Friday, July 27, 2012

Soliloquy

ಉಚ್ಚೆಮನೆಯ ಸಾಲಿಲಾಕಿ!

ಬೆಳ್ಳಂಬೆಳಿಗ್ಗೆ ಶಶಿ ಫೋನಾಯಿಸಿದ್ದ! ಏನೋ ಮಾಣೀ, ಎಂತಾ ಮಾಡ್ತಾಯಿದ್ಯೋ ಅಂತಂದ! ಒಂದ್ ಸಾರಿ ಆಶ್ಚರ್ಯವಾಯಿತಾದರೂ ಕಿವಿ ಕೇಳಲು ತೊಡಗಿತ್ತು. ಯಾನು ವಯಸ್ನಲ್ಲಿ ನಿಂಗಿಂತಾ ಸಣ್ನವ್ವಾದ್ರು ಮಾಣೀ ಹೇಳೇ ಕರ್ಯಂವ್ವಾ. ನಿನ್ನೆ ಮೊನ್ನೆವರೆಗೆ ನಿಂಗೆ ಗುರುಗಳೇ ಎಂತ್ಲೊ, ಅಣ್ಣಯ್ಯಾ ಅಂತ್ಲೋ ಕರೀತಿದ್ದೆ. ನೀ ಈಗ ಮತ್ತೆ ಶಾಲಿಗ್ ಹೋಗ್ತೆ ಅಂದ್ರೆ ನೀನ್ ಮಾಣೀನೆಯಲೊ ಮತ್ತೆ! , ಅಂತಂದಾಗ ನಾನಿನ್ನೂ ಉಚ್ಚೆಮನೆಯಲ್ಲಿಯೇ ಕೂತಿದ್ದೆ! ಬೆಳಗಿನ ವಜ್ಜೆಯೆಲ್ಲ ಢರ್ರೆಂದು ಹೊರಹಾಕಿ ಆತ್ಮಾನಂದದ ಗುಂಗಿನಲ್ಲಿರುವಾಗಲೇ ಕೂಗತೊಡಗಿದ್ದು ಈ ಸುಡುಗಾಡು ಜಂಗಮವಾಣಿ! ಕೆಲವುಸಲ ಏಕಾಂತವನ್ನೂ ತಿಂದುಹಾಕಿ ಕುಲಗೆಡಿಸುವ ಇದು ಒಂಥರಾ ಮಾಡರ್ನ್ ಅಣಕಾಸುರಿ! ಇತ್ತ ಬಿಡಲೊಲ್ಲೆ ಅತ್ತ ತೊಡಲೊಲ್ಲೆ ಅನ್ನುವ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಸಿ ಮಜತೆಗೆದುಕೊಳ್ಳುವ ಮರೀಚಿಕೆ!

ಇರಲಿ ಮತ್ತೆ ವಿಷಯಕ್ಕೆ ಬರುವೆ... ಶಶಿ ಹಾಗೆ ಹೇಳಿದ್ದು ನನಗಂತೂ ಏನೂ ಇರಿಸುಮುರಿಸಾಗಲಿಲ್ಲ. ಅದಕ್ಕೆಂದೇ ಅವನಿಗೆ ಹೇಳಿದೆ. ಮಾರಾಯಾ ನಿನೆಂತದೇ ಹೇಳಿ ಕರೆದರೂ ಯನಗೆ ಫರಕ್ಕಾಗ್ತಿಲ್ಲೆ. ಈ ಫಾರ್ಮಾಲಿಟಿನೆಲ್ಲ ಮೀರವ್ವೋ ತಮ್ಮಾ. ನೀ ಯಂಗೆ ಮಾಣೀ ಹೇಳಾರೂ ಕರಿ, ಯಂತಾ ಹೇಳಾರೂ ಕರಿ, ಈಗೆಂತದು ಹೇಳು?ಎಂದಿದ್ದೆ. ಪಾಪ ಅವನಿಗೇನು ಗೊತ್ತು ನಾನು ಏಕಾಂತ ಧ್ಯಾನದಲ್ಲಿ ಮುಳುಗಿರುವ ಸಂಗತಿ. ಅದನ್ನು ಹೇಳುವಂತೆಯೂ ಇಲ್ಲವಲ್ಲ.

ಅದೆಲ್ಲ ಸರಿಯೋ ಮಾರಾಯಾ, ಬರೇ ಹೀಂಗೇ ಫೋನಲ್ಲೇ ಆಗೋತು. ಒಂದ್ಸಲಾ ಮುಖಾಮುಖಿ ಆಗವ್ವೋ. ಯಂಗಂತೂ ಈಗ ಸಿಕ್ಕಾಪಟ್ಟೆ ಟೈಟ್ ಪರಿಸ್ಥಿತಿ ಮಾರಾಯಾ, ಹೊತ್ಹೊತ್ತಿಗೆ ಸರಿಯಾಗಿ ಮನೆಗೆ ಹೋಗದೇ ಇದ್ರೆ ಎಂತದೂ ಸೊರೀತಿಲ್ಲೆ! ಒದ್ಯಲ್ಲೇ ಶುರುಮಾಡ್ತು. ಚೊಚ್ಚಲಲ್ದನ. ಮೊದ್ಲ್ ಮೊದ್ಲು ಹೀಂಗೇಯಾ ಹಾಂಗ್ ಕಾಣ್ತು ಅಲ್ದ? ಅದೆಂಥದೇ ಇರ್‍ಲಿ, ಒಂದಿವ್ಸ ಅಧಿವೇಶನ ಕರ್ಯದೇಯಾ. ಮಾತಾಡೋದು ರಾಶಿ ಇದ್ದು. ಈಗ ಸೆಶನ್ ಇದ್ದಲೋ ಮಾರಾಯ ಹೊಂಟಿದಿದ್ದೆ. ಕೊನೆಗೆ ಸಿಗ್ವ, ಎಂದಂದು ಅವ ಜಂಗಮವಾಣಿಯಲ್ಲಿ ಅಂತಸ್ತನಾಗಿಬಿಟ್ಟ.

ಅರೆ ಹೌದಲ್ಲ! ಈ ಹೆಸರು, ವೇಷ, ಭೂಷಣ, ಸಾಮಾಜಿಕ ಸ್ಥಾನ-ಮಾನ, ಪ್ರತಿಷ್ಠೆ ಇವನ್ನೆಲ್ಲ ಮೀರಿ ಸರಳ ಬದುಕು ಬದುಕುವುದು ಸಾಧ್ಯವೇ ಇಲ್ಲವೇ? ಶಶಿ ಏನೋ ತಮಾಶೆ ಮಾಡಿದ್ದು ನನ್ನಲ್ಲಿ ಗುಂಗೀ ಹುಳ ಬಿಟ್ಟಂತಾಗಿತ್ತು.  ನನ್ನ ಇನ್ನೊಬ್ಬ ಗೆಳೆಯ ಯಾರೋ ಏಕವಚನದಲ್ಲಿ ಕರೆದದ್ದಕ್ಕೆ ಒಂತರಾ ಇರಿಸು ಮುರಿಸುಗೊಂಡು ಕೊತಕೊತ ಕುದಿದದ್ದು ನೆನಪಾಯಿತು. ಎಷ್ಟೋಸಲ ಅವ ನನ್ನನ್ನು ಹೀಗಂದಿದ್ದು ಸರಿಯೇ?ಎನ್ನುತ್ತಲೇ ಜಾಗೃತವಾಗಿ ಬಿಡುವ ಅಹಂಕಾರ ಕೊನೆಗೆ ಅದಕ್ಕೆ ಪ್ರತಿಯಾಗಿ ಹಾಗಂದವನನ್ನು ಅವಮಾನಿಸುವ ಕ್ಷಣವನ್ನು ಕಾಯುತ್ತಿರುತ್ತದೆ. ಅದರಲ್ಲೇ ವಿಚಾರ, ಶ್ರಮ, ಸಮಯ ಎಲ್ಲ ಕಳೆದು ಹೋಗುತ್ತದೆ. ಕಡೆಗೆ ತಿರುಗಿ ನೋಡಿದರೆ ಏನೂ ಹುರುಳಿರಲಾರದು. ಬಹುಶಃ ಅನೇಕರ ಬದುಕು ಹೀಗೆಯೇ ಶೂನ್ಯ ಸಂಪಾದನೆಯಲ್ಲಿಯೇ ಕಳೆದು ಹೋಗುತ್ತದೆಯೇನೋ ಎನ್ನುವ ಅನುಮಾನ ನನ್ನದು.

ಇದನ್ನು ಯಾಕೆ ಹೇಳಬೇಕೆನ್ನಿಸಿತೆಂದರೆ, ನಮ್ಮ ದೈನಂದಿನ ಬದುಕಿನಲ್ಲಿ ಸುತ್ತ ಮುತ್ತೆಲ್ಲ ಆಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ನಾವೆಲ್ಲಿ ಫೋಕಸ್ಸನ್ನು ಕಳೆದುಕೊಂಡು ಬದುಕಿನ ಅಂತಃಸತ್ವದಿಂದ ವಿಮುಖವಾಗುತ್ತ ಹೋಗುತ್ತಿರುವೆವೇನೋ ಎಂಬ ಗುಮಾನಿ ನನ್ನನ್ನೀಚೆಗೆ ಕಾಡತೊಡಗಿದೆ. ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ವಿವೇಚನೆಯೆಲ್ಲಿ ಕುರುಡಾಗುತ್ತಿದೆಯೇ ಎನ್ನುವ ಕಳವಳ ಕೂಡ ಇಲ್ಲದಿಲ್ಲ. ನೀವೇ ಗಮನಿಸಿ ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸರಗಳಲ್ಲಷ್ಟೇ ಅಲ್ಲ ತೀರ ಖಾಸಗಿ ಎನಿಸುವಂತಹ ಸಂದರ್ಭಗಳಲ್ಲಿಯೂ ಪಾರದರ್ಶಕವಾಗಿರುವುದು ನಮಗೆ ಸಾಧ್ಯವಾಗುತ್ತದೆಯೇ?  ಪ್ರೀತಿಯನ್ನಷ್ಟೇ ಅಲ್ಲ ಜಗಳವನ್ನೂ ಮನಃಪೂರ್ವಕವಾಗಿ  ಮಾಡಲು ಬಾರದಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ನಾವಿದ್ದೇವೆ. ಹೆಸರಿಗೆ ಮಾತ್ರ ಎಜ್ಯುಕೇಟೆಡ್ ಇಲೈಟ್ ಕ್ಲಾಸ್ ಎಂದು ಹೊರಗೆ ತೋರ್ಪಡಿಸಿಕೊಂಡು ಒಳಗೊಳಗೇ ಕೊಳೆತು ನಾರುವ ಕೊಚ್ಚೆಮನಸುಗಳ ಗುಂಡಿಯನ್ನಿಟ್ಟುಕೊಂಡು ಮೇಲಿಂದ ಶುಭ್ರವಸ್ತ್ರಧಾರಿಗಳಾಗಿ ಇಂಪೋರ್ಟೆಡ್ ಸೇಂಟ್ ಪೂಸಿ ಝುಮ್ಮೆಂದರಾಯಿತೇ ಬದುಕು?
ಸಣ್ಣ-ಪುಟ್ಟ ಸಂಭ್ರಮಗಳನ್ನು ಆನಂದಿಸುವ, ಪರಸ್ಪರರ ನಲಿವಿಗೆ, ನೋವಿಗೆ ಮಿಡಿಯುವ ಸೂಕ್ಷ್ಮತೆಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಲಿದ್ದೇವೆಯೇ? ಜಗತ್ತು ಕಿರುಬೆರಳಿನತುದಿಯಲ್ಲಿರುವ ಈ ಧಾವಂತದ ಬದುಕಿನ ವೇಗಕ್ಕೊಂದು ಬ್ರೇಕು ಬೇಕು ಎಂದೆನಿಸುವುದಿಲ್ಲವೇ?  ಏಯ್ ಯೋಳೋ ಮಾರಾಯಾ, ಎಷ್ಟ್ಹೊತ್ತಾತು,ಯಂಗೂ ಅರ್ಜಂಟಿದ್ದು, ಎಂದು ಗೀತಾ ಬಾಗಿಲು ಬಡಿದಾಗಲೇ ನಾನು ಮತ್ತೆ ಗ್ರೌಂಡ್ ರಿಯಾಲಿಟಿಗೆ ಮರಳಿದ್ದೆ, ಉಚ್ಚೆಮನೆಯಿಂದ  ಆಚೆಗೆ! 

No comments:

Post a Comment