ಕವಿತಾ ಕುಡಿನೋಟ ಬೀರುತ್ತಾಳೆ
ಬಿಳಿಯ ಕಾಗದದ ಮೇಲೆ
ಅಪರಿಚಿತ ಗಂಡಸು; ತನ್ನವನಲ್ಲ
ವೆಂಬಂತೆ ಮುಖತಿರುಗಿಸುತ್ತಾಳೆ.
ಆದರೆ, ಸುಕುಮಾರಿ ಉಪವಾಸವಿದ್ದಾಗ
ಕನಸಿನಂತಹ ರಾತ್ರಿಯಲಿ
ಪುರುಷಸ್ಪರ್ಷದ ನವಿರುಗನಸಿನಲ್ಲಿ
ತಕ್ಷಣವೆ ಮಿಡಿದು ಕಂಪಿಸುವ ಅವಳ ದೇಹ.
ಕೆಲವೊಮ್ಮೆ, ಧಗೆಯಾರಿದ ಮೇಲೆ
ಉರಿದು ಎಚ್ಚರಗೊಳ್ಳುವ ಅವಳು
ನೇವರಿಸುತ್ತಾಳೆ ರವಿಕೆಯ
ಬಿಚ್ಚಿ ಬಿಸಾಕಿ ಬೊಗಸೆ
ತುಂಬಿದ ಬೆಳದಿಂಗಳ ಮೈ
ಮೇಲೆಲ್ಲ ಸೋಕಿಸಿ ನವಿರಾಗಿ
ಉಜ್ಜುತ್ತ ತಂಪೆರೆವ ಕೈ
ಗಳು ನೋವ ಕಳೆಯುವಂತೆ.
ದೇಹದ ಕತ್ತಲೆ ಚಾಚುತ್ತದೆ ಚಾಪೆಯಂತೆ
ಬೇಕಾಬಿಟ್ಟಿ ಚೆಲ್ಲಿದ ಮೈ-ಮನಸು
ಸಂದು ಸಂದಿನ ಕತ್ತಲೆಯಲ್ಲೂ ಆವರಿಸುವ
ಬೆಂಕಿಕಾವು, ಬಲಶಾಲಿ ಬಾಹುಗಳಲಿ
ಬಂಧಿಯಾಗಿ ಹುಡಿಗೊಳ್ಳುವ ತನಕ
ನೆಲೆಗೊಳ್ಳಲಿ ಕತ್ತಲೆಯ ಕಾಮ
ವೆಂದು ಕನವರಿಸುತ್ತಾಳೆ.
ದಿಗ್ಗನೆ ಕಾಣಿಸಿಕೊಳ್ಳುವ ಖಾಲಿ ಹಾಳೆ
ನಡುಗುವ ಕೈಗಳ ಸೋಂಕಿದಾಗ
ಸುಡುವ ದೇಹದ ಭಾಗ,
ಕರಗುವ ಯಾತನೆ, ಮೂಗಿಗಡರುವ
ವಿಚಿತ್ರ ವಾಸನೆ
ದೇಹದ ಉಬ್ಬುತಗ್ಗು ಸಾಲುಗಳ
ಓದುವ ಕೈ
ಅಪರಿಚಿತವಾಗಿ ಕಾಣಿಸುವ ತನ್ನದೇ
ದೇಹ, ಕೊರೆವ ತಣ್ಣನೆಯ ಬೆವರಸಾಲೆ
ಸಾವು ಬದುಕಿನ ವಾಸನೆಯಲ್ಲಿ ಅದ್ದಿ
ತೆಗೆದ ಉಸಿರು
ಈ ಎಲ್ಲ ನವಿರು ಕಪ್ಪು ಗೆರೆಗಳು
ದನಿಯಿಲ್ಲದ ಚೀತ್ಕಾರದ ತುಣುಕುಗಳು
ಮೌನ, ಗೊಂದಲದಲ್ಲಿ ಸೋರಿ
ಹೋದ ಭಾವ
ಎದ್ದು ನಿಲ್ಲುವ ಅವಳ ನೋಟದಲ್ಲಿ;
ಅನ್ಯಾಯದ ಛಾಯೆ.
ತನ್ನದೇ ಪುಟ್ಟ ಭಾಗ ಸತ್ತುಹೋದಂತೆ,
ಸುಕುಮಾರಿ ಬಸಿರಾಗಿ ಮತ್ತೆ
ಗರ್ಭಪಾತವಾದಂತೆ.
ಮೂಲ-
ಅಮೃತಾ ಪ್ರೀತಂ
ಕನ್ನಡಕ್ಕೆ
– ವಸಂತ
8
ಎಪ್ರಿಲ್ 2014
No comments:
Post a Comment