Wednesday, February 17, 2010

ಮತ್ತೆ ವಸಂತ ಬಂದಿದ್ದಾನೆ! ಚಿಗುರ ತಂದಿದ್ದಾನೆ...ಒಪ್ಪಿಸಿಕೋ

ಓಹ್! ಹದಿಮೂರು ವರುಷಗಳು....!
ಹೇಗೆ ಕಳೆದವು ಗೆಳತಿ?
ವನವಾಸದ ಅವಧಿ ಮುಗಿಯಿತೆನ್ನೋಣವೇ! ಅಥವಾ ಒಂದು ತಪ ಪೂರೈಸಿ ಎರಡನೆಯ ತಪನೆಗೆ ಕಾಲಿಟ್ಟೆವು ಎನ್ನೋಣ್ವೇ? ಕಾಲ ಕಲ್ಪಿಸಿದ ಅವಕಾಶದಲ್ಲಿ ಕಾವುಕೊಟ್ಟು ಮೊಟ್ಟೆ ಮರಿಯಾಗಿವೆ! ಹದಿನೇಳು ವರ್ಷಗಳಹಿಂದೆ ಬಿರಿದ ಮೊಳಕೆ ಗಟ್ಟಿ ಮರವಾಗಿದೆ. ಬಿಸಿಯುಸಿರು ಕೂಡ ತಣ್ಣೆಳಲ ತಂಪಾಗಿ ಹಿತವಾಗಿದೆ. ಇಷ್ಟು ಕಾಲದ ನಂತರವೂ ವರುಷದಂತೆ ಮತ್ತೆ ನಿನ್ನ ವಸಂತ ಬಂದಿದ್ದಾನೆ. ವಗರಿನೊಂದಿಗಿನ ಚಿಗುರುತಂದಿದ್ದಾನೆ! ಆ ಖುಶಿಯಲ್ಲಿ ನೀನು ಪಟ್ಟಪಾಡುಗಳೆಲ್ಲ ಹಾಡಾಗಿ ಪಂಚಮದ ಇಂಚರದಲ್ಲಿ ಕುಹೂ-ಕುಹೂ ನಿನದಿಸುತ್ತಿರುವದು ನಿನ್ನ ಅನುಭವಕ್ಕೂ ಬಂದಿರಲು ಸಾಕು.

"ಹೊಸಿಲ ದಾಟೇ ದಾಟುತ್ತೇನೆ..ಬಯಲು ತುಂಬ ಬದುಕುತ್ತೇನೆ" ಎನ್ನುತ್ತಲೇ ಹೊಸಿಲಾಚೆ ಹೊಸಹೆಜ್ಜೆ ನೀನಿಟ್ಟಾಗ ಇನ್ನೂ ಹೀಚು. ಹಾಗೆಂತಲೇ ಮೋಡಕಟ್ಟಿದ ಆಕಾಶ ನೋಡುತ್ತ "ಅತ್ತುಬಿಡು ಮನಬಿಚ್ಚಿ ಸಿಗಬಹುದು ಶಾಂತಿ" ಎಂದು ಹಾಡಿ ಹಗುರಾಗುತ್ತಿದ್ದೆ. ನೆನಪಿದೆಯೆ ನಿನಗೆ? ಕ್ರಮೇಣ ಆಳಕ್ಕಿಳಿದ ಬೇರುಗಳು ಗಟ್ಟಿಗೊಳ್ಳುತ್ತಿದ್ದಂತೆ ತಾಂಝಾನಿಯಾದ ಕಪ್ಪು ಹುಡುಗಿ ಕ್ಲಾರಾ ಇರುಳಕತ್ತಲಲ್ಲಿ ನೋವಾಗಿ ತಟ್ಟಿ ಹಾಡಾಗಿ ಹುಟ್ಟಿದಳು."ಅಮ್ಮ .....ತಣ್ಣಗಿದ್ದಾಳೆ ನನ್ನೊಳಗಿನ ತಳಮಳ ಅರಿಯದ ಅಮ್ಮ....ಹೊಸಿಲಬಳಿ ದೀಪಹಚ್ಚುತ್ತ!" ಎಂದು ಕವಿತೆ ಕಟ್ಟುತ್ತ ಅಮ್ಮನನ್ನು ಅರ್ಥೈಸಿಕೊಳ್ಳಹೊರಟಿರುವಾಗಲೇ ಮನಬೆಸೆದೆ ಮನೆಯೊಡನೆ.....ಬಿಚ್ಚಿಕೊಂಡವು ಥಟ್ಟನೆ ಜೋಡಿಬಾಗಿಲು ವ್ಯಕ್ತದಿಂದ ಅವ್ಯಕ್ತಕ್ಕೆ.ಪಂಜರದ ಗಿಳಿಗಳ ಹಾರಿಬಿಟ್ಟು,ಶೋಕೇಸಿನ ಬೊಂಬೆಗಳಿಗೆ ಜೀವಕೊಟ್ಟು ಜೀವಂತವಾಗಿ ಬದುಕಬೇಕು ಎಂದುಕೊಳ್ಳುತ್ತಿದ್ದಾಗಲೇ ಗೆಳೆಯ...ಕಾಡುತ್ತಾನೆ ನಿನ್ನನ್ನ. ಕತ್ತಲ ಕ್ಯಾನ್ವಾಸ್ ಮೇಲೆ ಮೂಡದೇ ಕಾಡುವ ಚಿತ್ರ-ಚಿತ್ತಾರಗಳಿಗುತ್ತರಿಸುತ್ತ "ನಿನ್ನ ಪ್ರೀತಿಯ ರಂಗಿನಲಿ ಕರಗುವ ನಿರ್ವರ್ಣ ಚಿತ್ರವಾಗುತ್ತೇನೆ ಎಂದಿದ್ದು ಇನ್ನೂ ಹಸಿರಾಗಿಯೇ ಇದೆ. ಮನಸ ಹಕ್ಕಿ ಕನಸ ಹೆಣೆದು ಎದೆಯಗೂಡ ಶ್ರಂಗರಿಸುವುದ ಕಂಡಿರುವೆಯಾ ಒಮ್ಮೆಯಾದರೂ ....ನೀ ಬಲ್ಲೆಯೇನು... ಎಂದು ಅಂದದ್ದು, ವಸಂತ ಬರುತ್ತಾನೆಂದು ನಿರಿಕ್ಷೆಗಳ ತೋರಣಕಟ್ಟುತ್ತಲೇ,"ಚಿಗುರಿ ಚಿಗಿಯುತ್ತಿರುವಾಗಲೇ ನಿಲುಕದೇ ಹೊರಟೇ ಹೋಗುತ್ತಾನೆ", ಎನ್ನುತ್ತ ಪ್ರೀತಿ ಎಳೆಗಳ ಹುಡುಕಾಟಕ್ಕೆ ತೊಡಗುವ ನಿನ್ನ ಆ ತುಮುಲ....ನಮ್ಮ ನಡುವೆ ಇರುವ ಉಕ್ಕಿನಕೋಟೆಗಳ ಅರಿವೇ ನಿನಗಿಲ್ಲವೇ ಎಂದು ಕೇಳಿದ ಮುಗ್ಧ ಕಣ್ಣುಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿವೆ ಗೆಳತೀ!

ಅದೊಂದುದಿನ ಆದರಾಗಲಿ ಪ್ರಳಯ ನಮ್ಮ ಕನಸುಗಳ ಬದುಕಿಸೋಣ ಎಂದು ಬಟಾಬಯಲಿನಲಿ ಕೈನೀಡಿ ಕರೆದಾಗ...."ಬಲು ತುಂಟಹುಡುಗ...ನನ್ನ ತಂಟೆ ಬೇಡವೆಂದರೆ ನಿರಾಳವಾಗಿ ನಗುತ್ತೀಯಲ್ಲ! ನಿನ್ನ ಬಾಹುಬೇಡಿಗಳಲಿ ಬಂಧಿಸಿ ಪ್ರೀತಿ ಪಹರೆಯಲಿಟ್ಟುಬಿಡುತ್ತೇನೆ ಜೋಕೆ!" ಅಂದಾಗಲೇ ನಾನು ಬಂಧಿಯಾಗಿಬಿಟ್ಟಿದ್ದೆನಲ್ಲೇ.

ಆದರೆ ಆ ಬಂಧ ನಮ್ಮಿಬ್ಬರನ್ನು ಬಂಧನವಾಗಿ ಎಂದೂ ಕಾಡಲಿಲ್ಲವಲ್ಲ ಎನ್ನುವದೇ ಒಂದು ಸೋಜಿಗ. ನಾನು ನನ್ನಂತಿದ್ದೂ... ನೀನು ನಿನ್ನಂತಿದ್ದೂ.....ಇಬ್ಬರೂ ಹೆಜ್ಜೆ ಹಾಕಿದೆವಲ್ಲ ತಾಳತಪ್ಪದಂತೆ!
"ಗೂಡಾಚೆ ಕಾದುವದು ಅನಿವಾರ್ಯ ನಮಗಿಂದು.
ಎದೆಗವಚಿಕೋಭದ್ರವಾಗಿ ಮರಿಕನಸುಗಳ....
ಜಡಿಮಳೆಗೆ ಜಡ್ಡುಗಟ್ಟಿಕೊಳ್ಳುವ
ಬಿರುಬಿಸಿಲಿಗೆ ಬಂಡೆಯಾಗುವ ನಾವು
ಆದರಾಗಲಿ ಪ್ರಳಯ
ನಮ್ಮ ಕನಸುಗಳ ಬದುಕಿಸೋಣ"
ಅಂದು ನೀ ಹೇಳಿದ ಬೀಜದ ಮಾತು ಕ್ರಮೇಣ ಬೆಳಕಿನ ಬೀಜವಾಗಿ ಮೊಳೆತು ಪರಿಮಳದ ಸಸಿಯಾಗಿ ಬೆಳೆದು ಇಂದು ಬೆಳಕಿನ ಮರವಾಗಿದೆ. ಹೊಸಿಲಾಚೆಯಿಟ್ಟ ಹೊಸಹೆಜ್ಜೆ ಹಂಬಲದ ಹಾದಿಯ ಸೇರಿದೆ. ಚೌಕಟ್ಟಿನಾಚೆಯ ದಿವ್ಯ ಅನಂತದಲಿ ಜೀವವಾಹಿನಿ ಹೊಳೆ ಹೊಳೆಯುತ್ತಿದೆ. ಸ್ರಷ್ಟಿಮುಗಿದ ನಿರಾಳತೆಯಲ್ಲಿ ಸುಮ್ಮನೆ ಧ್ಯಾನಿಸುತ್ತಿದೆ ತಂಬೂರಿ.ಕಾಣುವ ತಂತಿ,ಕಾಣದ ತಂತು, ಭಾವಗಳಜೋಡಿಸಿ ಜೀವ ಪಡೆದ ವಿನ್ಯಾಸದ ಬೆರಗು! ಜೀವಧ್ವನಿ.

ತಣ್ಣಗೆ ಬೆಳೆದೆ....ತಂಪಾಗಿ ಎರೆದೆ.....ಎಲ್ಲರನು ಪೊರೆದೆ.....ಈಗ ನಿನ್ನ ತೆಕ್ಕೆಯಲ್ಲಿ ನನ್ನಂತೆ ಇನ್ನೊಂದು ಪಾಪು! ದತ್ತಕ್ಕೆ ಬಂದಿದ್ದು! ಎದೆಗಾನಿಸಿಕೋ ಪಾಪ ಅದನ್ನೂ. ಬೆಳೆಯಲಿ ಅವಧೂತನಂತೆ.........ಇನ್ನೊಂದು ಬೆಳಕಿನ ಮರ!

ನನ್ನ ಪ್ರೀತಿಗೆಂದೂ ಅದು ತೊಡಕಾಗದಿರದು. ಮೊಗೆದಷ್ಟೂ ಬರುವ ಒರತೆಯದು ಎಂದೂ ಬತ್ತುವುದಿಲ್ಲ. ನಾನು ಕಾಯುತ್ತಿದ್ದೇನೆ........ಬಾ....ಹೀರು ಹೊಸ ಚಿಗುರ.....ಇನ್ನೊಂದು ಅಭೇದಕ್ಕೆ....ತಪಕ್ಕೆ ಹುರಿಗೊಳ್ಳೋಣ! ಬೆಳಕಿನ ಜಾಡಿನಲ್ಲಿ ಕೈಹಿಡಿದು ಹೊಸ ಹೆಜ್ಜೆಯಿಡೋಣ ಗಡಿಯಿರದ ಹೊಸಿಲೊಳಗೆ......ಬಯಲು ಆಲಯದಲ್ಲಿ.....ನಿನ್ನಿಷ್ಟದಂತೆ!
ಅಷ್ಟರಲ್ಲಿ.......
ಬೆಳಕಿನ ಸಸಿ ಪಿಸುಗುಡುತ್ತದೆ
ದೆವರ ಹೆಣಗೊಬ್ಬರದ ಕಸುವಾಗಿ
ಸಸಿ ಸಳಸಳೆ ಬೆಳೆದು
ಮಿದುಳಭಿತ್ತಿಯ ಸೀಳಿ
ಹೊರಹೊಮ್ಮುತ್ತದೆ.
ನಿನ್ನ
ವಸಂತ

( ಹದಿಮೂರು ವರ್ಷಗಳ ನಂತರ ನನ್ನ ಜೀವದ ಗೆಳತಿ ಗೀತಾಗೆ ಬರೆದ ಹೊಸ ಪ್ರೇಮಪತ್ರವಿದು. ಇದರಲ್ಲಿ ಅಲ್ಲಲ್ಲಿ ಬಳಸಿಕೊಂಡಿರುವುದೆಲ್ಲವೂ ಅವಳ ಕವನಗಳ ಸಾಲುಗಳು!)

9 comments:

  1. ಬ್ಯೂಟಿ! ಹ್ಮ್, ವಸಂತಗೀತಕ್ಕೀಗ ಹದಿಮೂರರ ಹರೆಯವ...? ಇನ್ನೂ ನೂರ್ಕಾಲ ಹರಿಯಲಿ ನಿಮ್ಮಿಬ್ಬರ ಪ್ರೀತಿಯ ಜೀವನದಿ. ಆತ್ಮ ಸಖಿಗೆ ಬರೆದ ಪತ್ರ ಓದಿ ಮುಗಿಸಿದಾಗ ದಿಲ್ ಖುಷ್ -ಖುಷ್ :-)

    ಪ್ರೀತಿಯಿಂದ,
    ಪೂರ್ಣಿಮಾ

    ReplyDelete
  2. ವಸಂತಣ್ಣ...
    ಪ್ರತೀಸಲ ಬರೆದಾಗಲೂ ಹೊಸಹೊಸ ಘಮವನ್ನೇ ಸೃಷ್ಟಿಸುವ ಶಕ್ತಿ ಎಂದರೆ ಪ್ರೇಮಪತ್ರ.

    ಗೀತಕ್ಕನ ಕವನಗಳೊಳಗೆ ಅದ್ದಿತೆಗೆದಂತಿದೆ ನೀವು ಗೀತಕ್ಕನಿಗೆ ಬರೆದ ಈ ಪ್ರೇಮಪತ್ರ.
    ನೀವು ಬರೆದ ಪತ್ರಕ್ಕೆ ಅಲ್ಲಲ್ಲಿ ಗೀತಕ್ಕನ ಕವನದ ಸಾಲುಗಳು ಅಂಟಿಕೊಂಡು ಹೊಸತೇ ಅಲಂಕಾರವಿಲ್ಲಿ ಸೃಷ್ಟಿಯಾಗಿದೆ.
    ಸದಾಕಾಲ ವಸಂತವಾಗಲಿ, ಹೊಸತು ಗೀತೆ ಹೊಮ್ಮುತ್ತಲೇ ಇರಲಿ.

    ಇಂಥ ಪ್ರೀತಿಯನ್ನು ಕಂಡೇ ಅಲ್ಲವೇ ಎಲ್ಲರೂ ಪ್ರೀತಿಸುವುದನ್ನು ಕಲಿತದ್ದು? ಇಂಥ ಪ್ರೀತಿಯನ್ನು ಓದಿಯೇ ಪ್ರೀತಿಯಿಂದ ಬರೆಯುವುದನ್ನೂ ಕಲಿಯಬೇಕು. ಧನ್ಯವಾದ.

    ReplyDelete
  3. ಇದು ಬರೀ ಪ್ರೇಮಪತ್ರವಲ್ಲ..ಭಾವಗಳ ಹೂರಣ. ಕವನಗಳೂ ಸೇರಿ ಮನಸ್ಸನ್ನು ಮುದಗೊಳಿಸಿದ ಪ್ರೇಮ ಬರಹ. ಚೆನ್ನಾಗಿದೆ. ಧನ್ಯವಾದ

    ReplyDelete
  4. ಪ್ರೇಮಪತ್ರ ... ಅದ್ಭುತವಾಗಿದೆ. ನಿಮ್ಮಿಬ್ಬರ ಪ್ರೀತಿ ಎಂದೆಂದೂ ಹೀಗೆ ಇರಲಿ.

    ReplyDelete
  5. ಚೆನ್ನಾಗಿರುವ ಪ್ರಯತ್ನ, ನಿಮ್ಮ ಹದಿಮೂರರ ದಾಂಪತ್ಯ ಅದಿನೂರರ [೧೦೦೦ವರ್ಷ!]
    ತನಕ ಮುನ್ನಡೆಯಲಿ..ಸಮರಸದಲಿ! ಧನ್ಯವಾದಗಳು

    ReplyDelete
  6. Apoorva Kshanagalu matte matte barali
    shreepad somanmae

    ReplyDelete
  7. ವಸ೦ತ ಗೀತ, ಸದಾ ಸ೦ತಸದ ಹೊನಲ ಸವಿಯಲಿ,
    ಅನುರಾಗದ ದಾ೦ಪತ್ಯ ಜೀವನ ಹೀಗೆಯೇ ಸಾಗುತ್ತಿರಲಿ.
    ಅಭಿನ೦ದನೆಗಳು.

    ReplyDelete
  8. ಪೂರ್ಣಿಮಾ ಹದಿಮೂರಲ್ಲ ಒಟ್ಟು ಹದಿನೆಂಟು! ಮೊದಲಿನ ಐದು ಲೆಕ್ಕಕ್ಕೆ ಬರದು ಎಂದು ನಿನ್ನ "ಸಂತೆಯಿದು...... ಕವನದಲ್ಲಿ ಹೇಳಿದ್ದೀಯಲ್ಲ! ಥ್ಯಾಂಕ್ಸ್. ಖುಶ್ ಆಗಿದ್ದಕ್ಕೆ.

    ಶಾಂತಲಾ, ಸುಬ್ರಹ್ಮಣ್ಯ.....ಸುಮ.....ವಿ ಆರ್ ಭಟ್ರೆ ...ಶ್ರೀಪಾದ....ಮನಮುಕ್ತಾ ಎಲ್ಲರಿಗೂ ಥ್ಯಾಂಕ್ಸ್....

    ReplyDelete
  9. Bhavanna,
    Hale berinida hosadagi chigitu hemmar chennagi haravi kondide......
    Geetakkan vasanta hige matte matte chigarta
    irali. Nimma e 'k'vanada tampu namage sigali.
    Thanks a lot.

    ReplyDelete