ಬೆಳಿಗ್ಗೆ
8:30 ಕ್ಲಾಸಿನಲ್ಲಿ ಅಮೇರಿಕದ ರಾಷ್ಟ್ರಕವಿ ವಾಲ್ಟ್ ವಿಟ್ಮನ್ ಕುರಿತು ಪಾಠಮಾಡಿ ಅದಾಗ ತಾನೇ ಡಿಪಾರ್ಟ್ ಮೆಂಟಿನ ಸ್ಟಾಫ್
ರೂಂ ಗೆ ಬಂದು ಕುಳಿತಿದ್ದೆ. ಕೆಲ ಹುಡುಗರು ಸಂಭ್ರಮದಿಂದ ಓಡಾಡಿ ಎಲ್ಲ ಕಡೆ ಸಿಂಗರಿಸುತ್ತಿದ್ದರು.
ಪ್ರಿನ್ಸಿಪಾಲರು 250/- ಕೊಟ್ಟು ಆಯುಧ ಪೂಜೆ ಮಾಡಿ ಸಂಭ್ರಮಿಸಿ ಎಂದಿದ್ದರಂತೆ! ಅಂತೆಯೇ ಹುಡುಗರು
ಖುಷಿಯಿಂದ ಓಡಾಡಿಕೊಂಡಿದ್ದರು. ‘ಅವರವರ ಭಕುತಿಗೆ’ ಎಂಬಂತೆ ಹೂವು ಗಂಧಾದಿಗಳಿಂದ ಸ್ಟಾಫ್ ರೂಮಿನ ಫ್ಯಾನು...
ಕಂಪ್ಯೂಟರ್ರು....ಟೇಬಲ್ಲು....ಖುರ್ಚಿ...ಕಪಾಟು........ಚಾಕ್ ಬಾಕ್ಸ್....ಅಟೆಟಂಡೆನ್ಸ್ ರಜಿಸ್ಟ್ರು....ಅಸೈನ್ಮೆಂಟುಗಳು...
ಎಲ್ಲವುಗಳನ್ನೂ ಸಿಂಗರಿಸುತ್ತಿದ್ದರು! ನನಗೆ ಛಕ್ಕನೆ ಗಮನ ಸೆಳೆದದ್ದು ವಿದ್ಯಾರ್ಥಿಯೋರ್ವ ಅಲ್ಲಿದ್ದ
ಶೇಕ್ಸ್ ಪಿಯರನ ಫೋಟೋಕ್ಕೆ ಹಣೆಯ ಮೇಲೆ ಭಸ್ಮ ಲೇಪಿಸಿ, ಕುಂಕುಮದ ಬೊಟ್ಟನ್ನಿಟ್ಟಿದ್ದು!...........
ಶೇಕ್ಸ್ ಪಿಯರ್ ಹಣೆಗೆ
ವಿಭೂತಿ ಹಚ್ಚಿ ಕುಂಕುಮವಿಟ್ಟು
ಹೊಸ ಗೆಟಪ್ಪಿನಲ್ಲಿ ಕಂಡಾಗ
ಬಸವಣ್ಣ ಹೊಟ್ಟೆಹುಣ್ಣಾಗುವಷ್ಟು
ನಗುತ್ತಿದ್ದ ಇಂಗ್ಲಿಷ್ ಕೋಟು-ಷರಾಯಿ
ತೊಟ್ಟು! ಸ್ವಾಮೀ......
ಫಿಯರ್ರು ಶೇಕಾಗುವ ಸಮಯದಲ್ಲಿ
ಅಲ್ಲ....ಮನ ಶಬ್ದಲಜ್ಜೆ ಕಳಚಿ
ಬೆತ್ತಲು ಬಯಲಾಗುವ ಪರಿಗೆ
ಕಥಾರ್ಸಿಸ್ ನರ್ತನ!
ಶೇಕಣ್ಣ, ಬಸ್ವೋಸ್ಪಿಯರ್
ಕ್ಲೋನಿಂಗು ಅಪೂರ್ವ
ಪಶ್ಚಿಮದ ಅಪರಿಮಿತ ಅನುಭಾವ...
ನುಡಿಯ ಬೆರಗು!
-ವಸಂತ
1-10-2014, ಬೆಳಿಗ್ಗೆ 10 ಗಂಟೆ.....
No comments:
Post a Comment