Sunday, January 31, 2010

ಕಾಣದ ಬೇಂದ್ರೆ ಮಾಸ್ತರ್ರಿಗೆ ನಮಸ್ಕಾರ! ಕಾಣುವ ಕಣವಿ ಅಜ್ಜಂಗೆ ಮನದುಂಬಿದ ಪ್ರೀತಿ!


ಸುಮಾರು ಅರವತ್ತು ವರುಷಗಳ ಹಿಂದೆ ಸೊಲ್ಲಾಪುರದಲ್ಲಿ ಬೇಂದ್ರೆ ಮಾಸ್ತರ್ ಹಾಗೂ ಸಿ ಎನ್ ರಾಮಚಂದ್ರನ್ ಮೊದಲಬಾರಿಗೆ ಮುಖಾಮುಖಿಯಾದ ಸಂದರ್ಭ. ಕವಿಸಮಯದ ಕುರಿತು ಹುಡುಗ ಸಿಎನ್ನಾರ್ ಬೇಂದ್ರೆಯವರನ್ನೇನೋ ಕೇಳಿದ್ದಾರೆ! ಸರಕ್ಕನೆ ಸಿಟ್ಟಿಗೆದ್ದ ಬೇಂದ್ರೆ," ಯಾಕೋ ತಮ್ಯಾ.. ಏನ್ ತಿಳೀತದ ನಿನ್ಗ? ನಾ ಬರಿಯೋ ಕವಿತಾ ನನಗ ಕಣ್ಣೀಗಿ ಕಾಣಿಸ್ತದೋ! ನಾ ಅದರ ಅನುಭವಿಸ್ತೇನಿ, ಮುಟ್ಟತೇನಿ, ಮುಂದ ಅದೇ ನನ್ನ ಮುನ್ನಡೆಸ್ತದ" ಎಂದುತ್ತರಿಸಿದ್ದು ತಲೆಯೊಳಅಗೆ ಹೋಗಿರಲಿಲ್ವಂತೆ ಸಿಎನ್ನಾರ್ ಸರ್ ಗೆ!
ಈಗ ಒಂದು ವರುಷದ ಹಿಂದೆ ಸಿಎನ್ನಾರ್ ರಾಮಾಯಣವನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದಾಗ ಹೊಳೆದ ಸೆಳೆಮಿಂಚು ಬೇಂದ್ರೆಯನ್ನು ಅರ್ಥವಾಗುವಂತೆ ಮಾಡಿತಂತೆ! ಅಲ್ಲಿ ರಾಮಾಯಣದ ಆರಂಭದಲ್ಲಿ ಇಡೀ ರಾಮಾಯಣ, ಕೈಯಲ್ಲಿನ ನೆಲ್ಲೀಕಾಯಿಯಂತೆ ಕಣ್ಣಿಗೆ ಕಾಣಿಸುವ, ಫೀಲ್ ಆಗುವ, ಟಚ್ ಆಗುವ ವಿವರಣೆ ಬೇಂದ್ರೆ ದರುಶನವನ್ನು ಮಾಡಿಸಿತಂತೆ! ಹಾಗೆಂತ ಅವರೇ ಇಂದು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಮಾತನಾಡುತ್ತ ಹೇಳಿದರು!

ಅದಕ್ಕೆಂದೇ ಬೇಂದ್ರೆಯವರನ್ನು ಯುಗದ ಕವಿ..ಜಗದ ಕವಿ....ವರಕವಿ ಎಂದೆಲ್ಲ ಕರೆಯುತ್ತಾರೇನೋ! ತಾಳ್ಯಾಕ..ತಂತ್ಯಾಕ...ರಾಗದ ಚಿಂತ್ಯಾಕ..ಕುಣಿಯೋಣು
ಬಾರಾ..ಕುಣಿಯೋಣು ಬಾ..ಎಂದು ಹಾಡುತ್ತ ಎಲ್ಲರನ್ನೂ ಕುಣಿಸಿದ ನಾಕುತಂತಿಯ ಮಾಂತ್ರಿಕನ ನೂರಾ ಹದಿನೈದನೇ ಜನ್ಮದಿನದ ಸುಸಂದರ್ಭ ಇಂದು, ಜನವರಿ೩೧, ೨೦೧೦.
ಕನ್ನಡ ಜಗತ್ತಿನ ಮೂಲಕ ವಿಶ್ವವ್ಯಾಪಿಯಾಗಿ ಬೆಳೆದ ದತ್ತ ಇತ್ತ ಕಾಣ್ಕೆ ಇಂದಿಗೂ ಗುಪ್ತಗಾಮಿನಿಯಾಗಿ ಹರಿದು ಕನ್ನಡ ಮನಸ್ಸುಗಳನ್ನು "ಇದು ಬರಿ ಬೆಳಗಲ್ಲೋ ಅಣ್ಣಾ" ಎಂದು ಎಚ್ಚರಿಸುತ್ತಲೇ "ಸರಸ ಜನನ ವಿರಸ ಮರಣ ಸಮರಸವೇ ಜೀವನ" ಎನ್ನುವ ಸರಳಸೂತ್ರದ ನೆರಳಿನಲ್ಲಿ ಸಾಗಲು ಪ್ರೆರೇಪಿಸುತ್ತಿದೆ. ನೈಸರ್ಗಿಕ ಅನುಭಾವವನ್ನು ತಾನು ಅನುಭವಿಸುತ್ತಲೇ ಕಲ್ಲುಸಕ್ಕರೆಯಂತೆ ಎಲ್ಲರಿಗೂ ಹಂಚುತ್ತ ಮರೆಯಾದ "ಜೋಗಿ" ನಮ್ಮ ಬೇಂದ್ರೆ ಮಾಸ್ತರ್! ಇನ್ನೂ ಸಾಧನಕೆರಿಯಲ್ಲೇ ಜೀವಂತ ಇದ್ದಾರೆ.... ಶ್ರಾವಣದ ಹಾಡನ್ನು ಉಲಿಯುತ್ತಲೇ... ಸಖೀಗೀತ ನುಡಿಯುತ್ತ ನಾದಲೀಲೆಯಾಡುತ್ತಿದ್ದಾರೆ! ಬಾರೋ ಸಾಧನಕೇರಿಗೆ....ಎಂದು ಕೈಬೀಸಿ ಕರೆಯುತ್ತಿದ್ದಾರೆ!

ಇವತ್ತು ಅದನ್ನು ಕಣ್ಣಾರೆ ಅನುಭವಿಸಿ ಇದನ್ನಿಲ್ಲಿ ಬರೆಯುತ್ತಿದ್ದೇನೆ. ಮುಂಜಾನೆಯಿಂದಲೂ ಕಾವ್ಯದ ಹುಗ್ಗಿಯನ್ನು ಹೀರಿದ ಮನಸ್ಸು ಹಿಗ್ಗಿನಿಂದ ಸುಗ್ಗಿಯ ಸಂಭ್ರಮದಲ್ಲಿ ನಲಿಯುತ್ತಿದೆ! ಚೆಂಬೆಳಕಿನ ಕವಿ ಕಣವಿ ನಾ ಕಾಣದ ಬೇಂದ್ರೆಯ ಪ್ರತಿರೂಪವಾಗಿ ನನ್ನೆದುರು ನಿಂತಂತಹ ಹಿಗ್ಗು! ನಿಜವಾದ ಅರ್ಥದಲ್ಲಿ ಬೇಂದ್ರೆಯವರ ವಾರಸುದಾರ! ಅರವತ್ತು ದಶಕಗಳಕಾಲ ನಿರಂತರವಾಗಿ ಕ್ರಿಯಾಶೀಲರಾಗಿ ಬರೆದು, ಎಂಭತ್ಮೂರರ ಪ್ರಾಯದಲ್ಲೂ ಸುಸ್ತಿಲ್ಲದೇ ಸರಸ್ವತಿಯ ಸೇವೆಯನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿರುವ, ಸಾತ್ವಿಕ ಶಕ್ತಿಯಿಂದಲೇ ಏನೆಲ್ಲವನ್ನು ಕಟ್ಟಬಹುದು ಎಂದು ತೋರಿಸಿಕೊಟ್ಟ ಧೀಮಂತ ಚೇತನ ಚೆನ್ನವೀರ ಕಣವಿಯವರಿಗೆ ಇಂದು ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಕೊಡಮಾಡುವ ಬೇಂದ್ರೆ ರಾಷ್ಟ್ರೀಯಪುರಸ್ಕಾರವನ್ನಿತ್ತು ಸನ್ಮಾನಿಸಲಾಯಿತು.

"ಕಣವಿಯವರ ಕಾವ್ಯಮನೋಧರ್ಮವನ್ನು "ರೊಮ್ಯಾಂಟಿಕ್"ಎಂದು ಗುರುತಿಸುವದು ವಾಡಿಕೆಯಾಗಿದೆ.ಆದರೆ ಅದು ಇದಕ್ಕಿಂತಲೂ ಹೆಚ್ಚು ಸಂಕೀರ್ಣವಾದ ಮನೋಧರ್ಮ.ಆದರ್ಶವಾದ,ನಿಸರ್ಗಪ್ರೇಮ,ಭಾವನಿಷ್ಟೆ ಇವು ಅವರ ರೊಮ್ಯಾಂಟಿಕ್ ಒಲವುಗಳತ್ತ ಬೊಟ್ಟುಮಾಡಿತೋರಿಸಿದರೆ,ಸಮದರ್ಶನ,ಸಮಭಾವ,ಸ್ವೀಕ್ರತಿಗಳಂಥಹ ಮೌಲ್ಯಗಳಲ್ಲಿರುವ ಅವರ ನಂಬುಗೆ ಭಾರತೀಯ ಸಂದರ್ಭದಲ್ಲಿ ಅಭಿಜಾತ ಒಲವುಗಳನ್ನೇ ಸೂಚಿಸುತ್ತದೆ.ಸ್ವತಹ ಕಣವಿಯವರಿಗೆ ಈ ಸಂಕೀರ್ಣತೆಯ ಅರಿವಿದೆ",ಎಂದು ಕಣವಿ ಸಮಗ್ರ ಕಾವ್ಯಕ್ಕೆ ಪ್ರಸ್ತಾವನೆ ಬರೆದ ಕನ್ನಡದ ಶ್ರೇಷ್ಟ ವಿಮರ್ಷಕ ಪ್ರೊ.ಜಿ.ಎಸ್.ಆಮೂರರು ಇವತ್ತು ಕಣವಿಯವರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ಮೆರಗನ್ನು ಇನ್ನೂ ಹೆಚ್ಚಿಸಿತ್ತು!

ದಿನವೂ ವಾಕಿಂಗ್ ಹೊರಡುವಾಗ ಕಾಣಸಿಗುವ ಕಣವಿ ಅಜ್ಜ! ಅವಾಗೀವಾಗ ಸಾಧನಕೇರಿಯ ಬೇಂದ್ರೆಭವನದಿಂದ ಕಲ್ಯಾಣನಗರದ ಚೆಂಬೆಳಕಿನವರೆಗೆ ಕಾರಲ್ಲಿ ಬಾಜೂಕ್ಕೇ ಕೂತು ಸ್ನಿಗ್ಧನಗುವಿನೊಂದಿಗೆ ಅಪ್ಯಾಯಮಾನವಾಗಿ ಹರಟುತ್ತ ಹ್ರದಯಕ್ಕೆ ಹತ್ತಿರವಾದವರು!ನನ್ನ ಚಿಕ್ಕ ಮಕ್ಕಳಿಗೆ ಪ್ರೀತಿಯ ಅಜ್ಜನಾಗಿರುವ ಕಣವಿಯವರು.......ನಮ್ಮ ಮನೆಯ ಹಿರಿಯರು! ಆ ಚೇತನ ನಮ್ಮೊಂದಿಗೆ ಬಹುಕಾಲದವರೆಗೂ ಇದ್ದು ದಾರಿದೀಪವಾಗಲಿ. ಚೆಂಬೆಳಕಿನ ತಂಪು ಯಾವಾಗಲೂ ನಮ್ಮನೆಲ್ಲ ಕಾಯಲಿ ಎನ್ನುತ್ತ....

ಕಾವ್ಯಾಸಕ್ತರಿಗೊಂದು ಕಣವಿ ಕಾವ್ಯದ ಝಲಕ್ ......
ಬಿಸಮಿಲ್ಲಾರ ಶಹನಾಯಿವಾದನಕೇಳಿ
ಒಂದೆ ಉಸಿರಿಗೆ ಹಸಿರ ಹೊಮ್ಮಿಸುವ;ನೂರುಬಗೆ
ಭಾವಕುಸುಮವನೆತ್ತಿ ಗಾಳಿಸುಳಿಯಲಿ ಹೀಗೆ
ನರುಗಂಪ ತೇಲಿಸುವ;ಹಂಬಲದ ಸವಿದನಿಗೆ
ತುಂಬಿ ಆಲಿಸುವ;ಮನಸಿನ ಮಧ್ಯಬಿಂದುವಿಗೆ
ಕನಸು-ಕಾಮನಬಿಲ್ಲು ವರ್ತುಳವ ರಚಿಸಿ,ನೆಲ-
ಮುಗಿಲನೊಂದು ಸಲ ಬಂಧಿಸಿ ಜೀವಸ್ಪಂದಿಸುವ;
ಮೋಡದೊಡಲಿಗೆ ಮಿಂಚು ಸಂಚರಿಸಿ ಹನಿಗರೆವ
ರಾಗ ಲಹರಿಯ ತೊರೆಗಳೋಡಿ ತಬ್ಬಿವೆ ಕಡಲ.
ಕೋಟಿಮೈಲಂತರದ ನೀಹಾರಿಕೆಯ ನಾಡಿ-
ಮಿಡಿತ ತಟ್ಟಿತು ಕಿವಿಗೆ; ನಾದದ ಕೂದಲೆಳೆಯಲಿ
ಪ್ರಥ್ವಿತೂಗಿರೆ, ಸೂರ್ಯಚಂದ್ರರಿಗು ಜೋಕಾಲಿ.
ಪಾತಾಳಗವಿಗೆ ತೆರೆದವು ನೂರು ಬೆಳಕಿಂಡಿ.
ಹೊಕ್ಕಳ ಹುರಿಯ ಕತ್ತರಿಸಿ ಮುಗಿಯೆ ಶಹನಾಯಿ
ಆಗಸದ ಚಿಪ್ಪೊಡೆದು ಜೀವತೆರೆಯಿತು ಬಾಯಿ.
-ಚೆನ್ನವೀರ ಕಣವಿ.

11 comments:

  1. ನಾಕುತಂತಿಯಂತಹ ಆಳವಾದ ಅಧ್ಯಾತ್ಮಿಕ ಕವಿತೆಗಳನ್ನು ಬರೆದ ಬೇಂದ್ರೆ ಅಜ್ಜ ಜನಸಾಮಾನ್ಯರ ಮನತಟ್ಟುವ ಕವಿತೆಗಳನ್ನೂ ಬರೆದರು . ಅವರ ಎಲ್ಲಾ ಕವಿತೆಗಳು ಲಯಪ್ರಧಾನವಾಗಿದ್ದು ಕೇಳುಗರನ್ನು ಮೋಡಿಮಾಡುತ್ತವೆ. ಕಣವಿಯವರ ಕವಿತೆಗಳನ್ನು ಚಿಕ್ಕವರಿದ್ದಾಗ ಪಠ್ಯಗಳಲ್ಲಿ ರಾಗವಾಗಿ ಓದಿದ ನೆನಪು ಈಗಲೂ ಇದೆ. ನಿಮ್ಮ ಲೇಖನ ಓದಿ ,ನನ್ನ ಸಂಗ್ರಹದಲ್ಲಿದ್ದ ಬೇಂದ್ರೆ ಕವನಗಳನ್ನೆಲ್ಲ ಇನ್ನೊಮ್ಮೆ ಕೇಳಿದೆ . ಧನ್ಯವಾದಗಳು.

    ReplyDelete
  2. obba shrestha kavi-kalaavidanige endigoo saavilla. Idee janaangavannu kattuva,roopisuva avra chintanegalige jai ho! I am glad that you got lost some time in the world of Lyric and Music! God bless you!

    ReplyDelete
  3. neenu blog ge maatra baritya? matte blog horataagi ninna baraha mattellaru publish aaja? engyako neenu pakka professional anista idde:)

    ReplyDelete
  4. Sadyakkantoo nanna blognalli maatra baritaa iddi. Anta professional enoo alla maraya. Bahala varshagalinda mouni aagide. iiga mouna muriyuttiddene!

    ReplyDelete
  5. ನೀನು ಸವಿದ ಕಾವ್ಯದ ಹುಗ್ಗಿಯನ್ನು ನಾವೂ ಸವಿಯುವಂತೆ ಮಾಡಿದ ನಿನಗೆ ಧನ್ಯವಾದ.

    ReplyDelete
  6. ಚೆಂಬೆಳಕಿನ ಕವಿ ಕಣವಿಯೊಳಗೆ ವರಕವಿ ಬೇಂದ್ರೆ ....ದರ್ಶನ ಮಾಡಿಸಿದ ನಿನಗೆ ಥ್ಯಾಂಕ್ಸ್.

    ReplyDelete
  7. Thanks umakka and Bhava! for regular reading.

    ReplyDelete
  8. ವರಕವಿ ಬೇಂದ್ರೆ ಮತ್ತು ಚನ್ನವೀರಕಣವಿ ಅವರ ಬಗೆಗಿನ ಬರಹ ಅನೇಕ ವಿಚಾರಗಳನ್ನು ತಿಳಿಸಿತು..
    ಸ೦ಗೀತಾ ಕಟ್ಟಿ ಮತ್ತು ಹಳಿಬ೦ಡಿಯವರ ಕ೦ಠದಲ್ಲಿ ಬೇ೦ದ್ರೆಯವರ ಕವಿತೆಗಳನ್ನು ಕೇಳುವುದೇ ಒ೦ದು ಹಬ್ಬ..!
    ವ೦ದನೆಗಳು.

    ReplyDelete
  9. Thanks chuuki for reading and sharing the Joy! Jai ho!

    ReplyDelete
  10. ಕವಿ-ಸಾಹಿತಿಗಳು ಸದಾ ಸಜ್ಜನರೆ ಆಗಿರುತ್ತಾರೆ, ಚಿತ್ರದಲ್ಲಿ ಕಣವಿಯವರನ್ನು ಗೌರವಿಸಿದ್ದನ್ನು ಸೊಂಡಿ ಬಹಳ ಖುಷಿಯಾಯ್ತು, ನಿಮ್ಮ ಲೇಖನಕ್ಕೆ ಆಭಾರಿ

    ReplyDelete
  11. Thanks bhatre for your comment on Kanavi. I would like to communicate with you through mails. my mail id is vbhats13@gmail.com

    ReplyDelete