Thursday, February 11, 2010

ಭೈರಪ್ಪ ಇನ್ನೂ ಕಿವಿಯಲ್ಲಿ ಗುನುಗುನಿಸುತ್ತಿದ್ದಾರೆ ದರಬಾರಿ ಕಾನಡಾ ರಾಗದಂತೆ!





ಹಿಂದುಸ್ತಾನಿ ಸಂಗೀತದಲ್ಲಿ ದರಬಾರಿ ಕಾನಡಾ ರಾಗ ತುಂಬ ಗಂಭೀರವಾದ ಭಾವಾಭಿವ್ಯಕ್ತಿಯನ್ನು ಅಪೇಕ್ಷಿಸುವ ಘನರಾಗ! ಹಾಗಾಗಿ ಎಲ್ಲ ಕಲಾವಿದರಿಗೂ ಅದು ಅಷ್ಟಾಗಿ ಒಗ್ಗಿಬರುವದಿಲ್ಲ. ಹಲವಾರು ವರ್ಷಗಳ ಪರಿಶ್ರಮ ಹಾಗೂ ಒಡನಾಟದಿಂದ ಮಾತ್ರ ಮಧ್ಯರಾತ್ರಿಯ ನೀರವದಲ್ಲಿ ಧ್ಯಾನಸ್ಥ ಸ್ಥಿತಿಗೆ ಕಲಾವಿದ-ಕೇಳುಗನನ್ನು ಏಕಕಾಲಕ್ಕೆ ಕೊಂಡೊಯ್ಯುವ ತಾಖತ್ತು ಈ ರಾಗಕ್ಕಿದೆ! ಅದಾದ ನಂತರವೂ ಹಲವಾರು ಗಂಟೆಗಳಕಾಲವೋ,ದಿನಗಳಕಾಲವೋ ಅದ್ಭುತ ಕಲಾವಿದನ ಕಂಠದಿಂದ ಕೇಳಲ್ಪಟ್ಟ.....ಸ್ರಷ್ಟಿಸಲ್ಪಟ್ಟ.....ದರಬಾರಿ ಒಂದುರೀತಿಯ ಗುಂಗು ಹಿಡಿಸಿಬಿಡುತ್ತದೆ. ಭಂಗಿ ತಿಂದವರಂತೆ!

ಆದೇ ರೀತಿಯ ಹ್ಯಾಂಗ್ ಓವರ್ ಅನ್ನು ನಾನು ಈಗಲೂ ಅನುಭವಿಸುತ್ತಿದ್ದೇನೆ. ಮೊನ್ನೆ ಹೇಳಿದೆನಲ್ಲ ಮೌನದ ನಂತರ ಬಿಚ್ಚಿಕೊಂಡ ಭೈರಪ್ಪನವರ ಅಂತರಂಗ....ಅದೊಂದು ಅದ್ಭುತ ದರಬಾರಿಯಂತೆ ನನ್ನನ್ನು ಈಗಲೂ ಕಾಡುತ್ತಿದೆ!

ಭೈರಪ್ಪ ಬಯಸುತ್ತಾರೆ "ಐನ್ ಸ್ಟೈನ್ ತರಹ ಶುದ್ಧ ವಿಜ್ನಾನಿಯಾಗಬೇಕು!" ಎಂದು! ಶುದ್ಧ ವಿಜ್ನಾನಿಗೆ ಮಾತ್ರ ಸತ್ಯವನ್ನು ಯಥಾಸ್ಥಿತಿಯಲ್ಲಿ ನೋಡುವ,ಗ್ರಹಿಸುವ,ಅರ್ಥೈಸಿಕೊಳ್ಳುವ ಧಾರ್ಷ್ಟ್ಯ ಸಾಧಿಸಿರುತ್ತದೆ ಎಂದು! ಯಾಕೆಂದರೆ ಸತ್ಯದೊಂದಿಗೆ ಮುಖಾಮುಖಿ ಅಷ್ಟು ಸರಳವಲ್ಲ! ಅದಕ್ಕೊಂದು ಧೈರ್ಯಬೇಕು....ಸಹನೆ ಬೇಕು...ಸಾಹಚರ್ಯಬೇಕು. ಅದು ಅಷ್ಟು ಸುಲಭಸಾಧ್ಯವೇನಲ್ಲ. ಆದರೆ ಅಸಾಧ್ಯವೂ ಅಲ್ಲ. ಎಂತಹ ಪಕ್ಕಡ್ ಅಲ್ಲಾ..... ದರಬಾರಿಯ "ಮ ಪ ಧ ಧ ನಿ ಪ" ದಂತೆ!

"ಭಾರತೀಯ ತತ್ವಶಾಸ್ತ್ರ ಪ್ರಾರಂಭವಾಗುವುದೇ ಮ್ರುತ್ಯುವಿನೊಂದಿಗಿನ ಮುಖಾಮುಖಿಯ ಮೂಲಕ. ಕಠೋಪನಿಷತ್ತಿನಲ್ಲಿ ಹೇಳಲಾದ ನಚಿಕೇತ ಯಮನೊಂದಿಗಿನ ಸಂಭಾಷಣೆಯ ಮೂಲಕ ಭಾರತೀಯ ಫಿಲೊಸಫಿಗೆ ಪ್ರವೇಶ! ಪೂರ್ವದ ಫಿಲೊಸೊಫಿ ಬದುಕಿನ ಸುತ್ತಮುತ್ತವೇ ತೆರೆದುಕೊಳ್ಳುತ್ತ ಹೋಗುತ್ತದೆ. ಭಾರತೀಯ ತತ್ವಶಾಸ್ತ್ರ ಮರ್ತ್ಯವನ್ನು ಮೀರಿ ಅಭೌತಿಕವಾಗುತ್ತ ನಡೆಯುತ್ತದೆ. ಮಿತಿಯನ್ನು ಮೀರುವ,ಮೇರೆಮೀರುತ್ತಲೇ ಹೊಸ ಹೊಳಹನ್ನು ತೋರುತ್ತ ಸತ್ಯದ ನವದರ್ಶನವನ್ನು ಮುಖಾಮುಖಿಯಾಗಿಸುತ್ತದೆ! ಅದರ ಅರ್ಥವನ್ನು ನಾವು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ದಕ್ಕುವದು ಶೂನ್ಯ ಸಂಪಾದನೆಯೇ. ಆ ಪರಮಾರ್ಥ ನಮಗೆ ಸ್ವಯಂ ದರ್ಶನಸಾಧ್ಯವಾಗಬೇಕು. ಅದಕ್ಕೆ ಮನಸ್ಸು ಅನುಭವದ ಮಿತಿಯನ್ನು ಮೀರಿ ಅನುಭಾವದೆಡೆಗೆ ಮುಖಮಾಡಬೇಕು. ಅದನ್ನೇ ಮುನಿಗಳು ಸಚ್ಚಿದಾನಂದ ಎಂದು ಕರೆದರು. ಸಮಾಧಿಸ್ಥಿತಿ ಎಂದರು". ಭೈರಪ್ಪ ಮಾತನಾಡತೊಡಗಿದ್ದು ಅದೇ ದರಭಾರಿಯಲ್ಲಿ ಭಿಮಸೇನ ಜೋಷಿ ಶಡ್ಜ ಹಚ್ಚಿದಂತಿತ್ತು! ಪಾತಾಳಗರಡಿಹಾಕಿ ಮೀಟಿ ಎಳೆದಂತೆ!

ನಾವು ಇಂದು ಏನೇನೋ ಇಸಂ ಗಳ ಹೆಸರಿನಲ್ಲಿ ಸತ್ಯಕ್ಕೆ ಮುಖಾಮುಖಿಯಾಗುವದನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಭಾರತೀಯ ವೇದ-ಉಪನಿಶತ್ತುಗಳು ಜ್ನಾನದ ಭಂಡಾರ. ಅದನ್ನು ಸಾಹಿತ್ಯಾಭ್ಯಾಸಿಗಳೆಲ್ಲ ಪಾಠ ಮಾಡಿಸಿಕೊಳ್ಳಬೇಕು. ಸುಮ್ಮನೆ ಯಾವುದೋ ಒಂದು ಧರ್ಮದ ಹೆಸರಿನಲ್ಲಿ ಕೆಲವರು ಸೇರಿ ಸನಾತನವಾದಿಗಳೆಂಬ ಹಣೆಪಟ್ಟಿ ಹಚ್ಚುವಮೊದಲು ಜ್ನಾನಭಂಡಾರವನ್ನು ಶಾಶ್ವತವಾಗಿ ಮುಚ್ಚಿಹಾಕುವ ಮೂರ್ಖತನ ಮಾಡುವುದರಿಂದ ಇಡೀ ಜನಾಂಗ ಕತ್ತಲೆಯಲ್ಲೇ ಇರುವಂತಾಗುತ್ತದೆ. ಅದಕ್ಕೇ ನೋಡಿ ಬೇಂದ್ರೆಯಂತಹ ದಾರ್ಶನಿಕ ಕವಿ ನಮಗೆ ಇನ್ನೂ ಅರ್ಥವಾಗುತ್ತಿಲ್ಲ! ಬೇಂದ್ರೆ ಒಬ್ಬ ಅಪ್ಪಟ ತತ್ವಶಾಸ್ತ್ರಜ್ನ. ಅವರಿಗೆ ಟೆಕ್ನಿಕಲ್ ಫಿಲೊಸೊಫಿ ಗೊತ್ತಿತ್ತು. ಅವರು ಬರೆದದ್ದು ಅನೇಕಬಾರಿ ಶಬ್ದಗಳೊಂದಿಗೆ ಆಟ ಎಂದೆನ್ನುವ ಮಟ್ಟಿಗೆ ಮಾತ್ರ ಅರ್ಥೈಸಲ್ಪದುತ್ತದೆ. ಆದರೆ ಅವರಿಗೆ ಸಂಸ್ಕ್ರತದ ಆಳವಾದ ಜ್ನಾನವಿತ್ತು. ವೇದ-ಉಪನಿಷತ್ ಗಳ ತಳಸ್ಪರ್ಷೀ ಅಧ್ಯಯನದ ಹಿನ್ನೆಲೆಯಿತ್ತು. ಶಬ್ದವೊಂದರ ಬೇರನ್ನು ಜಾಲಾಡಿ ಅದನ್ನು ಯಥಾರ್ಥ ರೀತಿಯಲ್ಲಿ ಅಭಿವ್ಯಕ್ತಿಸುವ ಅಧ್ಬುತ ಶಕ್ತಿಯಿತ್ತು. ಅದರ ಆಳಕ್ಕಿಳಿಯದ ಬಹುತೇಕರಿಗೆ ಬೇಂದ್ರೆ ಇನ್ನೂ ಅರ್ಥವಾಗಿಲ್ಲ! ಆ ಅನುಸಂಧಾನ ಸಾಧ್ಯವಾಗದ ಹೊರತು ಅನುಭಾವ ಸಿಗಲಾರದು......ಒಂದೊಂದೇ ಸ್ವರಗಳನ್ನು ಹಿಂಜಿ ಹಿಂಜಿ ಮಂದ್ರ ಶಡ್ಜದಿಂದ ಮಧ್ಯ ಪಂಚಮದಲ್ಲಿ ಲೀನವಾದಾಗಿನ ಸ್ವರಸುಖ ಭೈರಪ್ಪನವರ ಮಾತುಗಳಲ್ಲಿ ಅನುಭವಿಸುವಂತಾಗಿತ್ತು!

ನಂತರ ಮಾತು ಹೊರಳಿದ್ದು ತಂತ್ರದ ಬಗ್ಗೆ! ಪಂಚಮಗಳನಡುವೆ ಸ್ವರಸಂಚಲನೆ! "ತಂತ್ರ ವೇಗವರ್ಧಕ! ಅನೇಕ ತಂತ್ರಗಳನ್ನು ನಾವು ದೈನಂದಿನ ಜೀವನದಲ್ಲಿ ಬಳಸುತ್ತೇವೆ. ಅದೊಂದು ಬೇರೆಯದೇ ಆದ ಭಾಷೆ. ಅಲ್ಲಮನ ವಚನಗಳನ್ನೇ ತೆಗೆದುಕೊಳ್ಳಿ.. ಆ ಭಾಷೆ ತಿಳಿಯದಿದ್ದರೆ ನಮಗೆ ಅದರ ರಸಾಸ್ವಾದ ಸಾಧ್ಯವಿಲ್ಲ. ನಮ್ಮ ಅನುಭವದ ಪರಿಮಿತಿಗೆ ಅದ್ಯಾವುದೂ ನಿಲುಕುವದೆ ಇಲ್ಲ! ಹಾಗೆಂದ ಮಾತ್ರಕ್ಕೆ ಅದು ಮಾಟವಲ್ಲ, ಕಣ್ಕಟ್ಟಲ್ಲ. ಅದಕ್ಕೇ ಸಾಹಿತ್ಯ ರಸವಿದ್ಯೆ! ಅದರ ಹಿಂದೆ ಹೋದವರ್ಯಾರಿಗೂ ಅದು ಪೂರ್ಣವಾಗಿ ದಕ್ಕಿದ್ದೇ ಇಲ್ಲ! ಅದು ಸಂಪೂರ್ಣ ಸಮರ್ಪಣೆಯನ್ನು ನಿರೀಕ್ಷಿಸುತ್ತದೆ." ದರಬಾರೀ ಧೈವತ ದ ಮೀಂಡಿನಂತೆ ಭೈರಪ್ಪನವರ ಖಚಿತ ಖಣ ಖಣ ಮಾತು!

ಮಾತುಹೊರಳಿದ್ದು ಮಂದ್ರದ ಕಡೆಗೆ! "ಜೋ ಚಾ ಹೇ ವೋ ದೇತ ಅಪನೆ ಪದಾರಥ...... ಅಂತ ಮೇ ದೇತ.....ಸುಖಧಾಮ!" ದರಬಾರಿ ರಾಗದ ಅಂತರಾ ಭಾಗದ ಪ್ರಸಿದ್ಧ ಚೀಸ್ ಇದು. ಮಂದ್ರ ಶಡ್ಜದಿಂದ ತಾರ ಪಂಚಮದ ವರೆಗೆ ರಾಗವಿಸ್ತಾರ ಮಾಡುತ್ತ ಮಧ್ಯ ಸಪ್ತಕದ ಶಡ್ಜದಲ್ಲಿ ಲೀನವಾಗುವ ಪರಿಯಿದೆಯಲ್ಲ ಅದೊಂದು ಅಪರಿಮಿತ ಶಡ್ಜಸುಖ......ಸಂಭೋಗದಂತೆ! ವಿವರಕ್ಕೆ ನಿಲುಕದ ಮಾತಿಗೆ ಎಟುಕದ ಸಮಾಧಿಸ್ಥಿತಿ! .....

" ಮಂದ್ರದ ಮೋಹನಲಾಲನಿಗೆ ನಾನು ಕಾಮವನ್ನು ತುಂಬಿದ್ದಲ್ಲ! ಅಥವಾ ಕೇವಲ ಸಂಗೀತಗಾರರೇ ಹಾಗೆ ಅಂತಲೂ ಅದರ ಅರ್ಥವಲ್ಲ. ಭರತನ ನಾಟ್ಯಶಾಸ್ತ್ರವನ್ನೇ ಅವಲೋಕಿಸಿದರೆ ನಟ ಅಥವಾ ಕಲಾವಿದರನ್ನು ವಿಟ ಎಂದೂ, ನಟಿಯನ್ನು ವೇಶ್ಯೆಯೆಂದೂ ಕರೆಯುವ ಪರಿಪಾಠವಿತ್ತು. ಕಾಲಿದಾಸನ ಮ್ರಛ್ಛಕಟಿಕ ನಾಟಕದಲ್ಲಿಯೂ ಇದನ್ನು ಗಮನಿಸಬಹುದು. ಮಂದ್ರ ಕಾದಂಬರಿಯ ಮೋಹನಲಾಲನ ಪಾತ್ರದಲ್ಲಿ ಯಾರೂ ಫಿಟ್ ಆಗಬಹುದು! ಸಾಹಿತಿ,ಚಿತ್ರಕಾರ,ಕಲಾವಿದ,ರಾಜಕಾರಣಿ ಅಥವಾ ಜನಸಾಮಾನ್ಯ! ನಾನು ಸಂಗೀತಗಾರನನ್ನು ನಾಯಕನಾಗಿ ಆಯ್ಕೆ ಮಾಡಿಕೊಂದಿದ್ದಕ್ಕೆ ಕಾರಣವೇನೆಂದರೆ ಅವರಿಗೆ ಹ್ರದಯದ ಭಾಷೆ ಕೆಲಸಮಾಡುವುದು ಹೆಚ್ಚು! ಹಾಗಾಗಿ ಭಾವಾಭಿವ್ಯಕ್ತಿಯೂ ಹೆಚ್ಚು. ಅದೇ ಒಬ್ಬ ಸಾಹಿತಿಯನ್ನು ಮಂದ್ರದ ನಾಯಕನಾಗಿ ಚಿತ್ರಿಸಿದ್ದಿದ್ದರೆ ಅಲ್ಲಿ ಬುದ್ಧಿಶಕ್ತಿಯ ಕಸರತ್ತು ಹೆಚ್ಚಾಗಿ ಭಾವಭಿವ್ಯಕ್ತಿ ತೀವ್ರವಾಗಿರುತ್ತಿರಲಿಲ್ಲ. ಹಾಗೆಂದಮಾತ್ರಕ್ಕೆ ಸಂಗೀತ ಕಲಾವಿದರನ್ನು ಅಗೌರವದಿಂದ ಕಾಣಲಾಗಿದೆ ಅಂತ ಅರ್ಥೈಸುವದರಲ್ಲಿ ಹುರುಳಿಲ್ಲ. ಮೋಹನಲಾಲನ ಗುರು ಎಂತಹ ಉನ್ನತ ವ್ಯಕ್ತಿತ್ವದವನಲ್ಲವೆ? ಇಲ್ಲಿ ಬರುವ ಪಾತ್ರಗಳ ಚಿತ್ರಣಕ್ಕಿಂತಲೂ ಅವು ಹೇಳಹೊರಟಿರುವ ಮೌಲ್ಯಗಳನ್ನು ಅವು ತಮ್ಮಷ್ಟಕ್ಕೆ ಮಾಡಿಕೊಳ್ಳುವ ವಿಮರ್ಶೆಗಳನ್ನು ಗಮನಿಸಿ ಸಾಹಿತ್ಯದ ಒಂದು ಕ್ರತಿಯಾಗಿಯಷ್ಟೆ ಈ ಕಾದಂಬರಿಯನ್ನು ಓದಿಕೊಳ್ಳಿ" ಈ ಮಾತೊಂದು ರಭಸದ.....ಸಂ ನಿಂದ ಸಂ ವರೆಗಿನ ಫಾಸ್ಟ್ ತಾನಿನಂತೆ ಮಿಂಚಿತ್ತು!

"ಕಿನ ಭೈರನ ಕಾನ ಭರೆ..ಮೋರೆ ಪಿಯಾ ಮೋಸೆ ಬೋಲತ ನಾಹಿ.
ಹ್ನೂ ತೋ ವಾಸಿ ಜನಮಕೀ ದಾಸೀ...ಚರಣನ ಶೀಸ ಧರೆ..."
ಯಾರೋ ಅವನ ಕಿವಿದುಂಬಿದ್ದಾರೆ...ನನ್ನಿನಿಯ ನನ್ನೊಡನೆ ಮಾತನಾಡುತ್ತಿಲ್ಲ.
ನಾನೋ ನಿನ್ನ ಜನುಮ ಜನುಮದ ದಾಸಿ.. ನಿನ್ನ ಪಾದವನ್ನು ನನ್ನ ತಲೆಯ ಮೇಲೆ ಹೊತ್ತವಳು".... ಇದು ದರಬಾರಿ ರಾಗದ ಧ್ರತ್ ತೀನ್ ತಾಲದಲ್ಲಿ ರಚಿತವಾದ ತುಂಬ ಪ್ರಸಿದ್ಧವಾದ ಬಂದಿಷ್.

ಭಕ್ತಿ ಮತ್ತು ಶ್ರಂಗಾರ ರಸಗಳು ಒಂದೇ ನಾಣ್ಯದ ಎರಡು ಮುಖಗಳು. ಶ್ರಂಗಾರದ ಅಂತಿಮ ಗುರಿ ಭಕ್ತಿಯೇ! ಅದು ಮೀರಾಬಾಯಿ, ಅಕ್ಕಮಹಾದೇವಿ ಅವರಲ್ಲಿ ಅಭಿವ್ಯಕ್ತಿಗೊಳ್ಳುವಂತಹ ರೀತಿಯದು. ಸಂಗೀತದ ಪರಮಗುರಿ ಭೇದವಳಿದು ಒಂದೇ ಆಗುವದು! ಅದು ಸ್ವರ-ಲಯ-ತಾಳ ವಿಷಯದಲ್ಲಿರಬಹುದು ಅಥವಾ ಭಾವಾಭಿವ್ಯಕ್ತಿಯ ವಿಷಯದಲ್ಲಿರಬಹುದು.ಎಂದು ನನ್ನ ಗುರುಗಳು ಹೇಳುತ್ತಿದ್ದದ್ದು ನೆನಪಿಗೆ ಬರುತ್ತಿದೆ.

ಹಾಗೆ ಒಂದು ಘಟ್ಟಕ್ಕೆ ಭೈರಪ್ಪನವರ ಮಾತಿನ ಝರಿ ದ್ರುತಗತಿಯಲ್ಲಿರುವಾಗ" ನಾಳೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆಯಲ್ಲ....ಏನನಿಸುತ್ತಿದೆ ನಿಮಗೆ? ಎಂದು ಮೆಲ್ಲನೆ ಅನುಮಾನದಿಂದಲೇ ಕೇಳಿದಾಗ ಅವರು " ಪ್ರಶಸ್ತಿ,ಪುರಸ್ಕಾರ,ಸನ್ಮಾನ ಇವೆಲ್ಲ ಒಂದು ಹಂತಕ್ಕೆ ಪ್ರೋತ್ಸಾಹಕಾರಿ ಅಂಶಗಳು. ಆದರೆ ಒಬ್ಬ ನಿಜವಾದ ಬರಹಗಾರ ಅವನು ಸತ್ತ ನಂತರವೂ ಎಷ್ಟು ವರ್ಷಗಳಕಾಲ ಜನರ ಮನಸ್ಸಿನಲ್ಲಿರುತ್ತಾನೆ, ಅವನ ಸಾಹಿತ್ಯ ಎಷ್ಟುಕಾಲ ಜನರ ನಡುವೆ ಉಳಿದಿರುತ್ತದೆ ಎನ್ನುವದರ ಮೇಲೆ ನಿಜವಾದ ಗೌರವ ನಿರ್ಣಯವಾಗುತ್ತದೆ. ನಾನು ನಾಳೆ ಸ್ವೀಕರಿಸುತ್ತಿರುವದು ಕರ್ನಾಟಕ ವಿಶ್ವವಿದ್ಯಾಲಯ ನನ್ನ ಮೇಲಿಟ್ಟಿರುವ ಗೌರವಕ್ಕೆ ಸೌಜನ್ಯಸೂಚಕವಾಗಿ!" ಮತ್ತೆ ಫಿಲಾಸಫಿಕಲ್ ಆಗಿ ಮುಕ್ತಾಯ! ಶಡ್ಜದಿಂದಾರಂಭಿಸಿ ಶಡ್ಜದಲ್ಲಿ ಕೊನೆಗೊಳ್ಳುವ ಸಂಗೀತದಂತೆ! ಎರಡು ಗಂಟೆಗಳಿಗೂ ಅಧಿಕ ಹೊತ್ತು ಕಾಲವನ್ನೇ ಮರೆಸಿ....ಸ್ವರಗಳನ್ನು ನಾದಿ...ನಾದಿ....ನಾದಸುಖದ ಉತ್ತುಂಗಕ್ಕೊಯ್ದು ಅನುಭಾವದ ಮಟ್ಟಕ್ಕೇರಿಸಿದ ದರಬಾರಿ ಕಾನಡಾ ರಾಗದಂತೆ..... ಈಗಲೂ ಗುಂಯ್ ಗುಡುವ ಗುಂಗು! ಅದೇ ಖುಶಿಯಲ್ಲಿ ಗೆಳತಿ ಗೀತಿಸುತ್ತಿದ್ದಾಳೆ !

15 comments:

  1. ಭೈರಪ್ಪನವರಿಗೆ ಅವರೇ ಸಾಟಿ, ಲೇಖನ ಚೆನ್ನಾಗಿದೆ, ಧನ್ಯವಾದಗಳು

    ReplyDelete
  2. maanibhavaa en suddine ille! thanks !

    ReplyDelete
  3. ಎಸ್.ಎಲ್.ಬಿ ಎಂದೇ ನಾವು ಕಾಲೇಜಿನ ದಿನಗಳಲ್ಲಿ ಕಾದಂಬರಿಕಾರರನ್ನು ಹೆಸರಿಸುತ್ತಾ ಗುರುತಿಸುತ್ತಿದ್ದದ್ದು. ಅವರ ಕಾದಂಬರಿಗಳ ದಿಕ್ಕೇ ಬೇರೆ..ಅದು ಒಂದು ಪತ್ತೇದಾರಿಗಿಂತ ಕಡಿಮೆಯೆನಿಸುವುದಿಲ್ಲ...ಅವರ ಬಗ್ಗೆ ಒಳ್ಳೆಯ ಲೇಖನ. ವಸಂತರವರೇ ಅಭಿನಂಅದನೆಗಳು.

    ReplyDelete
  4. ವಸಂತ್,
    ನಿನ್ನ ಲೇಖನ ಓದಿದಾಗ, ನೀ ಹೇಳಿದ ಅನುಭವ, ಅನುಭಾವ, ಎಲ್ಲಾ, ಒಂದು ಸಲ ಕೈಗೆ ಸಿಕ್ಕು,
    ಮತ್ತೆ ಜಾರಿಹೋದ ಅನುಭವವಾಯ್ತು.

    ReplyDelete
  5. enta suddi ilya? blog ge hosa post haakiddi nodu:)

    ReplyDelete
  6. ಭೈರಪ್ಪನವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ..ಚೆನ್ನಾಗಿದೆ ಅನುಭವದ ಬರಹ

    ReplyDelete
  7. ಭೈರಪ್ಪನವರು, ದರಾಬರಿ, ಭೀಮಸೇನ ಜೋಷಿ, ಬೇಂದ್ರೆ, ಧಾರವಾಡ ಎಲ್ಲಾ ಒಂದೇ ಬೊಗಸೆಯೊಳಗ ಹಿಡಿದ್ದಿದ್ದು ಛಂದ ಅದ. ಓದಸ್ಕೊಂಡು ಹೋಗತದ, ಛಲೋ ಅನಸತದ್.
    -ಗುರುರಾಜ

    ReplyDelete
  8. Thanks Jalanayana,umakka and subbu!

    ReplyDelete
  9. Gururaj, adonthara gungi hula iddaganga nodri! neevoo odi khushipattiddakka aanadaatu. Heenga barta irri, khushi anistada. bhairappanavara kaaranakka, bhimsen joshi kaaranakka dhaaravaadadd kaaranakka yavdo vasanta yavudo gururaaja spandistaaralla ade onthara vismaya nodri! Thanks for sharing

    ReplyDelete
  10. ಭೈರಪ್ಪನವರ ಎಲ್ಲ ಕಾದಂಬರಿಗಳೂ ಓದಿಸಿಕೊಂಡು ಹೋಗುತ್ತವೆ

    ReplyDelete
  11. Welcome too my blog deepasmita. Thanks for reading.

    ReplyDelete
  12. hi vasantanna.nimmane GEETAKKANGE congrats helbudo prashasti bandiddakke:)

    ReplyDelete
  13. ತುಂಬಾ ಚನ್ನಾಗಿ ವಿವರಿಸಿದ್ದೀರಿ. ನಚಿಕೇತನೊಂದಿಗೆ- ಭಾರತೀಯ ತತ್ವಶಾಸ್ತ್ರದ ತಳವನ್ನು ಜೋಡಿಸಿದ್ದು ಚನ್ನಾಗಿದೆ. ಭೈರಪ್ಪನವರ ಸಂಭಾಷಣೆಯೊಡನೆ ರಾಗಗಳನ್ನು ಬೆಸದದ್ದು ಅಧ್ಭುತವೆ ಸರಿ. ತುಂಬಾ ಚನ್ನಾಗಿದೆ.

    ReplyDelete