Wednesday, February 17, 2010

ಮತ್ತೆ ವಸಂತ ಬಂದಿದ್ದಾನೆ! ಚಿಗುರ ತಂದಿದ್ದಾನೆ...ಒಪ್ಪಿಸಿಕೋ

ಓಹ್! ಹದಿಮೂರು ವರುಷಗಳು....!
ಹೇಗೆ ಕಳೆದವು ಗೆಳತಿ?
ವನವಾಸದ ಅವಧಿ ಮುಗಿಯಿತೆನ್ನೋಣವೇ! ಅಥವಾ ಒಂದು ತಪ ಪೂರೈಸಿ ಎರಡನೆಯ ತಪನೆಗೆ ಕಾಲಿಟ್ಟೆವು ಎನ್ನೋಣ್ವೇ? ಕಾಲ ಕಲ್ಪಿಸಿದ ಅವಕಾಶದಲ್ಲಿ ಕಾವುಕೊಟ್ಟು ಮೊಟ್ಟೆ ಮರಿಯಾಗಿವೆ! ಹದಿನೇಳು ವರ್ಷಗಳಹಿಂದೆ ಬಿರಿದ ಮೊಳಕೆ ಗಟ್ಟಿ ಮರವಾಗಿದೆ. ಬಿಸಿಯುಸಿರು ಕೂಡ ತಣ್ಣೆಳಲ ತಂಪಾಗಿ ಹಿತವಾಗಿದೆ. ಇಷ್ಟು ಕಾಲದ ನಂತರವೂ ವರುಷದಂತೆ ಮತ್ತೆ ನಿನ್ನ ವಸಂತ ಬಂದಿದ್ದಾನೆ. ವಗರಿನೊಂದಿಗಿನ ಚಿಗುರುತಂದಿದ್ದಾನೆ! ಆ ಖುಶಿಯಲ್ಲಿ ನೀನು ಪಟ್ಟಪಾಡುಗಳೆಲ್ಲ ಹಾಡಾಗಿ ಪಂಚಮದ ಇಂಚರದಲ್ಲಿ ಕುಹೂ-ಕುಹೂ ನಿನದಿಸುತ್ತಿರುವದು ನಿನ್ನ ಅನುಭವಕ್ಕೂ ಬಂದಿರಲು ಸಾಕು.

"ಹೊಸಿಲ ದಾಟೇ ದಾಟುತ್ತೇನೆ..ಬಯಲು ತುಂಬ ಬದುಕುತ್ತೇನೆ" ಎನ್ನುತ್ತಲೇ ಹೊಸಿಲಾಚೆ ಹೊಸಹೆಜ್ಜೆ ನೀನಿಟ್ಟಾಗ ಇನ್ನೂ ಹೀಚು. ಹಾಗೆಂತಲೇ ಮೋಡಕಟ್ಟಿದ ಆಕಾಶ ನೋಡುತ್ತ "ಅತ್ತುಬಿಡು ಮನಬಿಚ್ಚಿ ಸಿಗಬಹುದು ಶಾಂತಿ" ಎಂದು ಹಾಡಿ ಹಗುರಾಗುತ್ತಿದ್ದೆ. ನೆನಪಿದೆಯೆ ನಿನಗೆ? ಕ್ರಮೇಣ ಆಳಕ್ಕಿಳಿದ ಬೇರುಗಳು ಗಟ್ಟಿಗೊಳ್ಳುತ್ತಿದ್ದಂತೆ ತಾಂಝಾನಿಯಾದ ಕಪ್ಪು ಹುಡುಗಿ ಕ್ಲಾರಾ ಇರುಳಕತ್ತಲಲ್ಲಿ ನೋವಾಗಿ ತಟ್ಟಿ ಹಾಡಾಗಿ ಹುಟ್ಟಿದಳು."ಅಮ್ಮ .....ತಣ್ಣಗಿದ್ದಾಳೆ ನನ್ನೊಳಗಿನ ತಳಮಳ ಅರಿಯದ ಅಮ್ಮ....ಹೊಸಿಲಬಳಿ ದೀಪಹಚ್ಚುತ್ತ!" ಎಂದು ಕವಿತೆ ಕಟ್ಟುತ್ತ ಅಮ್ಮನನ್ನು ಅರ್ಥೈಸಿಕೊಳ್ಳಹೊರಟಿರುವಾಗಲೇ ಮನಬೆಸೆದೆ ಮನೆಯೊಡನೆ.....ಬಿಚ್ಚಿಕೊಂಡವು ಥಟ್ಟನೆ ಜೋಡಿಬಾಗಿಲು ವ್ಯಕ್ತದಿಂದ ಅವ್ಯಕ್ತಕ್ಕೆ.ಪಂಜರದ ಗಿಳಿಗಳ ಹಾರಿಬಿಟ್ಟು,ಶೋಕೇಸಿನ ಬೊಂಬೆಗಳಿಗೆ ಜೀವಕೊಟ್ಟು ಜೀವಂತವಾಗಿ ಬದುಕಬೇಕು ಎಂದುಕೊಳ್ಳುತ್ತಿದ್ದಾಗಲೇ ಗೆಳೆಯ...ಕಾಡುತ್ತಾನೆ ನಿನ್ನನ್ನ. ಕತ್ತಲ ಕ್ಯಾನ್ವಾಸ್ ಮೇಲೆ ಮೂಡದೇ ಕಾಡುವ ಚಿತ್ರ-ಚಿತ್ತಾರಗಳಿಗುತ್ತರಿಸುತ್ತ "ನಿನ್ನ ಪ್ರೀತಿಯ ರಂಗಿನಲಿ ಕರಗುವ ನಿರ್ವರ್ಣ ಚಿತ್ರವಾಗುತ್ತೇನೆ ಎಂದಿದ್ದು ಇನ್ನೂ ಹಸಿರಾಗಿಯೇ ಇದೆ. ಮನಸ ಹಕ್ಕಿ ಕನಸ ಹೆಣೆದು ಎದೆಯಗೂಡ ಶ್ರಂಗರಿಸುವುದ ಕಂಡಿರುವೆಯಾ ಒಮ್ಮೆಯಾದರೂ ....ನೀ ಬಲ್ಲೆಯೇನು... ಎಂದು ಅಂದದ್ದು, ವಸಂತ ಬರುತ್ತಾನೆಂದು ನಿರಿಕ್ಷೆಗಳ ತೋರಣಕಟ್ಟುತ್ತಲೇ,"ಚಿಗುರಿ ಚಿಗಿಯುತ್ತಿರುವಾಗಲೇ ನಿಲುಕದೇ ಹೊರಟೇ ಹೋಗುತ್ತಾನೆ", ಎನ್ನುತ್ತ ಪ್ರೀತಿ ಎಳೆಗಳ ಹುಡುಕಾಟಕ್ಕೆ ತೊಡಗುವ ನಿನ್ನ ಆ ತುಮುಲ....ನಮ್ಮ ನಡುವೆ ಇರುವ ಉಕ್ಕಿನಕೋಟೆಗಳ ಅರಿವೇ ನಿನಗಿಲ್ಲವೇ ಎಂದು ಕೇಳಿದ ಮುಗ್ಧ ಕಣ್ಣುಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿವೆ ಗೆಳತೀ!

ಅದೊಂದುದಿನ ಆದರಾಗಲಿ ಪ್ರಳಯ ನಮ್ಮ ಕನಸುಗಳ ಬದುಕಿಸೋಣ ಎಂದು ಬಟಾಬಯಲಿನಲಿ ಕೈನೀಡಿ ಕರೆದಾಗ...."ಬಲು ತುಂಟಹುಡುಗ...ನನ್ನ ತಂಟೆ ಬೇಡವೆಂದರೆ ನಿರಾಳವಾಗಿ ನಗುತ್ತೀಯಲ್ಲ! ನಿನ್ನ ಬಾಹುಬೇಡಿಗಳಲಿ ಬಂಧಿಸಿ ಪ್ರೀತಿ ಪಹರೆಯಲಿಟ್ಟುಬಿಡುತ್ತೇನೆ ಜೋಕೆ!" ಅಂದಾಗಲೇ ನಾನು ಬಂಧಿಯಾಗಿಬಿಟ್ಟಿದ್ದೆನಲ್ಲೇ.

ಆದರೆ ಆ ಬಂಧ ನಮ್ಮಿಬ್ಬರನ್ನು ಬಂಧನವಾಗಿ ಎಂದೂ ಕಾಡಲಿಲ್ಲವಲ್ಲ ಎನ್ನುವದೇ ಒಂದು ಸೋಜಿಗ. ನಾನು ನನ್ನಂತಿದ್ದೂ... ನೀನು ನಿನ್ನಂತಿದ್ದೂ.....ಇಬ್ಬರೂ ಹೆಜ್ಜೆ ಹಾಕಿದೆವಲ್ಲ ತಾಳತಪ್ಪದಂತೆ!
"ಗೂಡಾಚೆ ಕಾದುವದು ಅನಿವಾರ್ಯ ನಮಗಿಂದು.
ಎದೆಗವಚಿಕೋಭದ್ರವಾಗಿ ಮರಿಕನಸುಗಳ....
ಜಡಿಮಳೆಗೆ ಜಡ್ಡುಗಟ್ಟಿಕೊಳ್ಳುವ
ಬಿರುಬಿಸಿಲಿಗೆ ಬಂಡೆಯಾಗುವ ನಾವು
ಆದರಾಗಲಿ ಪ್ರಳಯ
ನಮ್ಮ ಕನಸುಗಳ ಬದುಕಿಸೋಣ"
ಅಂದು ನೀ ಹೇಳಿದ ಬೀಜದ ಮಾತು ಕ್ರಮೇಣ ಬೆಳಕಿನ ಬೀಜವಾಗಿ ಮೊಳೆತು ಪರಿಮಳದ ಸಸಿಯಾಗಿ ಬೆಳೆದು ಇಂದು ಬೆಳಕಿನ ಮರವಾಗಿದೆ. ಹೊಸಿಲಾಚೆಯಿಟ್ಟ ಹೊಸಹೆಜ್ಜೆ ಹಂಬಲದ ಹಾದಿಯ ಸೇರಿದೆ. ಚೌಕಟ್ಟಿನಾಚೆಯ ದಿವ್ಯ ಅನಂತದಲಿ ಜೀವವಾಹಿನಿ ಹೊಳೆ ಹೊಳೆಯುತ್ತಿದೆ. ಸ್ರಷ್ಟಿಮುಗಿದ ನಿರಾಳತೆಯಲ್ಲಿ ಸುಮ್ಮನೆ ಧ್ಯಾನಿಸುತ್ತಿದೆ ತಂಬೂರಿ.ಕಾಣುವ ತಂತಿ,ಕಾಣದ ತಂತು, ಭಾವಗಳಜೋಡಿಸಿ ಜೀವ ಪಡೆದ ವಿನ್ಯಾಸದ ಬೆರಗು! ಜೀವಧ್ವನಿ.

ತಣ್ಣಗೆ ಬೆಳೆದೆ....ತಂಪಾಗಿ ಎರೆದೆ.....ಎಲ್ಲರನು ಪೊರೆದೆ.....ಈಗ ನಿನ್ನ ತೆಕ್ಕೆಯಲ್ಲಿ ನನ್ನಂತೆ ಇನ್ನೊಂದು ಪಾಪು! ದತ್ತಕ್ಕೆ ಬಂದಿದ್ದು! ಎದೆಗಾನಿಸಿಕೋ ಪಾಪ ಅದನ್ನೂ. ಬೆಳೆಯಲಿ ಅವಧೂತನಂತೆ.........ಇನ್ನೊಂದು ಬೆಳಕಿನ ಮರ!

ನನ್ನ ಪ್ರೀತಿಗೆಂದೂ ಅದು ತೊಡಕಾಗದಿರದು. ಮೊಗೆದಷ್ಟೂ ಬರುವ ಒರತೆಯದು ಎಂದೂ ಬತ್ತುವುದಿಲ್ಲ. ನಾನು ಕಾಯುತ್ತಿದ್ದೇನೆ........ಬಾ....ಹೀರು ಹೊಸ ಚಿಗುರ.....ಇನ್ನೊಂದು ಅಭೇದಕ್ಕೆ....ತಪಕ್ಕೆ ಹುರಿಗೊಳ್ಳೋಣ! ಬೆಳಕಿನ ಜಾಡಿನಲ್ಲಿ ಕೈಹಿಡಿದು ಹೊಸ ಹೆಜ್ಜೆಯಿಡೋಣ ಗಡಿಯಿರದ ಹೊಸಿಲೊಳಗೆ......ಬಯಲು ಆಲಯದಲ್ಲಿ.....ನಿನ್ನಿಷ್ಟದಂತೆ!
ಅಷ್ಟರಲ್ಲಿ.......
ಬೆಳಕಿನ ಸಸಿ ಪಿಸುಗುಡುತ್ತದೆ
ದೆವರ ಹೆಣಗೊಬ್ಬರದ ಕಸುವಾಗಿ
ಸಸಿ ಸಳಸಳೆ ಬೆಳೆದು
ಮಿದುಳಭಿತ್ತಿಯ ಸೀಳಿ
ಹೊರಹೊಮ್ಮುತ್ತದೆ.
ನಿನ್ನ
ವಸಂತ

( ಹದಿಮೂರು ವರ್ಷಗಳ ನಂತರ ನನ್ನ ಜೀವದ ಗೆಳತಿ ಗೀತಾಗೆ ಬರೆದ ಹೊಸ ಪ್ರೇಮಪತ್ರವಿದು. ಇದರಲ್ಲಿ ಅಲ್ಲಲ್ಲಿ ಬಳಸಿಕೊಂಡಿರುವುದೆಲ್ಲವೂ ಅವಳ ಕವನಗಳ ಸಾಲುಗಳು!)

Thursday, February 11, 2010

ಭೈರಪ್ಪ ಇನ್ನೂ ಕಿವಿಯಲ್ಲಿ ಗುನುಗುನಿಸುತ್ತಿದ್ದಾರೆ ದರಬಾರಿ ಕಾನಡಾ ರಾಗದಂತೆ!





ಹಿಂದುಸ್ತಾನಿ ಸಂಗೀತದಲ್ಲಿ ದರಬಾರಿ ಕಾನಡಾ ರಾಗ ತುಂಬ ಗಂಭೀರವಾದ ಭಾವಾಭಿವ್ಯಕ್ತಿಯನ್ನು ಅಪೇಕ್ಷಿಸುವ ಘನರಾಗ! ಹಾಗಾಗಿ ಎಲ್ಲ ಕಲಾವಿದರಿಗೂ ಅದು ಅಷ್ಟಾಗಿ ಒಗ್ಗಿಬರುವದಿಲ್ಲ. ಹಲವಾರು ವರ್ಷಗಳ ಪರಿಶ್ರಮ ಹಾಗೂ ಒಡನಾಟದಿಂದ ಮಾತ್ರ ಮಧ್ಯರಾತ್ರಿಯ ನೀರವದಲ್ಲಿ ಧ್ಯಾನಸ್ಥ ಸ್ಥಿತಿಗೆ ಕಲಾವಿದ-ಕೇಳುಗನನ್ನು ಏಕಕಾಲಕ್ಕೆ ಕೊಂಡೊಯ್ಯುವ ತಾಖತ್ತು ಈ ರಾಗಕ್ಕಿದೆ! ಅದಾದ ನಂತರವೂ ಹಲವಾರು ಗಂಟೆಗಳಕಾಲವೋ,ದಿನಗಳಕಾಲವೋ ಅದ್ಭುತ ಕಲಾವಿದನ ಕಂಠದಿಂದ ಕೇಳಲ್ಪಟ್ಟ.....ಸ್ರಷ್ಟಿಸಲ್ಪಟ್ಟ.....ದರಬಾರಿ ಒಂದುರೀತಿಯ ಗುಂಗು ಹಿಡಿಸಿಬಿಡುತ್ತದೆ. ಭಂಗಿ ತಿಂದವರಂತೆ!

ಆದೇ ರೀತಿಯ ಹ್ಯಾಂಗ್ ಓವರ್ ಅನ್ನು ನಾನು ಈಗಲೂ ಅನುಭವಿಸುತ್ತಿದ್ದೇನೆ. ಮೊನ್ನೆ ಹೇಳಿದೆನಲ್ಲ ಮೌನದ ನಂತರ ಬಿಚ್ಚಿಕೊಂಡ ಭೈರಪ್ಪನವರ ಅಂತರಂಗ....ಅದೊಂದು ಅದ್ಭುತ ದರಬಾರಿಯಂತೆ ನನ್ನನ್ನು ಈಗಲೂ ಕಾಡುತ್ತಿದೆ!

ಭೈರಪ್ಪ ಬಯಸುತ್ತಾರೆ "ಐನ್ ಸ್ಟೈನ್ ತರಹ ಶುದ್ಧ ವಿಜ್ನಾನಿಯಾಗಬೇಕು!" ಎಂದು! ಶುದ್ಧ ವಿಜ್ನಾನಿಗೆ ಮಾತ್ರ ಸತ್ಯವನ್ನು ಯಥಾಸ್ಥಿತಿಯಲ್ಲಿ ನೋಡುವ,ಗ್ರಹಿಸುವ,ಅರ್ಥೈಸಿಕೊಳ್ಳುವ ಧಾರ್ಷ್ಟ್ಯ ಸಾಧಿಸಿರುತ್ತದೆ ಎಂದು! ಯಾಕೆಂದರೆ ಸತ್ಯದೊಂದಿಗೆ ಮುಖಾಮುಖಿ ಅಷ್ಟು ಸರಳವಲ್ಲ! ಅದಕ್ಕೊಂದು ಧೈರ್ಯಬೇಕು....ಸಹನೆ ಬೇಕು...ಸಾಹಚರ್ಯಬೇಕು. ಅದು ಅಷ್ಟು ಸುಲಭಸಾಧ್ಯವೇನಲ್ಲ. ಆದರೆ ಅಸಾಧ್ಯವೂ ಅಲ್ಲ. ಎಂತಹ ಪಕ್ಕಡ್ ಅಲ್ಲಾ..... ದರಬಾರಿಯ "ಮ ಪ ಧ ಧ ನಿ ಪ" ದಂತೆ!

"ಭಾರತೀಯ ತತ್ವಶಾಸ್ತ್ರ ಪ್ರಾರಂಭವಾಗುವುದೇ ಮ್ರುತ್ಯುವಿನೊಂದಿಗಿನ ಮುಖಾಮುಖಿಯ ಮೂಲಕ. ಕಠೋಪನಿಷತ್ತಿನಲ್ಲಿ ಹೇಳಲಾದ ನಚಿಕೇತ ಯಮನೊಂದಿಗಿನ ಸಂಭಾಷಣೆಯ ಮೂಲಕ ಭಾರತೀಯ ಫಿಲೊಸಫಿಗೆ ಪ್ರವೇಶ! ಪೂರ್ವದ ಫಿಲೊಸೊಫಿ ಬದುಕಿನ ಸುತ್ತಮುತ್ತವೇ ತೆರೆದುಕೊಳ್ಳುತ್ತ ಹೋಗುತ್ತದೆ. ಭಾರತೀಯ ತತ್ವಶಾಸ್ತ್ರ ಮರ್ತ್ಯವನ್ನು ಮೀರಿ ಅಭೌತಿಕವಾಗುತ್ತ ನಡೆಯುತ್ತದೆ. ಮಿತಿಯನ್ನು ಮೀರುವ,ಮೇರೆಮೀರುತ್ತಲೇ ಹೊಸ ಹೊಳಹನ್ನು ತೋರುತ್ತ ಸತ್ಯದ ನವದರ್ಶನವನ್ನು ಮುಖಾಮುಖಿಯಾಗಿಸುತ್ತದೆ! ಅದರ ಅರ್ಥವನ್ನು ನಾವು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ದಕ್ಕುವದು ಶೂನ್ಯ ಸಂಪಾದನೆಯೇ. ಆ ಪರಮಾರ್ಥ ನಮಗೆ ಸ್ವಯಂ ದರ್ಶನಸಾಧ್ಯವಾಗಬೇಕು. ಅದಕ್ಕೆ ಮನಸ್ಸು ಅನುಭವದ ಮಿತಿಯನ್ನು ಮೀರಿ ಅನುಭಾವದೆಡೆಗೆ ಮುಖಮಾಡಬೇಕು. ಅದನ್ನೇ ಮುನಿಗಳು ಸಚ್ಚಿದಾನಂದ ಎಂದು ಕರೆದರು. ಸಮಾಧಿಸ್ಥಿತಿ ಎಂದರು". ಭೈರಪ್ಪ ಮಾತನಾಡತೊಡಗಿದ್ದು ಅದೇ ದರಭಾರಿಯಲ್ಲಿ ಭಿಮಸೇನ ಜೋಷಿ ಶಡ್ಜ ಹಚ್ಚಿದಂತಿತ್ತು! ಪಾತಾಳಗರಡಿಹಾಕಿ ಮೀಟಿ ಎಳೆದಂತೆ!

ನಾವು ಇಂದು ಏನೇನೋ ಇಸಂ ಗಳ ಹೆಸರಿನಲ್ಲಿ ಸತ್ಯಕ್ಕೆ ಮುಖಾಮುಖಿಯಾಗುವದನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಭಾರತೀಯ ವೇದ-ಉಪನಿಶತ್ತುಗಳು ಜ್ನಾನದ ಭಂಡಾರ. ಅದನ್ನು ಸಾಹಿತ್ಯಾಭ್ಯಾಸಿಗಳೆಲ್ಲ ಪಾಠ ಮಾಡಿಸಿಕೊಳ್ಳಬೇಕು. ಸುಮ್ಮನೆ ಯಾವುದೋ ಒಂದು ಧರ್ಮದ ಹೆಸರಿನಲ್ಲಿ ಕೆಲವರು ಸೇರಿ ಸನಾತನವಾದಿಗಳೆಂಬ ಹಣೆಪಟ್ಟಿ ಹಚ್ಚುವಮೊದಲು ಜ್ನಾನಭಂಡಾರವನ್ನು ಶಾಶ್ವತವಾಗಿ ಮುಚ್ಚಿಹಾಕುವ ಮೂರ್ಖತನ ಮಾಡುವುದರಿಂದ ಇಡೀ ಜನಾಂಗ ಕತ್ತಲೆಯಲ್ಲೇ ಇರುವಂತಾಗುತ್ತದೆ. ಅದಕ್ಕೇ ನೋಡಿ ಬೇಂದ್ರೆಯಂತಹ ದಾರ್ಶನಿಕ ಕವಿ ನಮಗೆ ಇನ್ನೂ ಅರ್ಥವಾಗುತ್ತಿಲ್ಲ! ಬೇಂದ್ರೆ ಒಬ್ಬ ಅಪ್ಪಟ ತತ್ವಶಾಸ್ತ್ರಜ್ನ. ಅವರಿಗೆ ಟೆಕ್ನಿಕಲ್ ಫಿಲೊಸೊಫಿ ಗೊತ್ತಿತ್ತು. ಅವರು ಬರೆದದ್ದು ಅನೇಕಬಾರಿ ಶಬ್ದಗಳೊಂದಿಗೆ ಆಟ ಎಂದೆನ್ನುವ ಮಟ್ಟಿಗೆ ಮಾತ್ರ ಅರ್ಥೈಸಲ್ಪದುತ್ತದೆ. ಆದರೆ ಅವರಿಗೆ ಸಂಸ್ಕ್ರತದ ಆಳವಾದ ಜ್ನಾನವಿತ್ತು. ವೇದ-ಉಪನಿಷತ್ ಗಳ ತಳಸ್ಪರ್ಷೀ ಅಧ್ಯಯನದ ಹಿನ್ನೆಲೆಯಿತ್ತು. ಶಬ್ದವೊಂದರ ಬೇರನ್ನು ಜಾಲಾಡಿ ಅದನ್ನು ಯಥಾರ್ಥ ರೀತಿಯಲ್ಲಿ ಅಭಿವ್ಯಕ್ತಿಸುವ ಅಧ್ಬುತ ಶಕ್ತಿಯಿತ್ತು. ಅದರ ಆಳಕ್ಕಿಳಿಯದ ಬಹುತೇಕರಿಗೆ ಬೇಂದ್ರೆ ಇನ್ನೂ ಅರ್ಥವಾಗಿಲ್ಲ! ಆ ಅನುಸಂಧಾನ ಸಾಧ್ಯವಾಗದ ಹೊರತು ಅನುಭಾವ ಸಿಗಲಾರದು......ಒಂದೊಂದೇ ಸ್ವರಗಳನ್ನು ಹಿಂಜಿ ಹಿಂಜಿ ಮಂದ್ರ ಶಡ್ಜದಿಂದ ಮಧ್ಯ ಪಂಚಮದಲ್ಲಿ ಲೀನವಾದಾಗಿನ ಸ್ವರಸುಖ ಭೈರಪ್ಪನವರ ಮಾತುಗಳಲ್ಲಿ ಅನುಭವಿಸುವಂತಾಗಿತ್ತು!

ನಂತರ ಮಾತು ಹೊರಳಿದ್ದು ತಂತ್ರದ ಬಗ್ಗೆ! ಪಂಚಮಗಳನಡುವೆ ಸ್ವರಸಂಚಲನೆ! "ತಂತ್ರ ವೇಗವರ್ಧಕ! ಅನೇಕ ತಂತ್ರಗಳನ್ನು ನಾವು ದೈನಂದಿನ ಜೀವನದಲ್ಲಿ ಬಳಸುತ್ತೇವೆ. ಅದೊಂದು ಬೇರೆಯದೇ ಆದ ಭಾಷೆ. ಅಲ್ಲಮನ ವಚನಗಳನ್ನೇ ತೆಗೆದುಕೊಳ್ಳಿ.. ಆ ಭಾಷೆ ತಿಳಿಯದಿದ್ದರೆ ನಮಗೆ ಅದರ ರಸಾಸ್ವಾದ ಸಾಧ್ಯವಿಲ್ಲ. ನಮ್ಮ ಅನುಭವದ ಪರಿಮಿತಿಗೆ ಅದ್ಯಾವುದೂ ನಿಲುಕುವದೆ ಇಲ್ಲ! ಹಾಗೆಂದ ಮಾತ್ರಕ್ಕೆ ಅದು ಮಾಟವಲ್ಲ, ಕಣ್ಕಟ್ಟಲ್ಲ. ಅದಕ್ಕೇ ಸಾಹಿತ್ಯ ರಸವಿದ್ಯೆ! ಅದರ ಹಿಂದೆ ಹೋದವರ್ಯಾರಿಗೂ ಅದು ಪೂರ್ಣವಾಗಿ ದಕ್ಕಿದ್ದೇ ಇಲ್ಲ! ಅದು ಸಂಪೂರ್ಣ ಸಮರ್ಪಣೆಯನ್ನು ನಿರೀಕ್ಷಿಸುತ್ತದೆ." ದರಬಾರೀ ಧೈವತ ದ ಮೀಂಡಿನಂತೆ ಭೈರಪ್ಪನವರ ಖಚಿತ ಖಣ ಖಣ ಮಾತು!

ಮಾತುಹೊರಳಿದ್ದು ಮಂದ್ರದ ಕಡೆಗೆ! "ಜೋ ಚಾ ಹೇ ವೋ ದೇತ ಅಪನೆ ಪದಾರಥ...... ಅಂತ ಮೇ ದೇತ.....ಸುಖಧಾಮ!" ದರಬಾರಿ ರಾಗದ ಅಂತರಾ ಭಾಗದ ಪ್ರಸಿದ್ಧ ಚೀಸ್ ಇದು. ಮಂದ್ರ ಶಡ್ಜದಿಂದ ತಾರ ಪಂಚಮದ ವರೆಗೆ ರಾಗವಿಸ್ತಾರ ಮಾಡುತ್ತ ಮಧ್ಯ ಸಪ್ತಕದ ಶಡ್ಜದಲ್ಲಿ ಲೀನವಾಗುವ ಪರಿಯಿದೆಯಲ್ಲ ಅದೊಂದು ಅಪರಿಮಿತ ಶಡ್ಜಸುಖ......ಸಂಭೋಗದಂತೆ! ವಿವರಕ್ಕೆ ನಿಲುಕದ ಮಾತಿಗೆ ಎಟುಕದ ಸಮಾಧಿಸ್ಥಿತಿ! .....

" ಮಂದ್ರದ ಮೋಹನಲಾಲನಿಗೆ ನಾನು ಕಾಮವನ್ನು ತುಂಬಿದ್ದಲ್ಲ! ಅಥವಾ ಕೇವಲ ಸಂಗೀತಗಾರರೇ ಹಾಗೆ ಅಂತಲೂ ಅದರ ಅರ್ಥವಲ್ಲ. ಭರತನ ನಾಟ್ಯಶಾಸ್ತ್ರವನ್ನೇ ಅವಲೋಕಿಸಿದರೆ ನಟ ಅಥವಾ ಕಲಾವಿದರನ್ನು ವಿಟ ಎಂದೂ, ನಟಿಯನ್ನು ವೇಶ್ಯೆಯೆಂದೂ ಕರೆಯುವ ಪರಿಪಾಠವಿತ್ತು. ಕಾಲಿದಾಸನ ಮ್ರಛ್ಛಕಟಿಕ ನಾಟಕದಲ್ಲಿಯೂ ಇದನ್ನು ಗಮನಿಸಬಹುದು. ಮಂದ್ರ ಕಾದಂಬರಿಯ ಮೋಹನಲಾಲನ ಪಾತ್ರದಲ್ಲಿ ಯಾರೂ ಫಿಟ್ ಆಗಬಹುದು! ಸಾಹಿತಿ,ಚಿತ್ರಕಾರ,ಕಲಾವಿದ,ರಾಜಕಾರಣಿ ಅಥವಾ ಜನಸಾಮಾನ್ಯ! ನಾನು ಸಂಗೀತಗಾರನನ್ನು ನಾಯಕನಾಗಿ ಆಯ್ಕೆ ಮಾಡಿಕೊಂದಿದ್ದಕ್ಕೆ ಕಾರಣವೇನೆಂದರೆ ಅವರಿಗೆ ಹ್ರದಯದ ಭಾಷೆ ಕೆಲಸಮಾಡುವುದು ಹೆಚ್ಚು! ಹಾಗಾಗಿ ಭಾವಾಭಿವ್ಯಕ್ತಿಯೂ ಹೆಚ್ಚು. ಅದೇ ಒಬ್ಬ ಸಾಹಿತಿಯನ್ನು ಮಂದ್ರದ ನಾಯಕನಾಗಿ ಚಿತ್ರಿಸಿದ್ದಿದ್ದರೆ ಅಲ್ಲಿ ಬುದ್ಧಿಶಕ್ತಿಯ ಕಸರತ್ತು ಹೆಚ್ಚಾಗಿ ಭಾವಭಿವ್ಯಕ್ತಿ ತೀವ್ರವಾಗಿರುತ್ತಿರಲಿಲ್ಲ. ಹಾಗೆಂದಮಾತ್ರಕ್ಕೆ ಸಂಗೀತ ಕಲಾವಿದರನ್ನು ಅಗೌರವದಿಂದ ಕಾಣಲಾಗಿದೆ ಅಂತ ಅರ್ಥೈಸುವದರಲ್ಲಿ ಹುರುಳಿಲ್ಲ. ಮೋಹನಲಾಲನ ಗುರು ಎಂತಹ ಉನ್ನತ ವ್ಯಕ್ತಿತ್ವದವನಲ್ಲವೆ? ಇಲ್ಲಿ ಬರುವ ಪಾತ್ರಗಳ ಚಿತ್ರಣಕ್ಕಿಂತಲೂ ಅವು ಹೇಳಹೊರಟಿರುವ ಮೌಲ್ಯಗಳನ್ನು ಅವು ತಮ್ಮಷ್ಟಕ್ಕೆ ಮಾಡಿಕೊಳ್ಳುವ ವಿಮರ್ಶೆಗಳನ್ನು ಗಮನಿಸಿ ಸಾಹಿತ್ಯದ ಒಂದು ಕ್ರತಿಯಾಗಿಯಷ್ಟೆ ಈ ಕಾದಂಬರಿಯನ್ನು ಓದಿಕೊಳ್ಳಿ" ಈ ಮಾತೊಂದು ರಭಸದ.....ಸಂ ನಿಂದ ಸಂ ವರೆಗಿನ ಫಾಸ್ಟ್ ತಾನಿನಂತೆ ಮಿಂಚಿತ್ತು!

"ಕಿನ ಭೈರನ ಕಾನ ಭರೆ..ಮೋರೆ ಪಿಯಾ ಮೋಸೆ ಬೋಲತ ನಾಹಿ.
ಹ್ನೂ ತೋ ವಾಸಿ ಜನಮಕೀ ದಾಸೀ...ಚರಣನ ಶೀಸ ಧರೆ..."
ಯಾರೋ ಅವನ ಕಿವಿದುಂಬಿದ್ದಾರೆ...ನನ್ನಿನಿಯ ನನ್ನೊಡನೆ ಮಾತನಾಡುತ್ತಿಲ್ಲ.
ನಾನೋ ನಿನ್ನ ಜನುಮ ಜನುಮದ ದಾಸಿ.. ನಿನ್ನ ಪಾದವನ್ನು ನನ್ನ ತಲೆಯ ಮೇಲೆ ಹೊತ್ತವಳು".... ಇದು ದರಬಾರಿ ರಾಗದ ಧ್ರತ್ ತೀನ್ ತಾಲದಲ್ಲಿ ರಚಿತವಾದ ತುಂಬ ಪ್ರಸಿದ್ಧವಾದ ಬಂದಿಷ್.

ಭಕ್ತಿ ಮತ್ತು ಶ್ರಂಗಾರ ರಸಗಳು ಒಂದೇ ನಾಣ್ಯದ ಎರಡು ಮುಖಗಳು. ಶ್ರಂಗಾರದ ಅಂತಿಮ ಗುರಿ ಭಕ್ತಿಯೇ! ಅದು ಮೀರಾಬಾಯಿ, ಅಕ್ಕಮಹಾದೇವಿ ಅವರಲ್ಲಿ ಅಭಿವ್ಯಕ್ತಿಗೊಳ್ಳುವಂತಹ ರೀತಿಯದು. ಸಂಗೀತದ ಪರಮಗುರಿ ಭೇದವಳಿದು ಒಂದೇ ಆಗುವದು! ಅದು ಸ್ವರ-ಲಯ-ತಾಳ ವಿಷಯದಲ್ಲಿರಬಹುದು ಅಥವಾ ಭಾವಾಭಿವ್ಯಕ್ತಿಯ ವಿಷಯದಲ್ಲಿರಬಹುದು.ಎಂದು ನನ್ನ ಗುರುಗಳು ಹೇಳುತ್ತಿದ್ದದ್ದು ನೆನಪಿಗೆ ಬರುತ್ತಿದೆ.

ಹಾಗೆ ಒಂದು ಘಟ್ಟಕ್ಕೆ ಭೈರಪ್ಪನವರ ಮಾತಿನ ಝರಿ ದ್ರುತಗತಿಯಲ್ಲಿರುವಾಗ" ನಾಳೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆಯಲ್ಲ....ಏನನಿಸುತ್ತಿದೆ ನಿಮಗೆ? ಎಂದು ಮೆಲ್ಲನೆ ಅನುಮಾನದಿಂದಲೇ ಕೇಳಿದಾಗ ಅವರು " ಪ್ರಶಸ್ತಿ,ಪುರಸ್ಕಾರ,ಸನ್ಮಾನ ಇವೆಲ್ಲ ಒಂದು ಹಂತಕ್ಕೆ ಪ್ರೋತ್ಸಾಹಕಾರಿ ಅಂಶಗಳು. ಆದರೆ ಒಬ್ಬ ನಿಜವಾದ ಬರಹಗಾರ ಅವನು ಸತ್ತ ನಂತರವೂ ಎಷ್ಟು ವರ್ಷಗಳಕಾಲ ಜನರ ಮನಸ್ಸಿನಲ್ಲಿರುತ್ತಾನೆ, ಅವನ ಸಾಹಿತ್ಯ ಎಷ್ಟುಕಾಲ ಜನರ ನಡುವೆ ಉಳಿದಿರುತ್ತದೆ ಎನ್ನುವದರ ಮೇಲೆ ನಿಜವಾದ ಗೌರವ ನಿರ್ಣಯವಾಗುತ್ತದೆ. ನಾನು ನಾಳೆ ಸ್ವೀಕರಿಸುತ್ತಿರುವದು ಕರ್ನಾಟಕ ವಿಶ್ವವಿದ್ಯಾಲಯ ನನ್ನ ಮೇಲಿಟ್ಟಿರುವ ಗೌರವಕ್ಕೆ ಸೌಜನ್ಯಸೂಚಕವಾಗಿ!" ಮತ್ತೆ ಫಿಲಾಸಫಿಕಲ್ ಆಗಿ ಮುಕ್ತಾಯ! ಶಡ್ಜದಿಂದಾರಂಭಿಸಿ ಶಡ್ಜದಲ್ಲಿ ಕೊನೆಗೊಳ್ಳುವ ಸಂಗೀತದಂತೆ! ಎರಡು ಗಂಟೆಗಳಿಗೂ ಅಧಿಕ ಹೊತ್ತು ಕಾಲವನ್ನೇ ಮರೆಸಿ....ಸ್ವರಗಳನ್ನು ನಾದಿ...ನಾದಿ....ನಾದಸುಖದ ಉತ್ತುಂಗಕ್ಕೊಯ್ದು ಅನುಭಾವದ ಮಟ್ಟಕ್ಕೇರಿಸಿದ ದರಬಾರಿ ಕಾನಡಾ ರಾಗದಂತೆ..... ಈಗಲೂ ಗುಂಯ್ ಗುಡುವ ಗುಂಗು! ಅದೇ ಖುಶಿಯಲ್ಲಿ ಗೆಳತಿ ಗೀತಿಸುತ್ತಿದ್ದಾಳೆ !

Sunday, February 7, 2010

ಮೌನದ ನಂತರ ತೆರೆದ ಅಂತರಂಗ!



ಇವತ್ತಿಡಿ ಖುಷಿಯ ದಿನ! ಭೈರಪ್ಪ ಧಾರವಾಡಕ್ಕೆ ಬರುತ್ತಾರೆ ಎಂದು ಗಡಬಡಿಸಿ ಊರಿಂದ ಬಂದೆ. ಕರ್ನಾಟಕ ವಿಶ್ವವಿದ್ಯಾಲಯ ನಾಳೆ ನಡೆಯುವ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ. ಆ ಸಂದರ್ಭದ ನೆಪದಲ್ಲಿ ಕವಿವಿ ಒಂದು ಸಾರ್ವಜನಿಕ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.
ಮಧ್ಯಾಹ್ನ ನಾಲ್ಕೂವರೆಯಿಂದ ಸುಮಾರು ಒಂದೂವರೆ ತಾಸು ಸಿನೆಟ್ ಹಾಲಿನಲ್ಲಿ ಭೈರಪ್ಪ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ನಂತರ ಹೋಗಿ ನಮಸ್ಕಾರ ಎಂದೆ. ಮುಂದಿನ ಕಾರ್ಯಕ್ರಮವೇನು ಎಂದು ಕೇಳಿದೆ! ನನಗೇನೂ ಗೊತ್ತಿಲ್ಲ ಎಂದರು. ಸರಿ ಹಾಗಾದರೆ ನನ್ನ ಜೊತೆಗೆ ಬರುವಿರಾ ಎಂದು ಕೇಳಿದೆ! ನಡೆಹೋಗೋಣ ಎಂದರು! ಸರಿ ಎಂದವನೇ ಕಾರಲ್ಲಿ ಕುಳಿತುಕೊಳ್ಳಿ ಎಂದೆ! ಸಂಘಟಕರು ಕಕ್ಕಾಬಿಕ್ಕಿ! ಯಾರಿವನು ಅಪರಿಚಿತ ಹುಡುಗ! ಎಲ್ಲರನ್ನೂ ಬಿಟ್ಟು ಇವನೊಂದಿಗೆ ಹೊರಟರಲ್ಲ ಭೈರಪ್ಪ! ಎಂದುಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡು ಮನದಲ್ಲೇ ನಕ್ಕೆ!
ಸುಲ್ತಾನ್ ಖಾನರ ಸಾರಂಗಿಯಲ್ಲಿ ರಾಗೆಶ್ರಿ ರಾಗ ಹಿತವಾಗಿ ಕೇಳಿಬರುತ್ತಿತ್ತು. ಕಾರು ಹೊರಟಿದ್ದೆಲ್ಲಿಗೆ, ಏನು ಎಂತ... ಒಂದು ಮಾತೂ ಕೇಳದೆ ನಾದದಲ್ಲಿ ತಲ್ಲೀನರಾದರು ಭೈರಪ್ಪ. ನಾನೂ ಸುಮ್ಮನೆ ಡ್ರೈವ್ ಮಾಡುತ್ತಿದ್ದೆ. ಸಾಧನಕೇರಿಗೆ ಬಂದು ತಲುಪಿದೆವು. ಕರೆಯೇರಿಗುಂಟ ನಡೆಯುತ್ತಿದ್ದೆವು ಒಬ್ಬ ಓದುಗ ಅವರನ್ನು ಯುನಿವರ್ಸಿಟಿಯಿಂದಲೂ ಹಿಂಬಾಲಿಸುತ್ತಿದ್ದ! ನಮಸ್ಕಾರ ಸರ್, ನಾನು ನಿಮ್ಮ ಅಭಿಮಾನಿ ಎಂದ. ಅಲ್ಲಿಯವರೆಗೂ ಮೌನಿಯಾಗಿದ್ದ ಭೈರಪ್ಪ ಮುಖ ಸಡಿಲಿಸಿ ನಕ್ಕರು! ಸಾಹಿತ್ಯದಿಂದ ಸಮಾಜೋದ್ಧಾರ ಸಾಧ್ಯವಿಲ್ಲ ಎಂದು ಒಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದು ನನಗೇಕೋ ಸರಿ ಎನಿಸಲಿಲ್ಲ. ನಿಮ್ಮ ಕಾದಂಬರಿಗಳನ್ನು ಓದಿಯೇ ನಾನು ಜೀವನದಲ್ಲಿ ಸುಧಾರಿಸಿದ್ದೇನೆ, ಬದಲಾಗಿದ್ದೇನೆ ಎಂದ! ಎಂದವನೇ ಕೈಮುಗಿದ... ಬರುತ್ತೇನೆ ಸರ್... ಎಂದು ಹಿಂತಿರುಗಿ ಹೋದ! ಮತ್ತೆ ಮೌನ ಆವರಿಸಿತು. ದಾರಿ ಸಾಗುತ್ತಿತ್ತು.
ಬಾಯಲ್ಲಿ ಗುನುಗುನಿಸುತ್ತಿದ್ದ ರಾಗದ ಛಾಯೆಯ ಗುರುತಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಬರಹಗಾರರಿಗೆ, ಕಲಾವಿದರಿಗೆ ಕಾರ್ಯಕ್ರಮದ ನಂತರ ಒಂದು ರೀತಿಯ ಏಕಾಂತ ಬೇಕಾಗುತ್ತದೆ,ಮೌನ ಬೇಕಾಗುತ್ತದೆ ಎಂದು ನನ್ನ ಗುರುಗಳು ಹೇಳುತ್ತಿದ್ದುದು ನನ್ನ ಅನುಭವದಿಂದ ಮನದಟ್ಟಾಗಿತ್ತು! ಹಾಗಾಗಿ ನಾನೂ ಅವರ ಸಾಂಗತ್ಯ -ಸಾಮೀಪ್ಯವನ್ನು ಆನಂದಿಸುತ್ತಾ ವಾಕಿಂಗಿನ ಲಯದ ಲೆಕ್ಕಾಚಾರದಲ್ಲಿ ಸಂ ಹುಡುಕುತ್ತಿದ್ದೆ! ಹುಸಿ ಹೋದದ್ದೇ ಗೊತ್ತಾಗಲಿಲ್ಲ!
'ಭಜ ಮನ ಕರುಣಾ ನಿಧಾನ ಸುಖಸಂಪದ ಏಕ ಧಾಮ' ಮಧ್ಯಾಲಯ ಏಕತಾಲದಲ್ಲಿ ಯಮನ್ ರಾಗ ಕೇಳಿಬರುತ್ತಿತ್ತು. ಆಗಾಗ್ಗೆ, ಹಾ ಎಂದು ತಲೆಯಾನಿಸುತ್ತಿದ್ದರು ಭೈರಪ್ಪ! ಕಾರು ಕೆಲಗೇರಿ ಕೆರೆಯ ಹತ್ತಿರ ಸಾಗಿತು! ದಂಡೆಗುಂಟ ಸುಮಾರು ಎರಡು ಕಿಲೋಮೀಟರ ದೂರ ಕ್ರಮಿಸಿದ ಮೇಲೆ ಸಾಕು ನಡೆ ಹೋಗೋಣ ಎಂದರು! ತಿರುಗಿ ಕಾರಿನಲ್ಲಿ ಯಮನ್ ಕೇಳುತ್ತಾ ನಿರ್ಮಲ ನಗರದ ನಮ್ಮ ಮನೆಯ ಹತ್ತಿರ ಬಂದೆವು. ಸಖಿ ಗೀತ ಕಾಯುತ್ತಿದ್ದಳು ಆತಂಕದಿಂದ! 'ಊರಿಂದ ಮಧ್ಯಾಹ್ನವಷ್ಟೇ ಬಂದಿದ್ದು. ಮನೆಯಲ್ಲಿ ಏನೇನೂ ತಯಾರಿ ಇಲ್ಲ. ಇವನ ಹುಚ್ಚಾಟ ಬೇರೆ.... ಭೈರಪ್ಪ ಬರುತ್ತಾರೆಂದರೆ ಊಟಕ್ಕೇನು ಮಾಡುವುದು?' ಕರಂಟ್ ಬೇರೆ ಇರ್ಲಿಲ್ಲ ಮನೆಯಲ್ಲಿ. ಮೂರ್ತಿ ತರಕಾರಿ ಮೊಸರು ಎಲ್ಲ ತಂದ! ಕಾರಲ್ಲಿಯೇ ಕುಂತು ಫೋನಲ್ಲಿಯೇ ಎಲ್ಲ ಪ್ಲಾನ್ ಮಾಡಿ ರಾತ್ರಿಯೂಟಕ್ಕೆ ಸಲಾಡ್,ರೋಟಿ, ಮೊಸರು ಸಿಂಪಲ್ ಊಟದ ಮೆನುಕೊಟ್ಟಿದ್ದೆ! ಅದೆಷ್ಟು ಬೈದುಕೊಂಡಳೋ!
ಸರ್ ಮನೇಲಿ ಕರೆಂಟಿಲ್ಲ! ಇನ್ನೊಂದು ಕಡೆಗೆ ಕರೆದುಕೊಂಡು ಹೋಗಲಾ? ಗುಡ್ಡದ ನೆತ್ತಿಯೇರಿ ಕತ್ತಲೆಯಲ್ಲಿ ಕಾರಿನ ಬಾಗಿಲು ತೆರೆದು ಸಂಗೀತ ಕೇಳೋಣವೆ? ಸರಿ ನಡೆ ಎಂದರು!ಟೈವಾಕ್ ಗುಡ್ಡದಮೇಲೆ ಕಗ್ಗತ್ತಲಲ್ಲಿ "ಮಾನೇನಾ ಜಿಯರಾ ತುಮ ಬಿನ" ಹಾಸಣಗಿ ಗಣಪತಿ ಭಟ್ಟರ ಇಂಪಾದ ದನಿಯಲ್ಲಿ ಭಾಗೆಶ್ರೀ ಬಹಾರ್ ರಾಗ ಕಳೆಕಟ್ಟಿ ರಂಗೇರಿತ್ತು. ಭೈರಪ್ಪ ಖುಷ್ ಆಗಿದ್ರು! ಅದಾಗಲೇ ಗಂಟೆ ರಾತ್ರಿ ಎಂಟು!
ಮನೆಗೆ ಹೋದೆವು. ಭೈರಪ್ಪ ಫ್ರೆಶ್ ಆಗಿದ್ದರು!ಮಾತಿಗೆ ತೊಡಗಿದರು ನೋಡಿ... ಫಿಲೊಸೊಫಿ.....ಭಾರತೀಯ ಸಾಹಿತ್ಯ ದರ್ಶನ.... ಅನುಭೂತಿ...ಅನುಭಾವ.... ನಿಜವಾಗಿಯೂ ರಸದೌತಣ! ರಾತ್ರಿ ಹತ್ತು ಹೊಡೆದರೂ ಪರಿವೆಯಿಲ್ಲ ಯಾರಿಗೂ! ಮೊದಲು ನನ್ನ ಹುಚ್ಚಾಟಕ್ಕೆ ಬೈದಿದ್ದ ಗೆಳತಿ ಈಗ ನನಗೊಂದು ಫ್ಲಾಯಿಂಗ್ ಕಿಸ್ ಕೊಟ್ಟು ಪಾತ್ರೆತೊಳೆಯಲು ಬಾರೋ ಎಂದು ಗೋಗರೆಯುತ್ತಿದ್ದಾಳೆ!

Thursday, February 4, 2010

ಯಕ್ಷಪ್ರಶ್ನೆ

ಸತ್ತ ನಿನ್ನೆಗಳಲ್ಲಿ ಹುಟ್ಟಿರದ
ನಾಳೆಗಳಲ್ಲಿ ಬದುಕು
ಅರಳುವ ಭ್ರಮೆಯಲ್ಲಿ
ನವಜಾತ ಇಂದು ಪಾಪ-
ದ ಕೂಸು; ಕಣ್ಣುತೆರೆಯುವ
ಮುನ್ನವೇ ಕಾಲ ತುಳಿತಕ್ಕೆ
ಸಿಕ್ಕು ನರಳುತ್ತದೆ ಚೀರುತ್ತದೆ
ಕೇಳುವವರಿಲ್ಲ.

ನಿನ್ನೆನಾಳೆಗಳ ಸಾವುಹುಟ್ಟುಗಳಲ್ಲಿ
ಇಂದು ಬದುಕುವುದೇ ಇಲ್ಲ
ಜೀವಜಲ ಸಿಕ್ಕದೇ
ಸಿಕ್ಕಿದ್ದೂ ದಕ್ಕದೇ
ನಿನ್ನೆ-ನಾಳೆಗಳ ಕೊಂಡಿ
ಯಾಗದೇ ಇಂದು
ಸಾಯುತ್ತದೆ ದಿನವೂ
ಸತ್ತು ಹುಟ್ಟುತ್ತದೆ.

ನಿತ್ಯ ಸಾಯೋ ಆಟ
ಹುಟ್ಟಿಸಾಯೂ ಆಟ
ಆಡಿ ಆಡಿ ದಣಿವ
ಇಂದು ಅರಳುವುದೇ?
ಇಲ್ಲ ನರಳಿ ಮರಳುವುದೇ?

* ಹೊಸ ಸುದ್ದಿ ಈಗ ತಾನೇ ಸಂಜೆ ಕರ್ನಾಟಕ ಎಂಬ ಪತ್ರಿಕೆ ಪ್ರಾರಂಭವಾಗಿದೆ. ಕವಿ ಚೆನ್ನವೀರ ಕಣವಿ ಸಂದರ್ಶನ ನಾಮಾಡಿದ್ದೇನೆ. ನೋಡಿ http://www.sanjekarnataka.com/Feb-5_sup.pdf