Tuesday, March 9, 2010

ನಾದಸ್ಸಂಧಾನ

ಗರ್ಭಗಟ್ಟಲಿ ಒಳಗಣ ಪರಾ-
ಗ ಸ್ಪರ್ಷ ಮಧುಪರ್ಕ ಗಟ್ಟಿ
ಗೊಂಡು ತೆನೆ ಪಶ್ಯಂತಿಯಾಗಿ
ಬೆಳೆಯುತ್ತ ಕೆನೆಯುತ್ತ ಕಾಳು
ಕಟ್ಟಿ ಎತ್ತರದ ರಾಶಿ ರಾಶಿ.
ಮೂಲಾಧಾರ ಮ್ರದುವಾಗಿ ಇಡಿಕೆ
ಸಡಿಲಿಸಿ ಏರಲಿಬಿಡು ಮಧ್ಯಮವ
ಮೀರಿ ನಾದವಾಗಲಿ ಪ್ರಾಣ
ವಾಯು ಉಸಿರಿನಲಿ ಲಯವಾಗಿ
ಮನಬಿಚ್ಚಿ ಹಾಡಲಿ ಗುಬ್ಬಚ್ಚಿ!
ವೈಖರಿಯ ಜಿಹ್ವಾಮೂಲ ಗಾಂಧಾರಿ
ಕಣ್ಕಟ್ಟ ಬಿಚ್ಚಿ ತೆರೆಯಲಿ ಈಗ
ಕಾಲಕ್ಕೆ-ಮೂಲಕ್ಕೆ ಕೊಂಡಿಯಾಗಿ
ನರನಾಡಿ ಸಡಿಲಿಸಲಿ ಗಂಟಲ
ಪಸೆ ಕಳೆದು ಸ್ಫಟಿಕಸ್ಫುಟಗೊಳ್ಳಲಿ.
ನಾಭಿಮೂಲದ ಮೌನಸ್ಫೋಟಕ್ಕೆ
ಎಣೆಯಾಗಿ ಮತ್ತೇರಲಿ ಪದಾರ್ಥ
ಗೊಡವೆ ಮೀರಿ ಏಣಿಯಾಗಿ
ಆಕಾಶಕ್ಕೆ......ಅವಕಾಶದನಂತಕ್ಕೆ
ಗುಬ್ಬಚ್ಚಿ ಗೂಡುಕಟ್ಟಲಿ ಮತ್ತೆ
ಸಂಭ್ರಮಿಸಿ ಚಿಲಿಪಿಲಿಯ ನಾದಸ್ಸಂಧಾನಕ್ಕೆ.

8 comments:

  1. ವಸಂತಣ್ಣ...

    "ಆಕಾಶಕ್ಕೆ......ಅವಕಾಶದನಂತಕ್ಕೆ
    ಗುಬ್ಬಚ್ಚಿ ಗೂಡುಕಟ್ಟಲಿ ಮತ್ತೆ
    ಸಂಭ್ರಮಿಸಿ ಚಿಲಿಪಿಲಿಯ ನಾದಸ್ಸಂಧಾನಕ್ಕೆ"
    ಹೀಗೆಯೇ ಪ್ರತೀಸಾಲೂ ಇಷ್ಟವಾಯ್ತು.

    ReplyDelete
  2. ಅಬ್ಬಾ ! ಎಂತಹ ಸಾಲುಗಳು. ತುಂಬಾ ಚೆನ್ನಾಗಿದೆ ನಾದಸ್ಸಂಧಾನ.

    ReplyDelete
  3. ವಸ೦ತ್ ಅವರೆ,
    ತುಂಬಾ ಚೆನ್ನಾಗಿದೆ .ಪ್ರತಿ ಸಾಲೂ ಇಷ್ಟವಾದವು.

    ReplyDelete
  4. ಕವನದ ಸಾಲುಗಳು ತುಂಬ ಸುಂದರವಾಗಿ ಹೆಣೆದುಕೊಂಡಿವೆ...ನಮ್ಮ ಆಸೆ ಆಕಾಂಕ್ಷೆಗಳು ಸಾಕಾರಗೊಳ್ಳುವದನ್ನು ಕಾಣುವ ಭಾಗ್ಯ ನಮ್ಮದಾಗಲಿ.

    ReplyDelete
  5. Odi pratikriyisida sahrudayarellarigoo vandanegalu

    ReplyDelete
  6. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete