Showing posts with label ಪ್ರೇಮಪತ್ರ. Show all posts
Showing posts with label ಪ್ರೇಮಪತ್ರ. Show all posts

Wednesday, February 17, 2010

ಮತ್ತೆ ವಸಂತ ಬಂದಿದ್ದಾನೆ! ಚಿಗುರ ತಂದಿದ್ದಾನೆ...ಒಪ್ಪಿಸಿಕೋ

ಓಹ್! ಹದಿಮೂರು ವರುಷಗಳು....!
ಹೇಗೆ ಕಳೆದವು ಗೆಳತಿ?
ವನವಾಸದ ಅವಧಿ ಮುಗಿಯಿತೆನ್ನೋಣವೇ! ಅಥವಾ ಒಂದು ತಪ ಪೂರೈಸಿ ಎರಡನೆಯ ತಪನೆಗೆ ಕಾಲಿಟ್ಟೆವು ಎನ್ನೋಣ್ವೇ? ಕಾಲ ಕಲ್ಪಿಸಿದ ಅವಕಾಶದಲ್ಲಿ ಕಾವುಕೊಟ್ಟು ಮೊಟ್ಟೆ ಮರಿಯಾಗಿವೆ! ಹದಿನೇಳು ವರ್ಷಗಳಹಿಂದೆ ಬಿರಿದ ಮೊಳಕೆ ಗಟ್ಟಿ ಮರವಾಗಿದೆ. ಬಿಸಿಯುಸಿರು ಕೂಡ ತಣ್ಣೆಳಲ ತಂಪಾಗಿ ಹಿತವಾಗಿದೆ. ಇಷ್ಟು ಕಾಲದ ನಂತರವೂ ವರುಷದಂತೆ ಮತ್ತೆ ನಿನ್ನ ವಸಂತ ಬಂದಿದ್ದಾನೆ. ವಗರಿನೊಂದಿಗಿನ ಚಿಗುರುತಂದಿದ್ದಾನೆ! ಆ ಖುಶಿಯಲ್ಲಿ ನೀನು ಪಟ್ಟಪಾಡುಗಳೆಲ್ಲ ಹಾಡಾಗಿ ಪಂಚಮದ ಇಂಚರದಲ್ಲಿ ಕುಹೂ-ಕುಹೂ ನಿನದಿಸುತ್ತಿರುವದು ನಿನ್ನ ಅನುಭವಕ್ಕೂ ಬಂದಿರಲು ಸಾಕು.

"ಹೊಸಿಲ ದಾಟೇ ದಾಟುತ್ತೇನೆ..ಬಯಲು ತುಂಬ ಬದುಕುತ್ತೇನೆ" ಎನ್ನುತ್ತಲೇ ಹೊಸಿಲಾಚೆ ಹೊಸಹೆಜ್ಜೆ ನೀನಿಟ್ಟಾಗ ಇನ್ನೂ ಹೀಚು. ಹಾಗೆಂತಲೇ ಮೋಡಕಟ್ಟಿದ ಆಕಾಶ ನೋಡುತ್ತ "ಅತ್ತುಬಿಡು ಮನಬಿಚ್ಚಿ ಸಿಗಬಹುದು ಶಾಂತಿ" ಎಂದು ಹಾಡಿ ಹಗುರಾಗುತ್ತಿದ್ದೆ. ನೆನಪಿದೆಯೆ ನಿನಗೆ? ಕ್ರಮೇಣ ಆಳಕ್ಕಿಳಿದ ಬೇರುಗಳು ಗಟ್ಟಿಗೊಳ್ಳುತ್ತಿದ್ದಂತೆ ತಾಂಝಾನಿಯಾದ ಕಪ್ಪು ಹುಡುಗಿ ಕ್ಲಾರಾ ಇರುಳಕತ್ತಲಲ್ಲಿ ನೋವಾಗಿ ತಟ್ಟಿ ಹಾಡಾಗಿ ಹುಟ್ಟಿದಳು."ಅಮ್ಮ .....ತಣ್ಣಗಿದ್ದಾಳೆ ನನ್ನೊಳಗಿನ ತಳಮಳ ಅರಿಯದ ಅಮ್ಮ....ಹೊಸಿಲಬಳಿ ದೀಪಹಚ್ಚುತ್ತ!" ಎಂದು ಕವಿತೆ ಕಟ್ಟುತ್ತ ಅಮ್ಮನನ್ನು ಅರ್ಥೈಸಿಕೊಳ್ಳಹೊರಟಿರುವಾಗಲೇ ಮನಬೆಸೆದೆ ಮನೆಯೊಡನೆ.....ಬಿಚ್ಚಿಕೊಂಡವು ಥಟ್ಟನೆ ಜೋಡಿಬಾಗಿಲು ವ್ಯಕ್ತದಿಂದ ಅವ್ಯಕ್ತಕ್ಕೆ.ಪಂಜರದ ಗಿಳಿಗಳ ಹಾರಿಬಿಟ್ಟು,ಶೋಕೇಸಿನ ಬೊಂಬೆಗಳಿಗೆ ಜೀವಕೊಟ್ಟು ಜೀವಂತವಾಗಿ ಬದುಕಬೇಕು ಎಂದುಕೊಳ್ಳುತ್ತಿದ್ದಾಗಲೇ ಗೆಳೆಯ...ಕಾಡುತ್ತಾನೆ ನಿನ್ನನ್ನ. ಕತ್ತಲ ಕ್ಯಾನ್ವಾಸ್ ಮೇಲೆ ಮೂಡದೇ ಕಾಡುವ ಚಿತ್ರ-ಚಿತ್ತಾರಗಳಿಗುತ್ತರಿಸುತ್ತ "ನಿನ್ನ ಪ್ರೀತಿಯ ರಂಗಿನಲಿ ಕರಗುವ ನಿರ್ವರ್ಣ ಚಿತ್ರವಾಗುತ್ತೇನೆ ಎಂದಿದ್ದು ಇನ್ನೂ ಹಸಿರಾಗಿಯೇ ಇದೆ. ಮನಸ ಹಕ್ಕಿ ಕನಸ ಹೆಣೆದು ಎದೆಯಗೂಡ ಶ್ರಂಗರಿಸುವುದ ಕಂಡಿರುವೆಯಾ ಒಮ್ಮೆಯಾದರೂ ....ನೀ ಬಲ್ಲೆಯೇನು... ಎಂದು ಅಂದದ್ದು, ವಸಂತ ಬರುತ್ತಾನೆಂದು ನಿರಿಕ್ಷೆಗಳ ತೋರಣಕಟ್ಟುತ್ತಲೇ,"ಚಿಗುರಿ ಚಿಗಿಯುತ್ತಿರುವಾಗಲೇ ನಿಲುಕದೇ ಹೊರಟೇ ಹೋಗುತ್ತಾನೆ", ಎನ್ನುತ್ತ ಪ್ರೀತಿ ಎಳೆಗಳ ಹುಡುಕಾಟಕ್ಕೆ ತೊಡಗುವ ನಿನ್ನ ಆ ತುಮುಲ....ನಮ್ಮ ನಡುವೆ ಇರುವ ಉಕ್ಕಿನಕೋಟೆಗಳ ಅರಿವೇ ನಿನಗಿಲ್ಲವೇ ಎಂದು ಕೇಳಿದ ಮುಗ್ಧ ಕಣ್ಣುಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿವೆ ಗೆಳತೀ!

ಅದೊಂದುದಿನ ಆದರಾಗಲಿ ಪ್ರಳಯ ನಮ್ಮ ಕನಸುಗಳ ಬದುಕಿಸೋಣ ಎಂದು ಬಟಾಬಯಲಿನಲಿ ಕೈನೀಡಿ ಕರೆದಾಗ...."ಬಲು ತುಂಟಹುಡುಗ...ನನ್ನ ತಂಟೆ ಬೇಡವೆಂದರೆ ನಿರಾಳವಾಗಿ ನಗುತ್ತೀಯಲ್ಲ! ನಿನ್ನ ಬಾಹುಬೇಡಿಗಳಲಿ ಬಂಧಿಸಿ ಪ್ರೀತಿ ಪಹರೆಯಲಿಟ್ಟುಬಿಡುತ್ತೇನೆ ಜೋಕೆ!" ಅಂದಾಗಲೇ ನಾನು ಬಂಧಿಯಾಗಿಬಿಟ್ಟಿದ್ದೆನಲ್ಲೇ.

ಆದರೆ ಆ ಬಂಧ ನಮ್ಮಿಬ್ಬರನ್ನು ಬಂಧನವಾಗಿ ಎಂದೂ ಕಾಡಲಿಲ್ಲವಲ್ಲ ಎನ್ನುವದೇ ಒಂದು ಸೋಜಿಗ. ನಾನು ನನ್ನಂತಿದ್ದೂ... ನೀನು ನಿನ್ನಂತಿದ್ದೂ.....ಇಬ್ಬರೂ ಹೆಜ್ಜೆ ಹಾಕಿದೆವಲ್ಲ ತಾಳತಪ್ಪದಂತೆ!
"ಗೂಡಾಚೆ ಕಾದುವದು ಅನಿವಾರ್ಯ ನಮಗಿಂದು.
ಎದೆಗವಚಿಕೋಭದ್ರವಾಗಿ ಮರಿಕನಸುಗಳ....
ಜಡಿಮಳೆಗೆ ಜಡ್ಡುಗಟ್ಟಿಕೊಳ್ಳುವ
ಬಿರುಬಿಸಿಲಿಗೆ ಬಂಡೆಯಾಗುವ ನಾವು
ಆದರಾಗಲಿ ಪ್ರಳಯ
ನಮ್ಮ ಕನಸುಗಳ ಬದುಕಿಸೋಣ"
ಅಂದು ನೀ ಹೇಳಿದ ಬೀಜದ ಮಾತು ಕ್ರಮೇಣ ಬೆಳಕಿನ ಬೀಜವಾಗಿ ಮೊಳೆತು ಪರಿಮಳದ ಸಸಿಯಾಗಿ ಬೆಳೆದು ಇಂದು ಬೆಳಕಿನ ಮರವಾಗಿದೆ. ಹೊಸಿಲಾಚೆಯಿಟ್ಟ ಹೊಸಹೆಜ್ಜೆ ಹಂಬಲದ ಹಾದಿಯ ಸೇರಿದೆ. ಚೌಕಟ್ಟಿನಾಚೆಯ ದಿವ್ಯ ಅನಂತದಲಿ ಜೀವವಾಹಿನಿ ಹೊಳೆ ಹೊಳೆಯುತ್ತಿದೆ. ಸ್ರಷ್ಟಿಮುಗಿದ ನಿರಾಳತೆಯಲ್ಲಿ ಸುಮ್ಮನೆ ಧ್ಯಾನಿಸುತ್ತಿದೆ ತಂಬೂರಿ.ಕಾಣುವ ತಂತಿ,ಕಾಣದ ತಂತು, ಭಾವಗಳಜೋಡಿಸಿ ಜೀವ ಪಡೆದ ವಿನ್ಯಾಸದ ಬೆರಗು! ಜೀವಧ್ವನಿ.

ತಣ್ಣಗೆ ಬೆಳೆದೆ....ತಂಪಾಗಿ ಎರೆದೆ.....ಎಲ್ಲರನು ಪೊರೆದೆ.....ಈಗ ನಿನ್ನ ತೆಕ್ಕೆಯಲ್ಲಿ ನನ್ನಂತೆ ಇನ್ನೊಂದು ಪಾಪು! ದತ್ತಕ್ಕೆ ಬಂದಿದ್ದು! ಎದೆಗಾನಿಸಿಕೋ ಪಾಪ ಅದನ್ನೂ. ಬೆಳೆಯಲಿ ಅವಧೂತನಂತೆ.........ಇನ್ನೊಂದು ಬೆಳಕಿನ ಮರ!

ನನ್ನ ಪ್ರೀತಿಗೆಂದೂ ಅದು ತೊಡಕಾಗದಿರದು. ಮೊಗೆದಷ್ಟೂ ಬರುವ ಒರತೆಯದು ಎಂದೂ ಬತ್ತುವುದಿಲ್ಲ. ನಾನು ಕಾಯುತ್ತಿದ್ದೇನೆ........ಬಾ....ಹೀರು ಹೊಸ ಚಿಗುರ.....ಇನ್ನೊಂದು ಅಭೇದಕ್ಕೆ....ತಪಕ್ಕೆ ಹುರಿಗೊಳ್ಳೋಣ! ಬೆಳಕಿನ ಜಾಡಿನಲ್ಲಿ ಕೈಹಿಡಿದು ಹೊಸ ಹೆಜ್ಜೆಯಿಡೋಣ ಗಡಿಯಿರದ ಹೊಸಿಲೊಳಗೆ......ಬಯಲು ಆಲಯದಲ್ಲಿ.....ನಿನ್ನಿಷ್ಟದಂತೆ!
ಅಷ್ಟರಲ್ಲಿ.......
ಬೆಳಕಿನ ಸಸಿ ಪಿಸುಗುಡುತ್ತದೆ
ದೆವರ ಹೆಣಗೊಬ್ಬರದ ಕಸುವಾಗಿ
ಸಸಿ ಸಳಸಳೆ ಬೆಳೆದು
ಮಿದುಳಭಿತ್ತಿಯ ಸೀಳಿ
ಹೊರಹೊಮ್ಮುತ್ತದೆ.
ನಿನ್ನ
ವಸಂತ

( ಹದಿಮೂರು ವರ್ಷಗಳ ನಂತರ ನನ್ನ ಜೀವದ ಗೆಳತಿ ಗೀತಾಗೆ ಬರೆದ ಹೊಸ ಪ್ರೇಮಪತ್ರವಿದು. ಇದರಲ್ಲಿ ಅಲ್ಲಲ್ಲಿ ಬಳಸಿಕೊಂಡಿರುವುದೆಲ್ಲವೂ ಅವಳ ಕವನಗಳ ಸಾಲುಗಳು!)