Sunday, June 29, 2014

ಬಯಲು ಬಲು ದೂರ

ಇವತ್ತು ಯುಜಿಸಿ ನೆಟ್ ಎಕ್ಸಾಂ ಬರ್ಯೋಕೆ ಅಂತಾ ಬೆಂಗಳೂರಿಗೆ ಹೋಗಿದ್ದೆ! ಮಧ್ಯಾಹ್ನದ ಪೇಪರ್ರು ಒಂದೇ ಗಂಟೆಯೊಳಗೆ ಬರೆದು ಮುಗಿದು ಹೋಗಿತ್ತು! ಕನಿಷ್ಠ 3 ಗಂಟೆಯವರೆಗಾದರೂ ಎಕ್ಸಾಂ ಹಾಲನ್ನು ಬಿಟ್ಟು ಬರುವ ಹಾಗಿರಲಿಲ್ಲ. ಹಾರ್ಡಾದ ಡೆಸ್ಕು ಬೆಂಚಿನ ಮೇಲೆ ಬೆಳಗಿನಿಂದಲೂ ಕುಳಿತಿದ್ದರಿಂದ ಸೊಂಟ, ಬೆನ್ನು, ಕುತ್ತಿಗೆ ಎಲ್ಲವೂ ಹಿಂಡತೊಡಗಿದ್ದವು! ಹಾಳಾದ ಬಿಸಿಗಾಳಿ..... ಸೆಖೆಯನ್ನು ಸಹಿಸಿಕೊಳ್ಳದೇ ವಿಧಿಯಿಲ್ಲ.  ಸೂಪರ್ ಆಗಿದ್ದ ಸೂಪರ್ ವೈಸರ್ ಸ್ಮೈಲ್ ಮಾಡುತ್ತಲೇ ಹೊರಗೆ ಹೋಗೋ ಹಾಗಿಲ್ಲ ಅಂದು ಬಿಟ್ಟರು! ಹಾಗಾಗಿ ಪ್ರಶ್ನೆ ಪತ್ರಿಕೆಯ ಬೆನ್ನಿನಲ್ಲಿ ‘ಬಯಲು ಬಲು ದೂರ’ ಬರೆಸಿಕೊಂಡಿತ್ತು!
ಬಯಲು ಬಲು ದೂರ
ಬೆನ್ನಹುರಿಯಾಳದಲಿ ಚುರುಚು
ರು ಚುಳುಕು ಹೆಗಲ ಬುಡದುದ್ದಕ್ಕೂ
ಹರಡಿ ತಲೆಯೆಲ್ಲ ಕರಡ!
ಎದೆಯ ಮೂಲೆಯಲ್ಲೆಲ್ಲೋ ಸರಿವ
ಸರ್ಪಗಂಧಿಯ ಸುಳಿ
ನೆತ್ತಿಯನ್ನೇರಿ ಸರ್ರನೆ
ಸಂದಿಗೊಂದಿಗಳಿಗಿಳಿದು
ಹುಬ್ಬಿನಂಚಲಿ ಮಿಂಚುವ
ಬೆವರಸಾಲೆ.

ಆಸೆಯಾಗುತ್ತಿದೆ, ಪಸೆಯಾರಿದ
ನಾಲಗೆಗೆ; ಗುಟುಕು ನೀರೂ ಸಿಗದ
ಬೆಂಗಾಡು, ನೀರೆ
ನಗುತ್ತಾಳೆ; ಕಾಲನೋಡಿ!
ಕಾಯಬೇಕಿದೆ ಇನ್ನೂ..... ತಾಸು-
ಗಳಿಗೆ, ಗುಂಯ್ ಗುಡುವ
ಗಿರಗಿಟ್ಟಿ, ಗಿರಿಗುಡುವ ತಲೆ
ಯೊಳಗೆ ಆಸೆ-ಬಯಕೆಗಳ
ನೆಲ್ಲ ರುಬ್ಬಿ ಬೀಸಿ ಒಗೆಯಲು
ಬಯಲು ಬಲುದೂರ......

-ವಸಂತ,
ಮಧ್ಯಾಹ್ನ 2-30 ರಿಂದ 3 ರವರೆಗೆ!
ಎಂಇಎಸ್, ಕಾಲೇಜು, ಕೊಠಡಿ ಸಂಖ್ಯೆ 42 (ಎ)
ಬೆಂಗಳೂರು.


Tuesday, April 8, 2014

ಸೃಷ್ಟಿಕ್ರಿಯೆ



ಕವಿತಾ ಕುಡಿನೋಟ ಬೀರುತ್ತಾಳೆ
ಬಿಳಿಯ ಕಾಗದದ ಮೇಲೆ
ಅಪರಿಚಿತ ಗಂಡಸು; ತನ್ನವನಲ್ಲ
ವೆಂಬಂತೆ ಮುಖತಿರುಗಿಸುತ್ತಾಳೆ.

ಆದರೆ, ಸುಕುಮಾರಿ ಉಪವಾಸವಿದ್ದಾಗ
ಕನಸಿನಂತಹ ರಾತ್ರಿಯಲಿ
ಪುರುಷಸ್ಪರ್ಷದ ನವಿರುಗನಸಿನಲ್ಲಿ
ತಕ್ಷಣವೆ ಮಿಡಿದು ಕಂಪಿಸುವ  ಅವಳ ದೇಹ.

ಕೆಲವೊಮ್ಮೆ, ಧಗೆಯಾರಿದ ಮೇಲೆ
ಉರಿದು ಎಚ್ಚರಗೊಳ್ಳುವ ಅವಳು
ನೇವರಿಸುತ್ತಾಳೆ ರವಿಕೆಯ
ಬಿಚ್ಚಿ ಬಿಸಾಕಿ ಬೊಗಸೆ
ತುಂಬಿದ ಬೆಳದಿಂಗಳ ಮೈ
ಮೇಲೆಲ್ಲ ಸೋಕಿಸಿ ನವಿರಾಗಿ
ಉಜ್ಜುತ್ತ ತಂಪೆರೆವ ಕೈ
ಗಳು ನೋವ ಕಳೆಯುವಂತೆ.

ದೇಹದ ಕತ್ತಲೆ ಚಾಚುತ್ತದೆ ಚಾಪೆಯಂತೆ
ಬೇಕಾಬಿಟ್ಟಿ ಚೆಲ್ಲಿದ ಮೈ-ಮನಸು
ಸಂದು ಸಂದಿನ ಕತ್ತಲೆಯಲ್ಲೂ ಆವರಿಸುವ
ಬೆಂಕಿಕಾವು, ಬಲಶಾಲಿ ಬಾಹುಗಳಲಿ
ಬಂಧಿಯಾಗಿ ಹುಡಿಗೊಳ್ಳುವ ತನಕ
ನೆಲೆಗೊಳ್ಳಲಿ ಕತ್ತಲೆಯ ಕಾಮ
ವೆಂದು ಕನವರಿಸುತ್ತಾಳೆ.

ದಿಗ್ಗನೆ ಕಾಣಿಸಿಕೊಳ್ಳುವ ಖಾಲಿ ಹಾಳೆ
ನಡುಗುವ ಕೈಗಳ ಸೋಂಕಿದಾಗ
ಸುಡುವ ದೇಹದ ಭಾಗ,
ಕರಗುವ ಯಾತನೆ, ಮೂಗಿಗಡರುವ
ವಿಚಿತ್ರ ವಾಸನೆ
ದೇಹದ ಉಬ್ಬುತಗ್ಗು ಸಾಲುಗಳ
ಓದುವ ಕೈ
ಅಪರಿಚಿತವಾಗಿ ಕಾಣಿಸುವ ತನ್ನದೇ
ದೇಹ, ಕೊರೆವ ತಣ್ಣನೆಯ ಬೆವರಸಾಲೆ
ಸಾವು ಬದುಕಿನ ವಾಸನೆಯಲ್ಲಿ ಅದ್ದಿ
ತೆಗೆದ ಉಸಿರು
 ಈ ಎಲ್ಲ ನವಿರು ಕಪ್ಪು ಗೆರೆಗಳು
ದನಿಯಿಲ್ಲದ ಚೀತ್ಕಾರದ ತುಣುಕುಗಳು
ಮೌನ, ಗೊಂದಲದಲ್ಲಿ ಸೋರಿ
ಹೋದ ಭಾವ
ಎದ್ದು ನಿಲ್ಲುವ ಅವಳ ನೋಟದಲ್ಲಿ;
ಅನ್ಯಾಯದ ಛಾಯೆ.
ತನ್ನದೇ ಪುಟ್ಟ ಭಾಗ ಸತ್ತುಹೋದಂತೆ,
ಸುಕುಮಾರಿ ಬಸಿರಾಗಿ ಮತ್ತೆ
ಗರ್ಭಪಾತವಾದಂತೆ.

                             ಮೂಲ- ಅಮೃತಾ ಪ್ರೀತಂ
                             ಕನ್ನಡಕ್ಕೆ – ವಸಂತ

                             8 ಎಪ್ರಿಲ್ 2014

Saturday, April 5, 2014

ಹುಚ್ ಮಂಗ್ಯಾ ಪಾಂಡೂ ತನ್ನಷ್ಟಕ್ಕ ತಾನ ಮಾತಾಡ್ಲಿಕ್ಹತ್ತಾನ!

ಇತ್ತ ಕಡಿ, ಟೈವಾಕ್ ಗುಡ್ಡದ್ ತುದೀಮ್ಯಾಲಿನ್ ಝೋಪಡೀ ಪಟ್ಟಿ ಬಾಜೂಕ್ ನಿಂತ ಹುಚ್ ಮಂಗ್ಯಾ ಪಾಂಡೂ ತನ್ನಷ್ಟಕ್ಕ ತಾನ ಮಾತಾಡ್ಲಿಕ್ಹತ್ತಾನ! ಹೇಮಾಮಾಲಿ ಬಾಜೂಕರ ಕುಂತ ಕೇಳಾಕ್ಹತ್ತಾಳ!
ಹಂಗ ಆಗ್ಲಿ...
ಇನ್ನೂ ಖರ್ಚೀಗ್ ಸಾಕಾಗಿ ಮಿಗೊವಷ್ಟು ಉಳ್ಕೊಂಡದ. ಬಾಯ್ ಬಿಟ್ ಕೇಳೂ ಪರಿಸ್ಥಿತಿ ಬರಾಂಗಿಲ್ಲಾ ಅಂದ್ಕೊಂಡೇನಿ. ಬ್ಯಾಲೆನ್ಸ್ ಕಾಲಿ ಆಗೂಗಂಟ ಮ್ಯಾಲ್ನಂವ್ವಾ ಕಳಿಸ್ತಿರ್ತಾನ! ಅಂವಾ ಭಾಳಾ ಇದ್ಹಾಂಗ! ಏನೂ ಇಲ್ದನ ಛಲೋ ಬಾಳುವೆ ಮಾಡೂದ ಹ್ಯಾಂಗ ಅನ್ನೂದನೂ ಒಮ್ಮೊಮ್ಮಿ ಹೇಳ್ತಿರ್ತಾನ! ಭಾಳಾತು ಅಂದ್ರ ಹ್ಯಾಂಗ್ ವಾಪಸ್ ತಗೋಬೇಕೂ ಅಂತಾನೂ ಅವಂಗ ಚೆನ್ನಾಗಿ ಗೊತ್ತದ. ಅಂಜಿಕಿ ಪಿಂಜಿಕಿ ಏನೂ ಇಲ್ದಾಂಗ ಬಾಳುವಿ ಮಾಡೂದ್ಹ್ಯಾಂಗ ಅನ್ನೋ ವಿಷ್ಯಾನೂ ಅಂವಾ ಬರೆ ಬಾಯ್ ಮಾತ್ನಾಗ ಹೇಳ್ತಿರ್ತಾನ ಹಗಲೆಲ್ಲಾ!ಹಂಗಾಗಿ ಬಾಯ್ ಬಾಯ್ ಅನ್ನೂದೂ ಒಮ್ಮೊಮ್ಮೆ ತುಟ್ಟಿ ಆಗ್ತದ! ಅದ್ಕ ನಾ ಅನ್ನಾಂಗಿಲ್ಲಾ!
******
ಸಣ್ಣಾವ್ರ ಮುಂದ ದೊಡ್ಡೊವ್ರಾಗೋರು.... ದೊಡ್ಡೋರಾದ್ಮ್ಯಾಲೆ ಸಣ್ಣಾ ಆಗೋವ್ರು! ನಾನೂ, ನೀನೂ, ಅವನೂ, ಅವಳೂ,ಎಲ್ಲಾರೂ ಹಾಂಗೇನೋ ತಮ್ಯಾ ಸಣ್ಣಾ ಅಂದ್ರೇನು ಸಾಮಾನ್ಯಾ ಅಂದ್ಕೋಂಡೀಯೇನೂ? ದೊಡ್ಡದೂ ಅಂದ್ರೆ ಮಹಾ ಘನಾ ಅಂದ್ಕೊಂಡೀಯೇನೂ? ಎರಡೂ ಸುಳ್ಳೇ ಅದಾವ! ಸಣ್ಣ ಅಂದ್ರೆ ಸಣ್ಣಲ್ಲ... ದೊಡ್ಡ ಅಂದ್ರೆ ದೊಡ್ಡಲ್ಲಾ.... ಸಣ್ಣದೊಡ್ಡ ಬ್ಯಾರೆಬ್ಯಾರೆ ಅಲ್ಲೋ ತಮ್ಯಾ ಎರ್ಡೂ ಒಂಥರಾ ಚರಿಗೀ ಇದ್ಹಾಂಗ! ಸ್ವಲ್ಪನ ಯಾಮಾರಿದ್ರೂ ಚರಿಗೀ ತಗೊಂಡ ಹೋಗೂದಾಗ್ತದ ಮತ್ತ! ಚರಿಗಿ ತಿರುಗಿದ್ರ ಗಿರಿಚ ಆಗಿ ಗಿರಿಗಿರಿ ಗಿರಗಿಟ್ಟಿ ತಿರ್ಗಿ ಗಿಲ್ಮಿಟ್ ಒಳಗಿನ ಮಿರ್ಚಿ ಕಣ್ಣಾಗ ನೀರ್ ತರ್ಸ್ತಾವೋ! ನೀರ ಕುಡಿದ್ರೂ ಮೂಗ್ನ್ಯಾಗಿನ ನೀರ ಆರಾಂಗಿಲ್ಲ... ಮುಕ್ಳ್ಯಾಗಿನ ಉರಿ ಬಿಡಾಂಗಿಲ್ಲ! ಹೋಗ್ಲಿ ಬಿಡು... ಅದು ಹಾಂಗ ಮುಗಿಯೂ ಕಥಿ ಅಲ್ಲ.
ಹೀಂಗ ಸಾಧನಕೇರಿಗಂಟಾನೂ ಹಾಸಿ ಹಾಲಗೇರಿ ಸುತ್ತಿ ಹಳೀ ಧಾರವಾಡ್ದಾಗಿನ ಮಂಗ್ಯಾನ್ ಮಹಲ್ ದಾಟಿ ಬಂದ್ರೂನೂ ಮತ್ತ ಕೂಗತಿರ್ತಾವ ಜೋಡ ಗೂಗಿ ಜೋಗೀ ಮಟ್ಟಿಯೊಳಗ! ಹಾಡೇ ಹಗಲೂ... ಮಟಾಮಟಾ ಮದ್ಯಾಹ್ನ.... ಕಟಾಕಟಿ ಕತ್ತಲದಾಗ.... ಮಾಮರಾ ತೂಗತದ ಬಾ ಬಾರೋ ಬಾರೋ ಭೋಗೀ.... ಬಂದಾನ ಭಲೇ ಜೋಗೀ!

ಸರಿ ಹಾಂಗಾದ್ರ... ಕಣ್ತುಂಬಾ ನಿದ್ದೀ ಮಾಡ್ರಿ... ನಂಗೂ ಒಂದ್ ನಾಕ್ ಅಕ್ಷರಾ ಏನಾರ ಓದ್ಕೋಂಡು ಹಾಸ್ಗಿ ಒದ್ಯೂ ಟೈಂ ಆಗೇದ!

Tuesday, March 18, 2014

ಇಟ್ಟಿಗೆ-ಪುಟ್ಟ ಮತ್ತು ಅವನಮ್ಮ


ಕಟ್ಟಬೇಕೊಂದು ಚೆಂದನ್ನೆ
ಗೂಡು ಪುಟ್ಟಾ, ಒಂದೊಂದೇ ಕಲ್ಲನ್ನೆತ್ತಿ
ಯ ಮೇಲೆ ಹೊತ್ತು, ಹೊತ್ತು;
ಕಂಕುಳಲ್ಲಿರುವ ನೀಯೆನಗೆ
ಭಾರವೆನಿಸುವುದಿಲ್ಲ ತಲೆಯ
ಮೇಲಿನ ಸಿಮೆಂಟಿನಿಟ್ಟಿಗೆಯ ಹಾಗೆ!

ಗುರಿಯೇನೋ ದೂರವೇ
ಕಾಂಬ ಕಣ್ಣಿಗೆ ಧೂಳು
ಅಂಟಿ ಮೂಗಲ್ಲಿ ನೀರು
ಬಂದರೂ ಸೀನು ನಿನ್ನ
ಎಳೆಗಣ್ಣ ಹೊಳಪಲ್ಲಿ
ನನ್ನ ಕನಸುಗಳಿಗೆ ಬರವಿಲ್ಲ.

ಯಾರ್ಯಾರದೋ ಮಹಡಿ ಮಹಲುಗಳ
ಕಟ್ಟಿ ಕಟ್ಟಿ ರಟ್ಟೆ ಸೋತರೂ
ಸೊಂಟಗಟ್ಟಿಗೊಳ್ಳುತಿದೆ ನಿನ್ನ
ಮಿದುಭಾರದಿಂದ, ಮೃದುಭಾವದಿಂದ.

ಗಟ್ಟಿಯಾಗಿ ಅವುಚಿಕೋ ನನ್ನೆದೆಯ
ಆಳದಲಿ ಮಡುಗಟ್ಟಿದ ನೋವೆಲ್ಲ
ಬೆವರಾಗಿ ಹರಿದು ಹೋಗಲಿ, ನಾಳೆ;
ಒಂದುದಿನ ನಿನ್ನದೇ ಮಹಲಿನಲಿ
ಮಗುವಾಗಿ ಕೈತುತ್ತು ತಿನ್ನುವಾಸೆ!

ಒಂದೊಂದೆ ಕಟ್ಟಗಳ ಏರುತ್ತ, ಏರುತ್ತ
ಕಟ್ಟುಗಳ ದಾಟುತ್ತ ಜಾರಿಬೀಳದೆಯೆ
ಕಟ್ಟುವ ನಾವೊಂದು ಪುಟ್ಟಗೂಡು
ಇಂದಲ್ಲ ನಾಳೆ; ಪುಟ್ಟ
ಮತ್ತವನಮ್ಮ ಪಟ್ಟ ಪಾಡುಗಳೆಲ್ಲ
ಹಾಡಾಗಿ ಮೂಡಿ ಕಣ್ಣಂಚಿನ
ಧೂಳಪೊರೆ ಕರಗಿ ನವಿರಾಗಿ
ನವಿಲು ನರ್ತಿಸಲಿ
ತನ್ನ ಗರಿಯ ಬಿಚ್ಚಿ

-ವಸಂತ
18 ಮಾರ್ಚ್ 2014.



Sunday, March 16, 2014

ಸಾವಿನ ಮನೆಯ ಕದ ತಟ್ಟಿ ಬಂದ ದೇವತ್ತೆ!


‘ವೈದ್ಯೋ ನಾರಾಯಣೋ ಹರಿಃ’ ಎಂಬುದು ವೈದ್ಯಕೀಯ ಕ್ಷೇತ್ರದ ಪಾವಿತ್ರ್ಯದ ಕುರಿತು ಹೇಳುವ ಒಂದು ಪ್ರಾಚೀನ ಮಾತು. ತೀರಾ 25 ವರ್ಷಗಳ ಹಿಂದಿನವರೆಗೂ ಅದನ್ನು ಅಕ್ಷರಶಃ ಪಾಲಿಸಿ ಲಕ್ಷಾಂತರ ಜನರ ಸೇವೆ ಮಾಡಿಕೊಂಡುಬಂದ ವೈದ್ಯರನೇಕರ ಉದಾಹರಣೆ ನಮ್ಮ ನಡುವೆಯೇ ಸಿಕ್ಕುತ್ತದೆ. ನಂಬಿದವರ ಕೈಬಿಡದೆ, ವೈದ್ಯಕೀಯ ವೃತ್ತಿಯನ್ನು ಜೀವನದುದ್ದಕ್ಕೂ ಒಂದು ತಪಸ್ಸನ್ನಾಗಿ ಆಚರಿಸಿ ತಮ್ಮ ಸೇವಾವೃತ್ತಿಯಲ್ಲಿ ನಿಜವಾದ ಅರ್ಥದಲ್ಲಿ ಸಾರ್ಥಕವಾಗಿ ತೊಡಗಿಸಿಕೊಂಡ, ಶಿರಸಿಯ ಸುತ್ತಮುತ್ತಲೆಲ್ಲ ಪಟವರ್ಧನ್ ಡಾಕ್ಟ್ರು ಎಂದೇ ಪ್ರಸಿದ್ಧರಾಗಿದ್ದ ಡಾ.ಎ.ಎನ್ ಪಟವರ್ಧನ್ ಅವರಂತಹ ಅನೇಕ ಆದರ್ಶ ವೈದ್ಯರ ಫೋಟೋ ಇವತ್ತಿಗೂ ಮಲೆನಾಡಿನ ಅನೇಕ ಮೂಲೆಮನೆಗಳಲ್ಲಿ ಕಾಣಸಿಗಬಹುದು. ಇಂತಹ ಅನೇಕ ಪುಣ್ಯಾತ್ಮರು ನಾಡಿನೆಲ್ಲೆಡೆಯೂ ಇದ್ದಿದ್ದ ಕಾಲವೊಂದಿತ್ತು! ಈಗ ಪ್ರಾಯಶಃ ಎಲ್ಲೋ ಅಪರೂಪಕ್ಕೆಂಬಂತೆ ಅಂತವರು ಸಿಕ್ಕುತ್ತಾರೆ. ಅಂತಹ ಅಪರೂಪದ ವೈದ್ಯರುಗಳ ಪೈಕಿ, ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ, ಕೇವಲ ದೂರವಾಣಿಯ ಮೂಲಕ ಧೈರ್ಯ ಹೇಳಿ, ಮಾರ್ಗದರ್ಶನ ಮಾಡಿ, ಜೀವವೊಂದನ್ನು ಉಳಿಸಲು ನೆರವಾದ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಹೃದಯ ತಜ್ಞ ಡಾ.ದಿವಾಕರ ಭಟ್ ಮತ್ತು ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಡಾ.ನರೇಂದ್ರ ಅವರನ್ನು ನಾವು ಎಷ್ಟು ಅಭಿನಂದಿಸಿದರೂ ಕಮ್ಮಿಯೇ!

 ಈ ಮಾತನ್ನು ಯಾಕೆ ಹೇಳಹೊರಟೆ ಎಂಬುದು ಮುಂದಿನ ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ....

ಮೊನ್ನೆ ಗುರುವಾರ, 13 ಮಾರ್ಚ್ 2014ರಂದು ರಾತ್ರಿ ಸುಮಾರು 11:45ಕ್ಕೆ ಶಿರಸಿಯಿಂದ ಕರೆ ಮಾಡಿದ ರಾಮನಾಥ ಕಾಕಾ “ದೇವತ್ತೆ ತುಂಬ ಸೀರಿಯಸ್, ಬೆಳಗಿನವರೆಗೆ ಉಳಿಯುವ ಸಾಧ್ಯತೆ ಇಲ್ಲ ಅಂತ ಡಾಕ್ಟ್ರು ಹೇಳಿದ್ದಾರೆ. ಬೆಂಗಳೂರಿನಿಂದ ರವಿಕಾಕಾ, ರಮಣ, ಪ್ರಸಾದ ಹೊರಟಿದ್ದಾರೆ. ಎಲ್ಲ ಸಂಬಂಧಿಕರಿಗೂ ಸುದ್ದಿ ಮುಟ್ಟಿಸಲಾಗುತ್ತಿದೆ” ಎಂದು ಹೇಳಿದಾಗ ಅನಿರೀಕ್ಷಿತ ಆಘಾತ! ನಿನ್ನೆ ಮೊನ್ನೆಯವರೆಗೂ ತುಂಬ ಕ್ರಿಯಾಶೀಲವಾಗಿ ಬದುಕನ್ನು ಅನುಭವಿಸುತ್ತಿದ್ದ ದೇವತ್ತೆಗೆ ಸಾಯುವ ವಯಸ್ಸಲ್ಲ. ಉಸಿರಾಟದ ತೊಂದರೆಯೆಂದು ಮಂಗಳವಾರ ಸಾಯಂಕಾಲ ಡಾಕ್ಟ್ರ ಹತ್ತಿರ ಹೋದವಳ ಹೃದಯ ಬಡಿತದ ಏರುಪೇರನ್ನು ಗಮನಿಸಿ, ಅಡ್ಮಿಟ್ ಆಗುವಂತೆ ಸೂಚಿಸಲಾಗಿತ್ತು. ಒಂದುದಿನ ಐಸಿಯುನಲ್ಲಿಟ್ಟು ವೆಂಟಿಲೇಟರ್ ಅಳವಡಿಸಿದ ಡಾಕ್ಟ್ರು ಮರುದಿನ ಆಕೆ ಅರಾಂ ಆಗುತ್ತಿದ್ದಾಳೆಂದು ವಾರ್ಡಿಗೆ ಶಿಫ್ಟ್ ಮಾಡಿಸಿದ್ದರು. ಆದಿನ ಸಾಯಂಕಾಲ 7 ಗಂಟೆಯವರೆಗೂ ಆರಾಂ ಆಗಿಯೇ ಇದ್ದ ಅವಳಿಗೆ ಇದ್ದಕ್ಕಿದ್ದಂತೆ ಅತೀವವೆನ್ನಿಸುವ ತ್ರಾಸಾಗಹತ್ತಿದೆ. ಕೂಡಲೇ ಬಂದ ಡಾಕ್ಟ್ರು “ನೋ ಹೋಪ್ಸ್, ಇನ್ನೇನು ಆಕೆಯ ಕೊನೆ ಕ್ಷಣಗಳು ಹತ್ತಿರವಾಗಿವೆ. ಸಂಬಂಧಿಸಿದವರಿಗೆ ಸುದ್ದಿ ಮುಟ್ಟಿಸಿ” ಎಂದಾಗ ಹತ್ತಿರವಿದ್ದ ದೇವತ್ತೆಯ ತಂಗಿ ವಿಜಯತ್ತೆ ಕಂಗಾಲು!

ನಾವು ಶಿರಸಿ ತಲುಪಿದಾಗ 14ನೇ ತಾರೀಖು ಬೆಳಗಿನ 7:30 ಗಂಟೆ. ದೇವತ್ತೆ ಇನ್ನೂ ಉಸಿರಾಡಿಸುತ್ತಿದ್ದಳು. ವೆಂಟಿಲೇಟರ್ ಹಾಕಿ ಅವಳನ್ನು ಐಸಿಯುನಲ್ಲಿಡಲಾಗಿತ್ತು! ಐಸಿಯು ಅಂದರೆ ಅಬ್ಬೆಯ ಭಾಷೆಯಲ್ಲಿ ಹೇಳಬೇಕೆಂದರೆ ಯಾರನ್ನೂ ಒಳಗೆ ಬಿಡದೇ ಇರುವಂತಹ ಆಸ್ಪತ್ರೆಯ ಕತ್ತಲಕೋಣೆ! ಅಲ್ಲಿ ದೇವತ್ತೆ ಸುಸ್ತು ಹೊಡೆದು ಮಲಗಿದ್ದಳು ಜಗತ್ತಿನ ಪರಿಜ್ಞಾನವೇ ಇಲ್ಲದಂತೆ! ಸರಿ... ರವಿಕಾಕಾ, ಪ್ರಶಾಂತ, ಪ್ರಸಾದ, ನಾನು, ರಮಣ, ನಂತರ ನಮ್ಮನ್ನು ಬಂದು ಸೇರಿಕೊಂಡ ರಾಮನಾಥ ಕಾಕಾ, ದಿವಸ್ಪತಿ ಮುಂದೇನು ಮಾಡುವುದು? ಎಂದು ಮಾತನಾಡಿಕೊಳ್ಳುತ್ತಿರುವಾಗ, ಒಂದು ಛಾನ್ಸ್ ತೆಗೆದುಕೊಳ್ಳೋಣ, ಇಲ್ಲಿಂದ ಕೂಡಲೇ ವ್ಯವಸ್ಥಿತವಾದ ಆಸ್ಪತ್ರೆಗೆ ಶಿಫ್ಟ್ ಮಾಡೋಣ ಎಂಬ ಕ್ವಿಕ್ ನಿರ್ಧಾರಕ್ಕೆ ಬಂದೆವು. ಶಿಫ್ಟ್ ಮಾಡುವುದಾದರೆ ಎಲ್ಲಿಗೆ? ಒಂದೋ ಬೆಳಗಾವಿಗೆ ಮಾಡಬೇಕು. ಬೆಳಗಾವಿಗೆ ತಲುಪಲು 4 ರಿಂದ 5 ತಾಸು ಬೇಕು. ಶಿವಮೊಗ್ಗದಲ್ಲಿಯೂ ಇತ್ತೀಚೆಗೆ ಒಳ್ಳೆಯ ಆಸ್ಪತ್ರೆ ಬಂದಿದೆಯಂತೆ. ಅಲ್ಲಿಗಾದರೆ ಕೇವಲ 2:30 ಗಂಟೆಯಲ್ಲಿ ತಲುಪಬಹುದು. ಬೆಂಗಳೂರಿಗೂ ಹತ್ತಿರ. ಒಂದೊಮ್ಮೆ ಅಲ್ಲಿಂದಲೂ ಬೆಂಗಳೂರಿಗೇ ಶಿಫ್ಟ್ ಮಾಡುವ ಸಂದರ್ಭ ಬಂದರೆ ಅನುಕೂಲ ಎಂಬ ತೀರ್ಮಾನಕ್ಕೆ ಬರುವುದರೊಳಗೆ ಗಡಿಯಾರದ ಮುಳ್ಳು ಬೆಳಗಿನ 8 ಗಂಟೆ ತೋರಿಸುತ್ತಿತ್ತು. 

ಆದರೆ ಕ್ರಿಟಿಕಲ್ ಕಂಡಿಶನ್ನಿನಲ್ಲಿರುವ ರೋಗಿಯನ್ನು ಸಾಗಿಸಲು ಬೇಕಾದ ವೆಂಟಿಲೇಟರ್ ಇತ್ಯಾದಿ ಉಪಕರಣಗಳುಳ್ಳ ಅಂಬ್ಯುಲೆನ್ಸ್ ಇಡೀ ಶಿರಸಿಯಲ್ಲೆಲ್ಲೂ ಇಲ್ಲ! ಒಂದೋ ಹುಬ್ಬಳ್ಳಿಯಿಂದ ಬರಬೇಕು, ಇಲ್ಲವೇ ಶಿವಮೊಗ್ಗದಲ್ಲಿದೆಯಂತೆ ಅಲ್ಲಿಂದಲೇ ತರಿಸಬೇಕು. ತಕ್ಷಣಕ್ಕೆ ನೆರವಿಗೆ ಬಂದವರು ರವಿಕಾಕಾನ ಸ್ನೇಹಿತ ಡಾ.ರಮೇಶ್ ಉರಾಳ. ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಹೃದಯತಜ್ಞ ಡಾ.ನರೇಂದ್ರ ಅವರನ್ನು ಸಂಪರ್ಕಿಸಿ ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರ ಇರುವಿಕೆಯನ್ನು ಖಚಿತಪಡಿಸಿಕೊಂಡು, ಅವರಿಂದಲೇ ಅಂಬ್ಯುಲೆನ್ಸ್ ಸಂಪರ್ಕವನ್ನು ಪಡೆದುಕೊಂಡು ನಮಗೆ ಫೋನಾಯಿಸಿದರು. ಇಷ್ಟೊತ್ತಿಗಾಗಲೇ 8:30 ಆಗಿತ್ತು. ತಕ್ಷಣಕ್ಕೆ ಹೊರಡುವಂತೆ ಅಂಬ್ಯುಲೆನ್ಸ್ ಡ್ರೈವರಿಗೆ ಫೋನಾಯಿಸಿದಾಗ ಸ್ಪಂದಿಸಿದ ಡ್ರೈವರ್ ಸುರೇಂದ್ರ ಐಸಿಯು ಟೆಕ್ನಿಶಿಯನ್ ಒಬ್ಬರನ್ನು ಕರೆದುಕೊಂಡು 9 ಗಂಟೆಯ ಸುಮಾರಿಗೆ ಶಿವಮೊಗ್ಗದಿಂದ ಹೊರಟಿದ್ದಾಗಿಯೂ ಸುಮಾರು 11 ಗಂಟೆಯ ಹೊತ್ತಿಗೆ ಶಿರಸಿ ತಲುಪುವುದಾಗಿಯೂ ಕರೆ ಮಾಡಿದರು.

ಇನ್ನು ನಾವು ಈ ಆಸ್ಪತ್ರೆಯ ಫಾರ್ಮಾಲಿಟಿಸ್ ಎಲ್ಲ ಮುಗಿಸಿ ಪೇಶಂಟ್ ಡಿಸ್ಚಾರ್ಜ್ ಮಾಡಿಸಬೇಕಿತ್ತಲ್ಲ. ಡಾಕ್ಟ್ರಿಗಾಗಿ ಕಾಯತೊಡಗಿದೆವು. 9:30ಯ ಸುಮಾರಿಗೆ ಬಂದ ಡಾಕ್ಟ್ರು “ನೋಡಿ ಪೇಶಂಟ್ ತುಂಬ ಕ್ರಿಟಿಕಲ್ ಆಗಿದ್ದಾರೆ. ಅವರ ಹೃದಯ ಅಸಹಜವಾಗಿ ಊದಿಕೊಂಡಿದೆ. ಬದುಕಿ ಉಳಿಯುವ ಪ್ರಮೇಯವೇ ಇಲ್ಲ. ಇವತ್ತೊ, ನಾಳೆಯೋ ಹೋಗಬಹುದು! ಒಂದೊಮ್ಮೆ ಬೇರೆ ಕಡೆಗೆ ಒಯ್ದರೂ ಬದುಕುವ ಸಾಧ್ಯತೆಯೇ ಇಲ್ಲ. ವೆಂಟಿಲೇಟರ್ ತಪ್ಪಿಸಿ ಅಂಬ್ಯುಲೆನ್ಸ್ ಒಳಗೆ ಶಿಫ್ಟ್ ಮಾಡುವುದರೊಳಗೇ ಸಾವು ಸಂಭವಿಸಬಹುದು. ಶಿವಮೊಗ್ಗ ತಲುಪುವದಂತೂ ಸಾಧ್ಯವೇ ಇಲ್ಲ. ಒಮ್ಮೆ ಡಿಸ್ಚಾರ್ಜ್ ಮಾಡಿದ ಮೇಲೆ ಏನೇ ಆದರೂ ಅದಕ್ಕೆ ನಾವು ಜವಾಬ್ದಾರರಲ್ಲ. ಶಿಫ್ಟ್ ಮಾಡುವುದು ಅಡ್ವೈಸಿಬಲ್ ಎಂದು ನನಗೆ ಅನ್ನಿಸುವುದಿಲ್ಲ”, ಎಂದು ಬಿಟ್ಟರು! 

ನೆರೆದಿದ್ದವರೆಲ್ಲರೂ ಕಂಗಾಲು. ಎಲ್ಲರೂ ದೇವತ್ತೆಯ ಚಟ್ಟ ಕಟ್ಟಬೇಕಾದ ಪರಿಸ್ಥಿತಿಯನ್ನು ನೆನೆದೇ ಕಣ್ಣೀರಿಡಲಾರಂಭಿಸಿದರು. ಹೇಗಾದರೂ ಸಾಯುವದು ಗ್ಯಾರಂಟಿ ಎಂದು ಡಾಕ್ಟ್ರೇ ಹೇಳಿಯಾಗಿದೆ. ಸಾವು ಸಂಭವಿಸುವುದಾದರೆ ಎಲ್ಲಾದರೇನು? ಆದರೂ ಒಂದು ಛಾನ್ಸ್ ತೆಗೆದುಕೊಂಡೇ ಬಿಡೋಣ. ನಾವು ನಮ್ಮ ಕೈಲಾದ ಪ್ರಯತ್ನ ಮಾಡಲಿಲ್ಲವಲ್ಲ ಎಂದು ಆಮೇಲೆ ಕೊರಗಿದರೆ ಏನುಬಂತು? ಹೇಗಾದರೂ ಅಂಬ್ಯಲೆನ್ಸ್ ಬರುತ್ತಿದೆ. ಶಿವಮೊಗ್ಗೆಗೆ ಹೋಗಿಯೇ ಬಿಡೋಣ ಎಂದು ನಾವೆಲ್ಲ ಹುಡುಗರು ತೀರ್ಮಾನಿಸಿಬಿಟ್ಟಿದ್ದೆವು.

ಅಂಬ್ಯುಲೆನ್ಸ್ ಕರೆಕ್ಟಾಗಿ 11:15ಕ್ಕೆ ಬಂತು. ಐಸಿಯು ಟೆಕ್ನಿಶಿಯನ್ ನನ್ನು ಬದಿಗೆ ಕರೆದು ಪರಿಸ್ಥಿತಿ ವಿವರಿಸಿದೆ. “ಒಮ್ಮೆ ಪೇಶಂಟ್ ನೋಡಿ ಹೇಳಪಾ. ಶಿವಮೊಗ್ಗ ಮುಟ್ಟಬಹುದೇ?” ಎಂದಾಗ  ದೇವತ್ತೆಯನ್ನು ನೋಡಿದ ಆ ಹುಡುಗ ಸರ್ ಎರಡು ದಿನಗಳಲ್ಲಿ ಅವರು ಆರಾಂ ಆಗ್ತಾರೆ. ಇನ್ನೂ ತಡಮಾಡಬೇಡಿ ಅಂದಿದ್ದೇ ತಡ. ತಕ್ಷಣಕ್ಕೆ ಡಾಕ್ಟ್ರ ಹತ್ತಿರ ಹೋಗಿ “ನಮ್ಮ ರಿಸ್ಕಿನ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಕೂಡಲೇ ಪೇಶಂಟ್ ಡಿಸ್ಚಾರ್ಜ್ ಮಾಡಿ”, ಎಂದು ಕೇಳಿಕೊಂಡಾಗಲೂ, ಮತ್ತದೇ ಹೆದರಿಸುವ ಮಾತುಗಳನ್ನಾಡಿದ ಡಾಕ್ಟ್ರರು ದೇವತ್ತೆಯನ್ನು  ಬಿಟ್ಟುಕೊಡುವ ಮನಸ್ಥಿತಿಯನ್ನು ಹೊಂದಿಲ್ಲವೆನ್ನುವುದು ನಮಗೆ ಅರ್ಥವಾಯಿತು. ಕೂಡಲೇ ಡಿಸ್ಚಾರ್ಜ್ ಪ್ರಕ್ರಿಯೆಗಳನ್ನು ಮುಗಿಸುವಂತೆಯೂ, ನಾವು ಶಿಫ್ಟ್ ಮಾಡುವ ನಿರ್ಧಾರವನ್ನು ಬದಲಿಸುವುದಿಲ್ಲವೆಂತಲೂ ಸ್ವಲ್ಪ ಖಡಾಖಂಡಿತವಾಗಿಯೇ ಹೇಳಿದಾಗ ಅನಿವಾರ್ಯವಾಗಿ ಡಿಸ್ಚಾರ್ಜ್ ಮಾಡಿದರು. ನಮ್ಮ ರಿಸ್ಕಿನ ಮೇಲೆ ನಾವು ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಬರೆದು ಕೊಟ್ಟ ಒಕ್ಕಣಿಕೆಯ ಮೇಲೆ ಸಹಿಹಾಕಿ ಶಿವಮೊಗ್ಗೆಯ ಕಡೆಗೆ ಶರವೇಗದಿಂದ ಹೊರಟೆವು. 

ಅಂಬ್ಯುಲೆನ್ಸ್ ಗೆ ಶಿಫ್ಟ್ ಮಾಡುವಾಗಲೇ ಸಾಯಬಹುದು... ಶಿವಮೊಗ್ಗ ವರೆಗೂ ದೇವತ್ತೆ ತಲುಪಲಾರಳು....ಎಂಬೆಲ್ಲ ಅನುಮಾನಗಳ ನಡುವೆಯೂ......ಸೈರನ್ ಬಾರಿಸುತ್ತ ಹೊರಟ ಅಂಬ್ಯುಲೆನ್ಸ್
ಕೇವಲ 2 ಗಂಟೆಯ ಅವಧಿಯಲ್ಲಿ ಶಿವಮೊಗ್ಗೆ ತಲುಪಿದಾಗ ಅಲ್ಲಿ ಡಾ. ನರೇಂದ್ರ ತಮ್ಮ ತಂಡದೊಂದಿಗೆ ಆಸ್ಪತ್ರೆಯ ಬಾಗಿಲಲ್ಲೇ ಕಾಯುತ್ತಿದ್ದರು. ಎಷ್ಟು ಬೇಗ ತುರ್ತು ಚಿಕಿತ್ಸೆಗಳನ್ನು ನೀಡಿದರೆಂದರೆ, ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ! ಒಂದು ಗಂಟೆಯ ನಂತರ ರೋಗಿಯಕಡೆಯವರು ಯಾರು ಎಂದು ಕೇಳುತ್ತ ಬಂದ ಅವರು ತುಂಬ ಆತ್ಮೀಯವಾಗಿ ವಿಚಾರಿಸಿಕೊಂಡರು ಮತ್ತು “ಗಾಬರಿಯಾಗುವಂತಹದೇನಿಲ್ಲ. ಎರಡು ದಿನಗಳ ಕಾಲ ರೋಗಿಯನ್ನು ಡಿಸ್ಟರ್ಬ್ ಮಾಡುವುದು ಬೇಡ. 48 ಗಂಟೆಗಳ ನಂತರ ಪರಿಸ್ಥಿತಿ ಏನೆಂಬುದು ತಿಳಿಯುತ್ತದೆ. ನನಗನಿಸಿದಂತೆ ಜೀವಕ್ಕೇನೂ ಅಪಾಯವಾಗಲಾರದು. ನೀವು ನಿಶ್ಚಿಂತೆಯಿಂದಿರಿ. ಆಸ್ಪತ್ರೆಯ ಸಿಬ್ಬಂದಿಗಳು ಮುಂದಿನದನ್ನು ನಿಮಗೆ ಗೈಡ್ ಮಾಡುತ್ತಾರೆ”, ಎಂದು ಹೇಳಿದಾಗ ನಮಗೆ ಒಂದು ರೀತಿಯ ಸಮಾಧಾನ!


ಈಗ ಸುಮಾರು 52 ಗಂಟೆಗಳ ನಂತರದಲ್ಲಿ ದೇವತ್ತೆ ಮತ್ತೆ ಮಾತನಾಡಲು ತೊಡಗಿದ್ದಾಳೆ. ಆರಾಂ ಆಗಿದ್ದಾಳೆ. ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೇವೆ. ಥ್ಯಾಂಕ್ಯೂ ಆಲ್ ಡಾಕ್ಟರ್ಸ್!

Friday, March 7, 2014

ಅಪರೂಪದ ಪಾಠಮಾಡಿದ ಮಿಸ್ಟಿಕ್ ಮೇಷ್ಟ್ರು!



“ಹಲವಾರು ಸಲ ನಾವಂದು ಕೊಂಡಂತೆಯೇ ಎಲ್ಲವೂ ಇರುವುದಿಲ್ಲ. ಬಹುತೇಕ ಬಾರಿ ನಮ್ಮ ಜೀವನದಲ್ಲಿ ನಾವು ಎಡವುವುದು ಎಲ್ಲಿ ಅಂದರೆ ಇನ್ನೊಬ್ಬರ ಕುರಿತಾಗಿ ಜಡ್ಜ್ ಮೆಂಟ್ ಪಾಸುಮಾಡಿಬಿಡುತ್ತೇವಲ್ಲ.... ಆಗ! ಇದನ್ನು ನಿಗ್ರಹಿಸಿ ಬದುಕನ್ನು ಗಮನಿಸುವ, ಅರಿತುಕೊಳ್ಳುವ ಕಸುವನ್ನು ನೀಡಿ ಕಸುಬು ಕಟ್ಟುವುದನ್ನು ನಮಗೆ ಕಲಿಸಿಕೊಡುವಲ್ಲಿ ಸಾಹಿತ್ಯ ಮಹತ್ತರ ಪಾತ್ರವನ್ನು ವಹಿಸುತ್ತದೆ! ಅದಕ್ಕಾಗಿ ನಾವು ಪ್ರಪಂಚದ ಅತ್ಯುತ್ತಮ ಸಾಹಿತ್ಯವನ್ನು ಓದಬೇಕು. ನೀವೇ ಸೃಷ್ಟಿಸಿಕೊಂಡ ಮಿಥ್ ಗಳನ್ನು ಮುರಿದಾಗ ಸತ್ಯದ ದರ್ಶನವಾಗುವುದು ಸಾಧ್ಯವಾಗುತ್ತದೆ!” ಎಂದೆನ್ನುತ್ತ ನೆರೆದಿದ್ದ ಜನಸ್ತೋಮವನ್ನು ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ಆಯಸ್ಕಾಂತದಂತೆ ಹಿಡಿದಿಟ್ಟು ಅಪರೂಪದ ಪಾಠ ಮಾಡಿದ್ದು ಎಂಭತ್ತರ ತರುಣ ಉಡುಪಿ ರಾಜಗೋಪಾಲಚಾರ್ಯ ಅನಂತಮೂರ್ತಿ.



ನಿನ್ನೆ ಬೆಳಿಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರವು ವಿಶ್ವವಿದ್ಯಾನಿಲಯದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಸಂಘಟಿಸಿದ್ದ ಆಪ್ತಸಂವಾದದಲ್ಲಿ ಕಿಕ್ಕಿರಿದು ಸೇರಿದ್ದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬುದ್ಧಿಜೀವಿಗಳು ಮತ್ತು ಸಾರ್ವಜನಿಕರನ್ನು ತಮ್ಮ ಪ್ರಖರ ವೈಚಾರಿಕ ಮುದ್ದೆ ಮಾತುಗಳಿಂದ ಮಂತ್ರಮುಗ್ಧರನ್ನಾಗಿಸಿ ಮಾತಿಗೆ ಮಾತು ಕೂಡಿಸಿದ ಮೇಷ್ಟ್ರು ನಾಡಿನ ನಿಜವಾದ ಸಾಕ್ಷಿಪ್ರಜ್ಞೆಗೆ ಕನ್ನಡಿ ಹಿಡಿದರು!

ಎಷ್ಟೋ ಬಾರಿ ಅನುಕೂಲ ಮೂರ್ತಿ ಎಂದೇ ಬಿಂಬಿಸಲ್ಪಟ್ಟು ತಮ್ಮ ವಿರೋಧಾಭಾಸದ ಹೇಳಿಕೆಗಳಿಂದ ಸುದ್ದಿಯಾಗುವ ಅನಂತಮೂರ್ತಿಗಿಂತ ಇಂದು ಕಂಡ ಅನಂತಮೂರ್ತಿ ನಿಜವಾದ ಅರ್ಥದಲ್ಲಿ ತಮ್ಮ ಒಳಗನ್ನು ಬಿಚ್ಚಿಟ್ಟು, ವಿಶಿಷ್ಟ ಒಳನೋಟಗಳನ್ನು ನೀಡಿದ ಆಚಾರ್ಯರಾಗಿ, ಇನ್ನೂ ಮುಂದುವರೆದು ಈ ಶತಮಾನ ಕಂಡ ಋಷಿಸದೃಶ ವ್ಯಕ್ತಿತ್ವವನ್ನು ಹೊಂದಿದ ದಾರ್ಶನಿಕರಾಗಿ ತಮ್ಮೊಳಗಿನ ಭಾವವನ್ನು ಅಭಿವ್ಯಕ್ತಿಸಿದರೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. 

ಚಿಕ್ಕಂದಿನಿಂದಲೂ ಅನಂತಮೂರ್ತಿಯವರ ಸಾಹಿತ್ಯವನ್ನು ಆಸ್ವಾದಿಸುತ್ತ ಅವರೆಡೆಗೆ ಒಂದು ರೀತಿಯ ಪೊಸೆಸಿವ್ ಪ್ರೀತಿಯನ್ನು ಹೊಂದಿರುವ ನನ್ನಂತವರಿಗೆ ಅನೇಕ ಬಾರಿ ಯಾಕೆ ಅವರು ತಿಕ್ಕಲು ತನದ ಹೇಳಿಕೆಗಳನ್ನು ನೀಡುತ್ತ ತಮ್ಮ ಕಿಮ್ಮತ್ತನ್ನು ಕಳೆದುಕೊಳ್ಳುತ್ತಾರೆ ಎಂಬ ಬೇಸರವೂ ಉಂಟಾಗಿ ಕೊಂಚ ದೂರದಿಂದಲೇ, ಅನುಮಾನಗಳಿಂದಲೇ ಅವರನ್ನು ನೋಡಬೇಕೆನ್ನಿಸುವ ಮನಸ್ಥಿತಿ ಉಂಟಾಗುತ್ತಿತ್ತು. ಆದರೆ ಇಂದು ನೋಡಿದ ಅನಂತಮೂರ್ತಿ ಬೇರೆಯೇ ಆಗಿದ್ದರು. ಮೂರೇ ಮೂರು ತಾಸಿನಲ್ಲಿ ಪ್ರಪಂಚವನ್ನೆಲ್ಲ ಸುತ್ತಾಡಿಸಿ ಸಾಹಿತ್ಯದ ರುಚಿಯನ್ನು ಆಸ್ವಾದಿಸುವ ಮತ್ತು ಅತ್ಯದ್ಭುತವಾದ ಒಳನೋಟಗಳ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ, ಕಟ್ಟುವ ಬಗೆಯನ್ನು ದರ್ಶನ ಮಾಡಿಸಿದ ಅವರು ನಿಜವಾದ ಮೇಷ್ಟ್ರು ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾದರು! ನಾನು ಈವರೆಗೆ ಕೇಳಿಸಿಕೊಂಡ ಮರೆಯಲಾರದ ಪಾಠಗಳಲ್ಲಿ ಇವತ್ತಿನದು ಅತ್ಯಮೋಘವಾದದ್ದು!



“ವಿದ್ವಾಂಸರು ಜಗತ್ತಿನೆಲ್ಲೆಡೆಯಲ್ಲಿ ಪೂಜಿಸಲ್ಪಡುತ್ತಾರೆ” ಎಂಬ ಮಾತನ್ನು ತಾನು ಒಪ್ಪಲಾರೆ, ಯಾಕೆಂದರೆ ವಿದ್ವಾಂಸರು ಅವರಾಗಿರುತ್ತಾರೆ ಎಂಬುದು ಜಗತ್ತಿಗೆ ತಿಳಿಯುವ ಹೊತ್ತಿಗೆ ಕಾಲ ಸಂದಿರುತ್ತದೆ! ಹಾಗಾಗಿ ನಿಜವಾದ ವಿದ್ವಾಂಸರನ್ನು ಗುರುತಿಸುವ, ಗೌರವಿಸುವ ಕಾರ್ಯ ಆಗಬೇಕು. ಜ್ಞಾನಕ್ಕೆ ಮಿತಿಯಿರುವುದಿಲ್ಲ. ಬದುಕುವ ಕಲೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಕರಗತಮಾಡಿಕೊಂಡು ಮಾಸ್ಟರ್ಸ್ ಆಗಿರುವ ಅನೇಕರು ನಮ್ಮ ಸುತ್ತಮುತ್ತಲೇ ಇರುತ್ತಾರೆ. ಅಂತಹ ಜ್ಞಾನವನ್ನು ಪ್ರಧಾನ ಧಾರೆಯಲ್ಲಿ ಕಾಣುವ ತುರ್ತು ಇಂದಿನ ಕಾಲದ್ದು. ಕೇವಲ ಹಣದ ಬೆನ್ನುಹತ್ತಿ ನಲವತ್ತೈವತ್ತರ ಪ್ರಾಯದಲ್ಲಿಯೇ ಜೀವನಕ್ಕೆ ಬೆನ್ನು ಹಾಕುವ ಕಂಪ್ಯೂಟರ್ ಕೂಲಿಗಳನ್ನು ಸೃಷ್ಟಿಸುವ ಇವತ್ತಿನ ಹುನ್ನಾರದ ಜಗತ್ತಿನಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯುವ, ಹೊಸೆಯುವ ಜೀವನ ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ ಎಂದು ಭಾವುಕರಾಗಿ ಹೇಳಿದ ಮೇಷ್ಟ್ರು ಸಮಚಿತ್ತರಾಗಿ, ತಮ್ಮ ಅನಾರೋಗ್ಯದ ಪರಿಸ್ಥಿತಿಯಲ್ಲಿಯೂ ಅಷ್ಟುಹೊತ್ತು ಸಂವಾದ ಮಾಡಿದ್ದು ಒಂದು ಸೋಜಿಗವೆಂದೇ ಹೇಳಬೇಕು.

“ಸಮಾನತೆಯ ಹಸಿವು ಮತ್ತು ವಿಧೇಯತೆಯ ಹಸಿವು ಕಳೆದ ಶತಮಾನದಲ್ಲಿ ಬಹುತೇಕವಾಗಿ ಎಲ್ಲರನ್ನೂ ಕಾಡಿದ್ದರ ಪರಿಣಾಮವಾಗಿ ಇಂದು ನಾವು ಮಹತ್ತರ ಬದಲಾವಣೆಗಳಿಗೆ ಪಕ್ಕಾಗುತ್ತಿದ್ದೇವೆ. ನಾನು ನನ್ನ ಯೌವನದ ಕಾಲದಲ್ಲಿ ಊಹಿಸಲೂ ಸಾಧ್ಯವಿರದ ಅನೇಕ ಸಂಗತಿಗಳಿಗೆ ಇಂದು ಸಾಕ್ಷಿಯಾಗುತ್ತಿದ್ದೇನೆ. ಒಳ್ಳೆಯದೋ ಕೆಟ್ಟದ್ದೋ ಎಂದು ಜಡ್ಜ್ ಮೆಂಟ್ ಪಾಸ್ ಮಾಡುವದಕ್ಕಿಂತಲೂ ಅವುಗಳಲ್ಲಿನ ಧನಾತ್ಮಕ ಅಂಶಗಳು ನಿಜವಾಗಿಯೂ ಬೆರಗು ಮೂಡಿಸುತ್ತವೆ” ಎಂದು ಮಾತಿನ ಮಧ್ಯದ ಪ್ರಶ್ನೆಗಳಿಗೆ ಉತ್ತರಿಸುತ್ತ, ತತ್ ಕ್ಷಣದಲ್ಲಿ ಅಹುದಹುದೆನ್ನಿಸುವಂತಹ ಚಮತ್ಕಾರಿಕ ಉತ್ತರಗಳನ್ನು ನೀಡುತ್ತ ಅದಕ್ಕೆ ಪೂರಕವಾಗಿ ತಮ್ಮ ಅಗಾಧ ಓದಿನ ಹಿನ್ನೆಲೆ ಮತ್ತು ಜೀವನಾನುಭವದಿಂದ ಕಡೆದ ನವನೀತದ ವಿಮರ್ಶಾತ್ಮಕ ಲೇಪನವನ್ನು ಬೆರೆತ ಆಕರ್ಷಕ ವಾಗ್ಝರಿಯಿಂದ ಮನಸೂರೆಗೊಂಡ ಮೇಷ್ಟ್ರ ಈದಿನದ ಪಾಠ ಮನಸೂರರ ಸಂಗೀತದಂತೆ ಮನಸನ್ನು ಹಿಡಿದಿಟ್ಟಿದ್ದು ಸುಳ್ಳಲ್ಲ.

ನನಗೆ ಬುದ್ಧಿಬಲ್ಲಾದ ಲಾಗಾಯ್ತಿನಿಂದಲೂ ದೂರದಿಂದಲೇ ನಮಸ್ಕಾರ, ಒಂದು ನಗೆಯ ವಿನಿಮಯದೊಂದಿಗೆ ಸಂಕೋಚ ಸ್ವಭಾವದ ಕಾರಣಕ್ಕಾಗಿ ಅನಂತಮೂರ್ತಿಗಳಿಂದ ಅಂತರವನ್ನು ಕಾಯ್ದುಕೊಂಡಿದ್ದವನು ಇಂದು ತಡೆಯಲಾರದೆ ಕೂಡಲೇ ಅವರೆಡೆಗೆ ಹೋಗಿ ಕೈಹಿಡಿದುಕೊಂಡು ಅತ್ಯದ್ಭುತವಾದ ಗಾಯನವನ್ನು ಕೇಳಿದ ಅನುಭವವಾಗಿದ್ದನ್ನು ಮನಃಪೂರ್ವಕ ಹೇಳಿ ನಮಸ್ಕರಿಸಿ ಬಂದೆ!

-ವಸಂತ



Friday, February 28, 2014

'Onde baari nanna nodi!' D.R.Bendre... suggested by Gelati Geeta!


I am lost in the lyric.......


ಒಂದೇ ಬಾರಿ ನನ್ನ ನೋಡಿ

ಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ

ಗಾಳಿಹೆಜ್ಜೆ ಹಿಡಿದ ಸುಗಂಧ
ಅತ್ತ ಅತ್ತ ಹೋಗುವಂದ
ಹೋತ ಮನಸು ಅವನ ಹಿಂದ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ
ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನ ನನಗ?
ಒಂದು ಅಳತಿ ನಡೆದದ ಚಿತ್ತ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ

ಸೂಜಿ ಹಿಂದ ದಾರದ್ಹಾಂಗ
ಕೊಳದೊಳಗ ಜಾರಿದ್ಹಾಂಗ
ಹೋತ ಹಿಂದ ಬಾರದ್ಹಾಂಗ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ
           -ದತ್ತಾತ್ರೇಯ ರಾಮಚಂದ್ರ ಬೇಂದ್ರೆ
Looking at me only once

Looking at me only once
Like a mild smile on his lips;
Charging his foots step by step;
He went away, away and away
Without looking back,
Oh! My friend!

Like fragrance;
Following the footprints
Of the breeze
Sailed towards him
Without looking back,
Oh! My friend!

I am lost! Became insentient!
Why should I bother others?
Psyche is moving at a speed
Without looking back,
Oh! My friend!

Like yarn
 Behind the needle,
Slipped into a loch
It went away without
Coming back!
Without looking back,
Oh! My friend!

(Translation: Vasant, 28-Feb-2014, 8:11pm)