“ಹಲವಾರು ಸಲ ನಾವಂದು ಕೊಂಡಂತೆಯೇ ಎಲ್ಲವೂ ಇರುವುದಿಲ್ಲ. ಬಹುತೇಕ ಬಾರಿ ನಮ್ಮ ಜೀವನದಲ್ಲಿ ನಾವು ಎಡವುವುದು ಎಲ್ಲಿ ಅಂದರೆ ಇನ್ನೊಬ್ಬರ ಕುರಿತಾಗಿ ಜಡ್ಜ್ ಮೆಂಟ್ ಪಾಸುಮಾಡಿಬಿಡುತ್ತೇವಲ್ಲ.... ಆಗ! ಇದನ್ನು ನಿಗ್ರಹಿಸಿ ಬದುಕನ್ನು ಗಮನಿಸುವ, ಅರಿತುಕೊಳ್ಳುವ ಕಸುವನ್ನು ನೀಡಿ ಕಸುಬು ಕಟ್ಟುವುದನ್ನು ನಮಗೆ ಕಲಿಸಿಕೊಡುವಲ್ಲಿ ಸಾಹಿತ್ಯ ಮಹತ್ತರ ಪಾತ್ರವನ್ನು ವಹಿಸುತ್ತದೆ! ಅದಕ್ಕಾಗಿ ನಾವು ಪ್ರಪಂಚದ ಅತ್ಯುತ್ತಮ ಸಾಹಿತ್ಯವನ್ನು ಓದಬೇಕು. ನೀವೇ ಸೃಷ್ಟಿಸಿಕೊಂಡ ಮಿಥ್ ಗಳನ್ನು ಮುರಿದಾಗ ಸತ್ಯದ ದರ್ಶನವಾಗುವುದು ಸಾಧ್ಯವಾಗುತ್ತದೆ!” ಎಂದೆನ್ನುತ್ತ ನೆರೆದಿದ್ದ ಜನಸ್ತೋಮವನ್ನು ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ಆಯಸ್ಕಾಂತದಂತೆ ಹಿಡಿದಿಟ್ಟು ಅಪರೂಪದ ಪಾಠ ಮಾಡಿದ್ದು ಎಂಭತ್ತರ ತರುಣ ಉಡುಪಿ ರಾಜಗೋಪಾಲಚಾರ್ಯ ಅನಂತಮೂರ್ತಿ.
ನಿನ್ನೆ ಬೆಳಿಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರವು ವಿಶ್ವವಿದ್ಯಾನಿಲಯದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಸಂಘಟಿಸಿದ್ದ ಆಪ್ತಸಂವಾದದಲ್ಲಿ ಕಿಕ್ಕಿರಿದು ಸೇರಿದ್ದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬುದ್ಧಿಜೀವಿಗಳು ಮತ್ತು ಸಾರ್ವಜನಿಕರನ್ನು ತಮ್ಮ ಪ್ರಖರ ವೈಚಾರಿಕ ಮುದ್ದೆ ಮಾತುಗಳಿಂದ ಮಂತ್ರಮುಗ್ಧರನ್ನಾಗಿಸಿ ಮಾತಿಗೆ ಮಾತು ಕೂಡಿಸಿದ ಮೇಷ್ಟ್ರು ನಾಡಿನ ನಿಜವಾದ ಸಾಕ್ಷಿಪ್ರಜ್ಞೆಗೆ ಕನ್ನಡಿ ಹಿಡಿದರು!
ಎಷ್ಟೋ ಬಾರಿ ಅನುಕೂಲ ಮೂರ್ತಿ ಎಂದೇ ಬಿಂಬಿಸಲ್ಪಟ್ಟು ತಮ್ಮ ವಿರೋಧಾಭಾಸದ ಹೇಳಿಕೆಗಳಿಂದ ಸುದ್ದಿಯಾಗುವ ಅನಂತಮೂರ್ತಿಗಿಂತ ಇಂದು ಕಂಡ ಅನಂತಮೂರ್ತಿ ನಿಜವಾದ ಅರ್ಥದಲ್ಲಿ ತಮ್ಮ ಒಳಗನ್ನು ಬಿಚ್ಚಿಟ್ಟು, ವಿಶಿಷ್ಟ ಒಳನೋಟಗಳನ್ನು ನೀಡಿದ ಆಚಾರ್ಯರಾಗಿ, ಇನ್ನೂ ಮುಂದುವರೆದು ಈ ಶತಮಾನ ಕಂಡ ಋಷಿಸದೃಶ ವ್ಯಕ್ತಿತ್ವವನ್ನು ಹೊಂದಿದ ದಾರ್ಶನಿಕರಾಗಿ ತಮ್ಮೊಳಗಿನ ಭಾವವನ್ನು ಅಭಿವ್ಯಕ್ತಿಸಿದರೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಚಿಕ್ಕಂದಿನಿಂದಲೂ ಅನಂತಮೂರ್ತಿಯವರ ಸಾಹಿತ್ಯವನ್ನು ಆಸ್ವಾದಿಸುತ್ತ ಅವರೆಡೆಗೆ ಒಂದು ರೀತಿಯ ಪೊಸೆಸಿವ್ ಪ್ರೀತಿಯನ್ನು ಹೊಂದಿರುವ ನನ್ನಂತವರಿಗೆ ಅನೇಕ ಬಾರಿ ಯಾಕೆ ಅವರು ತಿಕ್ಕಲು ತನದ ಹೇಳಿಕೆಗಳನ್ನು ನೀಡುತ್ತ ತಮ್ಮ ಕಿಮ್ಮತ್ತನ್ನು ಕಳೆದುಕೊಳ್ಳುತ್ತಾರೆ ಎಂಬ ಬೇಸರವೂ ಉಂಟಾಗಿ ಕೊಂಚ ದೂರದಿಂದಲೇ, ಅನುಮಾನಗಳಿಂದಲೇ ಅವರನ್ನು ನೋಡಬೇಕೆನ್ನಿಸುವ ಮನಸ್ಥಿತಿ ಉಂಟಾಗುತ್ತಿತ್ತು. ಆದರೆ ಇಂದು ನೋಡಿದ ಅನಂತಮೂರ್ತಿ ಬೇರೆಯೇ ಆಗಿದ್ದರು. ಮೂರೇ ಮೂರು ತಾಸಿನಲ್ಲಿ ಪ್ರಪಂಚವನ್ನೆಲ್ಲ ಸುತ್ತಾಡಿಸಿ ಸಾಹಿತ್ಯದ ರುಚಿಯನ್ನು ಆಸ್ವಾದಿಸುವ ಮತ್ತು ಅತ್ಯದ್ಭುತವಾದ ಒಳನೋಟಗಳ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ, ಕಟ್ಟುವ ಬಗೆಯನ್ನು ದರ್ಶನ ಮಾಡಿಸಿದ ಅವರು ನಿಜವಾದ ಮೇಷ್ಟ್ರು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾದರು! ನಾನು ಈವರೆಗೆ ಕೇಳಿಸಿಕೊಂಡ ಮರೆಯಲಾರದ ಪಾಠಗಳಲ್ಲಿ ಇವತ್ತಿನದು ಅತ್ಯಮೋಘವಾದದ್ದು!
“ವಿದ್ವಾಂಸರು ಜಗತ್ತಿನೆಲ್ಲೆಡೆಯಲ್ಲಿ ಪೂಜಿಸಲ್ಪಡುತ್ತಾರೆ” ಎಂಬ ಮಾತನ್ನು ತಾನು ಒಪ್ಪಲಾರೆ, ಯಾಕೆಂದರೆ ವಿದ್ವಾಂಸರು ಅವರಾಗಿರುತ್ತಾರೆ ಎಂಬುದು ಜಗತ್ತಿಗೆ ತಿಳಿಯುವ ಹೊತ್ತಿಗೆ ಕಾಲ ಸಂದಿರುತ್ತದೆ! ಹಾಗಾಗಿ ನಿಜವಾದ ವಿದ್ವಾಂಸರನ್ನು ಗುರುತಿಸುವ, ಗೌರವಿಸುವ ಕಾರ್ಯ ಆಗಬೇಕು. ಜ್ಞಾನಕ್ಕೆ ಮಿತಿಯಿರುವುದಿಲ್ಲ. ಬದುಕುವ ಕಲೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಕರಗತಮಾಡಿಕೊಂಡು ಮಾಸ್ಟರ್ಸ್ ಆಗಿರುವ ಅನೇಕರು ನಮ್ಮ ಸುತ್ತಮುತ್ತಲೇ ಇರುತ್ತಾರೆ. ಅಂತಹ ಜ್ಞಾನವನ್ನು ಪ್ರಧಾನ ಧಾರೆಯಲ್ಲಿ ಕಾಣುವ ತುರ್ತು ಇಂದಿನ ಕಾಲದ್ದು. ಕೇವಲ ಹಣದ ಬೆನ್ನುಹತ್ತಿ ನಲವತ್ತೈವತ್ತರ ಪ್ರಾಯದಲ್ಲಿಯೇ ಜೀವನಕ್ಕೆ ಬೆನ್ನು ಹಾಕುವ ಕಂಪ್ಯೂಟರ್ ಕೂಲಿಗಳನ್ನು ಸೃಷ್ಟಿಸುವ ಇವತ್ತಿನ ಹುನ್ನಾರದ ಜಗತ್ತಿನಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯುವ, ಹೊಸೆಯುವ ಜೀವನ ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ ಎಂದು ಭಾವುಕರಾಗಿ ಹೇಳಿದ ಮೇಷ್ಟ್ರು ಸಮಚಿತ್ತರಾಗಿ, ತಮ್ಮ ಅನಾರೋಗ್ಯದ ಪರಿಸ್ಥಿತಿಯಲ್ಲಿಯೂ ಅಷ್ಟುಹೊತ್ತು ಸಂವಾದ ಮಾಡಿದ್ದು ಒಂದು ಸೋಜಿಗವೆಂದೇ ಹೇಳಬೇಕು.
“ಸಮಾನತೆಯ ಹಸಿವು ಮತ್ತು ವಿಧೇಯತೆಯ ಹಸಿವು ಕಳೆದ ಶತಮಾನದಲ್ಲಿ ಬಹುತೇಕವಾಗಿ ಎಲ್ಲರನ್ನೂ ಕಾಡಿದ್ದರ ಪರಿಣಾಮವಾಗಿ ಇಂದು ನಾವು ಮಹತ್ತರ ಬದಲಾವಣೆಗಳಿಗೆ ಪಕ್ಕಾಗುತ್ತಿದ್ದೇವೆ. ನಾನು ನನ್ನ ಯೌವನದ ಕಾಲದಲ್ಲಿ ಊಹಿಸಲೂ ಸಾಧ್ಯವಿರದ ಅನೇಕ ಸಂಗತಿಗಳಿಗೆ ಇಂದು ಸಾಕ್ಷಿಯಾಗುತ್ತಿದ್ದೇನೆ. ಒಳ್ಳೆಯದೋ ಕೆಟ್ಟದ್ದೋ ಎಂದು ಜಡ್ಜ್ ಮೆಂಟ್ ಪಾಸ್ ಮಾಡುವದಕ್ಕಿಂತಲೂ ಅವುಗಳಲ್ಲಿನ ಧನಾತ್ಮಕ ಅಂಶಗಳು ನಿಜವಾಗಿಯೂ ಬೆರಗು ಮೂಡಿಸುತ್ತವೆ” ಎಂದು ಮಾತಿನ ಮಧ್ಯದ ಪ್ರಶ್ನೆಗಳಿಗೆ ಉತ್ತರಿಸುತ್ತ, ತತ್ ಕ್ಷಣದಲ್ಲಿ ಅಹುದಹುದೆನ್ನಿಸುವಂತಹ ಚಮತ್ಕಾರಿಕ ಉತ್ತರಗಳನ್ನು ನೀಡುತ್ತ ಅದಕ್ಕೆ ಪೂರಕವಾಗಿ ತಮ್ಮ ಅಗಾಧ ಓದಿನ ಹಿನ್ನೆಲೆ ಮತ್ತು ಜೀವನಾನುಭವದಿಂದ ಕಡೆದ ನವನೀತದ ವಿಮರ್ಶಾತ್ಮಕ ಲೇಪನವನ್ನು ಬೆರೆತ ಆಕರ್ಷಕ ವಾಗ್ಝರಿಯಿಂದ ಮನಸೂರೆಗೊಂಡ ಮೇಷ್ಟ್ರ ಈದಿನದ ಪಾಠ ಮನಸೂರರ ಸಂಗೀತದಂತೆ ಮನಸನ್ನು ಹಿಡಿದಿಟ್ಟಿದ್ದು ಸುಳ್ಳಲ್ಲ.
ನನಗೆ ಬುದ್ಧಿಬಲ್ಲಾದ ಲಾಗಾಯ್ತಿನಿಂದಲೂ ದೂರದಿಂದಲೇ ನಮಸ್ಕಾರ, ಒಂದು ನಗೆಯ ವಿನಿಮಯದೊಂದಿಗೆ ಸಂಕೋಚ ಸ್ವಭಾವದ ಕಾರಣಕ್ಕಾಗಿ ಅನಂತಮೂರ್ತಿಗಳಿಂದ ಅಂತರವನ್ನು ಕಾಯ್ದುಕೊಂಡಿದ್ದವನು ಇಂದು ತಡೆಯಲಾರದೆ ಕೂಡಲೇ ಅವರೆಡೆಗೆ ಹೋಗಿ ಕೈಹಿಡಿದುಕೊಂಡು ಅತ್ಯದ್ಭುತವಾದ ಗಾಯನವನ್ನು ಕೇಳಿದ ಅನುಭವವಾಗಿದ್ದನ್ನು ಮನಃಪೂರ್ವಕ ಹೇಳಿ ನಮಸ್ಕರಿಸಿ ಬಂದೆ!
-ವಸಂತ
No comments:
Post a Comment