಲಿಯಲು ಕಾರಣರಾಗುತ್ತಾರೆ. ಪ್ರಾಣೇಶಾಚಾರ್ಯನಲ್ಲಿ ಅವರೂ ಲೀನರಾಗುತ್ತಾರೆ. ಇದೊಂದು ಅದ್ವೈತಾನುಭವ!

ಲೋಹಿಯಾ ವಿಚಾರಧಾರೆಯಿಂದಲೂ ಪ್ರಭಾವಿತರಾಗಿರುವ ಅನಂತಮೂರ್ತಿ ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಪುರಾಣ ಕಥೆಯೊಂದರ ವಿಚಿತ್ರ ಸಂಮಿಲನವನ್ನು ಹೆಣೆಯುತ್ತಾರೆ. ಪುರಾಣ ಪ್ರಸಿದ್ಧ ಪರಾಷರ ಮಹರ್ಷಿ ಮತ್ಸ್ಯಗಂಧಿಯನ್ನು ಕಂಡಾಗ ಆಸೆಗೊಳ್ಳುತ್ತಾನೆ. ಸಹಜವಾಗಿ ಅವಳೊಂದಿಗೆ ಸಂಭೋಗಸುಖವನ್ನು ಅನುಭವಿಸುತ್ತಾನೆ. ಉಂಡು ಕೈತೊಳೆದು ವರೆಸಿಕೊಂಡಷ್ಟು ಸಹಜವಾಗಿ ನಿರ್ಮೋಹಿಯಂತೆ ಹೊರಟುಹೋಗುತ್ತಾನೆ.ಪ್ರಾಣೇಶಾಚಾರ್ಯನಿಗೂ ಇದೇ ರೀತಿ ಅನುಭವವಾದರೂ ಪರಾಶರನಿಗೆ ಇಲ್ಲದ ಭಯ ಇಲ್ಲಿ ಕಾಡುತ್ತದೆ. ಈವರೆಗೂ ಕಟ್ಟಿಕೊಂಡ ಮುಖವಾಡ ಕಳಚಿಬಿದ್ದ ಭಯ! ಕೊನೆಗೆ ಕಾದಂಬರಿ ಮುಗಿಯುವ ಹೊತ್ತಿಗೆ ಆತ ಯಾವ ಭಯವೂ ಇಲ್ಲದ ಸ್ಥಿತಿ ತಲುಪುವವರೆಗೆ ಪ್ರಾಣೇಶಾಚಾರ್ಯನ ವಿಕಾಸವುಂಟಾಗುವುದು ಕಾದಂಬರಿಯಲ್ಲಿ ಸಂಭವಿಸುವ ಒ0ದು ದೊಡ್ಡ ನೆಗೆತ (ಲೀಪ್).
ವಸಂತ ಭಟ್, ಹಾಸಣಗಿ

(12 ಸೆಪ್ಟೆಂಬರ್ 2014, ಶುಕ್ರವಾರದಂದು ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದಲ್ಲಿ ಮಾಡಿದ ಉಪನ್ಯಾಸ)