Sunday, March 16, 2014

ಸಾವಿನ ಮನೆಯ ಕದ ತಟ್ಟಿ ಬಂದ ದೇವತ್ತೆ!


‘ವೈದ್ಯೋ ನಾರಾಯಣೋ ಹರಿಃ’ ಎಂಬುದು ವೈದ್ಯಕೀಯ ಕ್ಷೇತ್ರದ ಪಾವಿತ್ರ್ಯದ ಕುರಿತು ಹೇಳುವ ಒಂದು ಪ್ರಾಚೀನ ಮಾತು. ತೀರಾ 25 ವರ್ಷಗಳ ಹಿಂದಿನವರೆಗೂ ಅದನ್ನು ಅಕ್ಷರಶಃ ಪಾಲಿಸಿ ಲಕ್ಷಾಂತರ ಜನರ ಸೇವೆ ಮಾಡಿಕೊಂಡುಬಂದ ವೈದ್ಯರನೇಕರ ಉದಾಹರಣೆ ನಮ್ಮ ನಡುವೆಯೇ ಸಿಕ್ಕುತ್ತದೆ. ನಂಬಿದವರ ಕೈಬಿಡದೆ, ವೈದ್ಯಕೀಯ ವೃತ್ತಿಯನ್ನು ಜೀವನದುದ್ದಕ್ಕೂ ಒಂದು ತಪಸ್ಸನ್ನಾಗಿ ಆಚರಿಸಿ ತಮ್ಮ ಸೇವಾವೃತ್ತಿಯಲ್ಲಿ ನಿಜವಾದ ಅರ್ಥದಲ್ಲಿ ಸಾರ್ಥಕವಾಗಿ ತೊಡಗಿಸಿಕೊಂಡ, ಶಿರಸಿಯ ಸುತ್ತಮುತ್ತಲೆಲ್ಲ ಪಟವರ್ಧನ್ ಡಾಕ್ಟ್ರು ಎಂದೇ ಪ್ರಸಿದ್ಧರಾಗಿದ್ದ ಡಾ.ಎ.ಎನ್ ಪಟವರ್ಧನ್ ಅವರಂತಹ ಅನೇಕ ಆದರ್ಶ ವೈದ್ಯರ ಫೋಟೋ ಇವತ್ತಿಗೂ ಮಲೆನಾಡಿನ ಅನೇಕ ಮೂಲೆಮನೆಗಳಲ್ಲಿ ಕಾಣಸಿಗಬಹುದು. ಇಂತಹ ಅನೇಕ ಪುಣ್ಯಾತ್ಮರು ನಾಡಿನೆಲ್ಲೆಡೆಯೂ ಇದ್ದಿದ್ದ ಕಾಲವೊಂದಿತ್ತು! ಈಗ ಪ್ರಾಯಶಃ ಎಲ್ಲೋ ಅಪರೂಪಕ್ಕೆಂಬಂತೆ ಅಂತವರು ಸಿಕ್ಕುತ್ತಾರೆ. ಅಂತಹ ಅಪರೂಪದ ವೈದ್ಯರುಗಳ ಪೈಕಿ, ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ, ಕೇವಲ ದೂರವಾಣಿಯ ಮೂಲಕ ಧೈರ್ಯ ಹೇಳಿ, ಮಾರ್ಗದರ್ಶನ ಮಾಡಿ, ಜೀವವೊಂದನ್ನು ಉಳಿಸಲು ನೆರವಾದ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಹೃದಯ ತಜ್ಞ ಡಾ.ದಿವಾಕರ ಭಟ್ ಮತ್ತು ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಡಾ.ನರೇಂದ್ರ ಅವರನ್ನು ನಾವು ಎಷ್ಟು ಅಭಿನಂದಿಸಿದರೂ ಕಮ್ಮಿಯೇ!

 ಈ ಮಾತನ್ನು ಯಾಕೆ ಹೇಳಹೊರಟೆ ಎಂಬುದು ಮುಂದಿನ ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ....

ಮೊನ್ನೆ ಗುರುವಾರ, 13 ಮಾರ್ಚ್ 2014ರಂದು ರಾತ್ರಿ ಸುಮಾರು 11:45ಕ್ಕೆ ಶಿರಸಿಯಿಂದ ಕರೆ ಮಾಡಿದ ರಾಮನಾಥ ಕಾಕಾ “ದೇವತ್ತೆ ತುಂಬ ಸೀರಿಯಸ್, ಬೆಳಗಿನವರೆಗೆ ಉಳಿಯುವ ಸಾಧ್ಯತೆ ಇಲ್ಲ ಅಂತ ಡಾಕ್ಟ್ರು ಹೇಳಿದ್ದಾರೆ. ಬೆಂಗಳೂರಿನಿಂದ ರವಿಕಾಕಾ, ರಮಣ, ಪ್ರಸಾದ ಹೊರಟಿದ್ದಾರೆ. ಎಲ್ಲ ಸಂಬಂಧಿಕರಿಗೂ ಸುದ್ದಿ ಮುಟ್ಟಿಸಲಾಗುತ್ತಿದೆ” ಎಂದು ಹೇಳಿದಾಗ ಅನಿರೀಕ್ಷಿತ ಆಘಾತ! ನಿನ್ನೆ ಮೊನ್ನೆಯವರೆಗೂ ತುಂಬ ಕ್ರಿಯಾಶೀಲವಾಗಿ ಬದುಕನ್ನು ಅನುಭವಿಸುತ್ತಿದ್ದ ದೇವತ್ತೆಗೆ ಸಾಯುವ ವಯಸ್ಸಲ್ಲ. ಉಸಿರಾಟದ ತೊಂದರೆಯೆಂದು ಮಂಗಳವಾರ ಸಾಯಂಕಾಲ ಡಾಕ್ಟ್ರ ಹತ್ತಿರ ಹೋದವಳ ಹೃದಯ ಬಡಿತದ ಏರುಪೇರನ್ನು ಗಮನಿಸಿ, ಅಡ್ಮಿಟ್ ಆಗುವಂತೆ ಸೂಚಿಸಲಾಗಿತ್ತು. ಒಂದುದಿನ ಐಸಿಯುನಲ್ಲಿಟ್ಟು ವೆಂಟಿಲೇಟರ್ ಅಳವಡಿಸಿದ ಡಾಕ್ಟ್ರು ಮರುದಿನ ಆಕೆ ಅರಾಂ ಆಗುತ್ತಿದ್ದಾಳೆಂದು ವಾರ್ಡಿಗೆ ಶಿಫ್ಟ್ ಮಾಡಿಸಿದ್ದರು. ಆದಿನ ಸಾಯಂಕಾಲ 7 ಗಂಟೆಯವರೆಗೂ ಆರಾಂ ಆಗಿಯೇ ಇದ್ದ ಅವಳಿಗೆ ಇದ್ದಕ್ಕಿದ್ದಂತೆ ಅತೀವವೆನ್ನಿಸುವ ತ್ರಾಸಾಗಹತ್ತಿದೆ. ಕೂಡಲೇ ಬಂದ ಡಾಕ್ಟ್ರು “ನೋ ಹೋಪ್ಸ್, ಇನ್ನೇನು ಆಕೆಯ ಕೊನೆ ಕ್ಷಣಗಳು ಹತ್ತಿರವಾಗಿವೆ. ಸಂಬಂಧಿಸಿದವರಿಗೆ ಸುದ್ದಿ ಮುಟ್ಟಿಸಿ” ಎಂದಾಗ ಹತ್ತಿರವಿದ್ದ ದೇವತ್ತೆಯ ತಂಗಿ ವಿಜಯತ್ತೆ ಕಂಗಾಲು!

ನಾವು ಶಿರಸಿ ತಲುಪಿದಾಗ 14ನೇ ತಾರೀಖು ಬೆಳಗಿನ 7:30 ಗಂಟೆ. ದೇವತ್ತೆ ಇನ್ನೂ ಉಸಿರಾಡಿಸುತ್ತಿದ್ದಳು. ವೆಂಟಿಲೇಟರ್ ಹಾಕಿ ಅವಳನ್ನು ಐಸಿಯುನಲ್ಲಿಡಲಾಗಿತ್ತು! ಐಸಿಯು ಅಂದರೆ ಅಬ್ಬೆಯ ಭಾಷೆಯಲ್ಲಿ ಹೇಳಬೇಕೆಂದರೆ ಯಾರನ್ನೂ ಒಳಗೆ ಬಿಡದೇ ಇರುವಂತಹ ಆಸ್ಪತ್ರೆಯ ಕತ್ತಲಕೋಣೆ! ಅಲ್ಲಿ ದೇವತ್ತೆ ಸುಸ್ತು ಹೊಡೆದು ಮಲಗಿದ್ದಳು ಜಗತ್ತಿನ ಪರಿಜ್ಞಾನವೇ ಇಲ್ಲದಂತೆ! ಸರಿ... ರವಿಕಾಕಾ, ಪ್ರಶಾಂತ, ಪ್ರಸಾದ, ನಾನು, ರಮಣ, ನಂತರ ನಮ್ಮನ್ನು ಬಂದು ಸೇರಿಕೊಂಡ ರಾಮನಾಥ ಕಾಕಾ, ದಿವಸ್ಪತಿ ಮುಂದೇನು ಮಾಡುವುದು? ಎಂದು ಮಾತನಾಡಿಕೊಳ್ಳುತ್ತಿರುವಾಗ, ಒಂದು ಛಾನ್ಸ್ ತೆಗೆದುಕೊಳ್ಳೋಣ, ಇಲ್ಲಿಂದ ಕೂಡಲೇ ವ್ಯವಸ್ಥಿತವಾದ ಆಸ್ಪತ್ರೆಗೆ ಶಿಫ್ಟ್ ಮಾಡೋಣ ಎಂಬ ಕ್ವಿಕ್ ನಿರ್ಧಾರಕ್ಕೆ ಬಂದೆವು. ಶಿಫ್ಟ್ ಮಾಡುವುದಾದರೆ ಎಲ್ಲಿಗೆ? ಒಂದೋ ಬೆಳಗಾವಿಗೆ ಮಾಡಬೇಕು. ಬೆಳಗಾವಿಗೆ ತಲುಪಲು 4 ರಿಂದ 5 ತಾಸು ಬೇಕು. ಶಿವಮೊಗ್ಗದಲ್ಲಿಯೂ ಇತ್ತೀಚೆಗೆ ಒಳ್ಳೆಯ ಆಸ್ಪತ್ರೆ ಬಂದಿದೆಯಂತೆ. ಅಲ್ಲಿಗಾದರೆ ಕೇವಲ 2:30 ಗಂಟೆಯಲ್ಲಿ ತಲುಪಬಹುದು. ಬೆಂಗಳೂರಿಗೂ ಹತ್ತಿರ. ಒಂದೊಮ್ಮೆ ಅಲ್ಲಿಂದಲೂ ಬೆಂಗಳೂರಿಗೇ ಶಿಫ್ಟ್ ಮಾಡುವ ಸಂದರ್ಭ ಬಂದರೆ ಅನುಕೂಲ ಎಂಬ ತೀರ್ಮಾನಕ್ಕೆ ಬರುವುದರೊಳಗೆ ಗಡಿಯಾರದ ಮುಳ್ಳು ಬೆಳಗಿನ 8 ಗಂಟೆ ತೋರಿಸುತ್ತಿತ್ತು. 

ಆದರೆ ಕ್ರಿಟಿಕಲ್ ಕಂಡಿಶನ್ನಿನಲ್ಲಿರುವ ರೋಗಿಯನ್ನು ಸಾಗಿಸಲು ಬೇಕಾದ ವೆಂಟಿಲೇಟರ್ ಇತ್ಯಾದಿ ಉಪಕರಣಗಳುಳ್ಳ ಅಂಬ್ಯುಲೆನ್ಸ್ ಇಡೀ ಶಿರಸಿಯಲ್ಲೆಲ್ಲೂ ಇಲ್ಲ! ಒಂದೋ ಹುಬ್ಬಳ್ಳಿಯಿಂದ ಬರಬೇಕು, ಇಲ್ಲವೇ ಶಿವಮೊಗ್ಗದಲ್ಲಿದೆಯಂತೆ ಅಲ್ಲಿಂದಲೇ ತರಿಸಬೇಕು. ತಕ್ಷಣಕ್ಕೆ ನೆರವಿಗೆ ಬಂದವರು ರವಿಕಾಕಾನ ಸ್ನೇಹಿತ ಡಾ.ರಮೇಶ್ ಉರಾಳ. ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಹೃದಯತಜ್ಞ ಡಾ.ನರೇಂದ್ರ ಅವರನ್ನು ಸಂಪರ್ಕಿಸಿ ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರ ಇರುವಿಕೆಯನ್ನು ಖಚಿತಪಡಿಸಿಕೊಂಡು, ಅವರಿಂದಲೇ ಅಂಬ್ಯುಲೆನ್ಸ್ ಸಂಪರ್ಕವನ್ನು ಪಡೆದುಕೊಂಡು ನಮಗೆ ಫೋನಾಯಿಸಿದರು. ಇಷ್ಟೊತ್ತಿಗಾಗಲೇ 8:30 ಆಗಿತ್ತು. ತಕ್ಷಣಕ್ಕೆ ಹೊರಡುವಂತೆ ಅಂಬ್ಯುಲೆನ್ಸ್ ಡ್ರೈವರಿಗೆ ಫೋನಾಯಿಸಿದಾಗ ಸ್ಪಂದಿಸಿದ ಡ್ರೈವರ್ ಸುರೇಂದ್ರ ಐಸಿಯು ಟೆಕ್ನಿಶಿಯನ್ ಒಬ್ಬರನ್ನು ಕರೆದುಕೊಂಡು 9 ಗಂಟೆಯ ಸುಮಾರಿಗೆ ಶಿವಮೊಗ್ಗದಿಂದ ಹೊರಟಿದ್ದಾಗಿಯೂ ಸುಮಾರು 11 ಗಂಟೆಯ ಹೊತ್ತಿಗೆ ಶಿರಸಿ ತಲುಪುವುದಾಗಿಯೂ ಕರೆ ಮಾಡಿದರು.

ಇನ್ನು ನಾವು ಈ ಆಸ್ಪತ್ರೆಯ ಫಾರ್ಮಾಲಿಟಿಸ್ ಎಲ್ಲ ಮುಗಿಸಿ ಪೇಶಂಟ್ ಡಿಸ್ಚಾರ್ಜ್ ಮಾಡಿಸಬೇಕಿತ್ತಲ್ಲ. ಡಾಕ್ಟ್ರಿಗಾಗಿ ಕಾಯತೊಡಗಿದೆವು. 9:30ಯ ಸುಮಾರಿಗೆ ಬಂದ ಡಾಕ್ಟ್ರು “ನೋಡಿ ಪೇಶಂಟ್ ತುಂಬ ಕ್ರಿಟಿಕಲ್ ಆಗಿದ್ದಾರೆ. ಅವರ ಹೃದಯ ಅಸಹಜವಾಗಿ ಊದಿಕೊಂಡಿದೆ. ಬದುಕಿ ಉಳಿಯುವ ಪ್ರಮೇಯವೇ ಇಲ್ಲ. ಇವತ್ತೊ, ನಾಳೆಯೋ ಹೋಗಬಹುದು! ಒಂದೊಮ್ಮೆ ಬೇರೆ ಕಡೆಗೆ ಒಯ್ದರೂ ಬದುಕುವ ಸಾಧ್ಯತೆಯೇ ಇಲ್ಲ. ವೆಂಟಿಲೇಟರ್ ತಪ್ಪಿಸಿ ಅಂಬ್ಯುಲೆನ್ಸ್ ಒಳಗೆ ಶಿಫ್ಟ್ ಮಾಡುವುದರೊಳಗೇ ಸಾವು ಸಂಭವಿಸಬಹುದು. ಶಿವಮೊಗ್ಗ ತಲುಪುವದಂತೂ ಸಾಧ್ಯವೇ ಇಲ್ಲ. ಒಮ್ಮೆ ಡಿಸ್ಚಾರ್ಜ್ ಮಾಡಿದ ಮೇಲೆ ಏನೇ ಆದರೂ ಅದಕ್ಕೆ ನಾವು ಜವಾಬ್ದಾರರಲ್ಲ. ಶಿಫ್ಟ್ ಮಾಡುವುದು ಅಡ್ವೈಸಿಬಲ್ ಎಂದು ನನಗೆ ಅನ್ನಿಸುವುದಿಲ್ಲ”, ಎಂದು ಬಿಟ್ಟರು! 

ನೆರೆದಿದ್ದವರೆಲ್ಲರೂ ಕಂಗಾಲು. ಎಲ್ಲರೂ ದೇವತ್ತೆಯ ಚಟ್ಟ ಕಟ್ಟಬೇಕಾದ ಪರಿಸ್ಥಿತಿಯನ್ನು ನೆನೆದೇ ಕಣ್ಣೀರಿಡಲಾರಂಭಿಸಿದರು. ಹೇಗಾದರೂ ಸಾಯುವದು ಗ್ಯಾರಂಟಿ ಎಂದು ಡಾಕ್ಟ್ರೇ ಹೇಳಿಯಾಗಿದೆ. ಸಾವು ಸಂಭವಿಸುವುದಾದರೆ ಎಲ್ಲಾದರೇನು? ಆದರೂ ಒಂದು ಛಾನ್ಸ್ ತೆಗೆದುಕೊಂಡೇ ಬಿಡೋಣ. ನಾವು ನಮ್ಮ ಕೈಲಾದ ಪ್ರಯತ್ನ ಮಾಡಲಿಲ್ಲವಲ್ಲ ಎಂದು ಆಮೇಲೆ ಕೊರಗಿದರೆ ಏನುಬಂತು? ಹೇಗಾದರೂ ಅಂಬ್ಯಲೆನ್ಸ್ ಬರುತ್ತಿದೆ. ಶಿವಮೊಗ್ಗೆಗೆ ಹೋಗಿಯೇ ಬಿಡೋಣ ಎಂದು ನಾವೆಲ್ಲ ಹುಡುಗರು ತೀರ್ಮಾನಿಸಿಬಿಟ್ಟಿದ್ದೆವು.

ಅಂಬ್ಯುಲೆನ್ಸ್ ಕರೆಕ್ಟಾಗಿ 11:15ಕ್ಕೆ ಬಂತು. ಐಸಿಯು ಟೆಕ್ನಿಶಿಯನ್ ನನ್ನು ಬದಿಗೆ ಕರೆದು ಪರಿಸ್ಥಿತಿ ವಿವರಿಸಿದೆ. “ಒಮ್ಮೆ ಪೇಶಂಟ್ ನೋಡಿ ಹೇಳಪಾ. ಶಿವಮೊಗ್ಗ ಮುಟ್ಟಬಹುದೇ?” ಎಂದಾಗ  ದೇವತ್ತೆಯನ್ನು ನೋಡಿದ ಆ ಹುಡುಗ ಸರ್ ಎರಡು ದಿನಗಳಲ್ಲಿ ಅವರು ಆರಾಂ ಆಗ್ತಾರೆ. ಇನ್ನೂ ತಡಮಾಡಬೇಡಿ ಅಂದಿದ್ದೇ ತಡ. ತಕ್ಷಣಕ್ಕೆ ಡಾಕ್ಟ್ರ ಹತ್ತಿರ ಹೋಗಿ “ನಮ್ಮ ರಿಸ್ಕಿನ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಕೂಡಲೇ ಪೇಶಂಟ್ ಡಿಸ್ಚಾರ್ಜ್ ಮಾಡಿ”, ಎಂದು ಕೇಳಿಕೊಂಡಾಗಲೂ, ಮತ್ತದೇ ಹೆದರಿಸುವ ಮಾತುಗಳನ್ನಾಡಿದ ಡಾಕ್ಟ್ರರು ದೇವತ್ತೆಯನ್ನು  ಬಿಟ್ಟುಕೊಡುವ ಮನಸ್ಥಿತಿಯನ್ನು ಹೊಂದಿಲ್ಲವೆನ್ನುವುದು ನಮಗೆ ಅರ್ಥವಾಯಿತು. ಕೂಡಲೇ ಡಿಸ್ಚಾರ್ಜ್ ಪ್ರಕ್ರಿಯೆಗಳನ್ನು ಮುಗಿಸುವಂತೆಯೂ, ನಾವು ಶಿಫ್ಟ್ ಮಾಡುವ ನಿರ್ಧಾರವನ್ನು ಬದಲಿಸುವುದಿಲ್ಲವೆಂತಲೂ ಸ್ವಲ್ಪ ಖಡಾಖಂಡಿತವಾಗಿಯೇ ಹೇಳಿದಾಗ ಅನಿವಾರ್ಯವಾಗಿ ಡಿಸ್ಚಾರ್ಜ್ ಮಾಡಿದರು. ನಮ್ಮ ರಿಸ್ಕಿನ ಮೇಲೆ ನಾವು ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಬರೆದು ಕೊಟ್ಟ ಒಕ್ಕಣಿಕೆಯ ಮೇಲೆ ಸಹಿಹಾಕಿ ಶಿವಮೊಗ್ಗೆಯ ಕಡೆಗೆ ಶರವೇಗದಿಂದ ಹೊರಟೆವು. 

ಅಂಬ್ಯುಲೆನ್ಸ್ ಗೆ ಶಿಫ್ಟ್ ಮಾಡುವಾಗಲೇ ಸಾಯಬಹುದು... ಶಿವಮೊಗ್ಗ ವರೆಗೂ ದೇವತ್ತೆ ತಲುಪಲಾರಳು....ಎಂಬೆಲ್ಲ ಅನುಮಾನಗಳ ನಡುವೆಯೂ......ಸೈರನ್ ಬಾರಿಸುತ್ತ ಹೊರಟ ಅಂಬ್ಯುಲೆನ್ಸ್
ಕೇವಲ 2 ಗಂಟೆಯ ಅವಧಿಯಲ್ಲಿ ಶಿವಮೊಗ್ಗೆ ತಲುಪಿದಾಗ ಅಲ್ಲಿ ಡಾ. ನರೇಂದ್ರ ತಮ್ಮ ತಂಡದೊಂದಿಗೆ ಆಸ್ಪತ್ರೆಯ ಬಾಗಿಲಲ್ಲೇ ಕಾಯುತ್ತಿದ್ದರು. ಎಷ್ಟು ಬೇಗ ತುರ್ತು ಚಿಕಿತ್ಸೆಗಳನ್ನು ನೀಡಿದರೆಂದರೆ, ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ! ಒಂದು ಗಂಟೆಯ ನಂತರ ರೋಗಿಯಕಡೆಯವರು ಯಾರು ಎಂದು ಕೇಳುತ್ತ ಬಂದ ಅವರು ತುಂಬ ಆತ್ಮೀಯವಾಗಿ ವಿಚಾರಿಸಿಕೊಂಡರು ಮತ್ತು “ಗಾಬರಿಯಾಗುವಂತಹದೇನಿಲ್ಲ. ಎರಡು ದಿನಗಳ ಕಾಲ ರೋಗಿಯನ್ನು ಡಿಸ್ಟರ್ಬ್ ಮಾಡುವುದು ಬೇಡ. 48 ಗಂಟೆಗಳ ನಂತರ ಪರಿಸ್ಥಿತಿ ಏನೆಂಬುದು ತಿಳಿಯುತ್ತದೆ. ನನಗನಿಸಿದಂತೆ ಜೀವಕ್ಕೇನೂ ಅಪಾಯವಾಗಲಾರದು. ನೀವು ನಿಶ್ಚಿಂತೆಯಿಂದಿರಿ. ಆಸ್ಪತ್ರೆಯ ಸಿಬ್ಬಂದಿಗಳು ಮುಂದಿನದನ್ನು ನಿಮಗೆ ಗೈಡ್ ಮಾಡುತ್ತಾರೆ”, ಎಂದು ಹೇಳಿದಾಗ ನಮಗೆ ಒಂದು ರೀತಿಯ ಸಮಾಧಾನ!


ಈಗ ಸುಮಾರು 52 ಗಂಟೆಗಳ ನಂತರದಲ್ಲಿ ದೇವತ್ತೆ ಮತ್ತೆ ಮಾತನಾಡಲು ತೊಡಗಿದ್ದಾಳೆ. ಆರಾಂ ಆಗಿದ್ದಾಳೆ. ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೇವೆ. ಥ್ಯಾಂಕ್ಯೂ ಆಲ್ ಡಾಕ್ಟರ್ಸ್!

1 comment:

  1. ಹಿಂಗೆಲ್ಲಾ ಆಗಿ ಈಗ ಯಾವ ಡಾಕ್ಟರನ್ನು ನಂಬಬೇಕು ಬಿಡ್ಬೇಕು ಗೊತ್ತಾಗುವುದಿಲ್ಲ! :(

    ReplyDelete