Sunday, June 16, 2013

ಅಚಾನಕ್ಕಾಗಿ.... ಮುನ್ಸೂಚನೆಯಿಲ್ಲದೆ
ಎರ್ರಾಬಿರ್ರಿ ಹೊಡೆದ ಜಡಿಮಳೆಗೆ ಎಂತ ಹಟ!
ಎಲ್ಲ ರಾಡಿರಾಡಿ ; ನೀರು ಕಲಿಕಿ ಬಿಟ್ಟಿದೆ
ಮನಸು ಹೃದಯವನೆಲ್ಲ ಹಿಂಡಿ ಹಿಪ್ಪೆಮಾಡಿ
ಒದ್ದೆಯಾಗಿದ್ದೇನೆ....ತೋಯ್ದು ತೊಪ್ಪೆಯಾಗಿದ್ದೇನೆ
ಅಲ್ಲೆಲ್ಲೋ ದೂರದಿಂದ ನಿನ್ನ ಬಿಸಿಯುಸಿರ ಗಾಳಿ
ಸುಳಿವ ಗುಂಗುರು ಕೂದಲಿನ ಎಳೆಯಾಗಿ
ತೇಲಿಬಂತು.....ಸಾವಿರ ತಂತಿ ಮೀಟಿದೆ ನೆನಪು
ತಂಬೂರಿ ಶೃತಿಗೊಂಡಿದೆ ಷಡ್ಜ ಹತ್ತುತ್ತಿಲ್ಲ!
ಪಂಚಮದ ಓಂಕಾರಕ್ಕೆ ಮನಸು ಕರಗುತ್ತಿಲ್ಲ
ಧೋ...ಧೋ... ಮಳೆ....ಸ್ವರದಂತೆ ಸುರಿಯುತ್ತಿದೆ
ರಸಧಾರೆ ಹಿಡಿದಿಡಲು ಖಾಲಿ ಪಾತ್ರೆಯಿಲ್ಲ!
ಬರಿದಾಗಿದ್ದೇನೆ... ಬೆರಗಾಗಿದ್ದೇನೆ.....
ಬೆತ್ತಲಾಗಲಾಗುತ್ತಿಲ್ಲ ಬಯಲಿನಲಿ
ಭಾವಕ್ಕೆ ಮುಸುಕಿದ ಭವದ ಬೇಲಿಯನು
ತೂರಿ ಬೀಸಬಾರದೆ ನೀನು ತೋಂ ತನನ ತಾನಾ?
ಹಾರಿಹೋಗಲಿ ಎಲ್ಲ ನನ್ನದೆನ್ನುವ ಜಂಭ
ಬಯಲಲ್ಲಿ ಬಯಲಾಗಿ ಬೆರೆತು ಹೋಗಲಿ ಉಸಿರು
ಹದಗೊಂಡ ನಿಷಾದ ಹಾಡಾಗಲಿ...ಷಡ್ಜ
ಪಂಚಮ....ಗಾಂಧಾರ... ಏಕನುಡಿಯಲಿ


ವಸಂತ
14 ಜೂನ್ 2013

No comments:

Post a Comment