“ಏಯ್... ಪಾಂಡೂ... ಯಾಕ.....ಬಾ...... ಇಲ್ಲೆ.....”, ಎದುರಿನ ಮನೆ ಸುಮಾ ಆಂಟೀಗೆ ಜನಾ ಬೇಕು.ಯಾರರೇ ಆಗ್ಲಿ ಅವರ ಜಗಲಿ ತುಂಬಿರಬೇಕು. ಕಟ್ಟೆಪುರಾಣ ನಿರಂತರ ನಡೀತಿರಬೇಕು! ಹಾಗಾಗಿಯೇ ಅವ್ರು ಸದಾ ಖುರ್ಚಿಹಾಕ್ಕೊಂಡು ಅಲ್ಲೇ ಕುಂತಿರ್ತಾರೆ. ಕೈ-ಕಾಲು ಒತ್ತಿಸಿಕೊಳ್ಳುವದೂ,ಮಂಡೆಬಾಚಿಸಿಕೊಳ್ಳುವುದೂ, ಎಲ್ಲದರಲ್ಲಿಯೂ ಹಳೆಯ ಕಾಲದ್ ಗತ್ತು-ಗೈರತ್ತನ್ನು ರೂಢಿಸಿಕೊಂಡೇ ಯಜಮಾನಿಯಾಗಿ ಮೆರೆವ ಆಕೆಗೆ ಶ್ರೀಮಂತಿಕೆ ಪ್ರದರ್ಶನ ಮಾಡಲು ಆ ಜಾಗವೊಂದು ಬಯಲುರಂಗಮಂದಿರ!
ಆಲ್ಲಿಯೇ ಮೊದಲು ನನಗೆ ಪಾಂಡುವಿನ ದರ್ಶನವಾದದ್ದು.ನಮ್ಮನೆ ಎದುರಿಗೇ ಇರುವ ಸುಮಾ ಆಂಟೀ ಮನೆಯ ಜಗಲಿಮೇಲೆ ಬೇಡವೆಂದರೂ ಕಣ್ಣು ಹೋಗುತ್ತಲೇ ಇರುತ್ತದೆ....ಸಿಗುವ ಪುಕ್ಕಟೆ ಮನರಂಜನೆಗಾಗಿ......ತರಹೇವಾರಿ ಆಕಾರದ.....ಗಾತ್ರದ ಮಹಿಳಾಮಣಿಗಳು.....ಅವರ ಪಟ್ಟಾಂಗ.......ಅದೂ ಏರಿದ ದನಿಯಲ್ಲಿ!.....ಮೈಕಿಲ್ಲದೇ! ಅಕ್ಕ-ಪಕ್ಕದ ಮನೆಯ ಮಕ್ಕಳ ಚಿಲಿಪಿಲಿ ಕಲರವ......ಕೆಲಸದಾಳುಗಳ ಕಿರಿಕಿರಿ.......ಪಿರಿಪಿರಿ......ಹೀಗೆ ವಿವಿಧ ವಿನೋದಾವಳಿ ಅಲ್ಲಿ ದಿನವೂ ನೋಡಲಿಕ್ಕೆ ಸಿಗುವುದುಂಟು!
ಅಂತಹ ಒಂದು ದಿನ "ಏಯ್ ಪಾಂಡೂ....", ಎಂಬ ಕಂಚಿನ ಕಂಠದ ಕರೆಗೆ ನನ್ನ ಕಣ್ಣುಗಳು ಪ್ರತಿಕ್ರಿಯಿಸಿದಾಗ ಕಂಡದ್ದು ಹರಿಕೀರ್ತನೆ ದಾಸರಂತೆ ಊದ್ದ ಕೂದಲುಗಳುಳ್ಳ......ಕರಿಯ ದೊಗಲೆ ಪ್ಯಾಂಟು ಧರಿಸಿ ಮೇಲೊಂದು ಖಾದಿ ಜುಬ್ಬಾ ಏರಿಸಿ,ಬಗಲಲ್ಲೊಂದು ಹರಕು ಜೋಳಿಗೆ ಇಳಿಬಿಟ್ಟು ಅದರೊಳಗೊಂದು ಹವಾಯಿ ಚಪ್ಪಲಿ......ಒಂದಿಷ್ಟು ಪ್ಲಾಸ್ಟಿಕ್....ಹರಿದ ಕಾಗದದ ಚಿಂದಿಗಳು......ಜತೆಗೊಂದು ಖಾಲೀ ತಟ್ಟೆ-ಬಟ್ಟಲು........"ಹಾಂ.......ಆಯೀ....."ಎನ್ನುತ್ತ ವಿನೀತನಾಗಿ ಕೈಕಟ್ಟಿಕೊಂಡು ಗೇಟಲ್ಲಿ ಪ್ರತ್ಯಕ್ಶನಾದ ಹೊಳಪುಕಂಗಳ ವಾಮನಮೂರ್ತಿ!
ಜನರ ಕಣ್ಣಲ್ಲಿ ಆತನೊಬ್ಬ ಹುಚ್ಚ. ಕಲ್ಯಾಣನಗರ.......ನಿರ್ಮಲನಗರ..... ಆತನ ಸಾಮ್ರಾಜ್ಯ. ಆ ಭಾಗದ ಜನರೆಲ್ಲರಿಗೂ ಪಾಂಡು ಚಿರಪರಿಚಿತ.ರಸ್ತೆಗುಂಟ ಹೊರಟಅನೆಂದರೆ ಆಚೀಚೆಯೆಲ್ಲೂ ನೋಡುವುದಿಲ್ಲ! ತನ್ನಷ್ಟಕ್ಕೆ ತಾನೇ ಅದೇನೇನೋ ತಿಳಿಯದ ಭಾಷೆಯಲ್ಲಿ ಮಾತನಾಡುತ್ತಾನೆ.ನಗುತ್ತಾನೆ.....ಲೈಟಿನ ಕಂಬದೊಂದಿಗೆ ತಾಸುಗಟ್ಟಲೆ ಉಭಯಕುಶಲೋಪರಿ ನಡೆಸುತ್ತಾನೆ! ಮನುಷ್ಯರೊಂದಿಗೆ ಮಾತ್ರ ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಲಾರ! ತೀರಾ ಅಸ್ವಸ್ಥನಾದಾಗ......ಕೋಪಗೊಂಡಾಗ.....ದಾರಿಬದಿಯ ಕಲ್ಲು ತೂರಿ......ಇನ್ನೊಂದು ಕಲ್ಲಿನ ಮೇಲೆ ಸಿಟ್ಟು ತೀರಿಸಿಕೊಳ್ಳುತ್ತಾನೆ. ಹೆಣ್ಣು ದೇವರನ್ನು ಬಾಯಿಗೆಬಂದಂತೆ ಬಯ್ಯುತ್ತಾನೆ.....ಮರುಕ್ಶಣ ಗೋಳೋ ಎಂದು ಅಳುತ್ತಾನೆ.
ಹೀಗೊಂದುದಿನ ರಸ್ತೆಯಮೇಲೆ ನಮ್ಮನಿಮ್ಮೆಲ್ಲರಂತೆ ಆತ ಹೋಗುತ್ತಿರುವಾಗ ಸಿಕ್ಕ......ನಕ್ಕ! ಆ ಆಪ್ತ ನಗುವೇ ನಮ್ಮಿಬ್ಬರ ಸಂವಹನಕ್ಕೆ ಸಾಧ್ಯತೆ ಮಾಡಿಕೂಟ್ಟದ್ದು.ಮುಂದೆ ಪಾಂಡು ಎರಡು ದಿನಕ್ಕೊಮ್ಮೆಯಾದರೂ ಸಿಕ್ಕು,"ಸಾಬ್, ಚಾಯ್ ಕೆ ಲಿಯೆ ದೋ ರುಪಾಯ್" ಎನ್ನುವಷ್ಟು ಸಲಿಗೆ ಸಾಧ್ಯವಾದದ್ದು. ನನಗೆ ಕುತೂಹಲ. ನಿಧಾನವಾಗಿ," ಏನೋ ಪಾಂಡು... ಚಾ ಕುಡ್ದಿಯೇನೋ",ಎನ್ನುವ ಮಟ್ಟಿಗೆ ಆಪ್ತತೆ ಆವರಿಸಿ ಆತನೆಡೆಗೊಂದು ಕುತೂಹಲ ಶುರುವಾದದ್ದು.
ಒಂದಿನ್ ಪಾಂಡೂಗೆ ಆವೇಶ ಬಂದಿತ್ತು! ಬೆಳ್ಳಂಬೆಳಿಗ್ಗೆ ರಸ್ತೆ ಬದಿಯ ಕಸದ ತೊಟ್ಟಿಯಮೇಲೆ ರೌದ್ರಾವೇಶದ ಪ್ರಹಾರ ನಡೆಸಿದ್ದ. ಅವನಿಗೆ ಬೇರಾವ ಪರಿವೆಯೂ ಇರಲಿಲ್ಲ.ಕೋಪವೆಲ್ಲ ಖಾಲಿಯಾದಮೇಲೆ ಅಲ್ಲೇ ಇರುವ ಮರದ ಬುಡಕೆ ಕುಳಿತು ಮುಖಮುಚ್ಚಿಕೊಂಡಿದ್ದ! "ಯಾಕೋ ಪಾಂಡು....ಏನಾಯ್ತೋ", ಎಂದರೆ........."ನಯಿ ಸಾಬ್, ಕುಛ್ ನಹೀ....ಚಾಯ್ ಕೇಲಿಯೆ ದೋ ರುಪಾಯ್...."ಎಂದು ಎಷ್ಟು ಸೌಮ್ಯವಾಗಿ ವಿನೀತನಾಗಿ ಹೇಳಿದ್ದನೆಂದರೆ ಕೆಲಕ್ಶಣದ ಹಿಂದಿನ ಪಾಂಡುವೇ ಅಲ್ಲವೆಂಬಷ್ಟು!
ಯಾವಾಗಲೂ ಶುಚಿಯಾಗಿರುತ್ತಿದ್ದ ಪಾಂಡು ಎಂದೂ ಹರಕು ವಸ್ತ್ರ ತೊಟ್ಟವನಲ್ಲ. ಅಂದೇಕೋ ಬಟ್ಟೆ ಹರಿದಿತ್ತು.ನನ್ನದೊಂದು ಅಂಗಿ-ಪ್ಯಾಂಟು ಕೊಡಹೋದರೆ,"ನಯಿ ಸಾಬ್.....ಅಚ್ಛಾ ಹೈ......ನಹಿ ಚಾಹಿಯೆ..." ಎಂದು ನಯವಾಗಿ ತಿರಸ್ಕರಿಸಿದ್ದ! "ಚಾಯ್ ಕೇಲಿಯೆ ದೋ ರುಪಾಯ್" ಎಂದಷ್ಟೇ ಹೇಳಿ ನಕ್ಕಿದ್ದ! ಐದು ರುಪಾಯಿ ಕೊಟ್ಟರೆ ಒಲ್ಲೆನೆಂಬ ಪಾಂಡುವಿಗೆ ಎರಡು ರೂಪಾಯಿಯನ್ನೇ ಕೊಡಬೇಕಾಗುತ್ತಿತ್ತು. ಎಂಟಾಣೆ ಜಾಸ್ತಿ ಕೊಟ್ಟರೂ ಒಲ್ಲೆನೆನುತ್ತಿದ್ದ.
ನನಗಂತೂ ದಿನದಿಂದ ದಿನಕ್ಕೆ ಪಾಂಡುವಿನ ಮೇಲೆ ಕುತೂಹಲ ಜಾಸ್ತಿಯಾಗತೊಡಗಿತು. ಆತ ಎಲ್ಲಿಯವನು....ಎಲ್ಲಿರುತ್ತಾನೆ...ಎಂದೆಲ್ಲ ಕೆದಕಿ ಕೇಳಬೇಕೆಂದುಕೊಂಡರೂ," ಸಾಬ್ ಚಾಯ್ ಕೇಲಿಯೆ ದೋ ರುಪಾಯ್" ಎಂದಷ್ಟೇ ಹೇಳಿ ಮರುಕ್ಶಣ ಓಟಕೀಳುತ್ತಿದ್ದ.ಯಾರಿಗೂ ತೊಂದರೆಕೊಡದ ಆತ ಚಿಕ್ಕಮಕ್ಕಳನ್ನೂ ಎಂದಿಗೂ ಹೆದರಿಸಿದವನಲ್ಲ! ಹೆಂಗಸರ ಕಂಡರೆ ವಿಪರೀತ ಗೌರವ.
ಹೀಗೊಂದು ದಿನ ಪಾಂಡು ತುಂಬಾ ಭಾವುಕನಾಗಿದ್ದ! ಎದುರಿಗೆ ಸೊಂಪಾಗಿ ಬಿಟ್ಟಿತಿಂದು ಎರಡೂ ಕಾಲು ಮುಂದೆಚಾಚಿ ಮಲಗಿರುವ ಬೀದಿನಾಯಿ ಪಕ್ಕಿ ತಲೆಯಲ್ಲಾಡಿಸುತ್ತ ಪಾಂಡುವಿನ ಸಂಭಾಷಣೆಗೆ ಸಾಥಿಯಾಗಿತ್ತು!ಎಷ್ಟೊಂದು ಅಕ್ಕರೆಯಿಂದ ಯಾವುದೋ ವಿಚಿತ್ರ ಭಾಷೆಯಲ್ಲಿ ಆ ಬೀದಿನಾಯಿಯೊಂದಿಗೆ ಸಂಭಾಷಣೆಯಲ್ಲಿ ಮಗ್ನನಾಗಿದ್ದನೆಂದರೆ.......ಈ ಜಗದ ಪರಿವೆಯೇ ಇರಲಿಲ್ಲ ಅವನಿಗೆ.," ಸಾಬ್ ಚಾಯ್ ಕೇಲಿಯೆ ದೋ ರುಪಾಯ್" ಕೂಡ ಮರೆತಂತಿತ್ತು.
ಹೀಗೆ ವರ್ಷಗಟ್ಟಲೆ ಸಾಗಿದ ಬದುಕಿನಲ್ಲಿ ಪಾಂಡುವೂ ಒಂದು ಭಾಗವಾಗಿ ಹೋಗಿದ್ದ. ಕೆಲವೊಮ್ಮೆ ಸಂತನಂತೆ....ಒಮ್ಮೆ ಭಿಕಾರಿಯಂತೆ......ಮುಗದೊಮ್ಮೆ ಭಾವಸಮ್ರುದ್ಧ ಮನುಷ್ಯನಂತೆ......ಒಮ್ಮೊಮ್ಮೆ ಶಾಂತಮೊಗದ ಜ್ನಾನಿಯಂತೆ.....ಬದುಕಿನ ಸಕಲವನ್ನೂ ಅರೆದುಕುಡಿದು ನಿರ್ಮೋಹಿಯೂ,ನಿರಹಂಕಾರಿಯೂ ಆದ ಬುದ್ಧನಂತೆ.........ಮರುಕ್ಶಣಕ್ಕೆ ಮುಗ್ಧ ಮಗುವಿನಂತೆ......ಹೀಗೆ ವಿವಿಧ ರೂಪಕಗಳಲ್ಲಿ ನನ್ನನ್ನು......ನನ್ನೊಳಗನ್ನು ತಳಮಳಿಸುತ್ತಿದ್ದ ಪಾಂಡು ಇರುತ್ತಿದ್ದದ್ದು ಮಾತ್ರ ಭೈರವನಂತೆ! ಸ್ಮಶಾನದಲ್ಲಿ........ಅದೂ ಅಲ್ಲಿ ಕಾರ್ಪೋರೇಶನ್ನಿನವರು ಬಿಸಾಕಿದ ದೊಡ್ಡ ಗಾತ್ರದ ಮೋರಿಯ ಸಿಮೆಂಟ್ ಪೈಪಿನಲ್ಲಿ ಎಂದು ಒಂದಿನ ಅಕಸ್ಮಾತ್ತಾಗಿ ಗೊತ್ತಾದಾಗ ನನ್ನ ಕುತೂಹಲ ಇನ್ನಷ್ಟು ಜಾಸ್ತಿಯಾಗಿತ್ತು!ಬಿಡುವಿನ ವೇಳೆಯಲ್ಲಿ ಅಧ್ಯಯನಕ್ಕೊಂದು ವಸ್ತು ಸಿಕ್ಕಂತಾಯ್ತು! ಎಂದುಕೊಂಡೆ.
ಇತ್ತೀಚೆಗೆನೋ ಕಳಕೊಂಡ ಕಳವಳ. ನನ್ನೊಳಗೇ ಒಂಥರಾ ಕಿರಿಕಿರಿ.....ದೈನಂದಿನ ಯಾಂತ್ರಿಕ ಬದುಕಿನಲ್ಲಿ ಕಳೆದು ಹೋದ ನನಗೆ ಇದ್ದಕ್ಕಿದ್ದಂತೆ ಯಾಕೋ ಪಾಂಡೂನ ಕಾಣೋ ಹಂಬಲ. ನನ್ನ ಪಾಲಿಗೆ ಆತನೊಬ್ಬ ದಾರ್ಶನಿಕ. ಬದುಕನ್ನು ಕನ್ನಡಿ ಹಿಡಿದು ಕಾಣಿಸಿದಾತ." ಸಾಬ್ ಚಾಯ್ ಕೇಲಿಯೆ ದೋ ರುಪಾಯ್" ಎಂಬ ಸಾಲುಗಳ ಮೂಲಕವೇ ಎಷ್ಟೊಂದು ದೊಡ್ಡ ಪಾಠ ಹೇಳಿಕೊಟ್ಟ ಸಂತ! ಅನೇಕ ದಿನಗಳಿಂದ ಆತನನ್ನು ಕಂಡಿಲ್ಲವಲ್ಲ ಎಂದು ಎದುರಿನ ಕಿರಾಣಿ ಅಂಗಡಿಯವನನ್ನು ಕೇಳಿದೆ. "ಹೌದು ಭಾಳ ದಿನಾ ಆತೂ...ನಾನೂ ಕಂಡಿಲ್ಲರಿ.....ಪಾಪ.... ಸರ", ಸ್ಟ್ಯಾನ್ಲಿಯನ್ನು ಕೇಳಿದೆ, ಶಾಹಿದಾಳನ್ನು ಕೇಳಿದೆ.....ಒಂದೇ ಉತ್ತರ..."ನಾನೂ ಕಂಡಿಲ್ಲರೀ...." ಸುಮಾ ಆಂಟಿಯನ್ನು ಕೇಳೋಣ್ವೆಂದರೆ ಅವರ ಮನೆಯ ಜಗಲಿಯೂ ಖಾಲಿ......ಖಾಲಿ... ಅವರಾಗಲೇ ಆ ಭಾಡಿಗೆ ಮನೆಯಿಂದ ಇನ್ನೆಲ್ಲಿಗೋ ದೂರ ಹೋಗಿಯಾಗಿತ್ತು. ಅಂತೂ ಕೊನೆಗೆ ಪಾಂಡುಗೆ ಎರಡು ರೂಪಾಯಿಗೆ ಚಾ ಕೊಡುತ್ತಿದ್ದ ಶೆಟ್ಟರ ಅಂಗಡಿಗೆ ಹೋಗಿ ಕೇಳಲಾಗಿ............
"ಪಾಂಡೂ ಇಲ್ರಿ.... ಅಂವಾ ಇನ್ನ ಬರಾಂಗಿಲ್ಲರಿ.....ನಂಗೂ ಭಾಳ ಕೆಟ್ಟನಿಸ್ತು.....ಮೊನ್ನೆ ಇಲ್ಲೇ ಬಾರಾಕೊಟ್ರಿ ಹಂತ್ಯಾಕ್ಕ ರೇಲ್ವೆ ಹಳಿಮ್ಯಾಲ ನಡೆದು ಹೊಂಟಿದ್ನಂತ್ರಿ....ಅವಂದ್ ಜಗತ್ತೇ ಬೇರೆ ನೋಡ್ರೀ....ಟ್ರೇನ್ ಗೆ ಸಿಕ್ಕು ಸತ್ತಾನ ನೋಡ್ರಿ.....ಪಾಪ!".ದಿನಪತ್ರಿಕೆಯಲ್ಲಿ "ಅಪರಿಚಿತ ವ್ಯಕ್ತಿ ರೈಲಿನಡಿಗೆ ಸಿಕ್ಕು ಸಾವು"....ಸುದ್ದಿ ಓದುತ್ತಿದ್ದಂತೆ ಪಾಂಡು ಕಾಡತೊಡಗಿದ್ದ. ಗೊತ್ತು ಗುರಿಯಿಲ್ಲದೇ ಬದುಕಿ..... ಅವೆಷ್ಟೋ ಎರಡು ರೂಪಾಯಿಗಳ ಚಾ ಕುಡಿದು ಅದ್ಭುತ ಬದುಕಿನ ದರ್ಶನಮಾಡಿಸಿದ ಪಾಂಡು ಗುರಿಯಿಲ್ಲದ-ಗುರುತಿಲ್ಲದ ಹಳಿಗಳ ನಡುವೆ ಹರಿದು ಛಿಂದಿಯಾಗಿ ಸಾವಿನಲ್ಲೂ ಬದುಕಿಗೆ ಕನ್ನಡಿ ಹಿಡಿದೇ ಪ್ರತಿಬಿಂಬವಾಗಿ ರೂಪಕವಾಗಿಬಿಟ್ಟಿದ್ದಾನೆ.
Subscribe to:
Post Comments (Atom)
ಮತ್ತೆ ಮತ್ತೆ ಓದಿದೆ. ಪಾಂಡು ಕಾಡುತ್ತಲೇ ಇದ್ದಾನೆ. ಕಥೆಯ ಆರಂಭದ ಹರಟೆಕಟ್ಟೆಯೊಳಗೆ ವಿಹರಿಸುವ ಏಕಾಂತದೊಳಗಿನಿಂದ ಜೊತೆಯಾಗಿ ಕಾಡುವ ಪಾಂಡು ಕಥೆ ಮುಗಿದರೂ ಶೂನ್ಯನಾಗಿ ಕಾಡುತ್ತಾನೆ.
ReplyDeleteಇಷ್ಟವಾಯ್ತು.
ಒಂದು ಕಾಡುವ ಕಥೆಗೆ ಧನ್ಯವಾದ.
Thanks! odiddakke. Double thanks for writing comment.
ReplyDelete