Sunday, June 16, 2013

ತಂಗಿ, ಪ್ರೀತಿಯ ಕೂಸೇ!
ತವರೇ ಹಾಗೆ....ತಂಪು
ಬೆಚ್ಚಗೆ....ಬೊಂಬಾಯಿ!
ದುಗುಡ ದುಮ್ಮಾನಗಳನೆಲ್ಲ
ಸದ್ದಿಲ್ಲದೇ ನುಂಗಿ
ನಕ್ಕು ಹಗುರಾಗಿಸುವ
ಪ್ರೀತಿಯಗೂಡು.
ತೆರೆದ ಮನೆ...ಮನ
ಎಂದಿಗೂ ಮುಚ್ಚದ ಬಾಗಿಲು
ತಬ್ಬಲಿಗಳಾರಿಲ್ಲವಿಲ್ಲಿ
ಇಲ್ಲಿ ಎಲ್ಲವೂ ಎಲ್ಲರದು
ಹೊರ ಜಗುಲಿ, ಒಳ, ದೊಡ್ಡೊಳ
ಮೆತ್ತಿ, ಮೇಲ್ಮೆತ್ತಿ ಖೋಲಿಗಳಲ್ಲೆಲ್ಲಿಯೂ
ಗುಮ್ಮನಿಲ್ಲ! ಅಮ್ಮ ಇದ್ದಾಳೆ
ಪ್ರೀತಿಯ ಹೊಳೆಹರಿಸಿಯೂ
ಮೌನಿಯಾಗಿ ದಾರಿದೋರುವ
ಅವಧೂತ ಅಪ್ಪನಿದ್ದಾನೆ
ತುಂಬಿದ ಮನೆ....ಮನ
ಬಿಂದಿಗೆಯ ಮೊಗೆಮೊಗೆದು
ತುಂಬಿಸಿಕೋ....ಆನಂದ....
ಬಾಳು ಬೆಳಕಾಗಲಿ


ವಸಂತ
16 ಜೂನ್ 2013

ಅಚಾನಕ್ಕಾಗಿ.... ಮುನ್ಸೂಚನೆಯಿಲ್ಲದೆ
ಎರ್ರಾಬಿರ್ರಿ ಹೊಡೆದ ಜಡಿಮಳೆಗೆ ಎಂತ ಹಟ!
ಎಲ್ಲ ರಾಡಿರಾಡಿ ; ನೀರು ಕಲಿಕಿ ಬಿಟ್ಟಿದೆ
ಮನಸು ಹೃದಯವನೆಲ್ಲ ಹಿಂಡಿ ಹಿಪ್ಪೆಮಾಡಿ
ಒದ್ದೆಯಾಗಿದ್ದೇನೆ....ತೋಯ್ದು ತೊಪ್ಪೆಯಾಗಿದ್ದೇನೆ
ಅಲ್ಲೆಲ್ಲೋ ದೂರದಿಂದ ನಿನ್ನ ಬಿಸಿಯುಸಿರ ಗಾಳಿ
ಸುಳಿವ ಗುಂಗುರು ಕೂದಲಿನ ಎಳೆಯಾಗಿ
ತೇಲಿಬಂತು.....ಸಾವಿರ ತಂತಿ ಮೀಟಿದೆ ನೆನಪು
ತಂಬೂರಿ ಶೃತಿಗೊಂಡಿದೆ ಷಡ್ಜ ಹತ್ತುತ್ತಿಲ್ಲ!
ಪಂಚಮದ ಓಂಕಾರಕ್ಕೆ ಮನಸು ಕರಗುತ್ತಿಲ್ಲ
ಧೋ...ಧೋ... ಮಳೆ....ಸ್ವರದಂತೆ ಸುರಿಯುತ್ತಿದೆ
ರಸಧಾರೆ ಹಿಡಿದಿಡಲು ಖಾಲಿ ಪಾತ್ರೆಯಿಲ್ಲ!
ಬರಿದಾಗಿದ್ದೇನೆ... ಬೆರಗಾಗಿದ್ದೇನೆ.....
ಬೆತ್ತಲಾಗಲಾಗುತ್ತಿಲ್ಲ ಬಯಲಿನಲಿ
ಭಾವಕ್ಕೆ ಮುಸುಕಿದ ಭವದ ಬೇಲಿಯನು
ತೂರಿ ಬೀಸಬಾರದೆ ನೀನು ತೋಂ ತನನ ತಾನಾ?
ಹಾರಿಹೋಗಲಿ ಎಲ್ಲ ನನ್ನದೆನ್ನುವ ಜಂಭ
ಬಯಲಲ್ಲಿ ಬಯಲಾಗಿ ಬೆರೆತು ಹೋಗಲಿ ಉಸಿರು
ಹದಗೊಂಡ ನಿಷಾದ ಹಾಡಾಗಲಿ...ಷಡ್ಜ
ಪಂಚಮ....ಗಾಂಧಾರ... ಏಕನುಡಿಯಲಿ


ವಸಂತ
14 ಜೂನ್ 2013
ಮೊದಲ ಮಳೆ! ತೊಯ್ಯದಿಲರಲಾರೆ....
ಒದ್ದೆಯಾದಷ್ಟೂ ಹಸಿಹಸಿ ನೆನಪುಗಳು....
ಹೊಸ ಚಿಗುರು ಮೂಡಿದ ಹಾಗೆ
ಫಕ್ಕನೆ ಮಿಂಚುವ ಮೊದಲ ಮುತ್ತಿನ ಕಥೆ!
ಗುಡುಗಿನ ಆರ್ಭಟಕ್ಕೆ ಹೆದರಿ ಮುದುರಿದ ನಿನ್ನ
ಬೆಚ್ಚನೆಯ ಗೂಡೊಳಗೆ ಕಾಪಿಡುವ ತವಕ!
ಸ್ನಿಗ್ಧ ಮುಗ್ಧ ಮನಸ್ಸಿನ್ನೂ ಹೊಳಪುಗುಂದಿಲ್ಲ
ವಯಸ್ಸಾಗುತ್ತಿದೆ.... ಪ್ರೀತಿಗಲ್ಲ! 
ವಾತ್ಸಲ್ಯಮಯೀ ಮಾಯೀ
ಮಾಯೆ ಸರಿಸುವ ನಿನ್ನ ಹೊಳಪು
ಕಂಗಳ ಪ್ರೀತಿ ಸುರಿಸು ಮಳೆಯಂತೆ
ಉಕ್ಕಿಹರಿಯುವ ನದಿಯಾಗುವ
ಬಯಲನೆಲ್ಲ ಆವರಿಸಿ
ಬದುಕ ಅರಳಿಸಿ, ಕೊಳೆಯ ಕಳೆಯಿಸಿ
ಮನವ ಬೆಳಗಿಸಿ.


ವಸಂತ
3 ಜೂನ್ 2013

(ರೊಮ್ಯಾಂಟಿಕ್ ವಾತಾವರಣದಲ್ಲಿ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಾದ ವರ್ಡ್ಸ್ವರ್ಥ್, ಕೋಲ್ರಿಜ್, ಬ್ಲೇಕ್, ಶೆಲ್ಲಿ, ಕೀಟ್ಸ್, ಬೈರನ್ ಮುಂತಾದವರ ಕವಿತೆಗಳನ್ನು ಓದುತ್ತಿರುವಾಗ.... ಹನಿಸಿದ್ದು!)
ಅವನ ಕಣ್ಣಂಚಲಿ ಮಿಂಚಿ, ಮೀಸೆಯಂಚಿನ ನಗುವಲ್ಲಿ ಅರಳಿ!
ಚೆಲ್ಲಿದ ನಗುವ ಬೊಗಸೆಯಲಿ ಹಿಡಿವ ತವಕ
ಮೃಗನಯನಿಯ ಕುಡಿನೋಟಕ್ಕೆ ಎದೆಯಲ್ಲಿ ಮಿಂಚು!
ಮಳೆಮುತ್ತು ಭೋರೆಂದು ಸುರಿಸುರಿದು ಒದ್ದೆ
ಯಾಗುವ ಮುನ್ನ ತುಂಬಿಕೊಳ್ಳಬೇಕು
ಕೈತುಂಬ, ಮೈತುಂಬ ಮನತುಂಬ
ಅಧರ ಬಿಂಬ
ಸ್ವಚ್ಛಂದ ಮಕರಂದ ಕಣ್ಣತುಂಬ
ಅವನ ಕಣ್ಣಂಚಲಿ ಮಿಂಚಿ, ಮೀಸೆಯಂಚಿನ ನಗುವಲ್ಲಿ ಅರಳಿ!

ವಸಂತ
1 ಜೂನ್ 2013


(ಮೊದಲಸಾಲು ಸೌಪರ್ಣಿಕಾ ಹೊಳ್ಳ ಅವರದು)