ಕಟ್ಟಬೇಕೊಂದು ಚೆಂದನ್ನೆ
ಗೂಡು ಪುಟ್ಟಾ, ಒಂದೊಂದೇ ಕಲ್ಲನ್ನೆತ್ತಿ
ಯ ಮೇಲೆ ಹೊತ್ತು, ಹೊತ್ತು;
ಕಂಕುಳಲ್ಲಿರುವ ನೀಯೆನಗೆ
ಭಾರವೆನಿಸುವುದಿಲ್ಲ ತಲೆಯ
ಮೇಲಿನ ಸಿಮೆಂಟಿನಿಟ್ಟಿಗೆಯ ಹಾಗೆ!
ಗುರಿಯೇನೋ ದೂರವೇ
ಕಾಂಬ ಕಣ್ಣಿಗೆ ಧೂಳು
ಅಂಟಿ ಮೂಗಲ್ಲಿ ನೀರು
ಬಂದರೂ ಸೀನು ನಿನ್ನ
ಎಳೆಗಣ್ಣ ಹೊಳಪಲ್ಲಿ
ನನ್ನ ಕನಸುಗಳಿಗೆ ಬರವಿಲ್ಲ.
ಯಾರ್ಯಾರದೋ ಮಹಡಿ ಮಹಲುಗಳ
ಕಟ್ಟಿ ಕಟ್ಟಿ ರಟ್ಟೆ ಸೋತರೂ
ಸೊಂಟಗಟ್ಟಿಗೊಳ್ಳುತಿದೆ ನಿನ್ನ
ಮಿದುಭಾರದಿಂದ, ಮೃದುಭಾವದಿಂದ.
ಗಟ್ಟಿಯಾಗಿ ಅವುಚಿಕೋ ನನ್ನೆದೆಯ
ಆಳದಲಿ ಮಡುಗಟ್ಟಿದ ನೋವೆಲ್ಲ
ಬೆವರಾಗಿ ಹರಿದು ಹೋಗಲಿ, ನಾಳೆ;
ಒಂದುದಿನ ನಿನ್ನದೇ ಮಹಲಿನಲಿ
ಮಗುವಾಗಿ ಕೈತುತ್ತು ತಿನ್ನುವಾಸೆ!
ಒಂದೊಂದೆ ಕಟ್ಟಗಳ ಏರುತ್ತ, ಏರುತ್ತ
ಕಟ್ಟುಗಳ ದಾಟುತ್ತ ಜಾರಿಬೀಳದೆಯೆ
ಕಟ್ಟುವ ನಾವೊಂದು ಪುಟ್ಟಗೂಡು
ಇಂದಲ್ಲ ನಾಳೆ; ಪುಟ್ಟ
ಮತ್ತವನಮ್ಮ ಪಟ್ಟ ಪಾಡುಗಳೆಲ್ಲ
ಹಾಡಾಗಿ ಮೂಡಿ ಕಣ್ಣಂಚಿನ
ಧೂಳಪೊರೆ ಕರಗಿ ನವಿರಾಗಿ
ನವಿಲು ನರ್ತಿಸಲಿ
ತನ್ನ ಗರಿಯ ಬಿಚ್ಚಿ
-ವಸಂತ
18 ಮಾರ್ಚ್ 2014.
No comments:
Post a Comment